ಸರ್ಕಾರದ ವಿರುದ್ಧ ಜನಾಕ್ರೋಶ, ಸಿನಿಮಾಗಳಲ್ಲಿ ಸಿಗೋದು ಉತ್ಪ್ರೇಕ್ಷೆಯ ಸಹವಾಸ

author-ssreedhra-murthyರಾಜ್ಯದೆಲ್ಲೆಡೆ ಈಗ ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆಯ ಕುರಿತ  ಚರ್ಚೆಗಳು  ನಡೆಯುತ್ತಿದೆ. ಸಚಿವ ಕೆ.ಜೆ.ಜಾರ್ಜ್‍ ಅವರನ್ನು ಉಳಿಸಲು ಸರ್ಕಾರ ನಡೆಸುತ್ತಿರುವ ನಿರ್ಲಜ್ಜ ಪ್ರಯತ್ನಗಳು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿವೆ. ಸೋಷಿಯಲ್ ಮೀಡಿಯಾದಲ್ಲಿ ಅದು ತೀವ್ರವಾಗಿಯೇ ಅಭಿವ್ಯಕ್ತಗೊಳ್ಳುತ್ತಿದೆ. ಆದರೆ ಈ ಕಾವು ಎಷ್ಟು ದಿನ ಉಳಿದು ಕೊಳ್ಳುತ್ತದೆ ಎನ್ನುವುದೊಂದು ಗಂಭೀರ ಪ್ರಶ್ನೆ. ಏಕೆಂದರೆ ಹಿಂದೆ ಕೂಡ ಹೀಗೆ ವ್ಯಕ್ತವಾದ ಸಾರ್ವಜನಿಕ ಆಕ್ರೋಶ ಚದುರಿ ಹೋಗಿದ್ದನ್ನು ನಾವು ನೋಡಿದ್ದೇವೆ. ಅದಕ್ಕೆ ಸಿನಿಮಾ ಕೂಡ ಕಾರಣವಾಗುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗ ಬಹುದು.  ಇಲ್ಲಿ ನಾನು ರಾಜಕೀಯ ಚಿತ್ರ ಎಂದು ಕರೆಯುತ್ತಿರುವುದು ಸೈದ್ಧಾಂತಿಕ ನೆಲೆಗಟ್ಟಿನ ಚಿತ್ರಗಳನ್ನಲ್ಲ. ರಾಜಕಾರಣಿಗಳನ್ನು ಖಳನಾಯಕರಂತೆ ತೋರಿಸುವ ಮನೋರಂಜನಾತ್ಮಕ ಸಿನಿಮಾಗಳನ್ನು. ಪ್ರಾಮಾಣಿಕ ಪೋಲೀಸ್ ಅಧಿಕಾರಿಯನ್ನು ಹಿಂಸಿಸುವ ರಾಜಕಾರಣಿ, ಅವನಿಗೆ ಬೆಂಬಲವಾಗಿ ನಿಲ್ಲುವ ಭ್ರಷ್ಠ ವ್ಯವಸ್ಥೆ ಕೊನೆಗೆ ದಾರಿ ಕಾಣದೆ ರಾಜಕಾರಣಿಯನ್ನು ಕೊಲ್ಲುವ ಪೋಲೀಸ್ ಅಧಿಕಾರಿ. ಇದು ಯಾವ ಸಿನಿಮಾದ ಕಥೆ ಎಂದು ನೆನಪಿಸಿಕೊಳ್ಳಲು ಹೋಗಬೇಡಿ. ಏಕೆಂದರೆ ಎಲ್ಲಾ ಮನೋರಂಜನಾತ್ಮಕ ಸಿನಿಮಾಗಳು ಇರುವುದು ಹೀಗೆಯೇ! ಇಲ್ಲಿ ಹೀರೋ ಪೋಲೀಸ್‍ ಅಲ್ಲದಿದ್ದರೆ ವಕೀಲ, ಶಿಕ್ಷಕ, ರೈತ ಒಟ್ಟಿನಲ್ಲಿ ಪ್ರಾಮಾಣಿಕ.. ಇದರಿಂದ ನಷ್ಟವೇನು ಎನ್ನುವ ಪ್ರಶ್ನೆ ಬರಬಹುದು. ಹೀಗೆ ರಾಜಕಾರಣಿಯನ್ನು ಕೊಲ್ಲುವ ಚಿತ್ರಣ ಪ್ರೇಕ್ಷಕರ ಆಕ್ರೋಶವನ್ನು ತಾತ್ಕಾಲಿಕವಾಗಿ ಶಮನ ಮಾಡಿ ಅವರಿಂದ ಪ್ರತಿಭಟನೆಯ ಶಕ್ತಿಯನ್ನು ಕಸಿದು ಕೊಳ್ಳುತ್ತದೆ. ಯೂರೋಪಿನ ದೇಶಗಳಲ್ಲಿ ಎರಡನೇ ಮಹಾಯುದ್ಧದ ನಂತರ ರಾಜಕೀಯ ನಾಯಕರನ್ನು ಕೊಲ್ಲುವ ಗೊಂಬೆಗಳು ಬರಲಾರಂಭಿಸಿದವು. ಇಂದಿಗೂ ಅದು ಜನಪ್ರಿಯವಾಗಿದ್ದು ಆಧುನಿಕ ಅವಿಷ್ಕಾರಗಳಲ್ಲಿ ಲಭ್ಯವಿದೆ. ಯಾವ ರಾಜಕಾರಣಿಗಳನ್ನು ಬೇಕಾದರೂ ಚಿತ್ರಹಿಂಸೆ ಮಾಡಿ ಕೊಲ್ಲುವ ಆಟ ಇದು. ಹೀಗೆ ತಮ್ಮ ಕೋಪವನ್ನು ತೀರಿಸಿಕೊಂಡ ಜನಸಾಮಾನ್ಯರು ಪ್ರತಿಭಟನೆಯ ದಾರಿಯನ್ನು ಕೈ ಬಿಡುತ್ತಾರೆ. ಇದನ್ನು ಬಲ್ಲ ರಾಜಕಾರಣಿಗಳು ತಾವೇ ಗೊಂಬೆಗಳನ್ನು ಮಾರುಕಟ್ಟೆಗೆ ಬಿಡುತ್ತಾರೆ. ಭಾರತದಲ್ಲಿ ಗೊಂಬೆಗಳು ಬಂದಿಲ್ಲ,  ಸಿನಿಮಾಗಳೇ ಈ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿವೆ.

ಭಾರತದಲ್ಲಿ ಸಿನಿಮಾ ಆರಂಭವಾದಾಗ ನಮ್ಮ ಸ್ವಾತಂತ್ರ್ಯ ಹೋರಾಟದ ನಾಯಕರು ಅದನ್ನು  ಅನುಮಾನದಿಂದ ನೋಡಿದ್ದರು. ‘ಡಾ. ಕೋಟ್ನಿಸ್‍ಕಿ ಅಮರ್ ಕಹಾನಿ’ಯನ್ನು ಜವಹರಲಾಲ್ ನೆಹರೂ ‘ಸ್ವಾತಂತ್ರ್ಯ ಹೋರಾಟವನ್ನು ಹಣ ಮಾಡಿಕೊಳ್ಳಲು ಬಳಸಿದ್ದೀರಿ’ ಎಂದು ಜರದಿದ್ದರು. ಆದರೂ ಆಗಿನ ಸಿನಿಮಾಗಳು ಬ್ರಿಟೀಷರ ಕಣ್ಗಾವಲನ್ನು ಮೀರಿ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ತಂದಿದ್ದವು. ಬಾಬುರಾವ್ ಪೇಯಿಂಟರ್ ಅವರ ‘ಕೀಚಕ’ ಸಿನಿಮಾವನ್ನು ಲೋಕಮಾನ್ಯ ತಿಲಕರೇ ಮೆಚ್ಚಿಕೊಂಡಿದ್ದರು. ಕನ್ನಡದಲ್ಲಿ ಕೂಡ ಆರ್‍.ನಾಗೇಂದ್ರರಾಯರು ‘ವಸಂತ ಸೇನೆ’ಯಲ್ಲಿ ಸ್ವಾತಂತ್ರ್ಯ ಹೋರಾಟದ ಎಳೆಗಳನ್ನು ಜೋಡಿಸಿದ್ದರು. 1947ರಲ್ಲಿ ದೇಶ ವಿಭಜನೆಯಾದಾಗ ಕರ್ನಾಟಕದಲ್ಲಿ ಕೂಡ ಹಿಂದೂ ಮುಸ್ಲಿಂ ಗಲಭೆ ಸಂಭವಿಸಿತು ಆಗ ಆರ್‍.ನಾಗೇಂದ್ರ ರಾಯರು ‘ಮಹಾತ್ಮ ಕಬೀರ್‍’ನಿರ್ಮಿಸಿದರು. ಈ ಚಿತ್ರ ಪ್ರದರ್ಶನಗೊಂಡ ಎಂಟು ಕಡೆ ಹಿಂದೂ-ಮುಸ್ಲಿಂ ಗಲಭೆಗಳು ನಿಂತಿದ್ದಕ್ಕೆ ದಾಖಲೆಗಳಿವೆ. ಚಿತ್ರದುರ್ಗದ ನ್ಯಾಯಾಧೀಶರು ತೀರ್ಪಿನಲ್ಲಿ ಈ ಚಿತ್ರವನ್ನು ಉಲ್ಲೇಖಿಸಿ ‘ಭಾವೈಕ್ಯತೆಗೆ ಇಂತಹ ಚಿತ್ರಗಳು ಬೇಕು’ ಎಂದಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರತಿಭಟನೆ ಎಲ್ಲಾ ಸೃಜನಶೀಲ ರೂಪಗಳಲ್ಲೂ ಮೂಡಿ ಬಂದಂತೆ ಸಿನಿಮಾದಲ್ಲಿಯೂ ಬಂದಿತು. ‘ಕಿಸ್ಸಾ ಕುರ್ಸಿಕಾ’ ‘ಅಂಧಿ’ಚಿತ್ರಗಳು ದಿಟ್ಟ ಪ್ರಯತ್ನಗಳಾಗಿದ್ದವು. ಕನ್ನಡದಲ್ಲಿ ಕೂಡ ಎಂ.ಎಸ್.ಸತ್ಯು ಅವರ ‘ಚಿತೆಗೂ ಚಿಂತೆ’ ಬಂದಿತು. ಮರಾಠಿಯಲ್ಲಿ ಜಬ್ಬಾರ ಪಟೇಲ್‍ರ ‘ಸಿಂಹಾಸನ’ ಮತ್ತು ‘ಸಾಮ್ನ’ ಮಹತ್ವದ ಚಿತ್ರಗಳಾಗಿದ್ದವು.

