ಒಂದೊಮ್ಮೆ ಸಚಿವ ಜಾರ್ಜ್ ಗೆ ಗಣಪತಿ ಗುಂಡಿಕ್ಕಿದ್ದಿದ್ದರೆ, ಪಾಪ.. ಖಿನ್ನತೆ ಅಂತ ಸುಮ್ಮನಿರುತ್ತಿದ್ದರೇ ಸಿದ್ದರಾಮಯ್ಯ..?

author-thyagarajಒಂದೊಮ್ಮೆ ಡಿವೈಎಸ್ಪಿ ಎಂ.ಕೆ. ಗಣಪತಿ ಸರ್ವೀಸ್ ರಿವಾಲ್ವಾರ್ ತೆಗೆದುಕೊಂಡು ಸಚಿವ ಕೆ.ಜೆ. ಜಾರ್ಜ್ ಅವರಿಗೆ ಗುಂಡಿಕ್ಕಿದ್ದರು ಎಂದಿಟ್ಟುಕೊಳ್ಳಿ. ಆಗ ಗಣಪತಿ ಸಹೋದರ ತಮ್ಮಯ್ಯನಾಗಲಿ, ಅಪ್ಪ ಕುಶಾಲಪ್ಪ ಆಗಲಿ ಇದೇ ರೀತಿ ಗಣಪತಿ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದರೆ ಸಿದ್ದರಾಮಯ್ಯನವರ ಸರಕಾರ ಸುಮ್ಮನಾಗುತ್ತಿತ್ತೇ? ಅಯ್ಯೋ, ಪಾಪ ಗಣಪತಿ ಖಿನ್ನತೆಯಿಂದ ಬಳಲುತ್ತಿದ್ದಾರೆ, ಅವರ ಪಾಡಿಗೆ ಅವರನ್ನ ಬಿಟ್ ಬಿಡ್ರಪ್ಪಾ ಅಂತಾ ಕೇಸು ಜಡಿಯದೇ ಬಿಡುತ್ತಿದ್ದರೇ..?!

ಇನ್ನೊಂದು ಊಹೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಯಲ್ಲೊಬ್ಬರು ಇದೇ ರೀತಿ ಆತ್ಮಹತ್ಯೆ ಮಾಡಿಕೊಂಡು, ಅದಕ್ಕೆ ಮುನ್ನ ಟಿವಿ ಚಾನೆಲ್ ಗಳಿಗೆ ಸಂದರ್ಶನ ನೀಡಿ, ‘ನನ್ನ ಆತ್ಮಹತ್ಯೆಗೆ ಸಚಿವ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪ್ರಣವ್ ಮೊಹಂತಿ ಅವರೇ ಕಾರಣ..’ ಅಂತಾ ದೂರಿದ್ದರು ಅಂತಿಟ್ಟುಕೊಳ್ಳಿ. ಆಗಲೂ ಸಿದ್ದರಾಮಯ್ಯನವರು ತಮ್ಮವನು ಖಿನ್ನತೆಯಿಂದ ಬಳಲುತ್ತಿದ್ದ, ಹಿಂಗಾಗಿ ಏನೇನೋ ಬಡಬಡಿಸಿದ್ದಾನೆ ಅಂತಾ ಸುಮ್ಮನಾಗುತ್ತಿದ್ದರೇ..?!

