ಬಹುಮತವಿದೆಯೆಂದು ಕಾನೂನು ಮೀರಿ ಹಾರಾಡಬೇಡಿ: ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಅರುಣಾಚಲ ವಿಷಯದಲ್ಲಿ ಸುಪ್ರೀಂ ಸಂದೇಶ

ಅರುಣಾಚಲ ಮುಖ್ಯಮಂತ್ರಿ ನಬಾಮ್ ತುಕಿ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದಲ್ಲಿ ಬಹುಮತವಿದೆ ಎಂಬ ಕಾರಣಕ್ಕೆ ಅಡ್ಡದಾರಿಯಿಂದ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿ ದಕ್ಕಿಸಿಕೊಳ್ಳಲಾಗುವುದಿಲ್ಲ- ಹೀಗಂತ ಬುಧವಾರದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಪರೋಕ್ಷವಾಗಿ ಸಾರಿದೆ.

ಅರುಣಾಚಲದಲ್ಲಿ ನಬಾಮ್ ತುಕಿ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪದಚ್ಯುತಗೊಳಿಸಿ, ವಿಧಾನಸಭೆ ಚುನಾವಣೆಯನ್ನು ಅವಧಿಗೆ ಮೊದಲೇ ನಿರ್ದೇಶಿಸಿದ್ದ ರಾಜ್ಯಪಾಲರ ನಿರ್ಣಯವನ್ನು ಸುಪ್ರೀಂಕೋರ್ಟ್ ಅಸಿಂಧುಗೊಳಿಸಿದೆ.

ಡಿಸೆಂಬರ್ 2015ರ 15ನೇ ದಿನಾಂಕಕ್ಕೆ ಇದ್ದ ವಿಧಾನಸಭೆ ಸ್ಥಿತಿಯನ್ನು ಪುನಃ ಸ್ಥಾಪಿಸುವಂತೆ ಕೋರ್ಟ್ ಹೇಳಿದೆ. ಕಾಂಗ್ರೆಸ್ಸಿನ 15 ಸದಸ್ಯರನ್ನು ಬಿಟ್ಟು ಉಳಿದವರೆಲ್ಲ ಬಂಡಾಯ ಎದ್ದಿರುವುದರಿಂದ ವಿಶ್ವಾಸಮತದಲ್ಲಿ ಕಾಂಗ್ರೆಸ್ಸಿಗೆ ತನ್ನ ಸರ್ಕಾರ ಉಳಿಸಿಕೊಳ್ಳುವುದು ಕಷ್ಟವಾಗಬಹುದು. ಚುನಾವಣೆಯೇ ಉತ್ತರವಾದೀತು. ಆದರೆ, ಈ ಎಲ್ಲ ಬಂಡಾಯದ ನೆಪ ಇಟ್ಟುಕೊಂಡು ರಾಜ್ಯಪಾಲರ ಮೂಲಕ ಸರ್ಕಾರಗಳನ್ನು ಕಿತ್ತೊಗೆಯುವ ಬಿಜೆಪಿ ಯತ್ನಗಳು ವ್ಯರ್ಥ ಎಂಬುದು ಉತ್ತರಾಖಂಡ ಪ್ರಕರಣದ ನಂತರ ಎರಡನೇ ಬಾರಿ ಕೇಂದ್ರ ಸರ್ಕಾರಕ್ಕೆ ನ್ಯಾಯಾಂಗ ಮನವರಿಕೆ ಮಾಡಿಕೊಟ್ಟಿದೆ. ಏಕೆಂದರೆ, ಕೇಂದ್ರ ಸಂಪುಟದ ಒಪ್ಪಿಗೆ ನಂತರವೇ ಈ ಎರಡು ರಾಜ್ಯಗಳಲ್ಲಿ ರಾಜ್ಯಪಾಲರು ಈ ಬಗೆಯ ನಿರ್ಣಯ ತೆಗೆದುಕೊಂಡಿದ್ದು.

