ವಾದ-ಪ್ರತಿವಾದ, ಧರಣಿ-ಗದ್ದಲಗಳ ನಡುವೆ ಈ ಬಾರಿಯ ಕಲಾಪದಲ್ಲಿ ಗಮನ ಸೆಳೆದಿರುವುದು ಕುಮಾರಪರ್ವ

ಡಿಜಿಟಲ್ ಕನ್ನಡ ವಿಶೇಷ:

ಬುಧವಾರ ಸದನದಲ್ಲಿ ಮುಖ್ಯಮಂತ್ರಿಯವರು ಮಂಡಿಸಿದ ಪ್ರತಿವಾದ, ಅದನ್ನೊಪ್ಪದ ಪ್ರತಿಪಕ್ಷಗಳ ಅಹೋರಾತ್ರಿ ಧರಣಿ ಇವೆಲ್ಲವನ್ನೂ ಗಮನಿಸಿದಾಗ, ಎಲ್ಲ ಗದ್ದಲ ಆರೋಪ-ಪ್ರತ್ಯಾರೋಪಗಳ ನಡುವೆ ಒಂದು ಮುಖ ಭಿನ್ನವಾಗಿ ನಿಲ್ಲುವುದನ್ನು ಗಮನಿಸಲೇಬೇಕು.

ಆ ಶ್ರೇಯಸ್ಸು ಕುಮಾರಸ್ವಾಮಿಗೆ.

ನಿಜ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಪ್ರತಿಭಟನೆ ಪ್ರಖರವಾಗಿಯೇ ಇದೆ. ಪ್ರತಿಪಕ್ಷ ಎಲ್ಲಿ ಮಲಗಿದೆ ಎಂದು ತಮ್ಮ ಅನುಯಾಯಿಗಳಿಂದಲೇ ಟೀಕಿಸಿಕೊಳ್ಳುತ್ತಿದ್ದವರು ಈ ಪ್ರಕರಣದಲ್ಲಿ ಸಾಂಘಿಕ ಪ್ರಯತ್ನ ಮೆರೆದಿದ್ದಾರೆ. ಆದರೆ, ಇತ್ತೀಚಿನ ವಿದ್ಯಮಾನಗಳಿಂದ ವರ್ಚಸ್ಸು ಶಿಥಿಲಗೊಳಿಸಿಕೊಂಡಿರುವ ಜೆಡಿಎಸ್ ಪಾಳೆಯದಿಂದ ಕುಮಾರಸ್ವಾಮಿ ಹಾಕಿದ ಪಟ್ಟುಗಳಿವೆಯಲ್ಲ… ಸಂಸದೀಯ ಪಟುತ್ವದ ದೃಷ್ಟಿಯಿಂದ ಗಮನಿಸಿದರೂ ಅವು ತುಂಬ ಪ್ರಾಮುಖ್ಯ ಪಡೆಯುತ್ತವೆ. ಕಲಾಪ ಗಮನಿಸುತ್ತಿರುವವರ ಮೆಚ್ಚುಗೆಗೆ ಪಾತ್ರವಾಗುತ್ತವೆ.

