ಅಧ್ಯಕ್ಷ ಹೊಲಾಂಡೆ ಕೇಶವಿನ್ಯಾಸಕ್ಕೆ ಫ್ರಾನ್ಸ್ ಸರ್ಕಾರ ಮಾಡುತ್ತಿರುವ ಖರ್ಚೆಷ್ಟು ಗೊತ್ತೆ..?

ಡಿಜಿಟಲ್ ಕನ್ನಡ ಟೀಮ್:

ಈಗ ಹೇಳಲು ಹೊರಟಿರೋ ಸಂಗತಿಯಯನ್ನು ಫ್ರಾನ್ಸ್ ನಲ್ಲಿರುವ ಸಮಾನ ವೃತ್ತಿ ಗೌರವ ಅಂತ ನೋಡಬಹುದು, ಸರ್ಕಾರ ಏನಕ್ಕೆಲ್ಲಾ ಹಣ ವ್ಯಯಿಸುತ್ತದೆ ಅಂತಾನೂ ಕಾಣಬಹುದು. ಆದರೆ ವಿಷಯದ ಹಿಂದಿರುವ ರೋಚಕತೆ ಏನಂದ್ರೆ, ಫ್ರೆಂಚ್ ಅಧ್ಯಕ್ಷ ಹೊಲಾಂಡೆ ಕೇಶ ವಿನ್ಯಾಸಗಾರನಿಗೆ ಪ್ರತಿ ತಿಂಗಳು ಕೊಡುತ್ತಿರೋ ವೇತನ ಪ್ರಮಾಣದ್ದು. ಅದು 10,958 ಅಮೆರಿಕನ್ ಡಾಲರ್..!

ಕೇಶ ವಿನ್ಯಾಸಗಾರನಿಗೆ ಸರ್ಕಾರದ ಬೊಕ್ಕಸದಿಂದ ಇಷ್ಟೊಂದು ಮೊತ್ತ ಹೋಗುತ್ತಿರುವುದರ ಬಗ್ಗೆ ಅಲ್ಲಿನ ಪ್ರಜೆಗಳು ಪ್ರಶ್ನೆ ಎತ್ತಿದ್ದಾರೆ. ಕೇಶ ವಿನ್ಯಾಸಕನ ಈ ವೇತನ ಸ್ವತಃ ಹೊಲಾಂಡೆ ಅವರ ವೇತನದ ಅರ್ಧಕ್ಕಿಂತಲೂ ಹೆಚ್ಚಿದೆ. ಈತನ ವೇತನದ ಮುಂದೆ ಯುರೋಪ್ ಸಂಸದರದೂ ಕಡಿಮೆಯೇ.

ಸದ್ಯ ಯುರೋಪಿಯನ್ ಸರ್ಕಾರಗಳಲ್ಲಿ ಮಿತವ್ಯಯದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅದರ ಮಧ್ಯೆ ಕೇಶ ವಿನ್ಯಾಸಕ್ಕೆ ಇಷ್ಟೊಂದು ಹಣ ಖರ್ಚು ಮಾಡಬೇಕು ಏಕೆ ಎಂಬ ಆಕ್ಷೇಪ ಕೇಳಿಬರುತ್ತಿದೆ. ಈ ಹಿಂದಿನ ಅಧ್ಯಕ್ಷ ನಿಕೊಲಸ್ ಸರ್ಕೊಜಿ ಸಹ ದುಂದುವೆಚ್ಚ ಮಾಡಿ ಫ್ಯಾಶನ್ ಪ್ರಿಯ ಎಂದೇ ಹೆಸರಾಗಿದ್ದರು. ಅದಕ್ಕಾಗಿ ಟೀಕೆಯನ್ನೂ ಎದುರಿಸಿದ್ದರು. ಅವರ ನಂತರ 2012 ರಲ್ಲಿ ಹೊಲಾಂಡೆ ಈ ಸ್ಥಾನಕ್ಕೆ ಸ್ಪರ್ಧಿಸಿದಾಗ ದುಂದು ವೆಚ್ಚ ಮಾಡದೇ ಸಾಮಾನ್ಯನಂತೆ ಇರುತ್ತೇನೆ ಎಂದು ಚುನಾವಣೆ ಪ್ರಚಾರದಲ್ಲಿ ತಿಳಿಸಿದ್ರು. ಆದರೆ ಈಗ ಬರೀ ಹೇರ್ ಕಟಿಂಗ್ ಮತ್ತು ಸೆಟ್ಟಿಂಗ್ ಗೇ ಇಷ್ಟೊಂದು ಖರ್ಚು ಮಾಡಿ ಸರ್ಕೊಜಿಯವರನ್ನು ದುಂದು ವೆಚ್ಚದಲ್ಲಿ ಪಕ್ಕಕ್ಕೆ ಸರಿಸಿದ್ದಾರೆ.

ಈ ವಿವಾದದ ನಡುವೆ ಮತ್ತೆ ಎರಡನೇ ಬಾರಿ ಅಧ್ಯಕ್ಷರಾಗುವುದು ಹೊಲಾಂಡೆ ಅಭಿಲಾಷೆ. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಜನ ಇವರನ್ನು ಯಾವ ಪರಿಗಣಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

1 COMMENT

Leave a Reply