ಈ ಮೊದಲು, ‘ಕಾಂಗ್ರೆಸ್ ಕೇಂದ್ರದಲ್ಲಿದ್ದಾಗ ಎಷ್ಟೊಂದು ಸರ್ಕಾರಗಳನ್ನು ಅಸ್ಥಿರಗೊಳಿಸಿರಲಿಲ್ಲವೇ’ ಎಂದು ವಾದ ಹೂಡುತ್ತಿದ್ದ ಬಿಜೆಪಿ, ಈಗ ಬಂದಿರುವ ತೀರ್ಪು ರಾಜ್ಯಪಾಲರ ನಿರ್ಧಾರದ ಮೇಲಿನದ್ದು ಎಂದು ಮುಜುಗರ ಕಡಿಮೆ ಮಾಡಿಕೊಳ್ಳಲು ನೋಡುತ್ತಿದೆ.

‘ಪ್ರಧಾನಿಗೆ ಪ್ರಜಾಪ್ರಭುತ್ವ ಎಂದರೇನೆಂದು ಅರ್ಥಮಾಡಿಸಿದ ಸುಪ್ರೀಂಕೋರ್ಟಿಗೆ ಧನ್ಯವಾದ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇದು ಪ್ರಜಾಪ್ರಭುತ್ವದ ವಿಜಯ ಎಂದು ಅರುಣಾಚಲ ಮುಖ್ಯಮಂತ್ರಿ ನಬಾಮ್ ತುಕಿ ಹೇಳಿದ್ದಾರೆ.

ಅರುಣಾಚಲದಲ್ಲಿ ಕಾಂಗ್ರೆಸ್ಸಿಗರ ಬಂಡಾಯ ಶುರುವಾದಾಗಲೇ ರಾಹುಲ್ ಗಾಂಧಿ ಆಸಕ್ತಿವಹಿಸಿದ್ದರೆ 58 ಸದಸ್ಯರಲ್ಲಿ ಕೇವಲ 15 ಮಂದಿ ಮಾತ್ರ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುವಷ್ಟರಮಟ್ಟಿಗೆ ಬಂಡಾಯ ಬೆಳೆಯುತ್ತಿರಲಿಲ್ಲ. ಆದರೆ ಬಂಡಾಯ ಎದ್ದವರನ್ನು ಮಾತಾಡಿಸುವ ಗೋಜಿಗೇ ಹೋಗಲಿಲ್ಲ ರಾಹುಲ್ ಗಾಂಧಿ. ಇವೆಲ್ಲದರ ಲಾಭ ಪಡೆದುಕೊಂಡಿರುವ ಬಿಜೆಪಿ, ಅರುಣಾಚಲ ಎಂದಲ್ಲದೇ, ಈಶಾನ್ಯ ಭಾರತದ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ವಿಶ್ವಾಸ ಗಳಿಸಿಕೊಂಡು ಆ ಭಾಗದಲ್ಲಿ ಬಿಜೆಪಿ ಆಳ್ವಿಕೆ ಸಾಕಾರಗೊಳಿಸಿಕೊಳ್ಳುವ ಹಾದಿಯಲ್ಲಿದೆ.

ಈ ಮಾರ್ಗದಲ್ಲಿ ಅದು ರಾಜ್ಯಪಾಲರ ಭವನವನ್ನು ಪಕ್ಷದ ಕಚೇರಿಯಂತಾಗಿಸಿಕೊಳ್ಳುವ ಅಕ್ರಮಕ್ಕೂ ಮುಜುಗರ ಪಡಲಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಈ ತೀರ್ಪಿನ ಮೂಲಕ ‘ಬಹುಮತ ಸಾಬೀತಾಗಬೇಕಿರುವುದು ಸದನದಲ್ಲೇ ಹೊರತು, ರಾಜ್ಯಪಾಲರ ಭವನದಲ್ಲಿ ಅಲ್ಲ’ ಎಂಬುದನ್ನು ಬಿಜೆಪಿಗೆ ಸುಪ್ರೀಂಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Leave a Reply