ಬಿಜೆಪಿ ಪ್ರತಿಭಟನೆ ಚುರುಕು, ಜಾರ್ಜ್ ಸಮರ್ಥನೆ ಏನು?, ಸಿಎಂ ಆಪ್ತಗಿಲ್ಲ ನಿರೀಕ್ಷಣಾ ಜಾಮೀನು, ಚೀನಾಕ್ಕೆ ನ್ಯಾಯಾಧಿಕರಣದ ಹೊಡೆತ

ಡಿಜಿಟಲ್ ಕನ್ನಡ ಟೀಮ್:

 ಪ್ರತಿಭಟನೆ ಚುರುಕುಗೊಳಿಸಿದ ಬಿಜೆಪಿ

ಡಿವೈಎಸ್ಪಿ ಕೆ.ಎಂ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆಜೆ ಜಾರ್ಜ್ ರಾಜೀನಾಮೆ ನೀಡುವವರೆಗೆ ವಿಧಾನಸಭೆ, ವಿಧಾನಪರಿಷತ್ ನಲ್ಲಿ ನೀವು ನಿರಂತರ ಧರಣಿ ನಡೆಸಿ…ವಿಧಾನಸೌಧದ ಹೊರಗೆ ನನ್ನ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪಕ್ಷದ ಶಾಸಕರಿಗೆ ಕರೆ ನೀಡಿದ್ದಾರೆ.

ವಿಧಾನಸಭೆ ಮೊಗಸಾಲೆಯಲ್ಲಿ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಔಪಚಾರಿಕ ಮಾತುಕತೆ ನಡೆಸಿದರು. ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುವ ಬಗ್ಗೆ ಚರ್ಚೆ ನಡೆಸಿದರು. ಮಡಿಕೇರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಬಗ್ಗೆ ಇನ್ನು ಎರಡು ದಿನದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಸದನ ಆರಂಭವಾಗುವುದಕ್ಕೆ ಮುಂಚೆಯೇ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ನೇತೃತ್ವದಲ್ಲಿ ಕೊಡವ ಸಮಾಜವೂ ಸಹಯೋಗ ನೀಡಿತ್ತು.

ಜಾರ್ಜ್ ಸಮರ್ಥನೆ, ಮೈನಾರಿಟಿ ಕಾರ್ಡ್

‘ಡಿವೈಎಸ್ಪಿ ಗಣಪತಿಗೆ ತಾವು ಕಿರುಕುಳ ನೀಡಿಲ್ಲ. ಚರ್ಚ್ ದಾಳಿ ಪ್ರಕರಣದಲ್ಲಿ ಆ ಸಮುದಾಯದವರು ಅವರ ವಿರುದ್ಧ ನನಗೆ ದೂರು ನೀಡಿದ್ದಾರೆಂದು ಭಾವಿಸಿ ಗಣಪತಿಯವರು ನನ್ನ ಮೇಲೆ ಆರೋಪ ಮಾಡಿದ್ದಿರಬಹುದು. ಆದರೆ ಯಾರೂ ಆ ಬಗೆಯ ನಿರ್ದೇಶನಗಳನ್ನು ನನಗೆ ನೀಡಿದ್ದಿಲ್ಲ. ನಾನು ಗೃಹ ಸಚಿವನಾಗಿದ್ದಾಗ ಅವರ ಭಡ್ತಿ ಕಡತ ನನ್ನ ಬಳಿ ಬಂದಿರಲೇ ಇಲ್ಲ. ಉಳಿದಂತೆ ಅವರ ಮೇಲೆ ನಡೆಯುತ್ತಿದ್ದ ಇಲಾಖೆ ತನಿಖೆಯಲ್ಲಿ ನಾನು ಯಾವ ಹಸ್ತಕ್ಷೇಪವನ್ನೂ ಮಾಡಿಲ್ಲ. ಅವರ ಅಮಾನತಿಗೆ ಕಾರಣವಾದ ಪ್ರಕರಣ ನಡೆದಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ.’- ಇದು ಗಣಪತಿ ಸಾವಿನ ಘೋಷಣೆಯಲ್ಲಿ ತಮ್ಮ ಹೆಸರು ಬಂದಿದ್ದಕ್ಕೆ ಸದನದಲ್ಲಿ ಜಾರ್ಜ್ ನೀಡಿದ ಉತ್ತರ.

