ಸಿಎಂ ನ್ಯಾಯಾಂಗ ತನಿಖೆ ಘೋಷಣೆಗೆ ಒಪ್ಪದ ಪ್ರತಿಪಕ್ಷಗಳಿಂದ ಶುರುವಾಯ್ತು ಅಹೋರಾತ್ರಿ ಧರಣಿ

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ರಾಜ್ಯ ಸರ್ಕಾರ ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರಾಕರಿಸಿದೆ. ಈ ಬಗ್ಗೆ ಬುಧವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸ್ವಯಂ ಪ್ರೇರಿತವಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುತ್ತಿದ್ದೇನೆ ಅಂದ್ರು.

ಮಧ್ಯಾಹ್ನ ಚರ್ಚೆ ಆರಂಭವಾದ ನಂತರ ತಮ್ಮ ಮಾತು ಮುಂದುವರಿಸಿದ ಮುಖ್ಯಮಂತ್ರಿಗಳು ಕಲ್ಲಪ್ಪ ಹಂಡಿಭಾಗ್, ಡಿವೈಎಸ್ಪಿ ಅನುಪಮಾ ಶೆಣೈ ಹಾಗೂ ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರ ಪ್ರಕರಣಕ್ಕೂ, ಸರ್ಕಾರಕ್ಕೂ ಸಂಬಂಧ ಇಲ್ಲ ಅಂತಾ ಸ್ಪಷ್ಟನೆ ನೀಡಿದ್ರು. ತಮ್ಮ ಮಾತಿನ ಅಂತಿಮ ಭಾಗವಾಗಿ ಗಣಪತಿಯವರ ಆತ್ಮಹತ್ಯೆ ಪ್ರಕರಣದ ತನಿಖೆ ಬಗ್ಗೆ ಸಿಎಂ ಹೇಳಿದಿಷ್ಟು:

‘ಪ್ರತಿ ಪಕ್ಷಗಳು ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು, ಮಂತ್ರಿಗಳ ಕೈವಾಡವಿದೆ ಎಂದು ಆರೋಪ ಮಾಡುತ್ತಿದೆ. ಹೀಗಾಗಿ ನಾನು ಸ್ವಯಂ ಪ್ರೇರಿತವಾಗಿ ಪ್ರಕರಣದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ವಹಿಸುತ್ತಿದ್ದೇನೆ. ಇಲ್ಲಿ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ 6 ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಲಾಗುವುದು. ಈ ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.’

ಮುಖ್ಯಮಂತ್ರಿಗಳ ನಿರ್ಧಾರವನ್ನು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರೋಧಿಸಿದ್ರು. ಅವರು ಹೇಳಿದ್ದು ಹೀಗಿದೆ:

