ರಾಜಕೀಯದಲ್ಲಿ ಮಹಿಳೆ ಮಿನುಗಬೇಕೆಂದರೆ ಈ ಸಮಾಜ ಇಟ್ಟಿರುವ ಮಾನದಂಡಗಳೇನು?

author-geetha‘ರಾಜಕೀಯದಲ್ಲಿ ಇರುವ ಮಹಿಳೆಯರ ಬಗ್ಗೆ ಬರೆಯುತ್ತೇನೆ ಅಂದರೆ ಏನು ಬರೆಯುತ್ತೀರಿ?’

‘ಏನು ಬರೆಯಬಹುದು?’

‘ಮತ್ತಿನ್ನೇನು? ಶೇಕಡಾ ಮೂವತ್ಮೂರರಷ್ಟು ಮೀಸಲಾತಿ ಇದೆ. ಗಂಡಸಿನಂತೆ ದೇಶವನ್ನು ಹದಿನೈದು ವರ್ಷಗಳು ಆಳಿದ ಇಂದಿರಾ ಗಾಂಧಿ.. ನಮ್ಮ ದೇಶದ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಬಗ್ಗೆ..’

‘ತಮಾಷೆ ಮಾಡ್ತಾ ಇದೀರಾ? ಒಬ್ಬರು ನೆಹರೂ ಪುತ್ರಿ. ಜೊತೆಗೆ ಗಾಂಧಿ ಎಂದು ರಾಷ್ಟ್ರಪಿತನ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡವರು. ಮತ್ತೊಬ್ಬರು ಇಂದಿರಾಗಾಂಧಿಯವರ ಸೊಸೆಗೆ ತಗ್ಗಿಬಗ್ಗಿ ನಡೆದಿದ್ದಕ್ಕೆ ಆ ಹುದ್ದೆ ಅಲಂಕರಿಸಿದವರು..’

‘ಓ.. ಹಾಗೆ ಬರಿತೀರೋ? ಹಾಗಾದ್ರೆ ಹುಷಾರು.. ರಾಜಕೀಯದ ಬಗ್ಗೆ, ರಾಜಕೀಯ ನಾಯಕರ ಬಗ್ಗೆ ಬರೆಯುವಾಗ ಹುಷಾರಾಗಿರಿ..’ ನನಗೆ ಎಚ್ಚರಿಕೆ ನೀಡಿ ಎದ್ದು ಹೋದಳು ನನ್ನ ಗೆಳತಿ.

ಹೌದೇ? ರಾಜಕೀಯ ನಾಯಕರ ಬಗ್ಗೆ ಬರೆಯುವಾಗ ಹುಷಾರಾಗಿ ಇರಬೇಕಾ?

ಮಹಿಳೆಯರಿಗೆ ಮೀಸಲಾತಿ ಎಂದು ಪ್ರಕಟಿಸಿದ ಮೇಲೆ ಕಾರ್ಪೋರೇಷನ್ ಚುನಾವಣೆಯಲ್ಲಿ ನಿಂತದ್ದು, ಗೆದ್ದದ್ದು ಹಾಲಿ ಕಾರ್ಪೋರೇಟರ್ ಗಳ ಹೆಂಡತಿ, ಹೆಣ್ಣು ಮಕ್ಕಳು. ತಿರುಗಿ ಆಡಳಿತ ನಡೆಸಿದ್ದು, ನಡೆಸುತ್ತಿರುವುದು ಪುರುಷರೇ. ಮೀಟಿಂಗ್ ಗೆ ಅಲಂಕಾರ ಮಾಡಿಕೊಂಡು ಬರುವುದಷ್ಟೇ ಮುಖ್ಯ ಆ ಮಹಿಳೆಯರಿಗೆ. ಅಧಿಕಾರದ ಸೂತ್ರ ಹಿಡಿಯಬೇಕು ಜನರಿಗೆ ಒಳ್ಳೆಯದು ಮಾಡಬೇಕು ಎನ್ನುವ ಉದ್ದೇಶವೇನು ಇಲ್ಲ.