ಕಳೆದ ಚುನಾವಣೆ ಸಂದರ್ಭ ತಮ್ಮ ಮಗ ರಾಕೇಶ್ ಮತ್ತು ಎಚ್.ಸಿ. ಮಹದೇವಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ರು ಅನ್ನೋ ಏಕೈಕ ಕಾರಣಕ್ಕೆ ಇದೇ ಸಿದ್ದರಾಮಯ್ಯನವರು ಸರಕಾರ ಬಂದ ಮೊದಲ ದಿನವೇ ಮೈಸೂರಿನ ನಜರಬಾದ್ ಠಾಣೆ ಇನ್ಸಪೆಕ್ಟರ್ ಜಿ.ಎನ್. ಮೋಹನ್ ಅವರನ್ನು ಅಮಾನತು ಮಾಡಿದ್ದರು. ಇವರಿಗೆ ಅಲ್ಲಿ ಕಂಡ ರೊಚ್ಚು-ಕೆಚ್ಚು ಒಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆಯಲ್ಲಿ ಕಾಣ್ತಾ ಇಲ್ಲವಲ್ಲ ಏಕೆ? ಏನೆನ್ನಬೇಕು ಇದಕ್ಕೆ? ಅಷ್ಟೇ ಅಲ್ಲ, “ಸುಳ್ ಕೇಸ್ ಹಾಕಿದ್ರೆ ಸುಮ್ನೆ ಬಿಡಕಾಯ್ತದಾ’ ಅಂತ ಕೇಳಿರೋ ಸಿದ್ದರಾಮಯ್ಯನವರಿಗೆ, ಆತ್ಮಹತ್ಯೆ ಮಾಡಿಕೊಳ್ಳುವ ಕೆಲ ಕ್ಷಣಗಳ ಮೊದಲು ಖುದ್ದು ಗಣಪತಿ ಅವರೇ ನೀಡಿರೋ ಹೇಳಿಕೆ ಯಾಕೆ ಸತ್ಯವಾಗಿ ಕಾಣುತ್ತಿಲ್ಲ? ಅದನ್ಯಾಕೆ ಸುಳ್ಳು ಮಾಡಲು ಹೊರಟಿದ್ದಾರೆ..?

ಅವತ್ತು ಇನ್ಸಪೆಕ್ಟರ್ ಮೋಹನ್ ಮಾಡಿದ್ದ ತಪ್ಪಾದರೂ ಏನು? ವರುಣಾ ಕ್ಷೇತ್ರದಲ್ಲೆ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ ಮಾಡಿದ ಅವರ ಮಗನ್ನ, ಮಹದೇವಪ್ಪ ಅವರನ್ನ ಸುಮ್ಮನೆ ಬಿಟ್ ಬಿಡಬೇಕಿತ್ತಾ? ಕೇಸ್ ಹಾಕ್ಬಾರದಿತ್ತಾ? ಯಾವುದೇ ವಿಚಾರಣೆ ನಡೆಸದೆ ಇನ್ಸಪೆಕ್ಟರ್ ಗೆ ಅಮಾನತ್ತು ಶಿಕ್ಷೆ ಕೊಟ್ಟ ನೀವು ಈಗ ಜಾರ್ಜ್ ವಿರುದ್ಧ ಗಣಪತಿ ಮಾಡಿರೋ ಆರೋಪದ ಬಗ್ಗೆ ವಿಚಾರಣೆ ಆಗಬೇಕು ಅಂತೀದ್ದರಲ್ಲಾ ಇದು ಯಾವ ಸೀಮೆ ನ್ಯಾಯ? ಅವತ್ತು ಮೋಹನ್ ಅವರನ್ನು ಅಮಾನತು ಮಾಡಿದಂತೆ ಇವತ್ತು ಜಾರ್ಜ್ ಅವರನ್ನು ಸಂಪುಟದಿಂದ ಕೈಬಿಡಬಾರದೇಕೆ?