ಈ ಪ್ರಕರಣದಲ್ಲಿ ಪ್ರಭಾವಿ ಸಚಿವರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳ ಹೆಸರೇ ಪ್ರಸ್ತಾಪವಾಗಿರುವುದರಿಂದ, ರಾಜ್ಯದ ಅಧೀನದಲ್ಲಲ್ಲದೇ ಸಿಬಿಐ ತನಿಖೆಯೇ ಆಗಬೇಕು ಎಂಬುದು ಬಿಜೆಪಿ ವಾದ. ಈ ಸಿಬಿಐ ತನಿಖೆ ಪ್ರತಿಪಾದನೆಯನ್ನು ಗೌಣಗೊಳಿಸುವುದಕ್ಕೆ ಸಾಕಷ್ಟು ಪ್ರತಿವಾದದ ಅವಕಾಶ ಇದ್ದೇ ಇತ್ತು. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬುಧವಾರದ ಮಾತುಗಳಲ್ಲಿ ಚೆನ್ನಾಗಿಯೇ ಬಳಸಿಕೊಂಡರು. ‘ಇದೇ ಬಿಜೆಪಿ, ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಹಾಗೂ ಚೋರ್ ಬಚಾವೊ ಸಂಸ್ಥೆ ಎಂದೆಲ್ಲ ಗೇಲಿ ಮಾಡಿತ್ತು. ಇವರ ಅವಧಿಯಲ್ಲಿ ಒಂದು ಪ್ರಕರಣವನ್ನೂ ಸಿಬಿಐಗೆ ಕೊಡಲಿಲ್ಲ. ಈಗೇನು ನರೇಂದ್ರ ಮೋದಿ ಪ್ರಧಾನಿಯಾಗುತ್ತಲೇ ಸಿಬಿಐ ಪಾವನ ಗಂಗೆಯಾಗಿಹೋಯಿತೇ? ನಮಗೆ ಸಿಬಿಐ ಹೆದರಿಕೆ ಇಲ್ಲ, ಹಾಗಂತ ಸಿಒಡಿ ಮೇಲೆ ನಂಬಿಕೆ ಇದೆ’ ಎಂದೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಬ್ಬರಿಸಿದರು. ಆಗ ಎದ್ದುನಿಂತು ಆಕ್ಷೇಪಿಸುತ್ತ, ‘ನಾವೂ ಆಗ ಪ್ರಕರಣಗಳನ್ನು ನಮ್ಮದೇ ಲೋಕಾಯುಕ್ತಕ್ಕೆ ವಹಿಸಿದ್ದೆವು. ಆಗ ಲೋಕಾಯುಕ್ತವನ್ನು ನಿಮ್ಮಂತೆ ದುರ್ಬಲಗೊಳಿಸಿರಲಿಲ್ಲ’ ಎಂದ ಬಸವರಾಜ ಬೊಮ್ಮಾಯಿಯವರ ಮಾತು ಗದ್ದಲದಲ್ಲಿ ಕರಗಿಹೋಯಿತು.

ಆದರೆ, ಇಲ್ಲಿ ಕುಮಾರಸ್ವಾಮಿ ಪ್ರಾರಂಭದಿಂದಲೂ ಹಿಡಿದ ದಾರಿಯೇ ಬೇರೆ. ಸಿಒಡಿ ವರ್ಸಸ್ ಸಿಬಿಐ ಇತ್ಯಾದಿ ಚರ್ಚೆಗಳಲ್ಲಿ ಅವರು ಸಿಲುಕಿಕೊಳ್ಳಲೇ ಇಲ್ಲ. ‘ನೀವು ಯಾವ ತನಿಖೆಯನ್ನಾದರೂ ಮಾಡಿಸಿ. ಆದರೆ ಎಫ್ ಐ ಆರ್ ದಾಖಲಾಗಲಿ. ಮೃತ ಡಿವೈಎಸ್ಪಿ ಪತ್ನಿಯ ದೂರು ದಾಖಲಿಸಲಾಗದ ಸ್ಥಿತಿ ಇದೆ. ಇಲ್ಲಿ ಯಾರೋ ಅಪರಾಧ ಮಾಡಿದ್ದಾರೆ ಅಂತಲೂ ನಾನು ಪ್ರತಿಪಾದಿಸುವುದಿಲ್ಲ. ಆದರೆ ಎಫ್ ಐ ಆರ್ ದಾಖಲಾಗದೇ ಕೇವಲ ಕುಶಾಲಪ್ಪ ಹೇಳಿಕೆಯನ್ನು ಆಧರಿಸಿಕೊಂಡು ತನಿಖೆ ನಡೆಯುವುದಾದರೆ ಅದಕ್ಕೆ ದಿಕ್ಕೇ ಇರುವುದಿಲ್ಲ’ ಎಂಬ ಪ್ರಖರ ಪ್ರತಿಪಾದನೆ ಕುಮಾರಸ್ವಾಮಿಯದ್ದಾಗಿತ್ತು. ಎಫ್ ಐ ಆರ್ ದಾಖಲಿಸಿದ್ದೇ ಆದರೆ, ಡಿವೈಎಸ್ಪಿ ಗಣಪತಿ ಹೆಸರಿಸಿದವರನ್ನೆಲ್ಲ ತನಿಖೆಗೆ ಒಳಪಡಿಸಬೇಕಾಗುತ್ತದೆ. ಅದುವೇ ಸರ್ಕಾರಕ್ಕೆ ಇಷ್ಟವಿಲ್ಲ ಸಂಗತಿ. ಈ ಹಂತದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ತಮ್ಮ ಸರ್ಕಾರದ ಪರ ಬ್ಯಾಟ್ ಮಾಡುವುದಕ್ಕೆ ತಮ್ಮ ಮಾತಿನ ಜಾಣ್ಮೆ ಉಪಯೋಗಿಸಿಕೊಂಡರು. ‘ತನಿಖೆ ವೇಳೆ ಎಫ್ ಐ ಆರ್ ನಲ್ಲಿ ಹೆಸರಿಸಲಾಗಿರದ ವ್ಯಕ್ತಿಗಳನ್ನೂ ಪ್ರಶ್ನಿಸಬಹುದಾದ ಅವಕಾಶವಿದೆ’ ಎಂದು ತಮ್ಮ ತಿಳಿವಳಿಕೆ ಪ್ರದರ್ಶಿಸಿದರು. ಅದಕ್ಕೂ ಕುಮಾರಸ್ವಾಮಿ ತಣ್ಣಗೇ ಉತ್ತರಿಸಿದರು.‘ಸ್ವಾಮಿ… ಕುಶಾಲಪ್ಪ ಹೇಳಿಕೆಯನ್ನೇ ದೂರೆಂದು ದಾಖಲಿಸಿಕೊಂಡು, ಎಫ್ ಐ ಆರ್ ದಾಖಲಿಸದೇ ಅದರ ಮೇಲೆಯೇ ತನಿಖೆ ಮಾಡುವುದಾದರೆ ಅದರ ಅಗತ್ಯವೇ ಇಲ್ಲ. ಏಕೆಂದರೆ ಅಲ್ಲಿರುವುದು ಗಂಡ- ಹೆಂಡತಿ ಸಂಬಂಧ ಸರಿ ಇತ್ತೋ ಇಲ್ಲವೋ ಎಂಬುದರ ಕುರಿತ ಪ್ರಶ್ನೆಯಷ್ಟೆ. ಅದೇ ನಿಮ್ಮ ನಿಲುವು ಎಂದಾದರೆ ತನಿಖೆಗೆ ಉದ್ದೇಶವೇ ಇರುವುದಿಲ್ಲ. ಆತ್ಮಹತ್ಯೆ ಎಂಬುದು ಈಗಾಗಲೇ ದಾಖಲಾಗಿರುವುದರಿಂದ ಮತ್ತೇನೂ ತನಿಖೆಗೆ ಉಳಿದೇ ಇಲ್ಲವಲ್ಲ’ ಎಂದರು.

