ರಮಾನಾಥ ರೈ ವರ್ಸಸ್ ಸವದಿ- ಸಿಟಿ ರವಿ: ಸದನದಲ್ಲಿ ಗಲಾಟೆಯಾಗಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್ :

 ಮಧ್ಯಾಹ್ನ ಮೂರು ಗಂಟೆಯ ನಂತರ ಸೇರಿದ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಲಕ್ಷ್ಮಣ ಸವದಿ ಕತೆ ಮೇಲೊಂದು ಕತೆ ಹೇಳಿ, ಡಿವೈಎಸ್ಪಿ ಗಣಪತಿ ಸಾವಿಗೆ ನ್ಯಾಯ ಕೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಆಯಿತಾಯಿತೆಂಬಂತೆ ತಲೆ ಆಡಿಸುತ್ತಿದ್ದರು. ಆದರೆ ಅದಕ್ಕೂ ಮೊದಲು ಸದನ ಮುಂದೂಡಬೇಕಾಗಿದ್ದಕ್ಕೆ ಕಾರಣವಾಗಿದ್ದು ಮಾತ್ರ ಭಾರೀ ವಾಕ್ಸಮರ. ಇದರ ಕೇಂದ್ರವಾಗಿದ್ದೂ ಸವದಿ, ಸಿಟಿ ರವಿ ಹಾಗೂ ರಮಾನಾಥ ರೈ ವಾಗ್ಯುದ್ಧ.

ಬೋಪಯ್ಯನವರು ಮಾತಾಡುತ್ತಿದ್ದಾಗ ಏಕಾಏಕಿ ಮಧ್ಯಪ್ರವೇಶಿಸಿದ ಅರಣ್ಯ ಸಚಿವ ರಮಾನಾಥ ರೈ ಆಕ್ಷೇಪದ ಧ್ವನಿ ಎತ್ತಿದರು. ‘ಆನೆ ಹಾವಳಿಯಿಂದ ಆರು ಜನ ಸತ್ತಿದ್ದಾರೆ. ಆ ಆನೆ ಹಿಡಿದು ನಂತರ ಮಾತಾಡಿ. ನಿಮಗೆ ಸಲ್ಲದ ವಿಷಯದಲ್ಲಿ ಕಿರಿಕಿರಿ ಮಾಡಬೇಡಿ’ ಎಂದು ಬೋಪಯ್ಯ ಪ್ರತಿಕ್ರಿಯಿಸುತ್ತಿದ್ದಂತೆ, ಬಿಜೆಪಿಯವರೆಲ್ಲ ಧ್ವನಿಗೂಡಿಸಿ ‘ಆನೆ ಹಿಡೀರಿ, ಆನೆ ಹಿಡೀರಿ’ ಎನ್ನತೊಡಗಿದರು. ಇದೇನು ಅರಣ್ಯ ಸಚಿವರ ಕೆಲಸದ ಬಗ್ಗೆ ಮಾತಾಡುತ್ತಿದ್ದಾರೋ, ಆನೆ ಅಂತ ತನ್ನನ್ನೇ ಗೇಲಿ ಮಾಡ್ತಿದಾರೋ ಎಂಬಂತೆ ರಮಾನಾಥರು ಹೌಹಾರುತ್ತಿರುವಾಗಲೇ, ಲಕ್ಷ್ಮಣ ಸವದಿಯವರು ‘ನಿದ್ದೆ ಮಾಡ್ತಿದ್ದವರನ್ನ ಯಾಕ್ರೀ ಎಬ್ಬಿಸೋಕೆ ಹೋಗ್ತೀರಿ, ಏನು ಗೊತ್ತಿರಲ್ಲ ಅವರಿಗೆ’ ಅಂತ ವ್ಯಂಗ್ಯವಾಡಿದರು. ಇದಕ್ಕೂ ಮೊದಲು ಸುದ್ದಿವಾಹಿನಿಗಳು ರಮಾನಾಥರು ನಿದ್ದೆಗೆ ಜಾರಿದ್ದ ಸನ್ನಿವೇಶವನ್ನೂ ಬಿತ್ತರಿಸಿದ್ದವು ಎಂಬುದು ಗಮನಾರ್ಹ. ಆದರೆ ರೈಗಳು ಕುಪಿತರಾಗಿ ಸಂಭಾಷಣೆ ಮುಂದುವರಿಸಿದಾಗ ಅದು ಈ ರೀತಿ ಸಾಗಿತು.

ರೈ- ಆರು ಸಾರಿ ಗೆದ್ದು ಬಂದವನ್ರೀ ನಾನು..

ಲಕ್ಷ್ಮಣ ಸವದಿ- ನಮ್ಮೂರಿನ ಗೋಲ್ಗುಂಬಜ್’ಗೂ 300 ವರ್ಷವಾಗಿದೆ. ಹಾಗಂತ ಅದನ್ನು ಅಜ್ಜ ಅನ್ನೋಕಾಗುತ್ತಾ?

ರೈ- ಸದನದಲ್ಲಿ ಬ್ಲೂ ಫಿಲಂ ನೋಡಿದವರಿಂದ ಏನು ಹೇಳಿಸಿಕೊಳ್ಳೋದು?