ಇಷ್ಟಕ್ಕೂ ಗಣಪತಿ ಅವರೇನು ಸಿದ್ದರಾಮಯ್ಯನವರ ಹೆಸರೇಳಿಲ್ಲವಲ್ಲ. ಅವರ ಸಂಪುಟದಲ್ಲಿ 33 ಮಂತ್ರಿಗಳಿದ್ದರೂ ಅವರು ಹೆಸರಿಸಿರೋದು ಜಾರ್ಜ್ ಒಬ್ಬರನ್ನೇ ಮಾತ್ರ. ಅದೇ ರೀತಿ ಪೊಲೀಸ್ ಇಲಾಖೆಯಲ್ಲಿ ನೂರಾರು ಮಂದಿ ಹಿರಿಯ ಅಧಿಕಾರಿಗಳಿದ್ದಾರೆ. ಅವರೆಲ್ಲರನ್ನು ಬಿಟ್ಟು ಬರೀ ಮೂರ್ನಾಲ್ಕು ಅಧಿಕಾರಿಗಳ ಹೆಸರು ಮಾತ್ರ ಹೇಳುತ್ತಾರೆಂದರೆ ನಿಜವಾಗಿಯೂ ಅವರಿಗೆ ಕಿರುಕುಳ ಆಗಿದೆ ಎಂದೇ ಅರ್ಥವಲ್ಲವೇ? ಒಂದೊಮ್ಮೆ ಬೇರೆ ಕಾರಣ ಇತ್ತು ಎಂದಿಟ್ಟುಕೊಳ್ಳಿ. ಗಣಪತಿ ಅದನ್ನೇ ಹೇಳುತ್ತಿದ್ದರು. ಸಾಯಲೇಬೇಕು ಅಂತ ತೀರ್ಮಾನ ಮಾಡಿರೋ ವ್ಯಕ್ತಿ ಇರೋ ಕಾರಣ ಬಿಟ್ಟು ಇಲ್ಲದೇ ಇರೋದನ್ನ ಹೇಳುವುದರಿಂದ ಆತನಿಗಾಗುವ ಲಾಭವಾದರೂ ಏನು? ಅದರಿಂದ ಅವರ ಪ್ರಾಣವೇನಾದರೂ ವಾಪಸ್ಸು ಬರುತ್ತಾ?

ಎಲ್ಲಕ್ಕಿಂತ ಮಿಗಿಲಾಗಿ ಜಾರ್ಜ್ ಅವರನ್ನು ನೇಣಿಗೇರಿಸಿ ಎಂದು ಯಾರೂ ಹೇಳ್ತಾ ಇಲ್ಲವಲ್ಲಾ? ಕಾನೂನು ಹೇಳೋ ಪ್ರಕಾರವೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್, ಪ್ರಣವ್ ಮೊಹಂತಿ ವಿರುದ್ಧ ಎಫ್ಐಆರ್ ದಾಖಲಿಸಿ. ಈ ಪುಣ್ಯಾತ್ಮರೆಲ್ಲ ಅಪರಾಧಿಗಳೋ, ನಿರಪರಾಧಿಗಳೋ ಎಂಬುದು ವಿಚಾರಣೆಯಿಂದ ಸಾಬೀತಾಗಲಿ. ಆಮೇಲೆ ತೀರ್ಪಿನಂತೆ ನಡೆದುಕೊಂಡರಾಯಿತು ಅಂತಾ ಕಾನೂನು ಬಲ್ಲವರು ಹೇಳುತ್ತಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಗಣಪತಿ ಅವರ ಪತ್ನಿ ಪಾವನಾ, ಪುತ್ರ ನೇಹಲ್ ಮಡಿಕೇರಿಯ ಕುಶಾನಲಗರ ಗ್ರಾಮಾಂತರ ಪೊಲೀಸರಿಗೆ ನೀಡಿರೋ ದೂರಿನಲ್ಲಿ ಗಣಪತಿ ಸಾವಿಗೆ ಜಾರ್ಜ್, ಪ್ರಸಾದ್, ಮೊಹಂತಿ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಇದಕ್ಕಿಂತ ಮಿಗಿಲಾಗಿ ಇನ್ನೇನು ಬೇಕಿದೆ? ಕಾನೂನು ವ್ಯಾಸಂಗ, ಲಾಯರ್ ಗಿರಿ ಮಾಡಿರೋ ಸಿದ್ದರಾಮಯ್ಯನವರಿಗೆ ಇದು ಗೊತ್ತಿಲ್ಲದ ವಿಚಾರವೇನೂ ಅಲ್ಲ. ಏಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ವಧರ್ಮೀಯರು ಎನ್ನುವ ಕಾರಣಕ್ಕೆ, ಅವರಿಗೆ ಬಕೀಟು ಹಿಡಿಯಲು ನೆರವಾಗುತ್ತಾರೆ ಎನ್ನುವ ಕಾರಣಕ್ಕೆ ಜಾರ್ಜ್ ಅವರನ್ನು ಈ ಪಾಟಿ ರಕ್ಷಣೆ ಮಾಡಿಕೊಳ್ಳುತ್ತಿದ್ದಾರಲ್ಲ ಇದನ್ನು ಸಿದ್ದರಾಮಯ್ಯನವರು ಅರ್ಧಂಬರ್ಧ ನಂಬಿರೋ ಆ ದೇವರಾದರೂ ಮೆಚ್ಚುತ್ತಾನೆಯೇ?

