ಸೋನಿಯಾ ಕಾಂಗ್ರೆಸ್ನಲ್ಲಿ ಪೂಜಾರಿ ಮಾತುಗಳಿಗೇನು ಬೆಲೆ? ಪ್ರತಿಭಟನೆ ಹೊದ್ದ ಕಲಾಪದಲ್ಲೇ ವಿಧೇಯಕಗಳ ಅಲೆ

ಡಿಜಿಟಲ್ ಕನ್ನಡ ಟೀಮ್:

ಮುಂದುವರಿದ ಪ್ರತಿಪಕ್ಷಗಳ ಧರಣಿ, ಗದ್ದಲದಲ್ಲೇ ಮಸೂದೆಗಳನ್ನು ಪಾಸು ಮಾಡಿಕೊಂಡ ಸರ್ಕಾರ, ಜಂಟಿ ಪತ್ರಿಕಾಗೋಷ್ಟಿಯಲ್ಲಿ ಗುಡುಗಿದ ಶೆಟ್ಟರ್- ಕುಮಾರಸ್ವಾಮಿ, ಅತ್ತ ಮಂಗಳೂರಿನಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೇಳಿದ ಕಾಂಗ್ರೆಸ್ ಹಿರಿಯ ಜನಾರ್ದನ ಪೂಜಾರಿ….

ಇವು ಗುರುವಾರದ ರಾಜಕೀಯ ವಲಯದ ಮುಖ್ಯಾಂಶಗಳು.

‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆಜೆ ಜಾರ್ಜ್ ರಾಜೀನಾಮೆ ಪಡೆಯಬೇಕಿತ್ತು. ಅದಕ್ಕೊಪ್ಪದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ವರ್ಚಸ್ಸಿಗೇ ಹಾನಿ ಮಾಡುತ್ತಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ಶಾಸಕಾಂಗವು ಸಿದ್ದರಾಮಯ್ಯ ರಾಜೀನಾಮೆಗೇ ಆಗ್ರಹಿಸಬೇಕಿದೆ. ಇವರು ಕಾಂಗ್ರೆಸ್ ನಾಶ ಮಾಡುವುದಕ್ಕೇ ಬಂದಿದ್ದಾರೆ. ಮೂರು ವರ್ಷ ಇವರ ನೇತೃತ್ವದಲ್ಲಿ ಅಧಿಕಾರ ನಡೆಸಿದ್ದು ಸಾಕು. ಕಾಂಗ್ರೆಸ್ಸಿನಲ್ಲಿ ಎಸ್ಸೆಂ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಎಚ್ಕೆ ಪಾಟೀಲರಂಥ ಹಿರಿಯರಿದ್ದಾರೆ. ಇಂಥ ಹಿರಿಯರಲ್ಲಿ ಯಾರಿಗಾದರೂ ಶಾಸಂಕಾಂಗದ ನೇತೃತ್ವ ವಹಿಸಬೇಕು. ಈ ಪ್ರಕರಣದಲ್ಲಿ ಜಾರ್ಜ್ ರಾಜೀನಾಮೆ ಪಡೆಯಬೇಕಿತ್ತು ಇಲ್ಲವೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕಿತ್ತು. ಇದೇನನ್ನೂ ಮಾಡದೇ ಕಾಂಗ್ರೆಸ್ ವರ್ಚಸ್ಸಿಗೆ ಸಿದ್ದರಾಮಯ್ಯ ಧಕ್ಕೆ ಉಂಟುಮಾಡಿದ್ದಾರೆ’ ಹೀಗಂತ ಸಿದ್ದರಾಮಯ್ಯ ವಿರುದ್ಧ ಬಿರುಸಾಗಿ ಹರಿಹಾಯ್ದವರು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ.

