ಗಣಪತಿ ಆತ್ಮಹತ್ಯೆಗೆ ಕೌಟುಂಬಿಕ ಅಲ್ಲ ವೃತ್ತಿಒತ್ತಡವೇ ಕಾರಣ, ಆದರೆ ಹೀಗೆನ್ನುತ್ತಿರುವ ಸಿಐಡಿ ಪ್ರಥಮ ಮಾಹಿತಿ ಅಂತಿಮವಾಗುತ್ತಾ?

ಶುಕ್ರವಾರ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಾರ್ಜ್

ಡಿಜಿಟಲ್ ಕನ್ನಡ ಟೀಮ್:

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವೈಯಕ್ತಿಕ, ಕೌಟುಂಬಿಕ ಕಾರಣಗಳಿಂದ ಆಗಿದ್ದು ಎಂಬ ಸರ್ಕಾರದ ಪ್ರತಿಪಾದನೆಗೆ ಸಿಐಡಿ ತನಿಖೆಯ ಪ್ರಾಥಮಿಕ ಮಾಹಿತಿಗಳು ಹಿನ್ನೆಡೆ ಉಂಟುಮಾಡುತ್ತಿವೆಯೇ? ಹೌದೆನ್ನುತ್ತಿವೆ ಮೂಲಗಳು.

ಸಿಒಡಿ ವರದಿಯೇನೂ ಬಂದಿಲ್ಲ, ಮಾಧ್ಯಮಗಳು ಆ ಬಗ್ಗೆ ಮಾತಾಡುತ್ತಿವೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಪಡಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತಾಡುತ್ತ ಹೇಳಿದ್ದಾರೆ. ಅಧಿಕೃತವಾಗಿ ವರದಿ ಸಲ್ಲಿಕೆ ಆಗಿಲ್ಲವಾದರೂ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಒಡಿ ತಂಡಕ್ಕೆ ಯಾವೆಲ್ಲ ವಿವರಗಳು ಸಿಕ್ಕಿವೆ ಹಾಗೂ ಆ ಮೂಲಕ ಮೇಲ್ನೋಟಕ್ಕೆ ಯಾವ ನಿರ್ಧಾರಕ್ಕೆ ಬರಲಾಗಿದೆ ಎಂಬ ಬಗ್ಗೆ ಚರ್ಚೆಗಳಾಗುತ್ತಿವೆ. ತನಿಖಾಧಿಕಾರಿಗಳು ಈ ವಿವರಗಳನ್ನು ತಮ್ಮ ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಬಹಳ ಮುಖ್ಯವಾಗಿ, ‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಕೌಟುಂಬಿಕ ಒತ್ತಡಗಳು ಕಾರಣವಲ್ಲ, ಬದಲಿಗೆ ವೃತ್ತಿ ಸಂಬಂಧದ ಒತ್ತಡಗಳೇ ಕಾರಣ’ ಎಂಬ ತಿರುಳನ್ನು ಹೊತ್ತಿರುವ ವರದಿ, ಗಣಪತಿ ಆತ್ಮಹತ್ಯೆ ನಂತರದ ಪೊಲೀಸ್ ಪ್ರಕ್ರಿಯೆಗಳಲ್ಲಿ ಸಾಕಷ್ಟು ಲೋಪಗಳನ್ನು ಗುರುತಿಸಿದೆ ಎಂದು ಹೇಳಲಾಗುತ್ತಿದೆ. ಅಧಿಕೃತ ವರದಿಯಲ್ಲಿ ಇದು ದೃಢವಾಗಿದ್ದೇ ಆದರೆ, ಸರ್ಕಾರದ ಒಟ್ಟೂ ಪ್ರತಿಪಾದನೆಗೆ ಭಾರಿ ಹೊಡೆತ ನೀಡಲಿದೆ.

ಮೂಲಗಳ ಪ್ರಕಾರ ಪ್ರಾಥಮಿಕ ಮಾಹಿತಿಗಳಲ್ಲಿ ಇನ್ನೂ ಕೆಲ ಅಂಶಗಳು ದಾಖಲಾಗಿವೆ.

