ಡಿಜಿಟಲ್ ಕನ್ನಡ ವಿಶೇಷ:
ನಿಜ ಹೇಳಿ, ಪರಮೇಶ್ವರ್ ಅವರೇ.. ನೀವು ಮಾಡಿದ್ದು ಸರೀನಾ..? ನೀವು ಹೋಮ್ ಮಿನಿಸ್ಟರ್ ಅನ್ನೋದನ್ನ ಮರೆತು ಈ ರೀತಿ ನಡೆದುಕೊಳ್ಳಬಹುದಾ..?!
‘ಎತ್ತು ಈಯಿತು ಅಂದಾಕ್ಷಣ, ಅದ್ಯಾರೋ ಕೊಟ್ಟಿಗೆಗೆ ಕಟ್ಟಿ ಹಾಕಪ್ಪಾ’ ಅಂದರಂತೆ. ಅಂಗಾಗಿದೆ ನಿಮ್ಮ ಪರಿಸ್ಥಿತಿ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕಾರಣದ ಬಗ್ಗೆ ಅದ್ಯಾರೋ ಏನೋ ಬರೆದುಕೊಟ್ರು ಅಂದಾಕ್ಷಣ ಹಿಂದೆ-ಮುಂದೆ ನೋಡದೆ, ಅದರಲ್ಲಿರೋದು ಸರಿಯೋ ತಪ್ಪೋ ಅಂತಾನೂ ಪರಾಮರ್ಶಿಸದೆ ಸೀದಾ-ಸಾದಾ ಅದನ್ನ ಅಸೆಂಬ್ಲಿಯಲ್ಲಿ ಓದಿಬಿಟ್ಟರಲ್ಲಾ.. ಇದೇನಾ ನೀವು ಕಲ್ತಿರೋದು?
ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಮಡಿಕೇರಿ ವಿನಾಯಕ ಲಾಡ್ಜಿಗೆ ಬಂದು ಗುರುತಿಸಿದ ತಂದೆ ಕುಶಾಲಪ್ಪ ಪೊಲೀಸರಿಗೆ ಕೊಟ್ಟ ದೂರಿನಲ್ಲಿ, ‘ನನ್ನ ಮಗನನ್ನು ಪತ್ನಿ ಪಾವನಾ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಇಲ್-ಟ್ರೀಟ್ ಮಾಡುತ್ತಿದ್ದಳು (ಏಕವಚನ ಪ್ರಯೋಗದಲ್ಲಿ ನಿಮ್ಮ ಸಂಸ್ಕಾರ ಅನಾವರಣಗೊಂಡಿದೆ). ಇದರಿಂದ ಆತ ಖಿನ್ನತೆಗೆ ಒಳಗಾಗಿದ್ದ. ಸಂಸಾರದಲ್ಲಿ ನೆಮ್ಮದಿ ಇಲ್ಲದ ಕಾರಣ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿಸಿದ್ದಾರೆ. ಅದೇ ರೀತಿ ಕೌಟುಂಬಿಕ ಕಲಹದ ಖಿನ್ನತೆಯಿಂದ ಗಣಪತಿ ನರಳುತ್ತಿದ್ದರು ಎಂದು ಡಿವೈಎಸ್ಪಿ ಸಹೋದರ ಎಂ.ಕೆ. ತಮ್ಮಯ್ಯ, ಮತ್ತೊಬ್ಬ ಸಹೋದರ ಮಾಚಯ್ಯ ಹೇಳಿದ್ದಾರೆ. ಅದೇ ರೀತಿ ಪಾವನಾ ಅವರು ಪತಿ ಕರ್ತವ್ಯದ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ. ಹೀಗಾಗಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ’ ಎಂದು ಕಾಗದದ ಮೇಲಿದ್ದುದನ್ನು ಓದಿದ್ದೀರಿ.