ಈ ಇಡೀ ಪ್ರಕರಣದಲ್ಲಿ ಕುಮಾರಸ್ವಾಮಿ ಪ್ರಸ್ತಾವದಿಂದ ಆದ ಮತ್ತೊಂದು ಮುಖ್ಯ ಫಲಶ್ರುತಿ ಎಂದರೆ- ಕಲ್ಲಪ್ಪ ಹಂಡಿಭಾಗ್ ಪತ್ನಿಗೆ ಉದ್ಯೋಗದ ಭರವಸೆ ನೀಡುವುದಕ್ಕೆ ಮುಖ್ಯಮಂತ್ರಿಯವರನ್ನು ಒಪ್ಪಿಸಿದ್ದು. ಕಲ್ಲಪ್ಪ ಹಂಡಿಭಾಗ್ ಪ್ರಕರಣದಲ್ಲಿ ಆತ ಯಾರದೋ ಹಣವನ್ನು ಇಟ್ಟುಕೊಳ್ಳುವುದಕ್ಕೆ ಹೋಗಿ ಆರೋಪಿಯಾಗಬೇಕಾಗಿ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಪಷ್ಟ ಎಂದು ಪ್ರತಿಪಾದಿಸಿದ ಕುಮಾರಸ್ವಾಮಿ, ಆತ ಹಣ ಮಾಡುವವನೇ ಆಗಿದ್ದರೆ ಅಷ್ಟು ಬಡತನದ ಪರಿಸ್ಥಿತಿಯಲ್ಲಿ ಏಕಿರಬೇಕಿತ್ತು ಎಂದು ಪ್ರಶ್ನಿಸಿದರು. ‘ಬಹುಶಃ ತನಿಖೆಯಲ್ಲೂ ಆತನ ನಿರ್ದೋಷಿತ್ವ ಸಾಬೀತಾಗಬಹುದು. ಆದರೆ ಈಗ ಮುಖ್ಯಮಂತ್ರಿಗಳು ಕಲ್ಲಪ್ಪ ಆರೋಪಿ ಎಂಬ ಕಾರಣಕ್ಕೆ ಆತನ ಕುಟುಂಬಕ್ಕೆ ಸಹಾಯ ಮಾಡುವುದರಿಂದ ದೂರ ಉಳಿಯಬಾರದು’ ಎಂದು ತಾವು ಕಲ್ಲಪ್ಪ ಹಂಡಿಭಾಗ್ ಮನೆಗೆ ಭೇಟಿ ಇತ್ತದ್ದನ್ನು ಹೇಳಿಕೊಳ್ಳುತ್ತ ಪರಿಸ್ಥಿತಿಯನ್ನು ಮನಮುಟ್ಟುವಂತೆ ವಿವರಿಸಿದರು.

