ಜಾಕಿರ್ ನಾಯಕ್ ಭಾರತಕ್ಕೆ ವಾಪಸಿಲ್ಲ, ಈತನ ಪೀಸ್ ಟಿವಿ ಪ್ರಕಾರ ಕಾಶ್ಮೀರ ಭಾರತದಲ್ಲಿಲ್ಲ

 

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರ ಭಾರತಕ್ಕೆ ಸೇರಿದಲ್ಲ.. ಹೀಗಂತ ಹೇಳ್ತಿರೋದು ವಿವಾದಿತ ಇಸ್ಲಾಂ ಭೋದಕ ಜಾಕಿರ್ ನಾಯಕ್ ಅವರ ಪೀಸ್ ಟಿವಿ. ಹೌದು.. ಪೀಸ್ ಟಿವಿಯ ಅಧಿಕೃತ ವೆಬ್ ಸೈಟ್ ನಲ್ಲಿ ಅದರ ಸಂಪರ್ಕ ವಿಭಾಗಕ್ಕೆ ಹೋದ ನಂತರ ಇಂಡಿಯಾ ಎಂದು ನಮೂದಿಸಿದರೆ, ವಿಶ್ವ ಭೂಪಟದಲ್ಲಿ ಭಾರತದ ನಕ್ಷೆ ಗೋಚರಿಸುತ್ತದೆ. ಈ ನಕ್ಷೆಯಲ್ಲಿ ಕಾಶ್ಮೀರವನ್ನು ಭಾರತ ಜತೆ ಸೇರಿಸಲಾಗಿಲ್ಲ.

ಇತ್ತೀಚೆಗಷ್ಟೇ ನರೇಂದ್ರ ಮೋದಿ ಸರ್ಕಾರ ಭಾರತ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಿ ತಪ್ಪು ನಕಾಶೆ ಪ್ರಕಟಿಸಬಾರದು. ಪ್ರಕಟಿಸಿದರೆ ₹100 ಕೋಟಿ ದಂಡ ವಿಧಿಸಲಾಗುವುದು ಎಂಬ ಕಟ್ಟುನಿಟ್ಟಿನ ಕಾನೂನು ತಂದಿದೆ. ಇದಾದ ಬಳಿಕ ಗೂಗಲ್ ಸೇರಿದಂತೆ ಇತರೆ ಪ್ರಮುಖ ವೆಬ್ ಸೈಟ್ ಗಳು ಪೂರ್ಣ ಪ್ರಮಾಣದ ಭಾರತದ ನಕ್ಷೆ ಪ್ರಕಟಿಸಿದ್ದವು. ಆದ್ರೆ ಪೀಸ್ ಟಿವಿಯಲ್ಲಿ ಕೇವಲ ಪಾಕ್ ಆಕ್ರಮಿತ ಕಾಶ್ಮೀರ ಅಷ್ಟೇ ಅಲ್ಲ, ಭಾರತದ ನಿಯಂತ್ರಣದಲ್ಲಿರುವ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದೆ.

ಇದು ಜಾಕಿರ್ ವಿಚಾರಧಾರೆಯ ಪ್ರತಿಬಿಂಬ.

ಈ ಮಧ್ಯೆ ಮುಸ್ಲಿಮರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೀಸ್ ಟಿವಿಗೆ ಬಾಂಗ್ಲಾದೇಶದಲ್ಲಿ ನಿಷೇಧ ಹೇರಲಾಗಿದೆ. ಇದೇ ಆಧಾರದ ಮೇಲೆ ಭಾರತವೂ ಈ ವಾಹಿನಿಯನ್ನು ನಿಷೇಧಿಸಿದೆ. ಇನ್ನು ಬ್ರಿಟನ್ ಹಾಗೂ ಕೆನಡಾ ದೇಶಗಳು ಸಹ ಈ ಹಿಂದೆಯೇ ವಾಹಿನಿಗೆ ನಿರ್ಬಂಧ ಹೇರಿದ್ದವು.

ಬಾಂಗ್ಲಾದೇಶದ ಇಸ್ಲಾಂ ಪಂಡಿತರು ಕಳೆದ ವರ್ಷವೇ ಈ ವಾಹಿನಿಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು. ಆದರೆ, ಇತ್ತೀಚಿನ ಢಾಕಾ ಘಟನೆ ನಂತರ ಜಾಕಿರ್ ನಾಯಕ್ ಅವರ ಸ್ಫೂರ್ತಿಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಇತ್ತ ಭಾರತದಲ್ಲಿ ಪೊಲೀಸರ ವಿಚಾರಣೆಗೆ ಒಳಪಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಾಕಿರ್ ನಾಯಕ್ ಸದ್ಯಕ್ಕೆ ಮುಂಬೈಗೆ ಮರಳುವ ಯೋಚನೆಯನ್ನು ಕೈಬಿಟ್ಟಿದ್ದಾರೆ. ಈ ಮುನ್ನ ನಿಗದಿಯಾದಂತೆ ಜಾಕಿರ್ ನಾಯಕ್ ಸೌದಿ ಅರೆಬಿಯಾದಿಂದ ಸೋಮವಾರ ಬೆಳಗಿನ ಜಾವ ಮುಂಬೈಗೆ ಆಗಮಿಸಬೇಕಿತ್ತು. ಇಲ್ಲಿ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಲು ಸಿದ್ಧರಿರುವ ಹಿನ್ನೆಲೆಯಲ್ಲಿ ಜಾಕಿರ್ ನಾಯಕ್ ತಮ್ಮ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. ಈಗಿರುವ ಮಾಹಿತಿ ಪ್ರಕಾರ ಜಾಕಿರ್ ಮುಂದಿನ 2 ವಾರಗಳ ಕಾಲ ಭಾರತಕ್ಕೆ ಬರುವುದು ಅನುಮಾನವಾಗಿದ್ದು, ಆಫ್ರಿಕಾ ಪ್ರವಾಸ ಮಾಡುವ ಸಾಧ್ಯತೆ ಹೆಚ್ಚಾಗಿದೆ.

Leave a Reply