ಜನರ ಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ರಾಜಕೀಯ ಪಕ್ಷ ಸೇರುವ ಮಹಿಳೆಯರಿಗೆ ಇರುವ ಅಡೆತಡೆಗಳು ನೂರೆಂಟು. ರಾಜಕೀಯದಲ್ಲಿ ಇರುವ ತಂದೆ, ಮಾವ, ಗಂಡ, ಅಣ್ಣ ಇವರುಗಳ ಬೆಂಬಲ ಇಲ್ಲದಿದ್ದರೆ ಗಟ್ಟಿಯಾಗಿ ನಿಲ್ಲಲು ಸಾಧ್ಯವೇ ಇಲ್ಲ. ಹೆಣ್ಣು ಸ್ವಾರ್ಥರಹಿತಳಾಗಿ ಪುರುಷನ ಹಿಂದೆ ನಿಂತು ಬೆಂಬಲಿಸುವಂತೆ ಪುರುಷ ಮಹಿಳೆಯ ಹಿಂದೆ ನಿಂತು, ಸಂಸಾರ ನೋಡಿಕೊಂಡು ಬೆಂಬಲಿಸುವುದಿಲ್ಲ. ಆಸ್ತಿ ಮಾರಿ, ಚುನಾವಣೆಗೆ ನಿಲ್ಲಲು ಸಿದ್ಧನಿರುತ್ತಾನೆ ಪುರುಷ. ಹೆಣ್ಣು ಸೊಲ್ಲೆತ್ತುವುದಿಲ್ಲ. ಆದರೆ ಹೆಣ್ಣಿನ ಹೆಸರಿನಲ್ಲಿ ಆಸ್ತಿಯೇ ಇರುವುದಿಲ್ಲ ಮಾರಲು.. ಗಂಡ ಆದವನು ತನ್ನ ಆಸ್ತಿ ಮಾರಿ ಹೆಂಡತಿ ರಾಜಕೀಯದಲ್ಲಿ ಮುಂದೆ ಬರಲು ಸಹಕರಿಸುತ್ತಾನೆಯೇ?

ಸಂಸಾರದ ಬೆಂಬಲ ಇಲ್ಲದೆ ರಾಜಕೀಯಕ್ಕೆ ಬರುವ ಹೆಣ್ಣಿನ ಹೆಸರನ್ನು ಕೆಡಿಸಲು ಜನ ಇರಲಿ, ಇತರೆ ರಾಜಕಾರಣಿಗಳೇ ಮುಂದಾಗುತ್ತಾರೆ. ಮೊನ್ನೆ ಮೊನ್ನೆಯಷ್ಟೇ.. ರಾಜಕೀಯದಲ್ಲಿ ಕಾಲೂರುತ್ತಿರುವ ಮಹಿಳಾ ರಾಜಕಾರಣಿಯೊಬ್ಬರು ಮುಖ್ಯಮಂತ್ರಿಗಳಿಗೆ ಸಮಾರಂಭವೊಂದರಲ್ಲಿ ವೇದಿಕೆಯ ಮೇಲೆ ಮುತ್ತನಿತ್ತು ಸುದ್ದಿ ಮಾಡಿದರು. ಮುತ್ತು ಕೊಡುವ ಮುಂಚೆ ಕಾತುರ, ಕೊಟ್ಟ ಮೇಲೆ ನಾಚಿಕೆ, ಮುಜುಗುರ ಎಲ್ಲವನ್ನೂ ಕ್ಯಾಮೆರಾ ಸೆರೆ ಹಿಡಿಯಿತು. ಬಾಯಲ್ಲಿ ಹೇಳಿದ್ದು ಮಾತೃವಾತ್ಸಲ್ಯದಿಂದ ಮುತ್ತು ಕೊಟ್ಟೆ ಎಂದು. ಆಕೆಯ ಗಂಡ ಏನು ಮಾಡುತ್ತಿದ್ದರು? ಈ ವಿಷಯಕ್ಕೆ ಏನು ಹೇಳಿದರು? ಎಂಬ ಕುತೂಹಲ ಬೇರೆ ನಮಗೆ. ಆತ.. ‘ತಂದೆಗೆ ಮುಟ್ಟಿಟ್ಟಂತೆ ಮುತ್ತಿಟ್ಟಿದ್ದು ನನ್ನ ಹೆಂಡತಿ’ ಅಂದ.  ‘ನಮ್ಮ ಸಂಸ್ಕೃತಿಯಲ್ಲಿ ಮಕ್ಕಳು, ಅದೂ ಬೆಳೆದ ಹೆಣ್ಣು ಮಕ್ಕಳು ತಂದೆಗೆ ಮುತ್ತು ಕೊಡುವುದಿಲ್ಲ’ ಎಂದು ಕುಹಕವಾಡಿದರು ಜನ. ನಾಲ್ಕು ದಿನ ಎಲ್ಲರ ಬಾಯಲ್ಲೂ ಅದೇ ಮಾತು.. ಎಲ್ಲಾ ವಾಹಿನಿಗಳಲ್ಲೂ ಅದೇ ಮುತ್ತು ಕೊಟ್ಟ ಅರೆ ನಿಮಿಷದ ವಿಡಿಯೋ, ಪೇಪರಿನಲ್ಲಿ ಫೋಟೋ! ಮುಂದೆ ಆಕೆ ಏನೇ ಮಾಡಿದರೂ ಇದು ಆಕೆಯ ರಾಜಕೀಯ ಜೀವನದ ಮುನ್ನುಡಿ, ಏಕೆಂದರೆ ನಾವು ಹೆಣ್ಣನ್ನು ನೋಡುವುದೇ ಹಾಗೆ.. ಒಂದು sex object ನಂತೆ.

