ಸರ್ಕಾರ ಸೃಷ್ಟಿಸಿರುವ ಒತ್ತಡ, ಗಣಪತಿ ಪ್ರಕರಣ ಮುಚ್ಚಿಹಾಕುವ ಕಾತರಗಳನ್ನೆಲ್ಲ ಎಳೆ ಎಳೆಯಾಗಿ ಬಿಚ್ಚಿಟ್ಟ ಕುಮಾರಸ್ವಾಮಿ

 

ಡಿಜಿಟಲ್ ಕನ್ನಡ ಟೀಮ್ :

 ‘ನಮಗೆ ಈ ಸರ್ಕಾರದ ಮಂತ್ರಿಗಳ ರಾಜೀನಾಮೆ ಪಡೆದು ವಿಜಯೋತ್ಸವ ಆಚರಿಸುವ ಮನಸ್ಥಿತಿ ಇಲ್ಲ. ಆದರೆ ಕರ್ನಾಟಕದ ಜನರ ಕೂಗಿಗೆ ಓಗೊಟ್ಟು, ಸ್ವಲ್ಪ ನಿಮ್ಮನ್ನೆ ಪ್ರಶ್ನಿಸಿಕೊಂಡು, ಪಾಪಪ್ರಜ್ಞೆಗೆ ಅವಕಾಶ ಕೊಟ್ಟು ಡಿವೈಎಸ್ಪಿ ಗಣಪತಿ ಸಾವಿಗೆ ನ್ಯಾಯ ದೊರಕಿಸಿಕೊಡಿ..’ ವಿಧಾನಸಭೆಯಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಆಕ್ರೋಶ ಪಕ್ಕಕ್ಕಿಟ್ಟು, ಭಾವನಾತ್ಮಕ ಮನವಿ ಧಾಟಿಯಲ್ಲಿ ಸುದೀರ್ಘವಾಗಿ ಮಾತನಾಡಿದರು. ನಡು ನಡುವೆಯೇ ಸರ್ಕಾರಕ್ಕೆ ಚಾಟಿ ಬೀಸುವ ಕಾರ್ಯವನ್ನೂ ಮಾಡಿದರು.

‘ಪ್ರಕರಣದ ತನಿಖೆ ಕೇಂದ್ರವಾಗಿರಬೇಕಿರುವುದೇ ಗಣಪತಿಯವರ ಸಾವಿನ ಹಿಂದಿನ ಘೋಷಣೆ ವಿದ್ಯಮಾನದಲ್ಲಿ. ಅದುಬಿಟ್ಟು ಬೇರೆಲ್ಲವನ್ನೂ ಸರ್ಕಾರ ಮಾಡುತ್ತಿದೆ. ಈ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಳಲ್ಲಿ ಹೊರಬಿದ್ದಿರುವ ತೀರ್ಪುಗಳು ಸ್ಪಷ್ಟವಾಗಿವೆ. ಯಾವ ಖಾಸಗಿ ವಾಹಿನಿ ಗಣಪತಿಯವರ ಕೊನೆ ಸಂದರ್ಶನ ನಡೆಸಿತ್ತೋ, ಅದನ್ನು ರೆಕಾರ್ಡ್ ಮಾಡಿದವರ್ಯಾರೋ ಅವರ ಹೇಳಿಕೆ ಮೊದಲು ಪಡೆಯಬೇಕಿತ್ತು. ಆದರೆ ತಂದೆಯ ಹೇಳಿಕೆ ಆಧಾರದಲ್ಲಿ ಮೃತರ ಪತ್ನಿ ಮೇಲೆ ಆರೋಪ ಹೊರೆಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನಾನು ಮಡಿಕೇರಿಯ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆ ಹೆಣ್ಣುಮಗಳು ‘ನಾನೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತರಬೇಡಿ. ದೂರು ಕೊಡುವುದಕ್ಕೇ ಅವಕಾಶ ಮಾಡಿಕೊಡುತ್ತಿಲ್ಲ’ ಎಂದಿದ್ದರು. ದೂರು ದಾಖಲಿಸುವುದಕ್ಕೆ ಆಗದಿರುವ ಒತ್ತಡಗಳ ಬಗ್ಗೆ ್ಲ್ಲಿನ ಎಸ್ಪಿ, ಡಿವೈಎಸ್ಪಿ ಯಾವ ಮಾತುಗಳನ್ನು ಹೇಳಿದರೆಂಬುದನ್ನು ಈ ಸದನದಲ್ಲಿ ಹೇಳಿದರೆ, ಸರ್ಕಾರದಲ್ಲಿ ಕುಳಿತಿರುವ ನೀವು ಅವರ ಮೇಲೂ ಗದಾಪ್ರಹಾರ ಮಾಡುತ್ತೀರಿ’ ಎಂದರು ಕುಮಾರಸ್ವಾಮಿ.

