ಪಾವನಾ ಆತ್ಮಸ್ಥೆರ್ಯ ಕುಗ್ಗಿಸಲು ಹೋಗಿ ಮುಗ್ಗರಿಸಿ ಬಿದ್ದ ಸರಕಾರ ಹೇಗೆ ಬಡಿಸಿಕೊಳ್ಳುತ್ತಿದೆ ನೋಡಿ..

ಡಿಜಿಟಲ್ ಕನ್ನಡ ವಿಶೇಷ:

ಅವಹೇಳನ, ಚಾರಿತ್ರ್ಯವಧೆ ಎಂಬುದು ಎದುರಾಳಿಯ ಆತ್ಮಸ್ಥೈರ್ಯ ಕುಗ್ಗಿಸುವ ಯತ್ಮದ ಬ್ರಹ್ಮಾಸ್ತ್ರ. ಅದನ್ನು ಒಬ್ಬರು ತಮ್ಮ ತಪ್ಪು ಮುಚ್ಚಿಕೊಳ್ಳಲು ಪ್ರಯೋಗಿಸಬಹುದು. ಮತ್ತೊಬ್ಬರು ಕೀಳರಿಮೆ, ಹತಾಶೆಯಿಂದ ಬಳಸಬಹುದು. ಮಗದೊಬ್ಬರು ಎದುರಾಳಿ ಮುಂದಿಡಬಹುದಾದ ಹೆಜ್ಜೆಯನ್ನು ತುಂಡರಿಸಲು.

ಈ ಎಲ್ಲದರ ಸಮ್ಮಿಶ್ರವೇ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಹಿಂದಿನ ಕಾರಣವನ್ನು ಅವರ ಪತ್ನಿ ಪಾವನಾ ಅವರ ಮೇಲೆ ಹಾಕಲು ರಾಜ್ಯ ಸರಕಾರ ಯತ್ಮಿಸಿರುವುದು. ಆದರೆ ಈ ಗುದ್ದೋಡುವ ಪ್ರಯತ್ನದಲ್ಲಿ ಮುಗ್ಗರಿಸಿ ಬಿದ್ದಿರುವ ಸರಕಾರ ಹಲವು ದಿಕ್ಕಿನಿಂದ ವ್ಯಾಪಕ ಟೀಕೆ, ಆಕ್ರೋಶವನ್ನು ಮೈಮೇಲೆ ಎಳೆದುಕೊಂಡಿದೆ.

ಈ ಹಿಂದೆ ಐಎಎಸ್ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣದಲ್ಲೂ ಇಂತಹುದೇ ಪ್ರಯತ್ನ ನಡೆದಿತ್ತು. ಇದೇ ರೀತಿ ತನಿಖೆಗೆ ಮೊದಲೇ ದಾಂಪತ್ಯ ವಿರಸ, ಅದಕ್ಕೊಂದು ಪ್ರೇಮ ಪ್ರಸಂಗದ ಲೇಪ ಹಚ್ಚಿ ಪ್ರಕರಣವನ್ನು ಹಳ್ಳ ಹಿಡಿಸುವ ವ್ಯವಸ್ಥಿತ ಪ್ರಯತ್ನ ನಡೆದಿತ್ತು. ಆದರೆ ಗಣಪತಿ ಪ್ರಕರಣದಂತೆ ಅಧಿಕೃತ ಹೇಳಿಕೆ ಕೊಟ್ಟು, ಬಡಿಸಿಕೊಂಡಿರಲಿಲ್ಲ. ಬದಲಿಗೆ ಮೌಖಿಕ ಸಮರದ ಮೊರೆ ಹೋಗಿತ್ತು. ಪ್ರಕರಣದ ಸುತ್ತ ಅನುಮಾನದ ಬಲೆ ಎಣೆಯಲಾಗಿತ್ತು. ಅಲ್ಲಿದ್ದುದು ಕೂಡ ಇದೇ ರೀತಿ ಡಿ.ಕೆ. ರವಿ ಕುಟುಂಬದ ಆತ್ಮಸ್ಥೆರ್ಯ ಕುಗ್ಗಿಸುವ ಪ್ರಯತ್ನವೇ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಹೊತ್ತಿಗೆ ಸರಕಾರ ಈ ಪ್ರಯತ್ನದಲ್ಲಿ ಭಾಗಶಃ ಯಶಸ್ವಿಯಾಗಿತ್ತು. ರವಿ ಅವರ ಪೋಷಕರ ಕುಟುಂಬ ಹಾಗೂ ಪತ್ನಿ ಕುಟುಂಬದ ನಡುವೆ ಒಡಕನ್ನು ತಂದಿಟ್ಟಿತ್ತು.

