ಜಾರ್ಜ್ ಪರ ಸಿಎಂ ಬ್ಯಾಟಿಂಗ್, ರಾಜಿನಾಮೆ- ಸಿಬಿಐ ತನಿಖೆ ಎರಡಕ್ಕೂ ನಕಾರ, ಇದು ಕಲಾಪದಲ್ಲಿ ಮುಖ್ಯಮಂತ್ರಿಯವರ ಈವರೆಗಿನ ಮಾತಲ್ಲಿ ಸಿಕ್ಕ ಸುಳಿವು

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿಗಳ ಭಾಷಣದ ವೇಳೆ ತೀವ್ರ ಗದ್ದಲ… ಅನಗತ್ಯ ವಿಷಯಗಳ ಪ್ರಸ್ತಾಪ… ವಿಧಾನಸಭೆಯ ಸದನದಲ್ಲಿ ಬುಧವಾರ ಬೆಳಗ್ಗೆ ಕಂಡು ಚಿತ್ರಣ. ಇದರೊಂದಿಗೆ ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಮಧ್ಯಾಹ್ನದ ವೇಳೆಗೆ ಪೂರ್ಣಗೊಳಿಸಲು ಸಾಧ್ಯವಾಗಲೇ ಇಲ್ಲ. ಡಿ.ಕೆ ಶಿವಕುಮಾರ್ ಅವರ ಔತಣಕೂಟದ ಮನವಿ ಮೇರೆಗೆ ಸಿ.ಎಂ ಭಾಷಣವನ್ನು ಭೋಜನ ನಂತರದ ಅವಧಿಯಲ್ಲಿ ಮುಂದುವರಿಸಲು ತೀರ್ಮಾನಿಸಲಾಯಿತು.

ಬೆಳಗ್ಗೆ ಮುಖ್ಯಮಂತ್ರಿಗಳ ಭಾಷಣದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ, ಸಚಿವ ಕೆ.ಜೆ ಜಾರ್ಜ್ ಮತ್ತು ಪೊಲೀಸ್ ಅಧಿಕಾರಿಗಳ ಪರವಾದ ಬ್ಯಾಟಿಂಗ್ ಮತ್ತು ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಿರುವ ಬಗೆಗಿನ ಸಮಜಾಯಷಿ.

ಆ ಪೈಕಿ, ಕೆ.ಜೆ ಜಾರ್ಜ್ ಹಾಗೂ ಹೀರಿಯ ಪೊಲೀಸ್ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿದ್ದು ಹೀಗೆ: ‘ನಿರಪರಾಧಿಗಳ ತಲೆದಂಡ, ತೇಜೋವಧೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಪಾಪ ಕೆ.ಜೆ ಜಾರ್ಜ್.., ಅವರು ಮಂತ್ರಿಯಾದಾಗಿನಿಂದ ನೂರು ಬಾರಿ ರಾಜಿನಾಮೆ ಕೇಳಲಾಗಿದೆ. ಪ್ರಕರಣದಲ್ಲಿ ಗಣಪತಿ ಅವರ ತಂದೆ ಕುಶಾಲಪ್ಪ ಅವರು ನೀಡಿದ ಹೇಳಿಕೆ ಪ್ರಮುಖವಾಗಿದ್ದು, ತಮ್ಮ ಹೇಳಿಕೆಯಲ್ಲಿ ಕೆ.ಜೆ ಜಾರ್ಜ್, ಹಾಗೂ ಪೊಲೀಸ್ ಅಧಿಕಾರಿಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಕುಶಾಲಪ್ಪ ಅವರು ಹೇಳಿಕೆ ನೀಡಿದಾಗ ಅವರ ಮಗ ಮಾಚಯ್ಯ ಸಹ ಉಪಸ್ಥಿತರಿದ್ದರು. ಇನ್ನು ಗಣಪತಿ ಅವರು ಟಿವಿ ವಾಹಿನಿಗೆ ನೀಡಿರುವ ಹೇಳಿಕೆ ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ.’

