ಉ.ಪ್ರ.ದಲ್ಲಿ ಶೀಲಾ ದೀಕ್ಷಿತ್ ಕಾಂಗ್ರೆಸ್ ಸಿಎಂ ಅಭ್ಯರ್ಥಿ, ವಿಶ್ವಸಂಸ್ಥೆಯಲ್ಲಿ ಪಾಕಿಗೆ ಭಾರತದ ಎದಿರೇಟು, ಕಪ್ಪುಹಣ ವರದಿ…

ಈ ಹಿಂದೆ ಯೆಮನ್’ನಲ್ಲಿ ಹಿಂಸಾಚಾರ ಶುರುವಾದಾಗ ಅಲ್ಲಿನ ಭಾರತೀಯರನ್ನು ರಕ್ಷಿಸಿ ತರುವಲ್ಲಿ ತಾವೇ ಮುಂಚೂಣಿಯಲ್ಲಿ ನಿಂತಿದ್ದ ಕೇಂದ್ರದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್ ವಿ. ಕೆ. ಸಿಂಗ್, ಈ ಬಾರಿ ದಕ್ಷಿಣ ಸುಡಾನಿನ ಹಿಂಸೆಯಲ್ಲಿ ಸಿಲುಕಿರುವ ಭಾರತೀಯರ ಏರ್ಲಿಫ್ಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಡಿಜಿಟಲ್ ಕನ್ನಡ ಟೀಮ್:

ಶೀಲಾ ಕಿ ಜಮಾನಾ…

ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಗೆ ಶೀಲಾ ದೀಕ್ಷಿತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಪ್ರಕಟಿಸಿದೆ. ದೆಹಲಿಯಲ್ಲಿ ಮೂರು ಅವಧಿಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಅನುಭವ, ಉತ್ತರ ಪ್ರದೇಶಕ್ಕೆ ಸೊಸೆ ಎಂಬ ಇಮೇಜ್ ಹಾಗೂ ಬ್ರಾಹ್ಮಣ ಸಮುದಾಯದ ಹಿನ್ನೆಲೆ.. ಶೀಲಾ ದೀಕ್ಷಿತ್ ಅವರ ಈ ಮೂರೂ ಅರ್ಹತೆಗಳು ಕಾಂಗ್ರೆಸ್ ಈ ನಿರ್ಧಾರಕ್ಕೆ ಪ್ರಮುಖ ಕಾರಣ.

ಶೀಲಾ ದೀಕ್ಷಿತ್ ಅವರನ್ನು ಉತ್ತರ ಪ್ರದೇಶದ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಪ್ರಕಟಿಸಿದ್ರು. ಇದಾದ ನಂತರ ಶೀಲಾ ದೀಕ್ಷಿತ್ ಪ್ರತಿಕ್ರಿಯಿಸಿದ್ದು ಹೀಗೆ:

‘ನನ್ನ ಮೇಲೆ ನಂಬಿಕೆ ಇಟ್ಟ ಕಾಂಗ್ರೆಸ್ ಹೈಕಮಾಂಡ್ ಗೆ ಧನ್ಯವಾದ ಅರ್ಪಿಸುತ್ತೇನೆ. ಇದೊಂದು ದೊಡ್ಡ ಸವಾಲಾಗಿದ್ದು, ಇದರಲ್ಲಿ ಯಶಸ್ವಿಯಾಗುವ ಭರವಸೆ ಇದೆ.’

ಸಮನ್ಸ್ ಜಾರಿ…

ಈ ಮಧ್ಯೆ ವಾಟರ್ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಭ್ರಷ್ಟಾಚಾರ ನಿಗ್ರಹ ವಿಭಾಗ (ಎಸಿಬಿ) ಸಮನ್ಸ್ ಜಾರಿ ಮಾಡಿದೆ. ಈ ಬಗ್ಗೆ ಎಸಿಬಿ ಮುಖ್ಯಸ್ಥ ಎಂ.ಕೆ ಮೀನಾ ಪ್ರತಿಕ್ರಿಯಿಸಿರೋದು ಹೀಗೆ:

