ಅನಕ್ಷರಸ್ಥ ಆಫ್ರಿಕಾ ಮಹಿಳೆಯರನ್ನು ಸೋಲಾರ್ ಎಂಜಿನಿಯರ್ ಆಗಿಸುತ್ತಿರುವ ರಾಜಸ್ಥಾನದ ಕಾಲೇಜಿನ ಸಾಧನಾಗಾಥೆ ಗೊತ್ತೇ?

Having returned to Agome Sevah after a six month training period at the Barefoot College the Solar Grandmothers set about training others at their workshop .Pic Lar boland 2014

ಡಿಜಿಟಲ್ ಕನ್ನಡ ವಿಶೇಷ:

ಮೊನ್ನೆಯಷ್ಟೇ ಆಫ್ರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಾಂಜೇನಿಯಾದಲ್ಲಿ ಸೋಲಾರ್ ಮಹಿಳಾ ಎಂಜಿನಿಯರ್ ಗಳನ್ನು ಭೇಟಿ ಮಾಡಿದ್ರು. ಈ ಮಧ್ಯವಯಸ್ಕ ಹೆಂಗಸರನ್ನು ‘ಸೋಲಾರ್ ಮಮಾಸ್’ ಅಂತಲೇ ಕರೆಯಲಾಗಿದೆ.

ಪ್ರಧಾನಿ ಭೇಟಿಯ ನೆಪದಲ್ಲಿ ನಮ್ಮೆದುರಿಗೆ ಬಂದ ಯಶೋಗಾಥೆ ಇದು. ಈ ಮಹಿಳೆಯರು ಅನಕ್ಷರಸ್ಥರಾಗಿದ್ದು, ನಂತರ ಸೋಲಾರ್ ಎಂಜಿನಿಯರ್ ಗಳಾದವರು. ಇವರು ಸೋಲಾರ್ ಎಂಜಿನಿಯರ್ ಗಳಾಗಿ ತರಬೇತಿ ಪಡೆದದ್ದು ರಾಜಸ್ಥಾನದ ತಿಲೋನಿಯಾ ಹಳ್ಳಿಯಲ್ಲಿ! ಆಫ್ರಿಕಾ ಮಹಿಳೆಯರಿಗೂ ರಾಜಸ್ಥಾನದ ಹಳ್ಳಿಗೂ ಏನು ಸಂಬಂಧ ಎಂಬ ಕೌತುಕಕ್ಕೆ ಉತ್ತರ ನೀಡುತ್ತಿದೆ ರಾಜಸ್ಥಾನದ ತಿಲೋನಿಯಾ ಹಳ್ಳಿಯಲ್ಲಿರುವ ‘ಬೇರ್ ಫುಟ್ ಕಾಲೇಜು’. ಬರಿಗಾಲಿನವರ ಕಾಲೇಜು ಎಂಬುದು ಆಕರ್ಷಕ ಹೆಸರಷ್ಟೇ ಅಲ್ಲ, ‘ಸೋಷಿಯಲ್ ವರ್ಕ್ ಅಂಡ್ ರಿಸರ್ಚ್ ಸೆಂಟರ್’ಗೆ ಬಹಳ ಅನ್ವರ್ಥಕವೂ ಹೌದು. ಏಕೆಂದರೆ ಈ ಕಾಲೇಜು ಪದವಿಪೂರ್ವ ಶಿಕ್ಷಣದಲ್ಲಿ ಭಾರೀ ಅಂಕ ಗಳಿಸಿದವರನ್ನು, ಹಣದ ಥೈಲಿ ಇರುವವರನ್ನು ನೊಂದಾಯಿಸಿಕೊಂಡು ಶಿಕ್ಷಣ ನೀಡುವ ಕಾಲೇಜು ಇದಲ್ಲ. ಬದಲಿಗೆ ಕೌಶಲಾಧಾರಿತ ಶಿಕ್ಷಣ ನೀಡುವ ಅನನ್ಯ ಸಂಸ್ಥೆ ಇದು. ಇದಿವತ್ತು ಆಫ್ರಿಕಾದ ಸಾಮಾನ್ಯ ಮಹಿಳೆಯರನ್ನು ಸೌರ ವಿದ್ಯುತ್ ಎಂಜಿನಿಯರ್’ಗಳನ್ನಾಗಿಸಿದೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ, ಭಾರತೀಯ ವಿದೇಶಾಂಗ ಸಚಿವಾಲಯ 2012 ರಿಂದ ಆಫ್ರಿಕಾ ರಾಷ್ಟ್ರಗಳ ಗ್ರಾಮೀಣ ಮಹಿಳೆಯರನ್ನು ಕರೆತಂದು ಇಲ್ಲಿ ಅವರಿಗೆ ತರಬೇತಿ ನೀಡುತ್ತಿದೆ. ಇಲ್ಲಿ ಅವರಿಗೆ ಸೋಲಾರ್ ವ್ಯವಸ್ಥೆ ಜೋಡಣೆ, ಅಳವಡಿಕೆ, ಬಳಕೆ, ರಿಪೇರಿ ಮತ್ತು ನಿರ್ವಹಣೆ ಮಾಡುವ ಬಗ್ಗೆ ಸಂಪೂರ್ಣ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಆಫ್ರಿಕಾ ರಾಷ್ಟ್ರಗಳ ಮಹಿಳೆಯರು ಸೋಲಾರ್ ಎಂಜಿನಿಯರ್ ಗಳಾಗಿ ಹೊರಹೊಮ್ಮುತ್ತಿದ್ದಾರೆ.