ಆದರೆ, ಗುರುವಾರ ದೊರೆತ ಚಿತ್ರಣದ ಪ್ರಕಾರ ಮುಖ್ಯಮಂತ್ರಿ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ರಾಜಕೀಯ ಇಕ್ಕಟ್ಟು ಎದುರುಹಾಕಿಕೊಳ್ಳುವ ಬದಲಿಗೆ ಜಾರ್ಜ್ ರಾಜೀನಾಮೆ ಪಡೆಯುವುದಕ್ಕೆ ಹೈಕಮಾಂಡ್ ಸೂಚಿಸಿದೆ ಎಂಬ ವದಂತಿಗಳು ಈ ಹಿಂದೆ ಇದ್ದವು. ಆದರೆ ಅಂಥ ಒತ್ತಡಗಳೇನೂ ಇಲ್ಲ ಎಂಬುದು ಇಂದಿನ ಕಲಾಪದಲ್ಲೇ ಸ್ಪಷ್ಟವಾಗಿದೆ. ಕಲಾಪ ಮುಂದೂಡುವಿಕೆ, ಪ್ರತಿಪಕ್ಷಗಳ ಪ್ರತಿಭಟನಾ ಘೋಷಣೆ ಇವೆಲ್ಲದರ ಮಧ್ಯೆಯೇ ಇಂದು ಸದನದಲ್ಲಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ, ಸ್ಟಾಂಪ್ ಹಾಗೂ ರಿಜಿಸ್ಟ್ರೇಶನ್ ಕಾಯ್ದೆ, ಜಲಮಂಡಳಿ ತಿದ್ದುಪಡಿ ಕಾಯ್ದೆಗಳ ಮಂಡನೆಯಾಯಿತು. ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯಗಳ ಕಾಯ್ದೆ ಸೇರಿದಂತೆ ಎಲ್ಲ ವಿಧೇಯಕಗಳಿಗೆ ಧ್ವನಿ ಮತದ ಮೂಲಕ ಅಂಗೀಕಾರ ಪಡೆದಿದ್ದೂ ಆಯಿತು. ಇದೇ ರೀತಿ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಅಂಗೀಕಾರ ಪಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ತಿದ್ದುಪಡಿ ವಿಧೇಯಕವನ್ನು ಸಹ ಸದನದ ಮುಂದೆ ಮಂಡಿಸಿ ಒಪ್ಪಿಗೆ ಪಡೆಯಲಾಯಿತು.

‘ಹೀಗೆ ಚರ್ಚೆ ಮಾಡದೇ ಮಸೂದೆಗಳನ್ನು ಪಾಸು ಮಾಡುವುದು ಸರಿಯೇ? ಮೊದಲು ಜಾರ್ಜ್ ರಾಜೀನಾಮೆ ಪಡೆಯಿರಿ. ತಕ್ಷಣವೇ ನಾವು ಚರ್ಚೆಗೆ ಸೇರಿಕೊಳ್ಳುತ್ತೇವೆ’ ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಹೇಳಿದರೆ, ‘ರಾಜೀನಾಮೆ ಏನಿಲ್ಲ. ಬೇಕಾದರೆ ಚರ್ಚೆ ಮಾಡಿ, ನಾವು ಸಿದ್ಧರಿದ್ದೇವೆ’ ಎಂಬ ನಿಲುವಿಗೆ ಮುಖ್ಯಮಂತ್ರಿ ಅಂಟಿಕೊಂಡರು.

ಶುಕ್ರವಾರವೂ ಕೆಲವು ವಿಧೇಯಕಗಳನ್ನು ಪಾಸು ಮಾಡಿ, ಸೋಮವಾರ ಇಲ್ಲವೇ ಮಂಗಳವಾರದ ಹೊತ್ತಿಗೆ ಹಣಕಾಸಿಗೆ ಸಂಬಂಧಿಸಿದ ವಿಧೇಯಕಗಳಿಗೆ ಒಪ್ಪಿಗೆ ಪಡೆದುಕೊಂಡು ನಂತರ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಯೋಚನೆಯಲ್ಲಿ ಸರ್ಕಾರವಿರುವುದಾಗಿ ಮೂಲಗಳು ಹೇಳುತ್ತಿವೆ.