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಮಿಡಿದಿದ್ದು ಸ್ಪಷ್ಟ. ‘ಆತ್ಮಹತ್ಯೆ ಮಾಡಿಕೊಂಡವರಿಗೆ ಸರ್ಕಾರದಿಂದ ಸಹಾಯ ಘೋಷಿಸುವುದಕ್ಕೆ ಅವಕಾಶಗಳಿಲ್ಲವಾದರೂ, ಇದನ್ನೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಾಧ್ಯವಾದ ಸಹಾಯಗಳನ್ನೆಲ್ಲ ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದು ಗದ್ದಲಗಳ ನಡುವಿನ ಆಪ್ತಕ್ಷಣ.

ಬಜರಂಗದಳದ ಪ್ರವೀಣ ಖಾಂಡ್ಯ ಆರೋಪಿಯಾಗಿರುವ ಕಲ್ಲಪ್ಪ ಹಂಡಿಭಾಗ್ ಪ್ರಕರಣದಲ್ಲಿ, ಕಲ್ಲಪ್ಪ ಪರ ಬಿಜೆಪಿಯೂ ಧ್ವನಿ ಎತ್ತಿತಾದರೂ ಭಾವನಾತ್ಮಕತೆ ಜತೆ ತಾರ್ಕಿಕತೆಯನ್ನೂ ಬೆರೆಸಿದ್ದು ಕುಮಾರಸ್ವಾಮಿ. ಬಿಜೆಪಿಯ ಲಕ್ಷ್ಮಣ ಸವದಿ ಮಾತನಾಡುತ್ತ, ‘ಕಲ್ಲಪ್ಪ ನಮ್ಮ ಬೆಳಗಾವಿಯವ. ಸಾವಿನ ನಂತರ ಆತನ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆತನ ತಂದೆ – ನನ್ನ ಮಗ ಅಪರಾಧಿಯಾಗಿದ್ದ ಎಂಬ ಕಳಂಕವನ್ನು ಈ ವಯಸ್ಸಿನಲ್ಲಿ ಕೇಳುವುದಕ್ಕೆ ಸಾಧ್ಯವಾಗ್ತಿಲ್ಲ, ದಯವಿಟ್ಟು ಅವನನ್ನು ನಿರ್ದೋಷಿಯಾಗಿಸಿ ಎಂದು ಮೃತ ಮಗನ ಪರ ಕಣ್ಣೀರು ಹಾಕಿದರು. ಈ ಮನವಿ ಮುಖ್ಯಮಂತ್ರಿಗಳಿಗೆ ಮುಟ್ಟಿಸುತ್ತೇನೆ’ ಎಂದರು. ಆದರೆ, ತನಿಖೆಗೆ ಒಳಪಟ್ಟಿರುವ ಈ ಪ್ರಕರಣದಲ್ಲಿ ಕಲ್ಲಪ್ಪ ಮೇಲಿನ ಆರೋಪವನ್ನು ತೆಗೆದುಬಿಡುವ ಶಕ್ತಿ ಈ ಹಂತದಲ್ಲಿ ಸರ್ಕಾರಕ್ಕೂ ಇಲ್ಲ. ತನಿಖೆ ಮುಗಿಯುವುದಕ್ಕೆ ಕಾಯಬೇಕಷ್ಟೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಪ್ರತಿಪಾದನೆಯೇ ನಿಖರವಾಗಿತ್ತು.