ಗಣಪತಿ ಆತ್ಮಹತ್ಯೆಗೆ ಮುನ್ನ ತನ್ನ ಸಹೋದರ ಪೊಲೀಸ್ ಅಧಿಕಾರಿ ತಮ್ಮಯ್ಯ ಅವರಿಗೆ ಎಸ್‍ಎಂಎಸ್ ಮೂಲಕ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ತಮ್ಮನಿಗೆ ಸಂದೇಶ ರವಾನೆ ಮಾಡಿದ ನಂತರ ಸಂಜೆ 5 ಗಂಟೆ ಅಲ್ಲಿನ ಖಾಸಗಿ ಹೋಟೆಲ್‍ನ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮಯ್ಯ ಸಹೋದರನ ಎಸ್‍ಎಂಎಸ್ ವಿಳಂಬವಾಗಿ ನೋಡಿದ್ದು, ನೋಡಿದ ನಂತರ ಕೊಡಗಿನ ನಗರ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಅವರಿಗೆ ಸಂದೇಶ ರವಾನೆ ಮಾಡಿ ಗಣಪತಿ ಮೊಬೈಲ್ ಟವರ್ ಪತ್ತೆ ಹಚ್ಚುವಂತೆ ಸಲಹೆ ಮಾಡುತ್ತಾರೆ. ಮೊಬೈಲ್ ಟವರ್‍ನಲ್ಲಿ ಗಣಪತಿ ನಗರದ ಕೇಂದ್ರಸ್ಥಾನ ಹೋಟೆಲ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬಹಿರಂಗಗೊಳ್ಳುತ್ತದೆ.

ಪ್ರಾಥಮಿಕ ತನಿಖೆ ನಡೆಸಿದ ಸರ್ಕಲ್ ಇನಿಸ್ಪೆಕ್ಟರ್ ಮೇದಪ್ಪ, ಪ್ರಾಥಮಿಕ ತನಿಖೆ ಪ್ರಕ್ರಿಯೆಯಲ್ಲಿ ತಿರುಚುವ ಪ್ರಯತ್ನ ಜತೆಗೆ ಹಲವು ಲೋಪ ದೋಷ ಮಾಡಿದ್ದಾರೆ.

ಗಣಪತಿ ಆತ್ಮಹತ್ಯೆ ಮಾಡಿಕೊಂಡಿರುವುದು 5 ಗಂಟೆಗೆ ತಿಳಿದಿತ್ತಾದರೂ ತಕ್ಷಣವೇ ಅವರ ಪತ್ನಿ ಇಲ್ಲವೇ ಮಕ್ಕಳಿಗೆ ಮೊದಲ ಮಾಹಿತಿ ನೀಡಬೇಕಿತ್ತು.  ಈ ಮಾಹಿತಿ ನೀಡಲಿಲ್ಲ.

ಅದರ ಬದಲಿಗೆ ರಾತ್ರಿ 8 ಗಂಟೆಗೆ ಗಣಪತಿ ಅವರ ತಂದೆ ಕುಶಾಲಪ್ಪ ಅವರಿಗೆ ಮಾಹಿತಿ ನೀಡಿ ಹೋಟೆಲ್‍ಗೆ ಕರೆಸಿ ಪೊಲೀಸರು ತಾವೇ ಬರೆದ ಹೇಳಿಕೆಗೆ ಸಹಿ ಹಾಕಿಸಿಕೊಂಡಿದ್ದಾರೆ. ನಂತರ ಅವರ ಪತ್ನಿ ಮತ್ತು ಪುತ್ರರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ 8 ಗಂಟೆ ವರೆಗೆ ಕೊಠಡಿ ಬಾಗಿಲು ಒಡೆಯುವ ಸಾಹಸಕ್ಕೆ ಕೈ ಹಾಕಲಿಲ್ಲ ಎಂಬೆಲ್ಲ ಉಲ್ಲೇಖಗಳಿರುವ ಮಾಹಿತಿ ಇದೆ.

