ಜಾರ್ಜ್ ಕೈಬಿಡದ ಸಿಎಂ, ಇವರಿಬ್ಬರು ವರಿಷ್ಠರ ಸೂಟ್ ಕೇಸ್, ಎಟಿಎಂ ಅಂದ್ರು ಕುಮಾರ್ ಮತ್ತು ಶೆಟ್ಟರ್

BJP State President, B.S.Yediyurappa with members of BJP stage protest on DYSP Ganesh issue at Kengal Hanumanthaiah Statue , Vishan Soudha in Bengaluru on Friday.

ಕೆ.ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರು ವಿಧಾನಸೌಧದ ಎದಿರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್

ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೂ ಸಚಿವ ಜಾರ್ಜ್ ಗೂ ಯಾವುದೇ ಸಂಬಂಥ ಸಂಬಂಧ ಇಲ್ಲ ಅನ್ನೋದು ಸಿಎಂ ಸಿದ್ದರಾಮಯ್ಯ ಸಮರ್ಥನೆ. ಪ್ರತಿತಿಂಗಳೂ ದಿಲ್ಲಿಗೆ ಸೂಟ್ ಕೇಸ್ ಹೊತ್ತೂಯ್ಯವ ಸಿದ್ದರಾಮಯ್ಯ ಮತ್ತು ಜಾರ್ಜ್ ‘ಹಕ್ಕಬುಕ್ಕ’ರಿದ್ದಂತೆ ಎಂಬುದು ಜೆಡಿಎಸ್ ನಾಯಕ ಕುಮಾರಸ್ವಾಮಿ ಲೇವಡಿ. ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಡುವೆ ಜಾರ್ಜ್ ಎಟಿಎಂ ಆಗಿದ್ದಾರೆ ಅನ್ನುವ ಮೂಲಕ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರಿಂದ ಅದಕ್ಕೆ ಅನುಮೋದನೆ.

ಈ ವಾದ-ವಿವಾದ, ಪ್ರತಿಭಟನೆ ನಡುವೆ ಸರಕಾರ ಒಂದಷ್ಟು ವಿಧೇಯಕಗಳನ್ನು ಅಂಗೀಕಾರ ಮಾಡಿಕೊಂಡು ಕಲಾಪವನ್ನು ಸೋಮವಾರಕ್ಕೆ ಮುಂದೂಡಿತು. ಎರಡು ದಿನ ಆಹೋರಾತ್ರಿ ಧರಣಿ ನಡೆಸಿದ್ದ ಪ್ರತಿಪಕ್ಷಗಳ ಸದಸ್ಯರು ಇವತ್ತಿಗೆ ಅದನ್ನು ಕೈಬಿಟ್ಟರು. ಅದರ ಮಧ್ಯೆ, ಸಿಎಂ, ಶೆಟ್ಟರ್, ಕುಮಾರಸ್ವಾಮಿ ಬೆಂಗಳೂರಲ್ಲಿ ಶುಕ್ರವಾರ ಪ್ರತ್ಯೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಸುತ್ತಿದ್ದು ಮತ್ತದೇ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸುತ್ತಲೇ.

ಸಮಾರಂಭವೊಂದರಲ್ಲಿ ಸಿದ್ದರಾಮಯ್ಯನವರು ನೆಚ್ಚಿನ ಸಹೋದ್ಯೋಗಿ ಜಾರ್ಜ್ ಅವರನ್ನು ಸಮರ್ಥಿಸಿಕೊಂಡದ್ದು ಹೀಗಿದೆ:

ಜಾರ್ಜ್ ಗೂ ಗಣಪತಿ ಆತ್ಮಹತ್ಯೆಗೂ ಸಂಬಂಧವೇ ಇಲ್ಲ. ಹೀಗಾಗಿ ಅವರನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಪೂರ್ವಾಗ್ರಹ ಪೀಡಿತ ಪ್ರತಿಪಕ್ಷದವರು ಅವರನ್ನು ಬಲಿಪಶು ಮಾಡುತ್ತಿದ್ದಾರೆ.