ಸುಮಾರು ಎಂಟು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಕಾಲೇಜು ಸಂಪೂರ್ಣವಾಗಿ ಸೌರಶಕ್ತಿಯನ್ನೇ ಅಳವಡಿಸಿಕೊಂಡಿದೆ. ಇದರ ನಿರ್ವಹಣೆಯನ್ನು ಅಲ್ಲಿನ ಎಂಜಿನಿಯರ್ ಗಳೇ ಮಾಡುತ್ತಾರೆ. ಇಲ್ಲಿ ಶಿಕ್ಷಣ ಪಡೆದವರು ಮುಂದಿನ ವಿದ್ಯಾರ್ಥಿ ತಂಡಕ್ಕೆ ಕಲಿಸುವ ಗುರುಗಳಾಗಿ ಕೆಲಸ ಮಾಡುತ್ತಾರೆ. ಈ ಕಾಲೇಜಿಗೆ ಭಾರತದ ಮಹಿಳೆಯರಷ್ಟೇ ಅಲ್ಲ, ವಿದೇಶಿ ಮಹಿಳೆಯರು ಕಲಿಯಲು ಬರುತ್ತಾರೆ. ಅದರಲ್ಲೂ ಆಫ್ರಿಕಾ ದೇಶಗಳಿಂದ ಬರುವವರ ಸಂಖ್ಯೆ ಹೆಚ್ಚು. ಇದರ ಪರಿಣಾಮವಾಗಿ ಆಫ್ರಿಕಾದಲ್ಲಿ ಈಗಾಗಲೇ ಸುಮಾರು 20 ಸಾವಿರ ಮನೆಗಳು ಸೌರವಿದ್ಯುತ್ ಅಳವಡಿಸಿಕೊಂಡಿರುವುದು ಗಮನಾರ್ಹ. ಆರಂಭದಲ್ಲಿ ಇವರಿಗೆ ಸಂವಹನದ ಕೊರತೆ ಎದುರಾಗುವುದರಿಂದ ಅವರಿಗೆ ಮೊದಲು ಇಂಗ್ಲಿಷ್ ಕಲಿಸಿ ನಂತರ ಸೌರವಿದ್ಯುತ್ ಬಗ್ಗೆ ತರಬೇತಿ ನೀಡಲಾಗುತ್ತದೆ. ಹೀಗೆ ಸೋಲಾರ್ ಎಂಜಿನಿಯರ್ ಗಳಾದ 30 ಮಂದಿಯನ್ನು ಪ್ರಧಾನಿ ಮೋದಿ ಅವರು ಮೊನ್ನೆ ಭೇಟಿ ಮಾಡಿದ್ರು, ಆಗ ಆ ಮಹಿಳೆಯರು ತಾವು ಕಲಿತದ್ದನ್ನು ಪ್ರದರ್ಶಿಸಿದ್ರು.