ಇನ್ನೊಂದೆಡೆ, ಬೆಂಗಳೂರಿನ ಚಂದ್ರಶೇಖರ ಸ್ವಾಮಿಜಿ ಜತೆ ನಡೆಸಿದ ದೂರವಾಣಿ ಸಂಪರ್ಕದಲ್ಲಿ ಡಿವೈಎಸ್ಪಿ ಗಣಪತಿ, ತಮ್ಮ ಭಡ್ತಿಯನ್ನು ತಡೆಹಿಡಿಯುತ್ತಿರುವ ವಿದ್ಯಮಾನದ ಬಗ್ಗೆ ತೋಡಿಕೊಂಡಿದ್ದು ಈಗ ಮಾಧ್ಯಮಗಳ ಮುಂದೆ ಬಂದಿದೆ. ಎರಡು ನಿಮಿಷಗಳ ಧ್ವನಿಮುದ್ರಿಕೆಯಲ್ಲಿ ಗಣಪತಿ- ತಮ್ಮ ಪ್ರಮೋಷನ್ ಪ್ರಸ್ತಾಪ ಡಿಜಿ ಕಚೇರಿಯಲ್ಲೇ ನಿಂತಿದೆ. ಪೊಲೀಸ್ ಅಧಿಕಾರಿ ಎಂ. ಎಂ. ಪ್ರಸಾದ್ ಹಾಗೂ ಜಾರ್ಜ್ ಅವರೇ ಇದಕ್ಕೆ ಅಡ್ಡಿಪಡಿಸುತ್ತಿದ್ದಾರೇನೋ ಎಂಬ ಅನುಮಾನ ಹರಿಯಬಿಟ್ಟಿದ್ದಾರೆ. ತಮ್ಮ ಮೇಲಿನ ಆರೋಪಗಳೆಲ್ಲ ಈಗಿಲ್ಲ. ಆದರೆ ಹೊಸತೇನೋ ಸೃಷ್ಟಿಸುತ್ತಿದ್ದಾರೇನೋ ಎಂಬ ಆತಂಕವನ್ನೂ ಅವರೂ ಹಂಚಿಕೊಂಡಿದ್ದಾರೆ. ಅದೇ ಧ್ವನಿ ಮುದ್ರಿಕೆಯಲ್ಲಿ ತಾವೀಗ ಮಂಗಳೂರಿಗೆ ನ್ಯಾಯಾಲಯ ಕೆಲಸ ಮುಗಿಸಿಕೊಂಡು ಬಂದಿರುವುದಾಗಿ ಹೇಳುತ್ತಾರೆ. ಇದು ಅಕ್ಟೋಬರ್’ನಲ್ಲಿ ರೆಕಾರ್ಡ್ ಆಗಿರುವ ಈ ಆಡಿಯೋದಲ್ಲಿ, ವೃತ್ತಿ ಒತ್ತಡ ಇರುವುದು ಹೌದು ಎಂಬುದು ದೃಢವಾಗುತ್ತಿದೆ.

ಇಲ್ಲಿ ಚಂದ್ರಶೇಖರ ಸ್ವಾಮೀಜಿ ಜತೆಗಿನ ಮಾತುಕತೆಯನ್ನು ಹೀಗೆ ನೋಡಬಹುದು. ಇವರ ಬಳಿ ಅನೇಕ ರಾಜಕಾರಣಿಗಳು ಜ್ಯೋತಿಷ್ಯ ಹಾಗೂ ಧಾರ್ಮಿಕ ಚಟುವಟಿಕೆಗಳ ಮಾರ್ಗದರ್ಶನಕ್ಕೆ ಬರುವುದು ಗೊತ್ತಿರುವ ಸಂಗತಿಯೇ. ಕಾಂಗ್ರೆಸ್ಸಿನ ಪರಮೇಶ್ವರ್ ಸಹ ಇವರಲ್ಲಿ ಹೋಗುವವರ ಪೈಕಿ ಒಬ್ಬರು. ಬಹುಶಃ ಇವರಿಗೆ ತಮ್ಮ ನಿರ್ದೋಷಿತ್ವದ ಬಗ್ಗೆ ಹೇಳಿ ಎಂದು ಚಂದ್ರಶೇಖರ ಸ್ವಾಮೀಜಿ ಬಳಿ ಗಣಪತಿ ವಿನಂತಿಸಿದಂತಿದೆ. ‘ಇದನ್ನೇನೋ ಬೇರೆ ಪಕ್ಷದವರ ಪರ ಅಂತೆಲ್ಲ ತಿಳಿದುಕೊಂಡುಬಿಡ್ತಾರೆ’ ಅಂತೆಲ್ಲ ಚಂದ್ರಶೇಖರ ಸ್ವಾಮೀಜಿ ಬಳಿ ಹೇಳುತ್ತಿರುವುದು ಗಣಪತಿ ಮೇಲಿನ ಒತ್ತಡವನ್ನು ಹೇಳುತ್ತಿದೆ. ಸಾವಿನ ಮುನ್ನ ಡಿವೈಎಸ್ಪಿ ಗಣಪತಿ ಮಾತುಗಳಲ್ಲಿ ಯಾವ ಮೂವರ ಹೆಸರಿತ್ತೋ ಅವರಲ್ಲಿ ಇಬ್ಬರ ಹೆಸರು ಸ್ವಾಮೀಜಿ ಜತೆಗಿನ ಮಾತಲ್ಲೂ ಪ್ರಸ್ತಾಪವಾಗಿರುವುದು ಹಾಗೂ ಅದು ಒತ್ತಡದ ಕುರಿತ ಮಾತುಗಳೇ ಆಗಿರುವುದು ಗಮನಾರ್ಹ.

Leave a Reply