ಆ ದೇವರು ಮೆಚ್ಚುತ್ತಾನೋ ಬಿಡುತ್ತಾನೋ ಆ ವಿಚಾರ ಪಕ್ಕಕ್ಕಿರಲಿ, ಹೋಗಲಿ ಅವರದೇ ಪಕ್ಷದ ಪೂಜಾರಿಯವರು ಹೇಳಿರೋ ಮಾತನ್ನಾದರೂ ಸಿದ್ದರಾಮಯ್ಯನವರು ಸ್ವಲ್ಪ ಕೇಳಬಹುದಲ್ಲಾ? ಜಾರ್ಜ್ ಅವರನ್ನು ಸಂಪುಟದಿಂದ ವಜಾ ಮಾಡಿ, ಗಣಪತಿ ಅವರು ಉಲ್ಲೇಖಿಸಿರುವ ವ್ಯಕ್ತಿಗಳ ವಿರುದ್ಧ ಎಫ್ಐಆರ್ ಹಾಕಿ, ಅರೆಸ್ಟ್ ಮಾಡಿ ಅಂತಾ ಪೂಜಾರಿಯವರು ಹೇಳಿದ್ದಾರೆ. ಅವರು ಕೂಡ ಸಿದ್ದರಾಮಯ್ಯನವರ ಹಾಗೇ ಕಾನೂನು ಓದಿದವರು. ಮಿಗಿಲಾಗಿ ಇಪ್ಪತ್ತು ವರ್ಷ ಬ್ಯಾರಿಸ್ಟರ್ ಆಗಿ ಕೆಲಸ ಮಾಡಿದವರು. ರಾಜಕೀಯದಲ್ಲೂ ಸೀನಿಯರ್. ಹೀಗಾಗಿ ಅವರಿಗಿಂತ ಸ್ವಲ್ಪ ಜಾಸ್ತಿನೇ ತಿಳವಳಿಕೆ ಇರಬೇಕು. ಅವರ ಮಾತಾದರೂ ಕೇಳಬಹುದಲ್ಲಾ?. ಮುಖ್ಯಮಂತ್ರಿ ಪಟ್ಟ ಏನೂ ಶಾಶ್ವತ ಅಲ್ಲ. ಸಿದ್ದರಾಮಯ್ಯನವರಿಂತ ಮುಂಚೆ ಬಹಳ ಜನ ಆ ಹುದ್ದೆಯಲ್ಲಿ ಬಂದು, ಹೋಗಿದ್ದಾರೆ. ಅವರಲ್ಲಿ ಒಬ್ಬರೇ ಒಬ್ಬರು ಶಾಶ್ವತವಾಗಿದ್ದಿದ್ದರೂ ಸಿದ್ರಾಮಯ್ಯ ಸಿಎಂ ಆಗ್ತಿರಲಿಲ್ಲ. ಅದರರ್ಥ ಈ ಹುದ್ದೆ ತಾತ್ಕಾಲಿಕ ಅಂತ. ಆದರೆ ಈಗ ಸಿದ್ದರಾಮಯ್ಯನವರು ಮಾಡುತ್ತಿರೋ ಅನ್ಯಾಯ ಮಾತ್ರ ಅವರ ಚರಿತ್ರೆ ಜತೆ ಶಾಶ್ವತವಾಗಿ ಉಳಿಯುತ್ತದೆ!