99 ಪ್ರಕರಣಗಳಲ್ಲಿ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ. ಆದರೆ ಒಬ್ಬ ನಿರಾಪರಾಧಿಗೆ ಶಿಕ್ಷೆ ಆಗಬಾರದು. ರಾಜ್ಯದ ಆರು ಕೋಟಿ ಜನ ಜಾರ್ಜ್ ರಾಜೀನಾಮೆ ಕೇಳುತ್ತಿದ್ದಾರೆಂಬ ಪ್ರತಿಪಕ್ಷಗಳ ಹೇಳಿಕೆ ಅವರದೇ ಹೊರತು ರಾಜ್ಯದ ಜನರದಲ್ಲ. ಸರ್ಕಾರ ಯಾರ ರಕ್ಷಣೆಗೂ ನಿಂತಿಲ್ಲ. ಆದರೆ, ನಿರಪರಾಧಿಗೆ ಶಿಕ್ಷೆ ಆಗಲು ಬಿಡುವುದಿಲ್ಲ.

ಸಿದ್ದು, ಜಾರ್ಜ್ ಹಕ್ಕಬುಕ್ಕರಿದ್ದಂತೆ; ಕುಮಾರಸ್ವಾಮಿ

ಇದೊಂದು ಸೂಟ್ ಕೇಸ್ ಸರಕಾರ. ಸಿದ್ದರಾಮಯ್ಯ ಮತ್ತು ಜಾರ್ಜ್ ಪ್ರತಿ ತಿಂಗಳು ವಿಶೇಷ ವಿಮಾನದಲ್ಲಿ ದಿಲ್ಲಿಗೆ ಹೋಗಿ ದಿಲ್ಲಿ ವರಿಷ್ಠರಿಗೆ ಕಪ್ಪ ಕೊಟ್ಟು ಬರುತ್ತಾರೆ. ಅವರಿಬ್ಬರು ಹಕ್ಕಬುಕ್ಕರಿದ್ದಂತೆ. ಕರ್ನಾಟಕ ಸಂಪದ್ಭರಿತ ರಾಜ್ಯ. ಇಲ್ಲಿನ ಸಂಪತ್ತು ಲೂಟಿ ಹೊಡೆದು ದಿಲ್ಲಿಗೆ ಮುಟ್ಟಿಸುತ್ತಿದ್ದಾರೆ. .ಹೀಗಾಗಿ ಜಾರ್ಜ್ ರಕ್ಷಣೆಯಲ್ಲಿ ಹೈಕಮಾಂಡ್ ಕೂಡಾ ಭಾಗಿ.

ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತ ಜಂಟಿ ಹೋರಾಟ ಸದನದ ಒಳಕ್ಕೇ ಮಾತ್ರ ಸೀಮಿತ. ಅದನ್ನು ರಾಜಕೀಯ ಲಾಭಕ್ಕೆ ಬಳಸುವುದಿಲ್ಲ. ಡಿವೈಎಸ್ಪಿಗಳಾದ ಕಲ್ಲಪ್ಪ ಹಂಡಿಬಾಗ್ ಹಾಗೂ ಗಣಪತಿ ಆತ್ಮಹತ್ಯೆ ಎರಡೂ ಪ್ರಕರಣ ಗಭೀರವಾದದ್ದೇ. ಈ ವಿಚಾರದಲ್ಲಿ ರಾಜ್ಯದ ಜನರ ಭಾವನೆಗಳಿಗೆ ಅನುಗುಣವಾಗಿ ಸರಕಾರ ವರ್ತಿಸಬೇಕು. ಈ ಬಗ್ಗೆ ರಾಜ್ಯಪಾಲರಿಗೆ ಶೀರ್ಘ ದೂರು ನೀಡಲಾಗುವುದು.