‘ಆಗಸ್ಟ್ 26 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ದೆಹಲಿ ಹೈಕೋರ್ಟ್ ನಿಂದ ವಾಟರ್ ಟ್ಯಾಂಕರ್ ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಲಾ ದೀಕ್ಷಿತ್ ಅವರ ವಿರುದ್ಧದ ತನಿಖಾ ವರದಿ ಬಂದಿದೆ. ವರದಿಗೆ ತಕ್ಕಂತೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಈ ಪ್ರಕರಣದಲ್ಲಿ ಸುಮಾರು ₹400 ಕೋಟಿಯಷ್ಟು ಹಗರಣ ನಡೆದಿದ್ದು, ಈ ವಿಚಾರವಾಗಿ ದೆಹಲಿ ಜಲ ಮಂಡಳಿ ಅಧಿಕಾರಿಗಳಿಗೂ ಸಮನ್ಸ್ ನೀಡಿದ್ದೇವೆ. ಶೀಲಾ ದೀಕ್ಷಿತ್ ಅವರನ್ನು ವಿಚಾರಣೆ ನಡೆಸಿದ ಬಳಿಕ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯ.’

ಇತ್ತ, ಎಸಿಬಿಯಿಂದ ಯಾವುದೇ ಸಮನ್ಸ್ ನನಗೆ ತಲುಪಿಲ್ಲ ಅಂತಿದ್ದಾರೆ ಶೀಲಾ ದೀಕ್ಷಿತ್.

ವಿಶ್ವ ಸಂಸ್ಥೆಯಲ್ಲಿ ಪಾಕ್ ಗೆ ತಿರುಗೇಟು ನೀಡ್ತು ಭಾರತ

ಉಗ್ರ ಬುರ್ಹಾನ್ ವನಿ ಹತ್ಯೆಯಿಂದ ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗ್ತಿದೆ ಅಂತಾ ವಿಶ್ವಸಂಸ್ಥೆಯಲ್ಲಿ ತಕರಾರು ಎತ್ತಿದ್ದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯ ಭಾರತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಗುರುವಾರ ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಉತ್ತರ ನೀಡಿದ್ರು. ಅಷ್ಟೇ ಅಲ್ಲದೆ ಪಾಕಿಸ್ತಾನಕ್ಕೆ ಬಿಸಿಮುಟ್ಟಿಸಿದ್ರು. ವಿಶ್ವಸಂಸ್ಥೆಯಲ್ಲಿ ಅಕ್ಬರುದ್ದೀನ್ ಹೇಳಿದ್ದು ಇಷ್ಟು:

‘ವಿಶ್ವಸಂಸ್ಥೆಯಲ್ಲಿನ ಅವಕಾಶವನ್ನು ಪಾಕಿಸ್ತಾನ ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಬೇಸರದ ಸಂಗತಿ. ಪಾಕಿಸ್ತಾನಕ್ಕೆ ಬೇರೆಯವರ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಆಸೆ ಇದೆ. ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಅಳವಡಿಸಿಕೊಂಡಿರುವ ಪಾಕಿಸ್ತಾನ, ಉಗ್ರರನ್ನು ಕೊಂಡಾಡುತ್ತಿದೆ. ಅಷ್ಟೇ ಅಲ್ಲದೆ ವಿಶ್ವಸಂಸ್ಥೆಯೇ ನಿಷೇಧಿಸಿರುವ ಉಗ್ರರಿಗೆ ಆಶ್ರಯ ನೀಡುತ್ತಿದೆ. ಇಷ್ಟೆಲ್ಲಾ ಮಾಡುತ್ತಿರುವ ಪಾಕಿಸ್ತಾನ ಮಾನವ ಹಕ್ಕು ಸಂರಕ್ಷಣೆಯ ಮುಖವಾಡ ಹಾಕಿಕೊಂಡು ಎಲ್ಲರ ದಾರಿ ತಪ್ಪಿಸುತ್ತಿದೆ. ಅಲ್ಲದೆ ಮಾನವ ಹಕ್ಕು ಸಮಿತಿಯ ಸದಸ್ಯತ್ವ ಪಡೆಯಲು ಪದೇ ಪದೇ ವೈಫಲ್ಯ ಅನುಭವಿಸುತ್ತಿರುವುದನ್ನು ನೋಡುತ್ತಲೇ ಬಂದಿದ್ದೇವೆ.’