ಇನ್ನು ಪ್ರಕರಣ ಮುಚ್ಚಿ ಹಾಕಲು ಸತ್ಯ ನಾಶ ಮತ್ತು ಸುಳ್ಳು ಸಾಕ್ಷಿ ಸೃಷ್ಟಿ ಕೂಡ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಪ್ರಕರಣದಲ್ಲಿ ಗಣಪತಿ, ಅವರ ಜತೆ ಸಂಸಾರ ನಡೆಸಿದ ಪತ್ನಿ ಮತ್ತು ಮಕ್ಕಳ ಹೇಳಿಕೆಗಳು ಬಹುಮುಖ್ಯ. ಇವರೆಲ್ಲ ನೇರ ಸಂಬಂಧಿಗಳು. ಆದರೆ ಇವರು ಹೇಳಿದ್ದನ್ನೆಲ್ಲ ಪಕ್ಕಕ್ಕೆ ತಳ್ಳಿ, ಗಣಪತಿಯವರ ತಮ್ಮ, ಅಪ್ಪ ಅಂತಾ ಸಂಬಂಧಿಗಳ ಬಾಯಲ್ಲಿ ಸರಕಾರಕ್ಕೆ ಬೇಕಾದ ಕಾಗಕ್ಕ-ಗೂಬಕ್ಕ ಕತೆ ಹೇಳಿಸಲಾಗುತ್ತಿದೆ. ಗಣಪತಿ ಸಹೋದರ ತಮ್ಮಯ್ಯ ಸರಕಾರದಿಂದ ಸುಪಾರಿ ಪಡೆದವರಂತೆ ಖಿನ್ನತೆಗೆ ಎರಡು ವರ್ಷದ ಇತಿಹಾಸ ಬರೆದಿದ್ದಾರೆ. ಅದೇ ರೀತಿ ತಂದೆ ಕುಶಾಲಪ್ಪ ಕೌಟುಂಬಿಕ ಕಲಹದ ಕತೆ ತೇಲಿಬಿಟ್ಟಿದ್ದಾರೆ. ಇವರೆಲ್ಲ ಅದ್ಯಾವ ಅಮಿಷಗಳಿಗೆ ಬಲಿಯಾಗಿದ್ದಾರೋ ಗೊತ್ತಿಲ್ಲ. ಆದರೆ ಗಣಪತಿ ಅವರಿಗೆ ಎರಡು ತಿಂಗಳಿಂದ ಚಿಕಿತ್ಸೆ ನೀಡುತ್ತಿದ್ದ ಮಂಗಳೂರು ವೈದ್ಯ ಡಾ. ಕಿರಣ್ ಕುಮಾರ್ ಅವರ ಖಿನ್ನತೆಗೆ ಕಾರಣ ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಒತ್ತಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಣಪತಿ ಅವರೇ ತಮ್ಮ ಬಳಿ ಹಲವು ಬಾರಿ ಅಲವತ್ತುಕೊಂಡಿದ್ದಾರೆ ಎಂದು ಡಾ. ಕಿರಣ್ ಹೇಳಿರುವುದು ಕುಟುಂಬದ ಹೊರಗೆ ನಿಲ್ಲುವ ಸತ್ಯಸಾಕ್ಷಿ.