‘ಕುಶಾಲಪ್ಪನವರು ನೀಡಿರುವ ಹೇಳಿಕೆ ಆಧಾರದ ಮೇಲೆ ಸೆಕ್ಷನ್ 174 ಮೂಲಕ ಯುಡಿಆರ್ ನಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೀರಿ. ನೀವು ಹೇಳುತ್ತಿರುವ ಹಾಗೆ ಕುಶಾಲಪ್ಪ ಅವರ ಹೇಳಿಕೆಯಲ್ಲಿ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇರಲಿಲ್ಲ ಎಂದಿದೆ. ಹಾಗಾಗಿ ನಿಮ್ಮ ತನಿಖೆಯಲ್ಲಿ ಯಾರನ್ನು ವಿಚಾರಣೆಗೆ ಒಳಪಡಿಸುತ್ತೀರಿ? ಗಣಪತಿ ಅವರು ನೀಡಿರುವ ಸಂದರ್ಶನದಲ್ಲಿ ಇಲ್ಲಿಂದ ಮುಂದೆ ನನಗೆ ಏನೇ ಆದರೂ ಅದಕ್ಕೆ ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿ ಕಾರಣ ಅಂತಾ ಹೇಳಿಕೆ ನೀಡಿದ್ದಾರೆ. ಅದನ್ನು ನೀವು ಡೈಯಿಂಗ್ ಡಿಕ್ಲರೇಷನ್ ಅಂತ ಪರಿಗಣಿಸಲು ನೀವು ಸಿದ್ಧರಿಲ್ಲ. ಗಣಪತಿ ಅವರ ಹೇಳಿಕೆ ಪರಿಗಣಿಸಿ ಈ ಮೂವರ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ಅಂತಾ ಕೇಳಿಕೊಳ್ಳುತ್ತಿದ್ದೇವೆ. ಇಲ್ಲವಾದರೆ ಕೇವಲ ಗಂಡ ಹೆಂಡತಿಗೆ ಸಂಬಂಧಿಸಿದ ಪ್ರಕರಣವಾಗಿ, ಅಲ್ಲಿಂದ ಮುಂದಕ್ಕೆ ಹೋಗದೇ ತನಿಖೆ ಮಹತ್ವ ಕಳೆದುಕೊಳ್ಳುತ್ತದೆ’ ಅಂದ್ರು ಕುಮಾರಸ್ವಾಮಿ.

rameshkumar cm assemblyಈ ಹಿಂದೆ ಸಚಿವರಲ್ಲದಿದ್ದಾಗ ಸರ್ಕಾರದ ನಡೆಗಳ ಬಗ್ಗೆ ಟೀಕಿಸುತ್ತಿದ್ದ ರಮೇಶ್ ಕುಮಾರ್, ಬದಲಾದ ಪರಿಸ್ಥಿತಿಯಲ್ಲಿ ಸರ್ಕಾರದ ಪರ ಉತ್ಸುಕರಾಗಿ ಮಾತನಾಡಿದರು. ಮುಖ್ಯಮಂತ್ರಿ ಮಾತನಾಡುವಾಗಲೂ ವಿರೋಧದ ಧ್ವನಿಗಳು ಬಂದಾಗ ಮಧ್ಯಪ್ರವೇಶಿಸಿ, ಶೆಟ್ಟರ್ ವಿರುದ್ಧ ಕ್ರಿಯಾಲೋಪ ಎತ್ತಿದ್ದ ಅವರು, ಕುಮಾರಸ್ವಾಮಿಯವರು ಎಫ್ ಐ ಆರ್ ದಾಖಲಿಸಲು ಒತ್ತಾಯಿಸುತ್ತಿದ್ದಾಗ, ‘ತನಿಖೆ ವೇಳೆ ಎಫ್ ಐ ಆರ್ ನಲ್ಲಿ ಹೆಸರಿಲ್ಲದವರನ್ನೂ ವಿಚಾರಿಸುವ ಅವಕಾಶ ಇದೆ. ಹೀಗಾಗಿ ಈ ಒತ್ತಾಯ ಬೇಕಿಲ್ಲ’ ಎಂದು ಪ್ರತಿಪಾದಿಸಿದರಲ್ಲದೇ ‘ಸಾವಿನ ಮುಂಚಿನ ಘೋಷಣೆ ಯಾವುದು ಎಂಬುದೇ ಚರ್ಚಾರ್ಹ ವಿಷಯ’ ಎಂದೂ ವಾದ ಕಟ್ಟಿದರು. ಇದಕ್ಕೆ ಬಸವರಾಜ ಬೊಮ್ಮಾಯಿಯವರು ಪ್ರತಿಕ್ರಿಯಿಸುತ್ತ, ‘ಸಾವಿಗೆ ಕಾರಣರಾಗುತ್ತಿರುವವರನ್ನು ದೂರಿ ಬಹಳ ಸಮಯದ ನಂತರ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಡೈಯಿಂಗ್ ಡಿಕ್ಲರೇಷನ್ ಎನ್ನಲಾಗುವುದಿಲ್ಲ ಸರಿ. ಆದರೆ ಟಿವಿ ವಾಹಿನಿಯಲ್ಲಿ ಸಂದರ್ಶನ ನೀಡಿ, ತಮಗೇನಾದರೂ ಆದರೆ ಈ ಮೂವರೇ ಹೊಣೆ ಎಂದು ಹೇಳಿ, ನೇರವಾಗಿ ಲಾಡ್ಜಿಗೇ ಹೋಗಿದ್ದಾರೆ. ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸದೇ ಇರುವುದು ಸರಿಯಲ್ಲ’ ಎಂದರು.