ತಂದೆ ಹೇಳಿಕೆ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರು, ‘ತಾವು ಆಘಾತದಲ್ಲಿದ್ದಾಗ ಪೊಲೀಸರು ಹೇಳಿಕೆಗೆ ಸಹಿ ಹಾಕಿಸಿಕೊಂಡರು. ಅಲ್ಲಿ ಬರೆದಿದ್ದೇನೆಂದು ನಾನು ನೋಡಿಯೇ ಇಲ್ಲ. ನೇಣು ಬಿಗಿದುಕೊಂಡ ಲಾಡ್ಜಿನಲ್ಲಿ ಕಂಡ ಚೀಟಿ ಮತ್ತು ಪೆನ್’ಡ್ರೈವ್ ಏನು ಮಾಡಿದರೆಂಬುದು ಗೊತ್ತಾಗಲಿಲ್ಲ’ ಎಂದು ಮಾಧ್ಯಮಗಳಿಗೆ ಹೇಳಿರುವುದನ್ನು ಉಲ್ಲೇಖಿಸಿದರು.

‘ಅದು ನನ್ನ ಗಮನಕ್ಕೂ ಬಂದಿದೆ. ಆದರೆ ಕುಮಾರಸ್ವಾಮಿಯೇ ಹೀಗೆ ಹೇಳಿಕೊಟ್ಟಿದ್ದು ಅಂತ ಅದನ್ನೂ ನನ್ನ ಮೇಲೆ ಹಾಕಿಯಾರು’ ಎಂದು ಮಾತು ಮುಂದುವರಿಸಿದ ಕುಮಾರಸ್ವಾಮಿ, ಕೇವಲ ಗಣಪತಿ ಅಲ್ಲದೇ ಇಲಾಖೆಯ ಸಣ್ಣಮಟ್ಟದ ಅಧಿಕಾರಿಗಳ ಮೇಲೆ ಸರ್ಕಾರ ಒತ್ತಡ ಹೇರುತ್ತಿರುವುದನ್ನು ಪ್ರಶ್ನಿಸಿದರು. ಗಣಪತಿ ಮೇಲಿನ ಇಲಾಖೆ ವಿಚಾರಣೆ ಐದು ವರ್ಷಗಳವರೆಗೆ ಜಗ್ಗಿದ್ದೇಕೆ ಅಂತ ಪ್ರಶ್ನಿಸಿದರು ಕುಮಾರಸ್ವಾಮಿ. ‘ಮಡಿಕೇರಿಗೆ ಹೋಗುವ ಮುಂಚೆ ಕಲ್ಲಪ್ಪ ಹಂಡಿಭಾಗ್ ಕುಟುಂಬವನ್ನೂ ಮಾತನಾಡಿಸಿದೆ. ಅವರ ಮೇಲೆ ಅಪಹರಣದ ಆರೋಪವಿದ್ದರೂ ಹಿಂಜರಿಕೆ ಇಟ್ಟುಕೊಳ್ಳದೇ ಅಲ್ಲಿಗೆ ಹೋದಾಗ ಆ ಕುಟುಂಬದ ದಯನೀಯ ಸ್ಥಿತಿ ಅರಿವಾಯಿತು. ಕಲ್ಲಪ್ಪ ಮಡದಿ ಕೂಲಿಗೆ ಹೋಗಿ ಬದುಕು ಸಾಗಿಸುತ್ತಿದ್ದಾರೆ. ಪ್ರಜಾವಾಣಿ ಪತ್ರಿಕೆಯ ವರದಿಯಲ್ಲಿ ಸಹ ಕಲ್ಲಪ್ಪ ಮನೆ ಪರಿಶೀಲಿಸಿದಾಗ ಕಂಡುಬಂದ ಬಡತನದ ಸ್ಥಿತಿ ಚಿತ್ರಣ ಇದೆ. ಕಲ್ಲಪ್ಪ ಮೇಲಿನ ಅಧಿಕಾರಿಗಳ ಮಾತು ಕೇಳಿ ಆ ಹಣ ಇಟ್ಟುಕೊಂಡಿದ್ದು ಸ್ಪಷ್ಟ. ಆತ ಭ್ರಷ್ಟನೇ ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯೇ ಬರುತ್ತಿರಲಿಲ್ಲ. ಹೀಗಾಗಿ ಸರ್ಕಾರ ಆತನ ಮೇಲೆ ಆರೋಪವಿದೆ ಎಂದು ಗಣಿಸದೇ ಕುಟುಂಬಕ್ಕೆ ಸಹಾಯ ನೀಡಬೇಕು’ ಎಂದೂ ಮನವಿ ಮಾಡಿದರು.