ಜಾರ್ಜ್ ಮಾತಲ್ಲಿ ಸಿಕ್ಕ ಸುಳಿವು…

‘ನನಗೆ ಕಾಂಗ್ರೆಸ್ ಹೈಕಮಾಂಡ್ ಯಾವ ವಿವರಣೆಗಳನ್ನೂ ಕೇಳಿಲ್ಲ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನಮ್ಮ ಕೈವಾಡ ಏನಿಲ್ಲ ಎಂದು ಮುಖ್ಯಮಂತ್ರಿ ಮತ್ತು ನಾನು ಸದನದಲ್ಲಿ ಸ್ಪಷ್ಟಪಡಿಸಿದ್ದೇವೆ. ಯಾವ ಸಾಕ್ಷಿಗಳಿಲ್ಲದೇ ಮಾಧ್ಯಮಗಳೇ ಇಂಥ ಪರಿಸ್ಥಿತಿ ಸೃಷ್ಟಿಸುತ್ತಿದ್ದೀರಿ’ ಎಂದು ಜಾರ್ಜ್ ಸುದ್ದಿಗಾರರ ಜತೆ ಮಾತನಾಡುತ್ತ ಹರಿಹಾಯ್ದರು.

ಈ ಪ್ರಕರಣದಲ್ಲಿ ಜಾರ್ಜ್ ಪಾತ್ರವೇನಿಲ್ಲ. ಈ ಸಂಬಂಧ ಪ್ರತಿಪಕ್ಷಗಳ ಪ್ರತಿಭಟನೆಗೆ ರಾಜಕೀಯ ಪ್ರತಿತಂತ್ರ ಹೆಣೆಯುತ್ತೇವೆ ಎಂದು ರಾಜ್ಯದ ಉಸ್ತುವಾರಿ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್ ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂದೂ ಮೂಲಗಳು ದೃಢಪಡಿಸುತ್ತಿವೆ.

ಪ್ರತಿಪಕ್ಷಗಳ ಒಗ್ಗಟ್ಟು

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳೆದುರು ಜಂಟಿಯಾಗಿ ಹೇಳಿಕೆ ನೀಡಿದ ಜಗದೀಶ್ ಶೆಟ್ಟರ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು, ಎಫ್ ಐ ಆರ್ ದಾಖಲಾಗಿ ಜಾರ್ಜ್ ರಾಜೀನಾಮೆ ಸಿಗುವವರೆಗೂ ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ಹೇಳಿದರು. ಸರ್ಕಾರದ ಜಡ ಧೋರಣೆಗೆ ತೀವ್ರ ಆಕ್ರೋಶಗೊಂಡಿರುವ ಕುಮಾರಸ್ವಾಮಿ ಈ ಬಾರಿ ಅತಿ ಕಟುಮಾತುಗಳಲ್ಲೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ‘ಇದೊಂದು ಕೊಲೆಗಡುಕ ಮಂತ್ರಿಮಂಡಲದಂತಿದೆ. ಬರೀ ಜಾರ್ಜ್ ಅಲ್ಲ, ಸರ್ಕಾರವನ್ನೇ ಒದ್ದು ಹೊರಹಾಕುವ ಬಗ್ಗೆ ಈ ರಾಜ್ಯದ ಜನತೆ ಯೋಚಿಸಬೇಕು.’ ಅಂತ ಕಿಡಿ ಕಾರಿದರು.

ಇಷ್ಟೆಲ್ಲದರ ನಡುವೆಯೂ ಸರ್ಕಾರದ ನಡೆಯಿಂದ ಸ್ಪಷ್ಟವಾಗುತ್ತಿರುವುದೇನೆಂದರೆ, ಈ ವಿಷಯದಲ್ಲಿ ಸಿದ್ದರಾಮಯ್ಯ ಅವರು ಜಾರ್ಜ್ ಅವರನ್ನು ಕಾಪಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ಹೈಕಮಾಂಡ್’ನ ಎಲ್ಲ ಬೆಂಬಲ ದೊರೆಯುತ್ತಿದೆ.

Leave a Reply