ವೇದಿಕೆಯ ಮೇಲೆ ಎಷ್ಟೋ ಕಾರ್ಯಕ್ರಮಗಳಿಗೆ ಪ್ರಾತಿನಿಧಿಕವಾಗಿ ಒಬ್ಬಳು ಮಹಿಳೆ ಇರುವಂತೆ.. ಎಲ್ಲಾ ಮಂತ್ರಿಮಂಡಲದಲ್ಲೂ ಒಂದಿಬ್ಬರು ಮಹಿಳಾ ಮಂತ್ರಿಗಳು.. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅವಳಿಗೆ ಕಟ್ಟಿಟ್ಟ ಬುತ್ತಿ. ಒಮ್ಮೆ ಯಾರೋ ಪುರುಷರಿಗೆ ಆ ಇಲಾಖೆ ಕೊಟ್ಟಾಗ ಅವಮಾನ ಮಾಡಿದರೆಂದು ಕಿಡಿ ಕಾರಿದ್ದರು ಆ ಶಾಸಕರು. ಅಬ್ಬಬ್ಬ ಅಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸಂಸ್ಕೃತಿ ಎತ್ತಿ ಹಿಡಿಯಬೇಕಾಗಿರುವುದು ಹೆಣ್ಣಿನ ಮೂಲ ಕರ್ತವ್ಯ ಹಾಗೂ ಉದ್ದೇಶ ಎಂದು ನಂಬಿರುವವರಲ್ಲವೇ ನಾವು!

ಮಹಿಳಾ ಮಂತ್ರಿಗೂ, ಮುಖ್ಯಮಂತ್ರಿಗೂ.. ಅಥವಾ ಪ್ರಧಾನಮಂತ್ರಿಗೂ ಸಂಬಂಧ ಕಲ್ಪಿಸಿ, ಸಂಬಂಧ ಇದ್ದಿದ್ದರಿಂದಲೇ ಆಕೆ ಮಂತ್ರಿಯಾಗಿದ್ದು ಎಂದು ಕಥೆ ಕಟ್ಟಿ ಹರಡುತ್ತೇವೆ ಬೇರೆ. ಮುಖ್ಯಮಂತ್ರಿಯಾದ ಮಹಿಳೆ ಹಿಂದೆ ಇರುವ ಕಥೆಗಳು ನೂರೆಂಟು. ನಿಜವೋ ಸುಳ್ಳೊ ಬೇಡ. ಆದರೆ, ಆಕೆ ತನ್ನ ಸೆಕ್ಷುಯಾಲಿಟಿಯನ್ನು ಮುಂದಿಟ್ಟುಕೊಂಡೇ ಆ ಸ್ಥಾನಕ್ಕೆ ಬಂದಳು ಎಂಬುದನ್ನು ನಂಬಲು ಜನ ಇಷ್ಟಪಡುತ್ತಾರೆ.