ಆದರೆ ಅದೆಲ್ಲವನ್ನು ಪಕ್ಕಕ್ಕೆ ಸರಿಸಲಾಗುತ್ತಿದೆ. ಗಣಪತಿ ಅವರ ದೇಹ ಚಿತೆಗೇರುವ ಮೊದಲೇ, ಚಿತಾಗ್ನಿ ಸ್ಪರ್ಶಕ್ಕೂ ಮೊದಲೇ, ಸೂತಕದ ಮನೆಯ ಭಾವನೆಗಳ ವ್ಯಾಪಾರಕ್ಕಿಳಿದ ಸಿದ್ದರಾಮಯ್ಯ ಸರಕಾರದ ಸಂವೇದನಾರಹಿತ ವರ್ತನೆ, ಅದಕ್ಕೆ ಮನಸಾಕ್ಷಿ ಮಾರಿಕೊಂಡ ಸಂಬಂಧಿಗಳು, ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಸಹೋದ್ಯೋಗಿಯ ಸಾವನ್ನೇ ಹರಾಜಿಗಿಟ್ಟ ಪಾಖಂಡಿ ಪೊಲೀಸ್ ಅಧಿಕಾರಿಗಳ ಮನಸ್ಥಿತಿ ಬಣ್ಣನೆಗೆ ಬೈಗುಳಗಳೇ ನಿಲುಕುತ್ತಿಲ್ಲ. ಉಳಿದೆಲ್ಲರಿಗಿಂತ ಪೊಲೀಸ್ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತು. ಗಣಪತಿ ಅವರು ಅನುಭವಿಸಿದ ರಾಜಕೀಯ ಮತ್ತು ಇಲಾಖೆ ಪ್ರೇರಿತ ಮಾನಸಿಕ ಹಿಂಸೆ, ಇಲಾಖೆಯಲ್ಲಿ ಅದೆಷ್ಟು ಮಂದಿ ಇದೇ ರೀತಿ ನರಳುತ್ತಿದ್ದಾರೆ, ನಾಳೆ ಈ ಸ್ಥಿತಿ ತಮಗೂ ಬರಬಹುದು ಎಂಬುದರ ಬಗ್ಗೆ ಸ್ಪಷ್ಟ ಅರಿವಿದೆ. ಐಎಎಸ್ ಅಧಿಕಾರಿ ಡಿ.ಕೆ. ರವಿ, ಡಿವೈಎಸ್ಪಿ ಕಲ್ಲಪ್ಪ, ಇದೀಗ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿವೈಎಸ್ಪಿ ಅನುಪಮಾ ಶೆಣೈ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ದಿನಕ್ಕೊಬ್ಬರು ಅಧಿಕಾರಿಗಳು ಒತ್ತಡ, ಹಿಂಸೆ ಬಗ್ಗೆ ಬೀದಿಗೆ ಬಂದು ಒದರಾಡುತ್ತಿದ್ದಾರೆ. ಆದರೂ ಸರಕಾರದ ಪರ ಗಣಪತಿ ಸಂಬಂಧಿಗಳ ಮನತಿರುಚುವ ಕಾಯಕಕ್ಕೆ ಇಳಿದಿರುವ ಪೊಲೀಸ್ ಅಧಿಕಾರಿಗಳು ಭಾವನೆಗಳ ತಲೆಹಿಡುಕರೇ ಸರಿ!

ಅವರೇನೋ ಮಂತ್ರಿ-ಮಹೋದಯರು, ಇಲ್ಲದ ಮರ್ಯಾದೆ ಉಳಿಸಿಕೊಳ್ಳಲು ಸಲ್ಲದ ನಾಟಕ ಹೆಣೆಯುತ್ತಿದ್ದಾರೆ, ಅದರ ಹಿಂದೆ ಅಧಿಕಾರ ರಕ್ಷಣೆಯ ಹುನ್ನಾರವಿದೆ ಎಂಬುದನ್ನು ಪರಿಗಣಿಸೋಣ. ಏಕೆಂದರೆ ಇವರಿಗೆ ಕೈಯಲ್ಲಿರೋ ಅಧಿಕಾರ ಹೋದರೆ ನಡುಮುರಿದ ನಾಯಿಯಂತೆ ನರಳಾಡಿಬಿಡುತ್ತಾರೆ. ಅದರೆ ಕಣ್ಣೆದುರಿಗಿನ ಕಠೋರ ಸತ್ಯವನ್ನು ‘ಶ್ರೀ ಕೃಷ್ಣ ಸಂಧಾನ ನಾಟಕ’ವಾಗಿಸಲು ಹೊರಟಿರುವ ಸರಕಾರದ ಪ್ರಭಾವ, ಆಮಿಷಗಳಿಗೆ ರಕ್ತಸಂಬಂಧಿದತ್ತ ಶೋಕವನ್ನೇ ಮಾರಾಟ ಮಾಡಿಕೊಳ್ಳಲು ಮುಂದಾಗಿರುವ ತಮ್ಮ, ಅಪ್ಪನನ್ನು ಏನೆಂದು ಕರೆಯಬೇಕು? ಇದು ಮನುಷ್ಯರು ಮಾಡುವ ಕೆಲಸವೇ? ಇವರಿಗೆ ಮಾನವೀಯ ಸಂಬಂಧಗಳ ಬೆಲೆ ಗೊತ್ತಿದೆಯೇ?