ಸಿದ್ದರಾಮಯ್ಯ ಅವರು ದಲಿತೋದ್ಧಾರಕ ಎಂದು ಜಾಹೀರಾತುಗಳಲ್ಲಿ ಕರೆಸಿಕೊಂಡಿದ್ದಾರೆ. ಆದರೆ ಅವರ ಸ್ವಂತ ಜಿಲ್ಲೆ ಮೈಸೂರಲ್ಲೇ ದಲಿತ ಜಿಲ್ಲಾಧಿಕಾರಿ ಶಿಖಾ ಅವರಿಗೆ ರಕ್ಷಣೆ ಕೊಡಲು ಆಗಲಿಲ್ಲ. ಸಿಎಂ ಅಪ್ತನೇ ಅವರಿಗೆ ದಮಕಿ ಹಾಕಿ, ನಿಂದನೆ ಮಾಡಿದ್ದಾರೆ. ಇದೀಗ ಆ ಸಾಲಿಗೆ ಲ್ಬರ್ಗ ಉಪ ವಿಭಾಗದ ಅಬ್ಕಾರಿ ಅಧೀಕ್ಷಕಿ ಶಶಿಕಲಾ ಸಿದ್ದಪ್ಪ ಒಡೆಯರ್ ಪ್ರಕರಣವೂ ಹೊಸ ಸೇರ್ಪಡೆ. ಕುರುಬ ಸಮುದಾಯದವರೇ ಆದ ಶಶಿಕಲಾ ವರ್ಗಾವಣೆ ವಿಚಾರವನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿರುವ ಜಂಟಿ ಆಯುಕ್ತ ಶ್ರೀನಿವಾಸ್ ಮೂರ್ತಿ ಅವರನ್ನು ಮೈಸೂರಿಗೆ ವರ್ಗ ಮಾಡಿಕೊಂಡು ಸಿಎಂ ರಕ್ಷಿಸಿದ್ದಾರೆ. ಈ ಬಗ್ಗೆ ಸಿಎಂ. ಹೋಮ್ ಮಿನಿಸ್ಟರ್ ಮತ್ತು ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ. ಜಿಲ್ಲಾ ನ್ಯಾಯಾಧೀಶರ ಪತ್ನಿಗೇ ಹೀಗಾದರೆ ಜನಸಾಮಾನ್ಯರ ಕತೆಯೇನು? ನಿಜಕ್ಕೂ ರಾಜೀನಾಮೆ ನೀಡಬೇಕಿರುವುದು ಸಿಎಂ ಸಿದ್ದರಾಮಯ್ಯ ಅವರೇ.

ಗೃಹ ಸಚಿವರ ಸಲಹೆಗಾರ ಕೆಂಪಯ್ಯ ನಿನ್ನೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಶಿಖಾ ಅವರ ಪತಿ ನಾಗಭೂಷಣ್ ಮನೆಗೆ ಏತಕ್ಕೆ ಹೋಗಿದ್ದರು, ರಾಜಿ ಮಾಡಿಸಲು ಅಲ್ಲವೇ ಎಂದು ಪ್ರಶ್ನಿಸಿದರು.

ಜಾರ್ಜಾ ಎಟಿಎಂ ಇದ್ದಂತೆ; ಜಗದೀಶ್ ಶೆಟ್ಟರ್

ಜಾರ್ಜ್ ಅವರು ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವೆ ಎಟಿಎಂ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾರ್ಜ್ ಅವರು ಸಿದ್ದರಾಮಯ್ಯನವರ ಕಿಚನ್ ಕ್ಯಾಬಿನೆಟ್‍ನಲ್ಲಿದ್ದಾರೆ. ಹೀಗಾಗಿ ಅವರನ್ನು ಸಂಪುಟದಿಂದ ಕೈಬಿಡದೆ ಸಿಎಂ ಪ್ರತಿಷ್ಠೆ ಮೆರೆಯುತ್ತಿದ್ದಾರೆ.

1.40 ಲಕ್ಷ ಕೋಟಿ ರುಪಾಯಿ ಬಜೆಟನ್ನು ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸುವ ಹುನ್ನಾರ ಸರಕಾರದ್ದು. ವಾಸ್ತವವಾಗಿ ವಿಧಾನ ಮಂಡಲ ಅಧಿವೇಶನ ನಿಗದಿಯಂತೆ ಜುಲೈ 30 ರವರೆಗೆ ನಡೆಯಬೇಕು. ಆದರೆ ಜಾರ್ಜ್ ರಕ್ಷಣೆ ನಿಮಿತ್ತ ಸದನ ಕಲಾಪ ಬಲಿ ಕೊಡಲಾಗಿದೆ.

ಜಾರ್ಜ್ ರಾಜೀನಾಮೆ ಪಡೆದು, ಎಫ್ಐಆರ್ ದಾಖಲಿಸಿದ್ದರೆ, ಪ್ರಕರಣ ಇತ್ಯರ್ಥ ಆಗುತ್ತಿತ್ತು. ಸಂಪುಟ ಪುನಾರಚನೆ ವೇಳೆ 14 ಮಂದಿಯನ್ನು ಕೈಬಿಟ್ಟರು. ಒಬ್ಬ ಜಾರ್ಜ್ ನನ್ನು ಕೈಬಿಟ್ಟು ತನಿಖೆ ಮುಗಿದ ನಂತರ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲು ಇರುವ ಅಡಚಣೆಯಾದರೂ ಏನು? ಜನಾಭಿಪ್ರಾಯದ ವಿರುದ್ಧ ಹೋಗುತ್ತಿರುವ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ.

ಸೋಮವಾರಕ್ಕೆ ಕಲಾಪ ಮುಂದೂಡಿಕೆ

ಡಿವೈಎಸ್‍ಪಿ ಗಣಪತಿ ಪ್ರಕರಣ ವಿಧಾನ ಮಂಡಲದ ಉಭಯ ಸದನಗಳಲ್ಲಿ ಇವತ್ತೂ ಭಾರೀ ಕೊಲಾಹಲ ಸೃಷ್ಟಿಸಿ, ಯಾವುದೇ ಕಲಾಪ ನಡೆಯದೇ ಸೋಮವಾರಕ್ಕೆ ಮುಂದೂಡಲ್ಪಟ್ಟಿತು.

ಒಂದೊಮ್ಮೆ ಸೋಮವಾರವೂ ಇದೇ ಪರಿಸ್ಥಿತಿ ಮುಂದುವರೆದರೆ 2016-17 ನೇ ಸಾಲಿನ ಬಜೆಟ್ಟಿಗೆ  ಅನುಮೋದನೆ ಪಡೆದು, ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲು ಸರಕಾರ ಸಜ್ಜಾಗಿದೆ.

ಕಳೆದೆರಡು ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಮುಂದುವರಿದ ಭಾಗವಾಗಿ ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಎದುರಿನ ಬಾವಿಗೆ ಬಂದು ಸೇರಿದರು.

ಸರಕಾರ ಮೊಂಡುತನ ಮಾಡುತ್ತಿದೆ. ಜಾರ್ಜ್ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಅದರ ಏಕೈಕ ಅಜೆಂಡಾ ಅದೇ ಆಗಿದೆ ಎಂದು ಜೋರುಧ್ವನಿಯಲ್ಲಿ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಹಾಕಿದರು. ಪ್ರತಿಪಕ್ಷಗಳ ಬೇಡಿಕೆಯನ್ನು ಒಪ್ಪಲು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದ ಪರಿಣಾಮವಾಗಿ ಅವು ನಿರಂತರ ಮುಂದುವರೆದವು. ‘ಫ್ಯಾಸಿಸ್ಟ್ ಸರ್ಕಾರಕ್ಕೆ ಧಿಕ್ಕಾರ, ಹೇಡಿ ಸರ್ಕಾರಕ್ಕೆ ಧಿಕ್ಕಾರ ದಿಕ್ಕಾರ, ಕೊಲೆಗಡುಕ ಸರ್ಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳು ಕೇಳಿಬಂದವು.

ಇದರ ಮಧ್ಯೆಯೇ ಹಲವು ಮಹತ್ವದ ವಿಧೇಯಕಗಳನ್ನು ಮಂಡಿಸಲಾಯಿತು. ಅಯ್ಯಯ್ಯೋ ಅನ್ಯಾಯ, ಅಯ್ಯಯ್ಯೋ ಅನ್ಯಾಯ ಎಂಬ ಘೋಷಣೆಗಳ ನಡುವೆಯೇ ವಿಧೇಯಕಗಳನ್ನು ಅಂಗೀಕರಿಸಲಾಯಿತು.

ಪ್ರತಿಪಕ್ಷಗಳ ಪ್ರತಿಭಟನೆಗೆ ಸರಕಾರ ಕ್ಯಾರೇ ಅನ್ನಲಿಲ್ಲ.

Leave a Reply