ಹೋಮ್ ಮಿನಿಸ್ಟರ್ ಆಗಿ ನೀವು ಕೈಗೆ ಪತ್ರ ಕೊಟ್ಟವರನ್ನು ಕೇಳ್ಬೇಕಿತ್ತಲ್ಲವೇ.? ಕುಶಾಲಪ್ಪನವರು ನಾನೆಲ್ಲೂ ಕಂಪ್ಲೆಂಟ್ ಕೊಟ್ಟಿಲ್ಲ ಅಂತ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಹೋದರ ಮಾಚಯ್ಯ ಅದು ವೃತ್ತಿ ಸಂಬಂಧಿ ಒತ್ತಡ ಅಂತ ಹೇಳಿದ್ದಾರೆ. ಅದರೂ ಉಲ್ಪಾಪಲ್ಟಾ ಬರೆದುಕೊಟ್ಟೀದ್ದೀರಲ್ಲ ಇದು ಸರಿಯೇ ಅಂತಾ? ಎಲ್ಲಕ್ಕಿಂತ ಮಿಗಿಲಾಗಿ ನೀವು ಅಸೆಂಬ್ಲಿಯಲ್ಲಿ ಈ ಲೆಟರ್ ಓದಿದ್ದು ಜುಲೈ 11 ಸೋಮವಾರ. ಗಣಪತಿ ಪತ್ನಿ, ಪುತ್ರ ಕುಶಾಲನಗರ ಪೊಲೀಸರಿಗೆ ಸಚಿವ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್, ಪ್ರಣವ್ ಮೊಹಂತಿ ವಿರುದ್ಧ ಕಂಪ್ಲೆಂಟ್ ಕೊಟ್ಟಿದ್ದು ಜುಲೈ 10 ಭಾನುವಾರ. ಅಂದರೆ ಒಂದು ದಿನ ಮೊದಲೇ. ಅದರೂ ಆ ದೂರಿನ ಬಗ್ಗೆ ಈ ಲೆಟರ್ ನಲ್ಲಿ ಏಕೆ ಉಲ್ಲೇಖಿಸಿಲ್ಲ ಅಂತಾ ನೀವು ಕೇಳ್ಬೇಕಿತ್ತಲ್ಲವೇ? ಪತ್ನಿ, ಪುತ್ರ ಕೊಟ್ಟ ದೂರನ್ನು ಈಗಾಗಲೇ ಆರಂಭ ಆಗಿರೋ ಸಿಐಡಿ ತನಿಖೆಗೆ ಕಳುಹಿಸಿಕೊಡಲಾಗಿದೆ ಎಂದು ಹೇಳುವ ನಿಮಗೆ ಅಪ್ಪ ಕುಶಾಲಪ್ಪ, ಸಹೋದರ ತಮ್ಮಯ್ಯ, ಮಾಚಯ್ಯ ಅವರ ಹೇಳಿಕೆಯನ್ನೂ ಅದೇ ರೀತಿ ಸಿಐಡಿ ತನಿಖೆ ವ್ಯಾಪ್ತಿಗೆ ಒಪ್ಪಿಸಬೇಕಿತ್ತು ಎನಿಸಲಿಲ್ಲವೇ? ಅದನ್ನು ಮಾತ್ರ ಅಸೆಂಬ್ಲಿಯಲ್ಲಿ ಓದಿ ಹೇಳಿದ್ದು ಪಕ್ಷಪಾತ, ಅನುಕೂಲಸಿಂಧು ರಾಜಕೀಯ ಅಂತೆನಿಸಲಿಲ್ಲವೇ? ಸರಕಾರದ ಮೂಗಿನ ನೇರಕ್ಕೆ ಸರಿ ಎನಿಸುವ ರೀತಿಯಲ್ಲಿ ಸಂಗತಿಗಳನ್ನು ತಿರುಚಿದ್ದ ಪತ್ರವನ್ನು ಹಿಂದೆ-ಮುಂದೆ ನೋಡದೆ ಓದಿಬಿಟ್ಟರಲ್ಲಾ ನಿಮ್ಮ ಕಲಿಕೆಯ ಮಟ್ಟ ಇಷ್ಟಕ್ಕೇ ಸೀಮಿತವೇ? ನೀವು ಡಾಕ್ಟರ್ ಪರಮೇಶ್ವರ ಬೇರೆ! ಮೇಲಾಗಿ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದವರು. ಅದರೂ ನಿಮ್ಮ ವಿವೇಕ ಮತ್ತು ವಿವೇಚನೆ ಅನ್ಯರ ಮರ್ಜಿಯತೆ ಕೆಲಸ ಮಾಡುತ್ತಿರವುದು ನಿಜಕ್ಕೂ ಅಶ್ಯರ್ಯವೇ..