ರಾಜಕೀಯಕ್ಕೆ ಬರಲು ಕೂಡ ಹೆಣ್ಣು ಸುಂದರಳಾಗಿರಬೇಕು.. ನಗುನಗುತ್ತಲ್ಲಿರಬೇಕು.. ತನ್ನ ನಾಯಕರೊಂದಿಗೆ ಸಲಿಗೆಯಿಂದ ಇರಬೇಕು. ಚಿತ್ರನಟಿಯಾಗಿದ್ದರೆ ಮತ್ತಷ್ಟು ಒಳ್ಳೆಯದು.. ಚುನಾವಣೆಗೆ ನಿಲ್ಲದೆ ಇದ್ದರೂ ಪರವಾಗಿಲ್ಲ.. ಮೇಲ್ಮನೆಗೆ ಮತ ಇತ್ತು ಸೇರಿಸುತ್ತಾರೆ. ಚಿತ್ರನಟಿ ಎಂಬ ಬಿರುದು ಹೊತ್ತು ಬರುವ ಇವರುಗಳು ಶೂಟಿಂಗ್ ಗೆ ಬಂದಂತೆ ಬಂದರೆ ಎಲ್ಲರಿಗೂ ಸಂತೋಷ, ಸಂಭ್ರಮ. ಅದು ಬಿಟ್ಟು ಜನಸೇವೆ ಮಾಡಲು ಟೊಂಕ ಕಟ್ಟಿದರೆ, ರಾಜಕೀಯದ ಆಗು ಹೋಗುಗಳ ಬಗ್ಗೆ ಮಾತನಾಡಲು ಶುರು ಮಾಡಿದರೆ, ಅಂಕಿ ಅಂಶದ ಜತೆಗೆ ಮಾಡಬೇಕಾದ ಕೆಲಸಗಳ ಪಟ್ಟಿ ತಯಾರಿಸಿ ನಿಂತರೆ, ಆಕೆಯನ್ನು ದೂರವಿಡಲು ಪುರುಷ ರಾಜಕಾರಣಿಗಳು ಟೊಂಕ ಕಟ್ಟುತ್ತಾರೆ.

ತಂದೆ, ಗಂಡ, ಅಣ್ಣ ಎಂಬ ಗಾಡ್ ಫಾದರ್ ಇಲ್ಲದೆ ರಾಜಕೀಯಕ್ಕೆ ಬರುವ ಮಹಿಳೆಯರು ನೋಡಲು ಚೆಂದವಿಲ್ಲದೆ ಇದ್ದರೆ ಉಡಾಫೆಯನ್ನು, ಚೆಂದವಿದ್ದರೆ ಕೆಟ್ಟ ದೃಷ್ಟಿಯನ್ನು ಎದುರಿಸಬೇಕು. ವಿರುದ್ಧವಾಗಿ ಮಾತನಾಡಿದರೆ ಮೂಲೆಗುಂಪಾಗಬೇಕು ಅಥವಾ ಅವರುಗಳಿಗೆ ತಕ್ಕನಾಗಿ ನಗುತ್ತಾ ಮಾತಾಡಿಕೊಂಡು ಬೆರೆತು ಕೆಲಸ ಮಾಡಿದರೆ ನಡತೆಯ ಮೇಲೆ ಸಂಶಯಪಟ್ಟು ಪಟ್ಟ ಕಟ್ಟಿ ಕೂರಿಸುತ್ತಾರೆ.