ಸಿದ್ದರಾಮಯ್ಯನವರ ಸರಕಾರ ಈಗಾಗಲೇ ತೀರ್ಮಾನಿಸಿರುವಂತೆ ಗಣಪತಿ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಶತಾಯಗತಾಯ ಮುಂದುವರಿಸುತ್ತದೆ. ಈಗಾಗಲೇ ಖಿನ್ನತೆ, ಮಾನಸಿಕ ಅಸ್ವಸ್ಥ ಇತ್ಯಾದಿ ಪಟ್ಟಗಳನ್ನು ಕಟ್ಟಿಯಾಗಿದೆ. ಮುಂದಕ್ಕೆ ಬೆಂಗಳೂರಿಂದ ಮಂಗಳೂರುವರೆಗೂ ಕೈಗೆ ಸಿಕ್ಕ ಕಾಗೆಗೂಬೆಗಳನ್ನೆಲ್ಲ ಹಿಡಿದುತಂದು ಗಣಪತಿ ಅವರ ಸಾವಿನ ಮೇಲೆ ಕೂರಿಸುತ್ತದೆ. ಇನ್ನು ಪ್ರತಿಪಕ್ಷಗಳು ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ಸರಕಾರವನ್ನು ಹರಾಜಿಗೆ ಹಾಕುತ್ತವೆ. ಈಗಾಗಲೇ ಪ್ರಕರಣದ ಸಿಓಡಿ ತನಿಖೆ ಎಂಬ ಫುಟ್ಪಾತ್ ಮೇಲಿನ ಕಡ್ಲೆಕಾಯಿ ವ್ಯಾಪಾರ ಮುಗಿಸಿರುವ ಸರಕಾರ ಹೆಚ್ಚೆಂದರೆ ನ್ಯಾಯಾಂಗ ತನಿಖೆಗೆ ವಹಿಸಬಹುದು. ಪ್ರತಿಪಕ್ಷಗಳು ಜಾರ್ಜ್, ಅಧಿಕಾರಿಗಳ ವಜಾ, ಪ್ರಕರಣದ ಸಿಬಿಐ ತನಿಖೆಗೆ ಪಟ್ಟು ಹಿಡಿಯಬಹುದು. ಸರಕಾರ ಆಗೋಲ್ಲ ಅಂದರೆ, ನಾವು ಬಿಡೋದಿಲ್ಲ ಅಂತಾರೆ. ಹೀಗೆ.. ಸರಕಾರ, ಪ್ರತಿಪಕ್ಷ, ಪೊಲೀಸ್ ಸಹೋದ್ಯೋಗಿಗಳು, ರಕ್ತ ಸಂಬಂಧಿಗಳ ‘ವಕ್ರಾವಧಾನ’ಕ್ಕೆ ತಮ್ಮ ಸಾವನ್ನು ವಸ್ತುವಾಗಿಟ್ಟು ಹೋಗಿರುವ ಗಣಪತಿಯವರ ಆತ್ಮ ತನ್ನದೇ ಚಿತಾಭಸ್ಮದಲ್ಲಿ ಬೆದಕಿದರೂ ಸತ್ಯಾನ್ವೇಷಣೆ ಸಾಧ್ಯತೆ ತೀರಾ ಕಡಿಮೆಯೇ!

ಲಗೋರಿ : ತಮ್ಮದಕ್ಕೆ ಹೋಲಿಸಿದರೆ ಅನ್ಯರ ಪ್ರಾಣ ಎಂದಿಗೂ ಅಲ್ಪವೇ.

3 COMMENTS

  1. ಕಣ್ಣಿದ್ದೂ ಕುರುಡು,ಕಿವಿಯಿದ್ದೂ ಕಿವುಡಾಗಿದೆ ಈ ಕರ್ನಾಟಕ ಸರ್ಕಾರ,ಆದರೆ ವಿರೋಧ ಪಕ್ಷಕ್ಕೇನಾಗಿದೆ?ಲಕ್ವಾ ಹೊಡೆದಂತೆ ಕುಳಿತಿದ್ದಾರಲ್ಲ….