Barefoot College - 2013 CGI Annual Meeting Opening Video Shoot

ಬೇರ್ ಫುಟ್ ಕಾಲೇಜಿನಲ್ಲಿ ಮಹಿಳೆಯರು ತರಬೇತಿ ಪಡೆಯುತ್ತಿರುವುದು..

ಬೇರ್ ಫುಟ್ ಕಾಲೇಜಿನ ಆರಂಭದ ಹಿಂದೆ ಒಂದು ಸಣ್ಣ ಕಥೆ ಇದೆ.

ಸಾಮಾಜಿಕ ಕಾರ್ಯಕರ್ತ ಸಂಜಿತ್ ಬಂಕರ್ ರಾಯ್ ಈ ಕಾಲೇಜಿನ ಸಂಸ್ಥಾಪಕ. ವಿಭಿನ್ನ ಶೈಕ್ಷಣಿಕತೆಗೆ ಹೆಚ್ಚು ಮಹತ್ವ ನೀಡಿದ ಇವರು, ಬಡತನ ಸಮಸ್ಯೆಯನ್ನು ಶಿಕ್ಷಣದಿಂದಲೇ ಪರಿಹಾರ ಮಾಡಬೇಕು ಎಂಬುದು ಅವರ ಗುರಿ ಹೊಂದಿದ್ದರು. ‘ಸೈದ್ಧಾಂತಿಕ ಶಿಕ್ಷಣಕ್ಕಿಂತ ಪ್ರಾಯೋಗಿಕ ಶಿಕ್ಷಣ ಹೆಚ್ಚು ಪರಿಣಾಮಕಾರಿ’ ಎಂಬುದು ಅವರ ವಾದ. ಅದಕ್ಕಾಗಿ ಬಡವರಿಗೆ ಪ್ರಾಯೋಗಿಕ ಶಿಕ್ಷಣ ನೀಡುವ ಉದ್ದೇಶದಿಂದ 1972 ರಲ್ಲಿ ರಾಜಸ್ಥಾನದ ಈ ಕಾಲೇಜು ಆರಂಭಿಸಿದರು. ಅಂದಹಾಗೆ ಈ ಕಾಲೇಜಿನಲ್ಲಿ ಕಾಗದದ ಮೂಲಕ ಯಾವುದೇ ಪದವಿ ಹಾಗೂ ಪ್ರಮಾಣ ಪತ್ರವನ್ನು ನೀಡುವುದಿಲ್ಲ. ಈವರೆಗೂ ಆಫ್ರಿಕಾ, ಫಿಜಿ ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ಹಿರಿಯ ಮಹಿಳೆಯರು ಸೋಲಾರ್ ಎಂಜಿನಿಯರಿಂಗ್ ಅಲ್ಲಿ ತರಬೇತಿ ಪಡೆದಿದ್ದಾರೆ. ಸಾವಿರಾರು ಮಕ್ಕಳು ಬಡ ಮಹಿಳೆಯರಿಗೆ ಇಲ್ಲಿ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಅವರು ಸ್ವಾವಲಂಬಿಗಳಾಗುವ ಅವಕಾಶ ಕಲ್ಪಿಸಿಕೊಟ್ಟಿದೆ.

ಈ ಕಾಲೇಜಿನಿಂದ ಆಫ್ರಿಕಾ ರಾಷ್ಟ್ರಗಳ ಮಹಿಳೆಯರ ಮೇಲಿನ ಪ್ರಭಾವವನ್ನು ಕಂಡು ವಿದೇಶಾಂಗ ಸಚಿವಾಲಯ ಆಫ್ರಿಕಾದ 22 ರಾಷ್ಟ್ರಗಳಲ್ಲಿ 5 ಬೇರ್ ಫುಟ್ ತರಬೇತಿ ಕೇಂದ್ರಗಳನ್ನು ಹಾಗೂ ಹೆಚ್ಚುವರಿಯಾಗಿ 11 ಸಾವಿರ ಮನೆಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ.

Leave a Reply