ವಾಯುಸೇನೆ ವಿರುದ್ಧ ನ್ಯಾಯಾಧಿಕರಣ ಮೆಟ್ಟಿಲೇರಿದ ಪೂಜಾ ಠಾಕೂರ್

ಪೂರ್ಣಾವಧಿ ಸೇವೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿಂಗ್ ಕಮಾಂಡರ್ ಆಗಿರುವ ಪೂಜಾ ಠಾಕೂರ್ ಭಾರತೀಯ ವಾಯು ಸೇನೆ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ತಮಗೆ ಪೂರ್ಣಾವಧಿ ಸೇವೆ (ನಿವೃತ್ತಿವರೆಗಿನ ಸೇವೆ) ನೀಡಬೇಕು ಎಂದು ಪೂಜಾ ಅವರು ಸೇನಾ ನ್ಯಾಯಾಧಿಕರಣದ ಮೊರೆ ಹೋಗಿದ್ದಾರೆ. 2000 ರಲ್ಲಿ ವಾಯು ಸೇನೆ ಸೇರಿದ ಪೂಜಾ ಅವರು ಕಳೆದ ವರ್ಷ ಭಾರತ ಪ್ರವಾಸ ಕೈಗೊಂಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಸ್ವಾಗತ ಪರೇಡ್ ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಈಗ ಈ ಪ್ರಕರಣದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಈ ಬಗ್ಗೆ ಪೂಜಾ ಪರ ವಕೀಲರಾದ ಹಾಗೂ ನಿವೃತ್ತ ಮೇಜರ್ ಎಸ್. ಪಾಂಡೆ ಹೇಳಿದಿಷ್ಟು:

‘ಇದು 2012 ರಲ್ಲಿ ಪೂಜಾ ಅವರಿಗೆ ಈ ಅವಕಾಶ ನೀಡಲಾಗಿತ್ತು. ಆದರೆ ಅದನ್ನು ಅವರು ತಿರಸ್ಕರಿಸಿದ್ದರು. ಒಬ್ಬ ಅಧಿಕಾರಿಗೆ ಈ ಅವಕಾಶವನ್ನು ಕೇವಲ ಒಂದು ಬಾರಿ ಮಾತ್ರ ನೀಡಲಾಗುವುದು ಎಂದು ಭಾರತೀಯ ವಾಯು ಸೇನೆ ಹೇಳುತ್ತಿದೆ. ಆದ್ರೆ, ಆ ಸಂದರ್ಭದಲ್ಲಿ ಪೂಜಾ ಅವರು ತಾತ್ಕಾಲಿಕವಾಗಿ ಆ ಅವಕಾಶವನ್ನು ನಿರಾಕರಿಸಿದ್ದರು.’

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿಗಳು..

