ಮೇಲ್ಮನೆಯಲ್ಲಿ ಸಣ್ಣವರಂತೆ ಕಿತ್ತಾಡಿಕೊಂಡ್ರು ಸಿದ್ದರಾಮಯ್ಯ, ಈಶ್ವರಪ್ಪ! ಏಕವಚನದಲ್ಲಿ ಅವರು ಬೈದಾಡಿಕೊಂಡಿದ್ದು ಹೇಂಗಂದ್ರೇ..?

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಈ ಹುದ್ದೆಗಳಿಗೆ ಬರೋ ಮೊದಲಿಂದಲೂ ರಾಜಕೀಯ ಜಗಳಕ್ಕೆ ಬಹಳ ಹೆಸರಾದವರು. ವಿಧಾನ ಮಂಡಲದ ಒಳಗಾಯ್ತು, ಹೊರಗಾಯ್ತು ಏಕವಚನದ ಬೈಗುಳಗಳ ವಿನಿಮಯ ರಾಜಕೀಯ ಅನುಭವ, ಸ್ಥಾನಮಾನವನ್ನೂ ಮೀರಿದ್ದು.

ಅವರು ಕಲಿತಿರುವ ಚಾಳಿ ಮೇಲ್ಮನೆಯಲ್ಲಿ ಗುರುವಾರ ಅನಾವರಣಗೊಂಡದ್ದು ಹೀಗೆ:

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕುರಿತ ಮೂರು ದಿನಗಳ ಚರ್ಚೆಗೆ ಉತ್ತರ ಕೊಡಲು ಗೃಹ ಸಚಿವ ಪರಮೇಶ್ವರ್ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಅನುವಾದಾಗ ಈಶ್ವರಪ್ಪ ತಡೆದರು. ‘ಸಚಿವ ಜಾರ್ಜ್ ರಾಜೀನಾಮೆ ನೀಡದ ಹೊರತು ಪ್ರಕರಣದ ತನಿಖೆ ನ್ಯಾಯಸಮ್ಮತ ಆಗುವುದಿಲ್ಲ. ಗಣಪತಿ ಪತ್ನಿ, ಪುತ್ರನ ದೂರಿನ ಮೇಲೆ ಎಫ್ಐಆರ್ ದಾಖಲಿಸಿಲ್ಲ ಎಂದ ಮೇಲೆ ನ್ಯಾಯಾಂಗ ತನಿಖೆಯಿಂದಲೂ ನ್ಯಾಯ ಸಿಗುವ ವಿಶ್ವಾಸವಿಲ್ಲ. ಹೀಗಾಗಿ ಸಿಬಿಐ ತನಿಖೆಗೆ ವಹಿಸಬೇಕು, ಜಾರ್ಜ್ ರಾಜೀನಾಮೆ ಕೊಡಿಸಬೇಕು’ ಎಂದು ಹಿಡಿದ ಪಟ್ಟಿನಲ್ಲಿ ಕಲಾಪವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತಾರೆ ಎಂಬುದರ ಸುಳಿವಿತ್ತು.

ತಮ್ಮ ಎಂದಿನ ಸೌಮ್ಯ ಭಾವದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ‘ಬರೀ ಗಣಪತಿ ವಿಚಾರವಷ್ಟೇ ಅಲ್ಲ, ಎಸ್ಐ ಮಲ್ಲಿಕಾರ್ಜುನ ಬಂಡೆ ಹತ್ಯೆ, ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ, ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಬಗ್ಗೆನೂ ವಿವರ ನೀಡಬೇಕು. ಹೀಗಾಗಿ ಉತ್ತರಕ್ಕೆ ಆಸ್ಪದ ಮಾಡಿಕೊಡಬೇಕು’ ಎಂದರು. ತಕ್ಷಣ ಪ್ರತಿಕ್ರಿಯಿಸಿದ ಈಶ್ವರಪ್ಪ, ‘ನೀವು ಏನು ಹೇಳ್ತೀರಿ ಅಂತಾ ಗೊತ್ತಿದೆ. ಮೊದಲು ಜಾರ್ಜ್ ರಾಜೀನಾಮೆ ತಗೊಳ್ಳಿ. ಅಲ್ಲೀವರೆಗೂ ಉತ್ತರಕ್ಕೆ ಅವಕಾಶ ನೀಡಲ್ಲ’ ಅಂತಂದಾಗ ಪರಮೇಶ್ವರ್ ಪಕ್ಕದಲ್ಲಿದ್ದ ಸಿದ್ದರಾಮಯ್ಯನವರು ಎದ್ದು ನಿಂತು, ‘ರೀ ಈಶ್ವರಪ್ಪ, ಇಲ್ಲಿ ಕೇಳ್ರೀ.. ನೀವು ಸದನಾನ ಈ ರೀತಿ ಹೈಜಾಕ್ ಮಾಡೋಕೆ ಆಗಲ್ಲ. ನಾವು ಹೇಳೋದನ್ನೂ ಸ್ವಲ್ಪ ಕೇಳ್ರೀ..’ ಅಂದರದಲ್ಲದೆ ಸ್ಪೀಕರ್ ಶಂಕರಮೂರ್ತಿ ಅವರತ್ತ ತಿರುಗಿ, ‘ಸಭಾಪತಿಗಳೇ he can not  hijack the house like this (ಈಶ್ವರಪ್ಪ ಸದನವನ್ನು ಈ ರೀತಿ ಮುಷ್ಟಿಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ) ಮೊದಲು ಅವರಿಗೆ ಕೂತ್ಕೊಳ್ಳೋಕೆ ಹೇಳಿ’ ಅಂತ ಖಡಕ್ಕಾಗಿ ಹೇಳಿದಾಗ ಎಂಥದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವ ಸಂಕೇತವಿತ್ತು.