ಮಾತಿನ ಒಂದು ಹಂತದಲ್ಲಿ, ‘ಕ್ರೈಸ್ತ ಮತಸ್ಥನೊಬ್ಬ ಸತ್ತಿದ್ದಾನೆ. ಅಂತಿಮ ಪೂಜೆಗೆ ಸ್ಥಳೀಯ ಚರ್ಚಿನಲ್ಲಿ ಅವಕಾಶ ಕೊಡುತ್ತಿಲ್ಲ. ಅವರು ಮೂರು ದಿನದಿಂದ ಹೆಣ ಇಟ್ಟುಕೊಂಡು ಕುಳಿತಿದ್ದ ಸಂದರ್ಭದಲ್ಲೂ ಸರ್ಕಾರ ತನ್ನ ಅಧಿಕಾರಿಗಳಿಗೆ ಆ ವಿಷಯವೇನು ಪರಿಹರಿಸಿ ಎಂದು ಸೂಚಿಸಬಾರದಾ? ಅಲ್ಲಿನ ಪಾದ್ರಿ ಚರ್ಚಿಗೆ ಬೀಗಹಾಕಿ ಹೋಗಿದ್ದಾರೆ ಅಂತ ಸ್ಥಳೀಯರು ದೂರುತ್ತಿದ್ದಾರೆ’ ಎಂದರು ಕುಮಾರಸ್ವಾಮಿ. ಪ್ರತಿ ಹಂತದಲ್ಲೂ ತಾನು ಅಲ್ಪಸಂಖ್ಯಾತರ ಪರ ಎಂದು ನಿರೂಪಿಸಿಕೊಳ್ಳುತ್ತಿರುವ ಸರ್ಕಾರಕ್ಕೆ ಸವಾಲೂ ಆಗಬಹುದಾದ ಚಿಕ್ಕ ಚುರುಕು ಮುಟ್ಟಿಸುವಿಕೆ ಇದು.

ಇಡೀ ಚರ್ಚೆಯಲ್ಲಿ ಆಡಳಿತ ಪಕ್ಷದವರು ತಮ್ಮ ಮೇಲೆ ‘ರಾಜಕೀಯ ದಾಳಿ’ ಮಾಡದಂತೆಯೂ ಮೊದಲೇ ಚೌಕಟ್ಟು ನಿರ್ಮಿಸಿಕೊಂಡುಬಿಟ್ಟಿದ್ದರು.  ‘ನನಗಂತೂ ಹತಾಶೆ ಕಾಡುತ್ತಿದೆ. ಬಿಜೆಪಿ- ಕಾಂಗ್ರೆಸ್ ಅಂತ ಎರಡು ದೊಡ್ಡ ಪಕ್ಷಗಳು ಇಲ್ಲಿದ್ದೀರಿ. ನಿಮ್ಮ ಜವಾಬ್ದಾರಿ ದೊಡ್ಡದು. ನಾವಂತೂ ಸಣ್ಣಪಕ್ಷ’ ಎನ್ನುವ ಮೂಲಕ, ‘ನೀವು ಕೆಳಗಿಳಿಯಿರಿ, ನಾವು ಬಂದು ಅಧಿಕಾರ ಮಾಡುವುದು ತೋರಿಸುತ್ತೇವೆ’ ಎಂಬ ಧಾಟಿಯಿಂದ ಸಂಪೂರ್ಣ ದೂರವಿದ್ದುಬಿಟ್ಟರವರು. ಈ ದಾಟಿ ತುಸುವೇ ಇಣುಕಿದ್ದರೂ ‘ನಿಮ್ಮ ಪಕ್ಷವನ್ನೇ ಸಂಭಾಳಿಸಲು ಆಗುತ್ತಿಲ್ಲ’ ಎಂಬ ಕುಹಕಗಳೆದ್ದು ಚರ್ಚೆ ಸುಲಭಕ್ಕೆ ದಾರಿ ತಪ್ಪುತ್ತಿತ್ತು.

ಇತ್ತೀಚಿನ ಜೆಡಿಎಸ್ ಆಂತರಿಕ ವಿದ್ಯಮಾನಗಳು, ಯಾವುದೂ ಬೇಡ ಎಂಬಂತೆ ಕೈಗೊಂಡಿದ್ದ ವಿದೇಶ ಪ್ರವಾಸ ಇವೆಲ್ಲವುಗಳಿಂದ ರಾಜಕೀಯ ಚಿತ್ರಚೌಕಟ್ಟಿನಿಂದ ಹೊರನಡೆದುಬಿಟ್ಟಂತಿದ್ದ ಕುಮಾರಸ್ವಾಮಿ, ಈ ಬಾರಿಯ ಕಲಾಪದಲ್ಲಿ ತಮ್ಮದೊಂದು ಛಾಪು ಒತ್ತಿದ್ದು ಸುಳ್ಳಲ್ಲ.

Leave a Reply