ನನಗೆ ಅಧಿಕಾರ ಮುಖ್ಯವಲ್ಲ ಎಂದು ಜಾರ್ಜ್ ಪ್ರತಿಪಾದಿಸಿದರಾದರೂ ರಾಜೀನಾಮೆ ಒತ್ತಾಯವನ್ನು ತಿರಸ್ಕರಿಸಿದರು. ತಪ್ಪೇ ಮಾಡದೇ ಶಿಕ್ಷೆಗೆ ಏಕೆ ಒಳಗಾಗಬೇಕು ಎಂದು ಕೇಳಿದರು. ಇದೇ ಹಂತದಲ್ಲಿ ಅಲ್ಪಸಂಖ್ಯಾತ ಕಾರ್ಡ್ ಪ್ರಯೋಗ ಮಾಡಿದ ಅವರು- ‘ಬಿಜೆಪಿಗೂ ನನಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದಿರಬಹುದು. ಆದರೆ ನಾನು ಮಾಡಿದ್ದೆಲ್ಲ ತಪ್ಪೆನಿಸಿಕೊಳ್ಳಬೇಕೆ? ಇಲ್ಲಿ ನಮ್ಮ ನಡುವೆ ಒಂದೇ ವ್ಯತ್ಯಾಸವೆಂದರೆ ಎದುರು ಕುಳಿತವರು ಶೆಟ್ಟರ್ ಆದರೆ ನಾನು ಜಾರ್ಜ್’ ಎನ್ನುವ ಮೂಲಕ ತಾವು ಕ್ರೈಸ್ತರಾಗಿರುವುದರಿಂದಲೇ ರಾಜೀನಾಮೆ ಕೇಳುತ್ತಿದ್ದಾರೆ ಎಂಬ ಪರೋಕ್ಷ ಪ್ರತಿಪಾದನೆಗೆ ಇಳಿದರು. ಇದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷ ಸದಸ್ಯರು, ‘ಜಾತಿಯನ್ನೇಕೆ ಎಳೆದು ತರುತ್ತೀರಿ? ಆರೋಪ ಬಂದಾಗ ರಾಜೀನಾಮೆ ಕೊಟ್ಟು, ತನಿಖೆ ಮುಗಿದ ನಂತರ ಮತ್ತೆ ಸಂಪುಟ ಸೇರಿದ ಉದಾಹರಣೆಗಳಿವೆ. ಅದನ್ನೇ ನೀವೂ ಪಾಲಿಸಿ’ ಎಂದು ಪ್ರತಿಕ್ರಿಯಿಸಿದವು.

ಮರಿಗೌಡಗಿಲ್ಲ ನಿರೀಕ್ಷಣಾ ಜಾಮೀನು

ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರಿಗೆ ಅವಾಚ್ಯ ಶಬ್ದ ಬಳಸಿ ನಿಂದನೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದಲ್ಲಿ ಸಿಎಂ ಆಪ್ತ ಕೆ.ಮರಿಗೌಡ ಮತ್ತಷ್ಟು ಸಮಸ್ಯೆ ಸಿಲುಕಿದ್ದಾರೆ. ಮರಿಗೌಡ ಅವರ ಬಂಧನಕ್ಕೆ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲೇ, ಅವರು ಸಲ್ಲಿಸಿದ್ದ ನಿರೀಕ್ಷಿತ ಜಾಮೀನು ಅರ್ಜಿಯನ್ನು ಜಿಲ್ಲಾ ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ. ಜಿಲ್ಲಾಧಿಕಾರಿ ಶಿಖಾ ಅವರು ಈ ಬಗ್ಗೆ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಬೆನ್ನಲ್ಲೇ ಮರಿಗೌಡ ಅವರು ಜು.3 ರಿಂದ ತಲೆ ಮರೆಸಿಕೊಂಡಿದ್ದಾರೆ. ಮರಿಗೌಡ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇರುವುದರಿಂದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.

ತೆಂಗಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹ

ಡಿವೈಎಸ್ಪಿ ಗಣಪತಿ ಸಾವಿನ ಕುರಿತ ಚರ್ಚೆಯ ನಡುವೆಯೇ ತೆಂಗಿಗೆ ಬೆಂಬಲ ಬೆಲೆ ಆಗ್ರಹವೂ ಕೇಳಿಬಂತು.

ತೆಂಗಿನ ಬೆಲೆ ಕುಸಿದಿದ್ದು ರೈತರು ಕಂಗಾಲಾಗಿದ್ದು, ರಾಜ್ಯ ಸರ್ಕಾರ ತೆಂಗಿಗೆ ಬೆಂಬಲ ಬೆಲೆ ನೀಡಿ ಖರೀದಿಸಬೇಕೆಂದು ಜೆಡಿಎಸ್ ಶಾಸಕರು ವಿಧಾನ ಸಭೆಯಲ್ಲಿಂದು ಆಗ್ರಹಿಸಿದರು.

ಪ್ರತಿಕ್ವಿಂಟಾಲ್‍ಗೆ 30 ಸಾವಿರ ಇದ್ದ ಕೊಬ್ಬರಿ ಬೆಲೆ 14 ರಿಂದ 15 ಸಾವಿರಕ್ಕೆ ಕುಸಿದಿದೆ.

ಕೇಂದ್ರ ಸರ್ಕಾರ ಕೊಬ್ಬರಿ ಬೆಂಬಲ ಬೆಲೆ ನಿಗದಿಪಡಿಸಿದರೂ, ಅದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರಲ್ಲದೇ ನಿಯಮ 60 ರಡಿ ಚರ್ಚೆಗೆ ಅವಕಾಶ ಕೋರಿದರು.

ಇಂಡೋನೇಶ್ಯಾ, ಮಲೇಶ್ಯಾದಿಂದ ತೆಂಗನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.ಗ್ಯಾಟ್ ಒಪ್ಪಂದದ ಪ್ರಕಾರ ಆಮದನ್ನು ತಡೆಯುವಂತಿಲ್ಲ. ಆದರೆ ಆಮದು ತೆಂಗಿಗೆ ಅಬಕಾರಿ ಸುಂಕ ಹೇರಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಈ ಹಂತದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಡಿವೈಎಸ್‍ಪಿ ಗಣಪತಿ ಪ್ರಕರಣದ ಕುರಿತು ನಿಲುವಳಿ ಸೂಚನೆ ಮಂಡಿಸಲು ನಮಗೆ ಅವಕಾಶ ನೀಡಲಿಲ್ಲ. ಆದರೆ ಈ ಪ್ರಕರಣದಲ್ಲಿ ನಿಲುವಳಿ ಸೂಚನೆ ಮಂಡಿಸಲು ಮನವೊಲಿಕೆಗೆ ಅವಕಾಶ ನೀಡುತ್ತಿದ್ದೀರಿ ಎಂದು ಆಕ್ಷೇಪಿಸಿದರು. ಇದರಿಂದ ಕೆರಳಿದ ಜೆಡಿಎಸ್ ಸದಸ್ಯರು, ‘ಇದು ರೈತರ ಸಮಸ್ಯೆ. ಎರಡು ಪ್ರಕರಣ ಬೆರೆಸಲು ಹೋಗಬೇಡಿ’ ಎಂದರು.

ಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಅವರು, ಚರ್ಚೆಗೆ ಇನ್ನೊಮ್ಮೆ ಅವಕಾಶ ಮಾಡುವುದಾಗಿ ಭರವಸೆ ನೀಡಿದರು.

ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಗೆ ಹಕ್ಕಿಲ್ಲ ಅಂತು ನ್ಯಾಯಾಧಿಕರಣ

‘ದಕ್ಷಿಣ ಚೀನಾ ಸಮುದ್ರ ಹಾಗೂ 9 ಸರಣಿ ದ್ವೀಪಗಳ ಮೇಲೆ ಐತಿಹಾಸಿಕ ಹಕ್ಕು ಪಡೆಯಲು ಚೀನಾಗೆ ಯಾವುದೇ ಕಾನೂನಿನ ಆಧಾರ ಇಲ್ಲ…’ ಇದು ದ ಹೇಗ್ ಟ್ರಿಬುನಲ್ ಕೊಟ್ಟಿರೋ ಮಹತ್ವದ ತೀರ್ಪು.

ಈ ಭಾಗದ ಸಮುದ್ರ ಹಾಗೂ ದ್ವೀಪಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿದಂತೆ ಚೀನಾ ಮತ್ತು ಫಿಲಿಪ್ಪೀನ್ಸ್ ನಡುವೆ ಹಲವು ವರ್ಷಗಳಿಂದ ತಕರಾರು ಇತ್ತು. ಈ ತಕರಾರಿಗೆ ಸಂಬಂಧಿಸಿದಂತೆ 2013 ರಲ್ಲಿ ಫಿಲಿಪ್ಪೀನ್ಸ್ ಹಗೆಯಲ್ಲಿರುವ ಶಾಶ್ವತ ನ್ಯಾಯಾಧಿಕರಣದ ಮೆಟ್ಟಿಲೇರಿತ್ತು. ಈ ವಿಚಾರಣೆ ನಡೆಸಿದ ನ್ಯಾಯಾಧಿಕರಣ ನಿರೀಕ್ಷೆಯಂತೆ ತೀರ್ಪು ಪ್ರಕಟಿಸಿದ್ದು, ಚೀನಾಗೆ ತೀವ್ರ ಹಿನ್ನಡೆಯಾಗಿದೆ. ಮತ್ತೊಂದೆಡೆ ಈ ತೀರ್ಪನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಚೀನಾ ತಿಳಿಸಿದೆ.

ನ್ಯಾಯಾಧಿಕರಣ ನೀಡಿರುವ ತೀರ್ಪು ಈ ರೀತಿ ಇದೆ.

‘ವಿಶ್ವ ಸಂಸ್ಥೆ ಸಮುದ್ರ ನೀತಿಯ ಪ್ರಕಾರ ವಿಶೇಷ ಆರ್ಥಿಕ ವಲಯದಿಂದ ಹೊರಬಂದ ನಂತರ ಯಾವುದೇ ರಾಷ್ಟ್ರಕ್ಕೆ ಸಮುದ್ರದ ಮೇಲಿನ ಐತಿಹಾಸಿಕ ಹಕ್ಕು ಇರುವುದಿಲ್ಲ. ಹೀಗಾಗಿ ಚೀನಾಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಏಕಸ್ವಾಮ್ಯ ಹಕ್ಕು ನೀಡಲು ಸಾಧ್ಯವಿಲ್ಲ. ಈ ಭಾಗದಲ್ಲಿ ಕೃತಕ ದ್ವೀಪ ನಿರ್ಮಿಸಿ, ಫಿಲಿಪ್ಪೀನ್ಸ್ ಮೀನುಗಾರಿಕೆ ಮತ್ತು ತೈಲ ಶೋಧಕ್ಕೆ ಚೀನಾ ಅಡ್ಡಿ ಪಡಿಸುವ ಮೂಲಕ ಫಿಲಿಪ್ಪೀನ್ಸ್ ನ ಸಾರ್ವಭೌಮ ಹಕ್ಕಿಗೆ ಚೀನಾ ಧಕ್ಕೆತಂದಿದೆ. ಅಲ್ಲದೆ ಚೀನಾ ಆ ಪ್ರದೇಶದಲ್ಲಿ ತನ್ನ ಮೀನುಗಾರಿಕೆ ನಿಲ್ಲಿಸಿಲ್ಲ. ಇದರೊಂದಿಗೆ ಚೀನಾ ಕಾನೂನು ಉಲ್ಲಂಘನೆ ಮಾಡಿದೆ.’