ಇದರಿಂದ ಸಿಟ್ಟಿಗೆದ್ದ ಈಶ್ವರಪ್ಪ, ‘ನಾನ್ಯಾಕ್ರೀ ಕೂತ್ಕೋಬೇಕು, ಅನ್ಯಾಯಕ್ಕೆ ಒಳಗಾಗಿರೋ ಗಣಪತಿ ಕುಟುಂಬಕ್ಕೆ ರಕ್ಷಣೆ ಕೊಡೋದು ಮುಖ್ಯಮಂತ್ರಿ ಆದವರ ಕರ್ತವ್ಯ, ಗೃಹ ಸಚಿವರ ಕರ್ತವ್ಯ. ಅದನ್ನು ಬಿಟ್ಟು ಇಬ್ರೂ ಸೇರ್ಕೊಂಡು ಒಬ್ಬ ಕೊಲೆಗಡುಕ ಸಚಿವನ ರಕ್ಷಣೆಗೆ ನಿಂತಿದ್ದೀರಲ್ಲ, ಇದು ನ್ಯಾಯನಾ? ಇದೊಂದು ಕೊಲೆಗಡುಕ ಸರಕಾರ’ ಅಂದದ್ದು ಸಿದ್ದರಾಮಯ್ಯ ಅವರನ್ನು ಕೆರಳಿಸಿಬಿಟ್ಟಿತು.

‘ಏಯ್ ಈಶ್ವರಪ್ಪ ಯಾರಿಗೆ ಹೇಳ್ತಾ ಇದ್ದೀಯ ಕೊಲೆಗಡುಕ ಸರಕಾರ ಅಂತಾ. ನಿಂಗೇನಾದ್ರೂ ಮಾನ-ಮರ್ಯಾದೆ ಇದೆಯೇನಯ್ಯಾ, ಯಾರಿಗೇಳ್ತಿ ಕೊಲೆಗಡುಕರು ಅಂತಾ, ಕೂತ್ಕಳಯ್ಯಾ ಕಂಡಿದ್ದೀನಿ’ ಅಂತ ಏಕವಚನದಲ್ಲಿ ನಿಂದಿಸಿದ್ದು ಈಶ್ವರಪ್ಪ ಅವರನ್ನೂ ನಖಶಿಖಾಂತ ಉರಿಸಿಬಿಟ್ಟಿತು. ಸೇರಿಗೆ-ಸವ್ವಾಸೇರು ಎಂಬಂತೆ ‘ಏಯ್-ಗೀಯ್ ಅನ್ನೋದನೆಲ್ಲ ನಿನ್ ಮನೇಲಿ ಇಟ್ಕೋ, ನನ್ನತ್ರ ಅವೆಲ್ಲ ನಡೆಯಲ್ಲ, ಇಲ್ಲಿ ನಿನ್ನ ಭಾಷಣ ಕೇಳಕ್ಕೆ ಬಂದಿಲ್ಲಾ ನಾನು, ಕಂಡಿದ್ದೀನಿ ಇರಯ್ಯ ಯಾಕಯ್ಯ ಕುತ್ಕೋಬೇಕು ನಾನು, ಮೊದಲು ರಾಜೀನಾಮೆ ತಗೋ’ ಎಂದು ತಿರುಗಿಸಿ ಕೊಟ್ಟರು. ಇದರಿಂದ ಇನ್ನಷ್ಟು ಕೆರಳಿದ ಸಿಎಂ ‘ಯಾಕಯ್ಯಾ ತಗೋಬೇಕು ರಾಜೀನಾಮೆ’ ಅಂತಂದರಲ್ಲದೇ ಸ್ಪೀಕರ್ ಕಡೆ ತಿರುಗಿ, “ಆಚೆಗೆ ಕಳುಹಿಸ್ರೀ ಅವನ್ನ’ ಅಂತಂದರು. ಇದರಿಂದ ಮತ್ತಷ್ಟು ಕೆರಳಿದ ಈಶ್ವರಪ್ಪ ಜೋರುಧ್ವನಿಯಲ್ಲಿ, ‘ಹೆಂಗ್ ಕಳುಹಿಸ್ತೀಯಾ ನೋಡ್ತೀನಿ ಬಾ… ನಿನ್ನ ಮನೆಗೆ ಬಂದಿಲ್ಲ ನಾನು, ಜನ ಕಳ್ಸವ್ರೆ ಇಲ್ಲಿಗೆ ನನ್ನ’ ಅಂತಾ ಅಂದಾಗ ಇಬ್ಬರು ನಡುವೆ ಏರಿದ ದ್ವನಿಯಲ್ಲಿ ಮತ್ತಷ್ಟು ಬೈಗುಳಗಳ ವಿನಿಮಯ ಆದವು. ಅದಕ್ಕೆ ಆಡಳಿತ ಮತ್ತು ಪ್ರತಿಪಕ್ಷದವರ ಕೂಗಾಡ ಕೂಡ ಮಿಳಿತವಾಗಿ ಯಾರೇನು ಹೇಳುತ್ತಿದ್ದಾರೆ ಅಂತ ಗೊತ್ತಾಗದಾದಗ ಸಭಾಪತಿ ಶಂಕರಮೂರ್ತಿ ಅವರು ಕಲಾಪವನ್ನು 20 ನಿಮಿಷ ಮುಂದಕ್ಕೆ ಹಾಕಿದರು.

Leave a Reply