ಅಧಿಕಾರಿಗಳ ಮೇಲಿನ ಒತ್ತಡಕ್ಕೆ ಮೈಸೂರಿನ ಶಿಖಾ ಪ್ರಸಂಗವೂ ಉದಾಹರಣೆ, ಇದಕ್ಕೆ ಮುಖ್ಯಮಂತ್ರಿಯವರಿಗೆ ನಾಚಿಕೆ ಆಗಬೇಕು ಎಂದಾಗ ತೀವ್ರ ಗದ್ದಲ ಉಂಟಾಯಿತು. ‘ಆ ವಿಚಾರದಲ್ಲಿ ತನಿಖೆ ಆಗ್ತಿದೇರಿ, ನಮಗೂ ಅದಕ್ಕೂ ಸಂಬಂಧವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವೋದ್ರೇಕಕ್ಕೆ ಒಳಗಾದರು. ಆಗ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಸಹ ಮುಖ್ಯಮಂತ್ರಿ ಜತೆ ವಾಗ್ಸಮರಕ್ಕೆ ನಿಂತರು.

‘ಜಾರ್ಜ್ ಅವರ ರಾಜೀನಾಮೆ ತೆಗೆದುಕೊಳ್ಳಿ. ಅವರು ತಪ್ಪಿತಸ್ಥರಲ್ಲ ಎಂಬುದು ಸಾಬೀತಾದಾಗ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಯೇ ಮಾಡಿ ನಮಗೇನು ತಕರಾರಿಲ್ಲ. ಇದು ಆತ್ಮಹತ್ಯೆ, ಪ್ರಕರಣದಲ್ಲಿ ಇನ್ನೋನೂ ಇಲ್ಲ ಎಂದು ಸಿಒಡಿ ಅಧಿಕಾರಿ ಆಗಲೇ ತೀರ್ಮಾನ ಕೊಟ್ಟುಬಿಟ್ಟಿದ್ದಾರೆ. ತನಿಖೆಯಿಂದ ಇನ್ನೇನು ನಿರೀಕ್ಷೆ ಸಾಧ್ಯ? ಡೈಯಿಂಗ್ ಡಿಕ್ಲರೇಷನ್’ನಲ್ಲಿ ಗಣಪತಿ ಹೆಸರಿಸುವ ಮೂರು ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಬೇಕು’ ಎಂದು ಆಗ್ರಹಿಸಿದರು ಕುಮಾರಸ್ವಾಮಿ.

Leave a Reply