ನಿಮ್ಮನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ನಿಮ್ಮ ಅಮಾಯಕತನ ಕರುಣೆಯುಕ್ಕಿಸುತ್ತದೆ. ಮುಖ್ಯಮಂತ್ರಿ ಆಗಬೇಕು ಅಂತಾ ಹೊರಟ ನಿಮಗೆ ಉಪಮುಖ್ಯಮಂತ್ರಿ ಸ್ಥಾನವನ್ನೂ ಕೊಡದೇ ಕೊನೆಗೆ ಮಂತ್ರಿ ಪದವಿ ಕೊಟ್ಟು ಅದಕ್ಕೊಬ್ಬ ಮೇಲ್ವಿಚಾರಕನನ್ನು ಯಾಕಿಟ್ಟಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ. ಏನೂ ಹೇಳಿದರೂ ಕೇಳ್ತೀರಿ, ಏನನ್ನು ಮಾಡು ಅಂದ್ರೂ ಮಾಡ್ತೀರಿ, ಹಿಂತಿರುಗಿಸಿ ಪ್ರಶ್ನೆ ಕೇಳುವುದಿಲ್ಲ ಎನ್ನುವುದು ಅಸೆಂಬ್ಲಿಯಲ್ಲಿ ನಿಮ್ಮ ಪತ್ರ ವಾಚನದಿಂದ ಗೊತ್ತಾಗಿದೆ. ಅದೂ ಕಲಾಪ ಆರಂಭ ಆಗುತ್ತಿದ್ದಂತೆ ಸ್ವಯಂ ಪ್ರೇರಿತರಾಗಿ, ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೂ ಒಂದೇ ಉಸುರಿಗೆ ಪತ್ರ ಓದಿ ಮುಗಿಸಿದ ನಿಮ್ಮ ಧಾವಂತದ ಹಿಂದಿರುವ ಒತ್ತಡ ಬಹುಶಃ ಡಿವೈಎಸ್ಪಿ ಗಣಪತಿ ಅವರಿಗಿಂತಲೂ ಮಿಗಿಲಿರಬಹುದು. ಆದರೆ ಒಂದು ವಿಷಯ. ಗಣಪತಿ ಅವರಿಗೆ ಮೂರು ತಿಂಗಳ ಹಿಂದೆ ನೀವೇ ಡಿವೈಎಸ್ಪಿ ಹುದ್ದೆಗೆ ಬಡ್ತಿ ಕೊಟ್ಟು ಮಂಗಳೂರಿಗೆ ವರ್ಗಾವಣೆ ಮಾಡಿದ್ದೀರಿ. ಅವರೊಮ್ಮೆ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ, ಖಿನ್ನತೆಯಿಂದ ಬಳಲುತ್ತಿದ್ದರೆ ಅವರಿಗೆ ಬಡ್ತಿ ಕೊಡಲು ಬರುವುದಿಲ್ಲ ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ. ಮಾನಸಿಕ ಅಸ್ವಸ್ಥರಾಗಿದ್ದರೂ ಬಡ್ತಿ ಕೊಟ್ಟಿದ್ದೀರಿ ಅಂದರೆ ಜನ ನಿಮ್ಮ ಬುದ್ಧಿ ಸ್ಥಿಮಿತತೆ ಬಗ್ಗೆ ಅನುಮಾನ ಪಡುತ್ತಾರೆ. ಹೀಗಾಗಿ ಗಣಪತಿ ಅವರ ಸಾವಿಗಾದರೂ ಅನ್ಯಾಯ ಮಾಡಲು ಹೋಗಬೇಡಿ!
ಎಲ್ಲಕ್ಕಿಂತ ಮಿಗಿಲಾಗಿ ಪರಮೇಶ್ವರ್ ಓದಿರೋ ಪತ್ರದ ಸಾರಾಂಶವೇ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಯಾವ ದಿಕ್ಕಿ ಹಿಡಿಯುತ್ತದೆ ಎಂಬುದನ್ನೂ ಸ್ಪಷ್ಟಪಡಿಸಿದೆ.