ಸಿಎಂ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿರುವ ಬಗೆಗಿನ ಸ್ಪಷ್ಟನೆ ನೀಡಿದ್ದು ಹೀಗೆ: ‘ಸಿಒಡಿ ನಮ್ಮ ಪೊಲೀಸರು. ದಿನನಿತ್ಯ ರಾಜ್ಯದಲ್ಲಿನ ಅಪರಾಧಗಳನ್ನು ತನಿಖೆ ಮಾಡಿ ಆರೋಪಿಗಳ ವಿರುದ್ಧ ಚಾರ್ಜ್ ಶಿಟ್ ಸಲ್ಲಿಸಿ ಅಪರಾಧಿಗೆ ಶಿಕ್ಷೆ ಕೊಡಿಸಲು ಶ್ರಮಿಸುತ್ತಾರೆ. ಅಂತಹವರ ಮೇಲೆ ಅನುಮಾನ ಪಡಲು ಸಾಧ್ಯವಿಲ್ಲ. ನಮಗೆ ಸಿಒಡಿ ಮೇಲೆ ಸಂಪೂರ್ಣ ವಿಶ್ವಾಸವಿದೆ. ಪ್ರಕರಣದ ತನಿಖೆಯಲ್ಲಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸ್ ಅಧಿಕಾರಿಗಳು, ಮಂತ್ರಿಗಳು ಮತ್ತು ಶಾಸಕರ ರಕ್ಷಣೆ ಮಾಡುವುದಿಲ್ಲ. ಸಿಒಡಿ, ಸಿಬಿಐನಲ್ಲಿರುವ ಅಧಿಕಾರಿಗಳು ಎಲ್ಲರೂ ನಮ್ಮವರೆ. ಸಾಮಾನ್ಯವಾಗಿ ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿದ್ದರೆ, ಸಿಬಿಐ ತನಿಖೆಗೆ ಪ್ರಕರಣ ನೀಡಲು ಹಿಂಜರಿಯುತ್ತಾರೆ. ಆದರೆ, ನಾವು ಅಧಿಕಾರಕ್ಕೆ ಬಂದ ನಂತ್ರ 8 ಪ್ರಕರಣಗಳನ್ನು ನೀಡಿದ್ದೇವೆ. ಬಿಜೆಪಿಯವರು 5 ವರ್ಷಗಳ ಅವಧಿಯಲ್ಲಿ ಒಂದೇ ಒಂದು ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಲಿಲ್ಲ. ನಮಗೆ ಸಿಬಿಐ ಕಂಡರೆ ಭಯವಿಲ್ಲ. ಹೀಗಾಗಿ 8 ಪ್ರಕರಣ ನೀಡಿದ್ದೇವೆ. ಸಿಬಿಐ ಹಾಗೂ ಸಿಒಡಿ ಎರಡು ಸಂಸ್ಥೆಗಳ ಮೇಲೂ ನಮಗೆ ಗೌರವವಿದೆ. ಸಿಒಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ವರದಿ ಬಂದನಂತರ ಅಧಿಕಾರಿ ಇರಲಿ, ಮಿನಿಸ್ಟರ್ ಆಗಿರಲಿ ತಪ್ಪಿತಸ್ಥರಿಗೆ ಮುಲಾಜಿಲ್ಲದೆ ಶಿಕ್ಷೆ ನೀಡುತ್ತೇವೆ.’

ಇನ್ನು ಗಣಪತಿ ಆತ್ಮಹತ್ಯೆ ಬಗ್ಗೆ ಪತ್ನಿ ಪಾವನಾ ಅವರಿಗೆ ಮೊದಲ ತಿಳಿಸಲಿಲ್ಲ ಎಂಬ ಆರೋಪಕ್ಕೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದು ಹೀಗೆ: ‘ಪಾವನಾ ಅವರು ಮಂಗಳೂರಿನಲ್ಲಿದ್ದರು. ಅವರಿಗೆ ವಿಷಯ ತಿಳಿಸಲು ಎರಡು ಬಾರಿ ಕರೆ ಮಾಡಲಾಯಿತು. 10.30ಕ್ಕೆ ಮೊದಲ ಬಾರಿಗೆ ಅವರು ಕರೆಗೆ ಸಿಗಲಿಲ್ಲ. 11 ಗಂಟೆಯ ನಂತರ ಎರಡನೇ ಬಾರಿ ಕರೆ ಮಾಡಿದಾಗ ವಿಷಯ ತಿಳಿದಿದ್ದ ಅವರು ತಮ್ಮ ಪ್ರಯಾಣ ಆರಂಭಿಸಿದ್ರು. ಅಲ್ಲದೆ ನಾನು ಸ್ಥಳಕ್ಕೆ ಆಗಮಿಸುತ್ತಿದ್ದು, ಸುಳ್ಯದ ಬಳಿ ಇರುವುದಾಗಿ ಉತ್ತರಿಸಿದ್ರು.’

ಆದರೆ, ತನ್ನ ಹೇಳಿಕೆಯನ್ನು ಪಡೆದಿದ್ದರು ಪೊಲೀಸರು ಅದನ್ನು ಪರಿಗಣಿಸದಿರುವ ಬಗ್ಗೆ ಪಾವನಾ ಅವರು ಮಾಡಿರುವ ಆರೋಪದ ಬಗ್ಗೆ ಮಾತ್ರ ಮುಖ್ಯಮಂತ್ರಿಗಳ ಮಾತಿನಲ್ಲಿ ಉತ್ತರ ಸಿಗಲಿಲ್ಲ.

ಒಟ್ಟಿನಲ್ಲಿ ಜಾರ್ಜ್ ರಾಜಿನಾಮೆಯೂ ಇಲ್ಲ, ಸಿಬಿಐಗೆ ಪ್ರಕರಣವನ್ನು ವಹಿಸುವುದೂ ಇಲ್ಲ ಎಂಬ ಪ್ರತಿಪಾದನೆ ಮುಖ್ಯಮಂತ್ರಿಯವರ ಬೆಳಗಿನ ಉತ್ತರದ ಧಾಟಿಯಲ್ಲಿ ಸ್ಪಷ್ಟವಾಗಿದೆ.

Leave a Reply