ಅಲ್ಲದೇ, ಕುಶಾಲಪ್ಪನವರ ಹೇಳಿಕೆ ಆಧಾರದಲ್ಲಿ, ಅದನ್ನು ವಿಡಿಯೋ ಟೇಪ್ ಮಾಡಿಯೇ ದೂರು ದಾಖಲಿಸಿರುವುದಾಗಿ ಮುಖ್ಯಮಂತ್ರಿ ಹೇಳಿರುವುದನ್ನು ಉಲ್ಲೇಖಿಸುತ್ತ, ‘ಕುಶಾಲಪ್ಪನವರು ಹೇಳಿದ್ದನ್ನು ಹೇಳಿಕೆ ಎಂದು ಪರಿಗಣಿಸಿದ್ದೀರೋ ಅಥವಾ ಅದು ದೂರೋ? ಹೇಳಿಕೆಗೂ ದೂರಿಗೂ ವ್ಯತ್ಯಾಸವಿದೆಯಲ್ಲ’ ಎಂಬ ಶಾಸಕ ಸಿಟಿ ರವಿ ಪ್ರಶ್ನೆಗೆ ಉತ್ತರ ಸಿಗಲಿಲ್ಲ.

‘ಜಾರ್ಜ್ 6 ತಿಂಗಳ ಕಾಲ ರಾಜಿನಾಮೆ ನೀಡಿದರೆ ಏನಾಗುತ್ತದೆ? ಅವರು ನಿರಪರಾಧಿ ಎಂದು ತನಿಖೆಯಲ್ಲಿ ಸಾಬೀತಾದ್ರೆ ಅವರನ್ನು ಉಪಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿಯನ್ನಾಗಿಯೇ ಮಾಡಲಿ ನಾವು ಬೇಡ ಅನ್ನೊದಿಲ್ಲ. ಆದ್ರೆ ಅವರ ವಿರುದ್ಧ ಎಫ್ಐಆರ್ ದಾಖಲಾಗಬೇಕು. ತನಿಖೆಯನ್ನು ಸಿಬಿಐಗೆ ವಹಿಸಬೇಕು. ಅಲ್ಲಿಯವರೆಗೂ ಬಿಜೆಪಿ ಹೋರಾಟ ಮುಂದುವರಿಸಲಿದೆ’ ಅಂದ್ರು ಜಗದೀಶ್ ಶೆಟ್ಟರ್.

ಸರ್ಕಾರ ಪ್ರತಿಪಕ್ಷಗಳ ಆಗ್ರಹವನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಆಗ ಸ್ಪೀಕರ್ ಅವರು ಸದನವನ್ನು ಸಂಜೆ 5 ಗಂಟೆವರೆಗೂ ಮುಂದೂಡಿದರು. ನಂತರ ಸದನದ ಹೊರಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮತ್ತು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಜಂಟಿಯಾಗಿ ಮಾಧ್ಯಮ ಹೇಳಿಕೆಗಳನ್ನು ನೀಡಿ, ಜೆಡಿಎಸ್ ಮತ್ತು ಬಿಜೆಪಿಗಳು ಸದನದಲ್ಲಿ ಅಹೋರಾತ್ರಿ ಧರಣಿ ಘೋಷಿಸಿದ್ದಾರೆ.

Leave a Reply