ನಾನು ಹೆಸರಿಸಬೇಕಾಗಿಯೇ ಇಲ್ಲ.. Active ಆಗಿ ಇರುವ ಮಹಿಳಾ ರಾಜಕಾರಣಿಗಳ ಹೆಸರನ್ನು ಪುರುಷ ರಾಜಕಾರಣಿಯೊಂದಿಗೆ ಸೇರಿಸಿ, ಅವರಿಂದಲೇ ಇವರು ಎಂದು ಇವರ ಎಲ್ಲಾ ಸಾಧನೆ ಆ ಪುರುಷ ರಾಜಕಾರಣಿಯೊಂದಿಗೆ ಇವರ ಹೆಸರು ತಳಕು ಹಾಕಿಕೊಂಡಿರುವುದರಿಂದಲೇ ಆಗಿರುವುದು ಎಂದು ಬಿಂಬಿಸುತ್ತಾರೆ. ಹೆಚ್ಚು ವಿರೋಧಿಸದೆ ಪ್ರವರ್ಧಮಾನಕ್ಕೆ ಬಂದವರನ್ನು, ವಿರೋಧಿಸಿ ಮೂಲೆಗುಂಪಾದವರನ್ನು ನಾವು ನೋಡಿದ್ದೇವೆ.

ಮಹಿಳೆಯನ್ನು ಸದಾ ಕಾಲವೂ ಮಹಿಳೆ ಎಂದೇ ಅಥವಾ ಮಹಿಳೆ ಎಂದಷ್ಟೇ ನೋಡುವ ನಮ್ಮ ಮನೋಭಾವ ಬದಲಾಗದ ಹೊರತು ರಾಜಕಾರಣದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಈ ಕ್ಷೇತ್ರದಲ್ಲಿ ಅವಳು ರಕ್ತ ಸಂಬಂಧ, ರೂಪ, ಸೆಕ್ಷುಯಾಲಿಟಿಯಿಂದಲೇ ಸ್ಥಾನಗಳಿಸಬೇಕಾದ ಪರಿಸ್ಥಿತಿ ಇದ್ದರೆ ನಾವು ಉತ್ತಮ, ಕಾರ್ಯದಕ್ಷ ರಾಜಕಾರಣಿಗಳನ್ನು ಕಾಣುವುದು ಕಷ್ಟಸಾಧ್ಯವೇ ಸರಿ.

ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಕೆಟ್ಟ ಹೆಸರು ಬರುವ ಹಾಗಿದ್ದರೆ ಈಚಲ ಮರದ ಬಳಿ ಸುಳಿದಾಡಲು ಕೂಡ ಹೆದರಿಕೆಯಾಗುತ್ತದೆ.

ಅಧಿಕಾರದಲ್ಲಿ ಇರುವವರು ಮಹಿಳೆ, ಪುರುಷ ಎಂದು ಭೇದ ಮಾಡದೆ ಎಲ್ಲರನ್ನೂ ಸರಿಸಮನಾಗಿ ನೋಡಬೇಕು. ಎಲ್ಲರ ಏಳಿಗೆಗೆ ತಮ್ಮ ಅಧಿಕಾರವನ್ನು ಉಪಯೋಗಿಸಬೇಕು ಎನ್ನುವುದು ಸತ್ಯವೇ ಆದರೂ ಹೆಚ್ಚು ಹೆಚ್ಚು ಮಹಿಳೆಯರು ಅಧಿಕಾರಯುತ ಸ್ಥಾನ ಅಲಂಕರಿಸಬೇಕು ಎಂಬುದು ನಮ್ಮೆಲ್ಲರ ಆಶಯ.

1 COMMENT

  1. ಆಶಯ, ವಾಸ್ತವಕ್ಕೆ ಮಗ್ಗಲು ಬದಲಾಯಿಸಲಿ ಎಂಬುದೇ ನನ್ನ `ಆಶಯ’… ಬಹಳ ಸೂಕ್ಷ್ಮವಾಗಿ, ನೈಜವಾಗಿ ವಿವರಣೆ ನೀಡಿದ್ದೀರಿ. ಗುಡ್ ಒನ್ ಮೇಡಂ.. Thank u….

Leave a Reply