ಈ ತೀರ್ಪಿಗೆ ಫಿಲಿಪ್ಪೀನ್ಸ್ ನಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ ಎಂದಿದೆ ಫಿಲಿಪ್ಪೀನ್ಸ್ ವಿದೇಶಾಂಗ ಸಚಿವಾಲಯ.

ಕಣಿವೆ ರಾಜ್ಯದಲ್ಲಿ ಶಾಂತಿ ಕಾಪಾಡಲು ಮೋದಿ ಮನವಿ

ಉಗ್ರ ಬುರ್ಹಾನ್ ವನಿ ಹತ್ಯೆಯಿಂದ ಹಿಂಸಾಚಾರ ಪ್ರತಿಭಟನೆಗೆ ತತ್ತರಿಸಿರುವ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಂಗಳವಾರವೂ ಹಲವು ಬೆಳವಣಿಗೆಗಳಾಗಿವೆ.. ಈ ಪ್ರದೇಶದಲ್ಲಿ ನಾಲ್ಕನೇ ದಿನ ಕರ್ಫ್ಯೂ ಮುಂದುವರಿದ್ದು, ಈ ಗಲಭೆಯಲ್ಲಿ ಸತ್ತವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇನ್ನು 115 ಭದ್ರತಾ ಸಿಬ್ಬಂದಿ ಸೇರಿದಂತೆ 350 ಮಂದಿ ಗಾಯಗೊಂಡಿದ್ದಾರೆ.

ಆಫ್ರಿಕಾ ಪ್ರವಾಸ ಮುಗಿಸಿ ಮರಳಿರುವ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ರು. ಕಣಿವೆ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಅವರು ಕರೆ ಕೊಟ್ಟರು. ಈ ಸಭೆಯಲ್ಲಿ ಗೃಹ ಸಚಿವ ರಾಜನಾಥ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವ ಮನೋಹರ್ ಪರಿಕರ್ ಸೇರಿದಂತೆ ಪ್ರಮುಖ ಸಚಿವರು, ರಾಜ್ಯ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಈ ವಾರ ನಿಗದಿಯಾಗಿದ್ದ ಭಾರತ- ಅಮೆರಿಕ ನಡುವಣ ಭದ್ರತಾ ಸಭೆಯನ್ನು ಗೃಹ ಮಂತ್ರಿ ರಾಜನಾಥ್ ಸಿಂಗ್ ಮುಂದಿನ ವಾರಕ್ಕೆ ಮುಂದೂಡಿದ್ದಾರೆ.

ಮತ್ತೊಂದೆಡೆ ‘ಕಾಶ್ಮೀರದ ಪರಿಸ್ಥಿತಿ ಭಾರತದ ಆಂತರಿಕ ವಿಷಯ. ಅಲ್ಲಿ ಪ್ರತಿಭಟನಾಕಾರರು ಮತ್ತು ಭಾರತೀಯ ಸೇನೆ ನಡುವಣ ಸಂಘರ್ಷದ ಬಗ್ಗೆ ವರದಿ ನೋಡಿದ್ದು, ಉಭಯರಿಗೂ ಶಾಂತಿ ಕಾಪಾಡಲು ಮನವಿ ಮಾಡುತ್ತೇನೆ’ ಎಂದಿದೆ ಅಮೆರಿಕ.

ರಾಜನ್ ಉತ್ತರಾಧಿಕಾರಿಯಾಗಿ ಅರವಿಂದ್ ಪನಗಾರಿಯಾ?

ಇದೇ ಸೆಪ್ಟೆಂಬರ್ 4 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿರುವ ರಘುರಾಮ್ ರಾಜನ್ ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಇವರ ಸ್ಥಾನ ತುಂಬೊರ್ಯಾರು ಎಂಬ ಬಗ್ಗೆ ಹಲವು ಚರ್ಚೆಗಳು ಏರ್ಪಟ್ಟಿವೆ. ಈ ಸಂದರ್ಭದಲ್ಲಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನ ಮಾಜಿ ಮುಖ್ಯ ಆರ್ಥಿಕ ತಜ್ಞ ಅರವಿಂದ್ ಪನಗಾರಿಯಾ ಅವರ ಹೆಸರು ಪ್ರಮುಖವಾಗಿ ಕೇಳಿಬರ್ತಿದೆ.

ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರೂ ಆಗಿರುವ ಅರವಿಂದ್, ಅಮೆರಿಕದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದು, ಖ್ಯಾತ ಆರ್ಥಿಕ ತಜ್ಞ ಜಗದೀಶ್ ಭಗವತಿ ಅವರ ಶಿಷ್ಯರಾಗಿದ್ದಾರೆ. ನೀತಿ ಆಯೋಗದ ಉಪಾಧ್ಯಕ್ಷರಾಗುವ ಮುನ್ನ ಅರವಿಂದ್ ಅವರು ವಿಶ್ವ ಬ್ಯಾಂಕ್, ವಿಶ್ವ ವಾಣಿಜ್ಯ ಸಂಸ್ಥೆ, ವಿಶ್ವ ಸಂಸ್ಥೆಯ ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಈ ಎಲ್ಲ ಅನುಭವ ಹೊಂದಿರುವ ಅವರವಿಂದ್ ಅವರು ಮುಂದಿನ ಆರ್ಬಿಐ ಗವರ್ನರ್ ಸ್ಥಾನದ ರೇಸ್ ನಲ್ಲಿರುವ ಪ್ರಮುಖ ಅಭ್ಯರ್ಥಿಯಾಗಿದ್ದಾರೆ.

ಒಲಿಂಪಿಕ್ಸ್ ಗೆ ಭಾರತ ಹಾಕಿ ತಂಡ ಪ್ರಕಟ

ಮುಂದಿನ ತಿಂಗಳು ನಡೆಯಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 16 ಸದಸ್ಯರ ಭಾರತ ಹಾಕಿ ತಂಡವನ್ನು ಪ್ರಕಟಿಸಲಾಗಿದೆ. ತಂಡದ ಸಾರಥ್ಯವನ್ನು ಸರ್ದಾರ್ ಸಿಂಗ್ ಬದಲಿಗೆ ಗೋಲ್ ಕೀಪರ್ ಶ್ರೀಜೇಶ್ ಅವರಿಗೆ ನೀಡಲಾಗಿದೆ. ಉಳಿದಂತೆ ತಂಡದಲ್ಲಿ ಕರ್ನಾಟಕದ ಎಸ್.ವಿ ಸುನೀಲ್, ವಿ.ಆರ್ ರಘುನಾಥ್, ನಿಕ್ಕಿನ್ ತಿಮ್ಮಯ್ಯ, ಎಸ್.ಕೆ ಉತ್ತಪ್ಪ ಸ್ಥಾನ ಪಡೆದಿದ್ದಾರೆ. ಪೂರ್ಣ ತಂಡ ಇಲ್ಲಿದೆ:

ಹರ್ಮನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಕೊಥಾಜಿತ್ ಸಿಂಗ್, ಸುರೇಂದರ್ ಕುಮಾರ್, ಮನ್ಪ್ರೀತ್ ಸಿಂಗ್, ಸರ್ದಾರ್ ಸಿಂಗ್, ವಿ.ಆರ್ ರಘುನಾಥ್, ಎಸ್.ಕೆ ಉತ್ತಪ್ಪ, ಪಿ.ಆರ್ ಶ್ರೀಜೇಶ್, ದನೀಶ್ ಮುಜ್ತಾಬಾ, ದೇವೆಂದರ್ ವಾಲ್ಮಿಕಿ, ಎಸ್.ವಿ ಸುನೀಲ್, ಆಕಾಶ್ ದೀಪ್ ಸಿಂಗ್, ಚಿಂಗ್ಲೆಂಸಾನ ಸಿಂಗ್, ರಮಣದೀಪ್ ಸಿಂಗ್, ನಿಕ್ಕಿನ್ ತಿಮ್ಮಯ್ಯ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿಸಾಲುಗಳು..

  • ಭಾರತದ ಪ್ರಮುಖ ಗಾಲ್ಫ್ ಆಟಗಾರರಾದ ಅನಿರ್ಬಾನ್ ಲಾಹಿರಿ, ಎಸ್ ಎಸ್ ಪಿ ಚವ್ರಾಸಿಯಾ ಮತ್ತು ಅದಿತಿ ಅಶೋಕ್ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. 112 ವರ್ಷಗಳ ನಂತರ ಗಾಲ್ಫ್ ಕ್ರೀಡೆ ಮತ್ತೆ ಒಲಿಂಪಿಕ್ಸ್ ಗೆ ಸೇರ್ಪಡೆಯಾಗಿದ್ದು, ಅಂತಾರಾಷ್ಟ್ರೀಯ ಗಾಲ್ಪ್ ಫೆಡರೇಷನ್ (ಐಜಿಎಫ್)ನ ಶ್ರೇಯಾಂಕದ ಆಧಾರದ ಮೇಲೆ ಈ ಮೂವರು ಭಾರತೀಯರು ಅರ್ಹತೆ ಪಡೆದುಕೊಂಡಿದ್ದಾರೆ. ಈ ಕ್ರೀಡಾಕೂಟಕ್ಕೆ ಆಟಗಾರರ ಅರ್ಹತೆಯನ್ನು ಜುಲೈ 11 ರ ಶ್ರೇಯಾಂಕಕ್ಕೆ ತಕ್ಕಂತೆ ನಿರ್ಧರಿಸುವುದರಿಂದ ಭಾರತದ ಮೂವರು ಆಟಗಾರರು ಅರ್ಹರಾಗಿದ್ದಾರೆ.
  • ಹೈದರಾಬಾದ್ ನ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದ ಶಂಕಿತ ಉಗ್ರ ನೈಮತ್ತುಲ್ಲಾ ಹುಸೈನಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ಬಂಧಿಸಿದೆ. ಈ ವೇಳೆ ಮೊಹಮದ್ ಅತಾವುಲ್ಲಾ ರೆಹಮಾನ್ ಎಂಬ ಮತ್ತೋರ್ವ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. ಜೂನ್ 29 ರಂದು ಹುಸೈನಿಯನ್ನು ಬಂಧಿಸಲಾಗಿತ್ತು. ಆದ್ರೆ, ಆತನ ವಿರುದ್ಧ ಸಾಕ್ಷ್ಯಾಧಾರಗಳು ಸಿಗದ ಕಾರಣ ಅಧಿಕಾರಿಗಳು ಬಿಡುಗಡೆ ಮಾಡಿದ್ರು. ಈತನ ಬಗ್ಗೆ ತನಿಖೆ ಮುಂದುವರಿಸಿದ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಮತ್ತೆ ಹುಸೈನ್ ನನ್ನು ಬಂಧಿಸಿದ್ರು. ‘ಹುಸೈನಿ ಮೊಘಲ್ಪುರ ನಿವಾಸಿಯಾಗಿದ್ದು, ಆ ಸಂಘಟನೆಯ ಮುಖ್ಯ ಸದಸ್ಯ. ಈತನನ್ನು ಸಂಘಟನೆಗೆ ಅಮೀರ್ ಎಂದು ನೇಮಕ ಮಾಡಿಕೊಂಡಿದ್ದು, ಕಳೆದ ಮೂರು ತಿಂಗಳಲ್ಲಿ ಸಂಘಟನೆಯ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾನೆ. ಈತ ಖೈರತಾಬಾದ್ ನ ಶಾದನ್ ಕಾಲೇಜಿನ ಬಳಿ ಬಟ್ಟೆ ಮಳಿಗೆಯನ್ನಿಟ್ಟುಕೊಂಡಿದ್ದು, ವಿವಾಹಿತನಾಗಿ ಮೂರು ಮಕ್ಕಳನ್ನು ಹೊಂದಿದ್ದಾನೆ’ ಎಂದು ಮಾಹಿತಿ ನೀಡಿದ್ದಾರೆ ಎನ್ಐಎ ಅಧಿಕಾರಿಗಳು.

Leave a Reply