  2. ನಾಚಿಕೆಗೆಟ್ಟ ಸರ್ಕಾರ, ಲಜ್ಜೆಗೆಟ್ಟ ಮುಖ್ಯಮಂತ್ರಿ, ರೌಡಿ ಸಚಿವರು, ಮಾನಗೆಟ್ಟ ಪೋಲಿಸ್ ಇಲಾಖೆ…. ಇದು ಕರ್ನಾಟಕ ರಾಜ್ಯದ – ರಾಜ್ಯದ ಜನತೆಯ ದೌರ್ಭಾಗ್ಯವಲ್ಲದೇ ಇನ್ನೇನು…. ಎಂದಿನಂತೆ ನಿಮ್ಮ ಚಾಟಿ-ಏಟಿನ ಲೇಖನ… ಏನು ಮಾಡಲು ಸಾಧ್ಯ… 2018 ರ ಚುನಾವಣೆಗೆ ಜನತೆ ಕಾಯಬೇಕಷ್ಟೆ… ಅಲ್ಲಿಯವರೆಗೆ ಇನ್ನೆಷ್ಟು ಜೀವಗಳ ಜೊತೆ ಆಟ ಆಡ್ತಾರೋ ಈ ಸಿದ್ದರಾಮಯ್ಯ ಮತ್ತು ಆತನ ಸಚಿವರು. ಒಟ್ಟಿನಲ್ಲಿ ನಮ್ಮ ರಾಜ್ಯದ ದೌರ್ಭಾಗ್ಯ ಈ ಸರ್ಕಾರ…

  3. ಸರ್,
    ನಿಮ್ಮ ಈ ಡಿಜಿಟಲ್ ಕನ್ನಡ ನೋಡಿದ್ದೆ, ಓದಲಾಗಿರಲಿಲ್ಲ. ಈಗ ಓದಿದೆ. ತುಂಬ ಮಾರ್ಮಿಕವಾಗಿ ಬರೆದಿದ್ದೀರಿ. ಹಿಂದಿನ ನಿಮ್ಮ ಬರವಣಿಗೆಯ ಮೊಣಚು ಹಾಗೆಯೇ ಇದೆ. ಸರ್ಕಾರವನ್ನು ಸರಿಯಾಗಿ ಝಾಡಿಸಿದ್ದೀರಿ. ಇಂಥ ಸಂದಿಗ್ದ ಸ್ಥಿತಿಯಲ್ಲಿ ಇದು ಪ್ರತಿಯೊಬ್ಬ ಪತ್ರಕರ್ತ ಮಾಡಲೇಬೇಕಿರುವ ಕೆಲಸ. ತಾವೂ ಮಾಡಿದ್ದೀರಿ. ಅಭಿನಂದನೆಗಳು.
    ಆದರೆ, ಅಧಿಕಾರಿ ಗಣಪತಿ ನಡೆಯ ಬಗ್ಗೆ ಹಲವು ಅನುಮಾನಗಳಿವೆ. ವೃತ್ತಿಯುದ್ಧಕ್ಕೂ ಸಂಘ ಪರಿವಾರ, ಬಿಜೆಪಿ ಪರವಾಗಿ ಕೆಲಸ ಮಾಡುತ್ತ ಬಂದಿದ್ದಾರೆ. ಆಗೆಲ್ಲ ಕ್ರೈಸ್ತ್, ಮುಸ್ಲಿಂ ಹಾಗೂ ದಲಿತರಿಗೆ ಇವರಿಂದ ಅನ್ಯಾಯವಾಗಿರುವ ಪ್ರಕರಣಗಳಿವೆಯಂತೆ. ಆ ಮುಖ ಕೂಡ ಬೆಳಕಿಗೆ ಬಂದರೆ ಜನತೆಗೆ ವಾಸ್ತವ ತೆರೆದಿಟ್ಟಂತಾಗಬಹುದು ಎನ್ನುವುದು ನನ್ನ ಭಾವನೆ.

    ಏನೇ ಇರಲಿ ಬರವಣಿಗೆ ಉಳಿಸಿಕೊಂಡಿದ್ದೀರಿ. ಇನ್ನಷ್ಟು ಅಕ್ಷರ ಸೇವೆ ತಮ್ಮಿಂದ ಾಗಲಿ.. ನಮಸ್ಕಾರಗಳು.

Leave a Reply