  • ವಿವಾದಿತ ಇಸ್ಲಾಂ ಭೋದಕ ಜಾಕಿರ್ ನಾಯಕ್ ಅವರ ಪತ್ರಿಕಾಗೋಷ್ಠಿ ಮತ್ತೆ ರದ್ದಾಗಿದೆ. ಗುರುವಾರ ದಕ್ಷಿಣ ಮುಂಬೈನ ಸಣ್ಣ ಹಾಲ್ ವೊಂದರಲ್ಲಿ ಸ್ಕೈಪ್ ಮೂಲಕ ಜಾಕಿರ್ ನಾಯಕ್ ಮಾಧ್ಯಮ ಪ್ರತಿನಿಧಿಗಳ ಜತೆ ಚರ್ಚಿಸಲು ನಿರ್ಧರಿಸಿದ್ದರು. ಈ ಹಾಲ್ ನ ಆಡಳಿತ ಮಂಡಳಿ ನಿನ್ನೆ ರಾತ್ರಿ ಸುದ್ದಿಗೋಷ್ಠಿಗೆ ಜಾಗ ನೀಡಲು ನಿರಾಕರಿಸಿದೆ ಎಂಬ ಕಾರಣ ನೀಡಿ ರದ್ದುಗೊಳಿಸಿದೆ. ಇದೇ ವಾರ ಮೊದಲು ಟ್ರಿಟೆಂಡ್ ಹೊಟೇಲ್ ನಲ್ಲಿ ನಡೆಯಬೇಕಿದ್ದ ಸುದ್ದಿಗೋಷ್ಠಿ ನಂತರ ವಿಶ್ವ ವಾಣಿಜ್ಯ ಕಟ್ಟಡದಲ್ಲಿ ನಡೆಸಲು ನಿರ್ಧರಿಸಿದ್ದರು. ನಂತರ ಉತ್ತರ ಮುಂಬೈನ ಚಿಕ್ಕ ಹಾಲ್ ನಲ್ಲಿಗೆ ಸ್ಥಳಾಂತರಗೊಂಡಿತ್ತು.
  • ಕಪ್ಪುಹಣ ತಡೆ ಹಾಗೂ ನಗದು ರಹಿತ ಆರ್ಥಿಕತೆಯತ್ತ ಸಾಗುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾ ತಂಡ ಮತ್ತೊಂದು ವರದಿ ಸಲ್ಲಿಸಿದೆ. ಇದರಲ್ಲಿ ₹ 3 ಲಕ್ಷಕ್ಕೂ ಹೆಚ್ಚಿನ ನಗದು ವರ್ಗಾವಣೆಯನ್ನು ನಿಷೇಧಿಸಿ ಎಂದು ಸಲಹೆ ನೀಡಿದೆ. 2014 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ.ಬಿ ಶಾ ಅವರು ಈ ಸಮಿತಿ ರಚಿಸಿದ್ದು, ಇದು ವಿಶೇಷ ತನಿಖಾ ಸಮಿತಿಯ ಐದನೇ ವರದಿಯಾಗಿದೆ. ಈ ಸಲಹೆಗಳಿಗೆ ಸರ್ಕಾರ ಒಪ್ಪಿಗೆ ಸಿಕ್ಕರೆ ಮುಂದಿನ ದಿನಗಳಲ್ಲಿ ನಡೆಯಲಿರುವ ದೊಡ್ಡ ಪ್ರಮಾಣದ ನಗದು ವರ್ಗಾವಣೆ ಮೇಲೆ ಕಾನೂನಿನ ಕಣ್ಣಿಡಲು ನೆರವಾಗಲಿದ್ದು, ತೆರಿಗೆ ವಂಚನೆಯನ್ನು ತಡೆಯಬಹುದಾಗಿದೆ ಎಂದು ಹೇಳಲಾಗಿದೆ.
  • ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಅಂಗವಾಗಿ ಅವರ ಬರಹ ಮತ್ತು ಭಾಷಣಗಳ ಕನ್ನಡ ಅನುವಾದದ 25 ಸಂಪುಟಗಳನ್ನು  ರಾಜ್ಯ ಸರ್ಕಾರ ಹೊರ ತರುತ್ತಿದೆ. ಜು.16ರಂದು ಸಂಜೆ 4 ಗಂಟೆಗೆ ವಿಧಾನಸೌಧ ಬಾಂಕ್ವೆಟ್ ಹಾಲ್‍ನಲ್ಲಿ ಮುಖ್ಯಮಂತ್ರಿ ಉದ್ಘಾಟಿಸಲಿರುವ ಕಾರ್ಯಕ್ರಮದಲ್ಲಿ ಪುಸ್ತಕಗಳು ಬಿಡುಗಡೆಯಾಗಲಿವೆ. ಇದಲ್ಲದೇ ವರ್ಷಾಚರಣೆ ಅಂಗವಾಗಿ ಪ.ಜಾ/ಪ.ಪಂ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ರಾಜ್ಯಾದ್ಯಂತ ಅಂಬೇಡ್ಕರ್ ಕುರಿತ ವಿಚಾರ ಸಂಕಿರಣ, ಸಾಕ್ಷ್ಯಚಿತ್ರ, ಮನೆ ನಿರ್ಮಾಣ, ಮಠಮಾನ್ಯಗಳ ಸಹಯೋಗದೊಂದಿಗೆ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಮಾಜಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ.
  • ಲೋಕಾಯುಕ್ತ ಸಂಸ್ಥೆಯನ್ನು ಭ್ರಷ್ಟಾಚಾರ ಕಳಂಕಕ್ಕೆ ಸಿಲುಕಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿವೃತ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಬಂಧನದ ಭೀತಿಯಿಂದ ವಿದೇಶಕ್ಕೆ ಪಲಾಯನ ಮಾಡಿದ್ದಾರೆನ್ನಲಾಗಿದೆ. ರಾಜ್ಯಪಾಲರು ಎರಡು ದಿನಗಳ ಹಿಂದೆಯಷ್ಟೆ ಭಾಸ್ಕರ್ ರಾವ್ ಅವರ ವಿಚಾರಣೆಗೆ ಹಸಿರು ನಿಶಾನೆ ನೀಡಿದ್ದರು.

Leave a Reply