ಸವದಿ- ಹೌದ್ರೀ, ನಾನು ಆ ಪ್ರಕರಣಕ್ಕಾಗಿ ನನ್ನ ಸ್ಥಾನಕ್ಕೆ ರಾಜಿನಾಮೆ ಕೊಟ್ಟೆ. ಜಾರ್ಜ್ ಥರ ಮಾನ- ಮರ್ಯಾದೆ ಬಿಟ್ಟು ಕುಳಿತಿರಲಿಲ್ಲ- ಹೀಗೆನ್ನುತ್ತ ಕೆಲವು ಶಬ್ದಗಳಲ್ಲಿ ಸರ್ಕಾರವನ್ನು ಬಯ್ಯುತ್ತಲೇ ಪರಿಸ್ಥಿತಿ ಗೊಂದಲದ ಗೂಡಾಯಿತು.

assembly ramanathಇದಕ್ಕೆ ಸಾಥ್ ನೀಡಿದ್ದು, ರೈ ಪರೋಕ್ಷವಾಗಿ ಶಾಸಕ ಸಿಟಿ ರವಿ ಅವರನ್ನು ಹಂಡಿಭಾಗ್ ಪ್ರಕರಣದಲ್ಲಿ ಉಲ್ಲೇಖಿಸಿದ್ದೂ ಕಾರಣವಾಯಿತು. ‘ಕಲ್ಲಪ್ಪ ಹಂಡಿಭಾಗ್ ಏಕೆ ಸತ್ತ? ನೀವೆಲ್ಲ ಏನು ಮಾಡಿದ್ದೀರಿ ಅಂತ ಗೊತ್ತು..’ ಎಂದಾಗ ‘ಪಾಯಿಂಟ್ ಆಫ್ ಆರ್ಡರ್’ ಎಂದ ಸಿಟಿ ರವಿ, ‘ಸುಮ್ಮನೇ ಆರೋಪ ಮಾಡುವುದಲ್ಲ. ಏನು ಗೊತ್ತು ಈಗಲೇ ಸದನಕ್ಕೆ ಹೇಳಿ’ ಅಂತ ಆಗ್ರಹಿಸಿದರು.

ಆದರೆ, ಈ ಹಂತದಲ್ಲಿ ಸಭಾಧ್ಯಕ್ಷ ಪೀಠದಲ್ಲಿದ್ದ ಮಧುಗಿರಿ ರಾಜಣ್ಣ, ‘ಪಾಯಿಂಟೂ ಇಲ್ಲ, ಆರ್ಡರೂ ಇಲ್ಲ. ಕುತ್ಕೊಳಪ್ಪಾ’ ಎಂದುಬಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ‘ಸ್ವಾಮಿ, ನೀವು ಕುಳಿತಿರುವುದು ವಿಧಾನಸಭೆ ಸಭಾಧ್ಯಕ್ಷ ಪೀಠದಲ್ಲಿ ಎಂಬುದನ್ನು ನೆನಪು ಮಾಡಿಕೊಳ್ಳಿ. ಮಧುಗಿರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರ ಥರ ಮಾತನಾಡಬೇಡಿ’ ಅಂದರು.

ಸಭಾಧ್ಯಕ್ಷ ಸ್ಥಾನಕ್ಕೆ ಅಗೌರವ ಸಲ್ಲಿಸುತ್ತಿದ್ದಾರೆ ಅಂತ ಆಡಳಿತ ಪಕ್ಷದವರು ಧ್ವನಿ ಎತ್ತಿದಾಗ, ಗೌರವ ಬರುವಂತೆ ಅವರು ನಡೆದುಕೊಳ್ಳಲಿ ಎಂದು ಪ್ರತಿಪಕ್ಷ ಸದಸ್ಯರು ಕೂಗಿದರು. ಸಭಾಧ್ಯಕ್ಷರ ಎದುರಿನ ಆವರಣಕ್ಕೆ ಬಿಜೆಪಿ ಸದಸ್ಯರು ನುಗ್ಗಿದಾಗ ಈ ಹಂತದಲ್ಲಿ ರಮಾನಾಥ ರೈ ಕುಳಿತಿರುವಲ್ಲಿಯೇ ಈ ಪೈಕಿ ಹಲವರು ಗುಂಪುಗೂಡಿದರು. ‘ಏನ್ ಗೂಂಡಾಗಿರಿಗೆ ಬರ್ತಿರೇನ್ರಿ? ಸದಸ್ಯರ ಎದುರು ಏಕೆ ಹೋಗಿ ಜಗಳ ಕಾಯ್ತೀರಿ’ ಅಂತ ಕ್ರೋಧ ಪ್ರದರ್ಶಿಸಿದರು. ನಿಮ್ಮ ಸಚಿವರಿಗೆ ಜವಾಬ್ದಾರಿಯಿಂದ ಮಾತಾಡಲು ಹೇಳಿ ಎಂದು ಬಿಜೆಪಿ ಸದಸ್ಯರು ಧ್ವನಿ ಏರಿಸಿದರು. ಈ ಕೋಲಾಹಲ ತಡೆಯಲು ಮಾರ್ಷಲ್’ಗಳೂ ಮಧ್ಯಪ್ರವೇಶಿಸಬೇಕಾಯಿತು. ಇದೇ ಗಲಾಟೆ ತಾರಕಕ್ಕೇರಿದಾಗ ಮಧ್ಯಾಹ್ನ ಮೂರಕ್ಕೆ ಸದನ ಮುಂದೂಡಲಾಯಿತು.

Leave a Reply