ಈಗಲೂ ಕೂಡ ಸರಕಾರ ಅದೇ ಪ್ರಯತ್ನದಲ್ಲಿದೆ. ಗಣಪತಿ ಪತ್ನಿ ಪಾವನಾ ಮತ್ತು ಅವರ ಮಾವನ ಕುಟುಂಬದ ನಡುವೆ ಒಡಕು ತಂದಿಟ್ಟು, ಅದರ ಲಾಭವನ್ನು ಪ್ರಕರಣದ ತನಿಖೆ ದಿಕ್ಕುತಪ್ಪಿಸಲು ಬಳಸಿಕೊಳ್ಳುವ ಹವಣಿಕೆಯಲ್ಲಿದೆ. ಹೀಗಾಗಿಯೇ ಪತಿ ಜತೆ ಪಾವನಾ ಸಂಬಂಧ ಸರಿ ಇರಲಿಲ್ಲ ಎಂದು ಗೂಬೆ ಕೂರಿಸಿ, ಅವರ ಆತ್ಮಸ್ಥೆರ್ಯ ಹಣಿಯುವ ಯತ್ನ ನಡೆದಿದೆ. ಅದರ ಮತ್ತೊಂದು ಭಾಗ ಗಣಪತಿ ತಂದೆ ಕುಶಾಲಪ್ಪ ಮತ್ತು ಸಹೋದರ ಡಿವೈಎಸ್ಪಿ ತಮ್ಮಯ್ಯ ಅವರನ್ನು ಒತ್ತಡ ತಂತ್ರದ ಮೂಲಕ ತಮ್ಮತ್ತ ಸೆಳೆಯಲು ಹೋದದ್ದು. ಆದರೆ ಆತುರಗಾರನಿಗೆ ಬುದ್ದಿ ಮಟ್ಟ ಎಂಬಂತೆ ಕ್ರಮಲೋಪ ಸೃಷ್ಟಿಸಿದ ಸುಳಿಯಲ್ಲಿ ಸಿಲುಕಿದ್ದು, ಪ್ರತಿಪಕ್ಷಗಳು ಹಾಗೂ ಜನಸಾಮಾನ್ಯರಿಂದ ಹಿಗ್ಗಾಮುಗ್ಗಾ ಟೀಕೆಗೆ ಒಳಗಾಗಿದೆ.

ಇದೀಗ ಪಾವನಾ ಅವರು ಗೃಹ ಸಚಿವ ಪರಮೇಶ್ವರ್ ಅವರು ತಮ್ಮ ವಿರುದ್ಧ ವಿಧಾನ ಮಂಡಲದಲ್ಲಿ ತಮ್ಮ ಬಗ್ಗೆ ಮಾಡಿರುವ ಅಪಮಾನಕಾರಿ ಹೇಳಿಕೆ ವಿರುದ್ಧ ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಿದ್ದಾರೆ. ತಾವು ಯಾವುದೇ ದೂರು ನೀಡದಿದ್ದರೂ ತಮ್ಮ ಹೆಸರನ್ನು ದುರಪಯೋಗ ಮಾಡಿರುವ ಬಗ್ಗೆ ತಂದೆ ಕುಶಾಲಪ್ಪ ಕೂಡ ಸಿಡಿದಿದ್ದಾರೆ. ಇದು ತಮ್ಮ ಸಮುದಾಯಕ್ಕೆ ಮಾಡಿರುವ ಅಪಮಾನ ಎಂದು ಕೊಡವರು ಬೀದಿಗಿಳಿದು ಹೋರಾಡಲು ನಿರ್ಧರಿಸಿದ್ದಾರೆ. ಇದು ಬರೀ ಪಾವನ ಮತ್ತು ಅವರು ಪ್ರತಿನಿಧಿಸುವ ಕೊಡವ ಸಮುದಾಯಕ್ಕಷ್ಟೇ ಅಲ್ಲ ಇಡೀ ಇಡೀ ಮಹಿಳಾ ಸಮುದಾಯಕ್ಕೆ ಮಾಡಿರುವ ಅಪಮಾನ, ಮಹಿಳಾ ಶೋಷಣೆಯ ಪ್ರತೀಕ ಎಂದು ಮಹಿಳಾ ಹೋರಾಟಗಾರರು ಸಿಡಿದು ನಿಂತಿದ್ದಾರೆ. ಪೊಲೀಸರು ದೂರು ಸ್ವೀಕಾರಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕೋರ್ಟಿನಲ್ಲಿ ಪಾವನಾ ನಡೆಸುತ್ತಿರುವ ಹೋರಾಟ ಬೆಂಬಲಿಸಲು ನಿರ್ಧರಿಸಿದ್ದಾರೆ.

ಗಣಪತಿ ಆತ್ಮಹತ್ಯೆ ಪ್ರಕರಣದ ಮೂಲ ಆರೋಪಿ ಗೃಹ ಸಚಿವ ಜಾರ್ಜ್. ಆದರೆ ಅವರನ್ನು ರಕ್ಷಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಪಾಪೋಷಿತ ಉತ್ಪ್ರೇಕ್ಷ ಪ್ರಯತ್ನದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹರಕೆಯ ಕುರಿಯಂತಾಗಿದ್ದು, ಜಾರ್ಜ್ ಅವರ ಮೇಲಿನ ಸಾರ್ವಜನಿಕ ಸಿಟ್ಟಿನಲ್ಲಿ ಪಾಲು ಪಡೆದುಕೊಂಡಿದ್ದಾರೆ. ಜತೆಗೆ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರು ‘ಸೂಪರ್ ಹೋಮ್ ಮಿನಿಸ್ಟರ್’ ಅಲ್ಲ ಎಂಬುದನ್ನೂ ರುಜುವಾತು ಪಡಿಸಬೇಕಾದ ಅನಿವಾರ್ಯತೆಗೂ ಸಿಕ್ಕಿದ್ದಾರೆ.

Leave a Reply