ಎಪ್ಪತ್ತರ ದಶಕದ ಚಳುವಳಿಯ ಕಾವು ಚದುರಿ ಹೋಗಲು ಜನತಾ ಸರ್ಕಾರದ ವಿಫಲ ಪ್ರಯೋಗ ಕೂಡ ಒಂದು ಕಾರಣವಾಯಿತು. ‘ಅರ್ಧಸತ್ಯ’ ಮೂಲಕ ಯಾವಾಗ ಸಾಂಪ್ರದಾಯಿಕ ಖಳನಾಯಕರ ಬದಲು ಯಾವಾಗ ರಾಜಕಾರಣಿಗಳು ಕಾಣಸಿಕೊಂಡರೋ ಅಲ್ಲಿಂದ ಮುಂದೆ ರಾಜಕೀಯ ಚಿತ್ರಗಳ ಸ್ವರೂಪವೂ ಬದಲಾಯಿತು. ಕನ್ನಡದಲ್ಲಿ ಕೂಡ ‘ಅಂತ’ ಮತ್ತು ಚಕ್ರವ್ಯೂಹ’ ಚಿತ್ರಗಳ ಯಶಸ್ಸು ಹುಸಿ ರಾಜಕೀಯ ಚಿತ್ರಗಳ ಪರಂಪರೆಯನ್ನೇ ಹುಟ್ಟು ಹಾಕಿತು. ಈ ಬೆಳವಣಿಗೆ ತಮಗೆ ಲಾಭದಾಯಕ ಎಂದು ಮೊದಲು ಗುರುತಿಸಿಕೊಂಡವರೇ ಶ್ರೀಮತಿ ಇಂದಿರಾ ಗಾಂಧಿ ‘ಇಂತಹ ಬೆಳವಣಿಗೆ ಐದು ವರ್ಷದ ಮೊದಲಾಗಿದ್ದರೆ ನಾನು ಅಧಿಕಾರ ಕಳೆದುಕೊಳ್ಳುತ್ತಲೇ ಇರಲಿಲ್ಲ’ ಎಂದು ಅವರು ಹೇಳಿದ್ದರು. ಇಂತಹ ಚಿತ್ರಗಳು ಹುಸಿ ಚಿಂತನೆಗಳನ್ನೂ ನಾಯಕರನ್ನೂ ಸೃಷ್ಟಿಸುತ್ತಾ ಜನರ ಯೋಚನೆಯ ದಿಕ್ಕನ್ನು ಯಶಸ್ವಿಯಾಗಿ ತಪ್ಪಿಸಲು ಆರಂಭವಿಸಿದವು. ‘ಸಾಂಗ್ಲಿಯಾನ’ ಅವರ ಒಂದೆರಡು ಜನಪ್ರಿಯ ಕಾರ್ಯಗಳನ್ನೇ ಇಟ್ಟುಕೊಂಡ ಅವರನ್ನು ಅತಿಮಾನವರನ್ನಾಗಿಸಿದ ಸರಣಿ ಚಿತ್ರಗಳೇ ಬಂದವು. ಈ ಜನಪ್ರಿಯತೆಯ ಬೆನ್ನೇರಿ ಸಾಂಗ್ಲಿಯಾನ ಸಂಸತ್ ಸದಸ್ಯರೂ ಆದರು. ಮುಂದೇನಾಯಿತು ಎನ್ನುವುದು ಎಲ್ಲರಿಗೂ ಗೊತ್ತು. ಈಗ ವಿವಾದದ ಕೇಂದ್ರ ಬಿಂದುವಾಗಿರುವ ಕೆಂಪಯ್ಯನವರನ್ನು ಹಾಡಿ ಹೊಗಳಿರುವ ಸಿನಿಮಾ ಕೂಡ ಬಂದಿದೆ. ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳೂ ವೀರಪ್ಪನ್‍ ಬೇಟೆಯಲ್ಲಿ ತೊಡಗಿದ್ದಾಗಲೇ ‘ವೀರಪ್ಪನ್’ಚಿತ್ರಕ್ಕೆ ರಾಜ್ಯಪ್ರಶಸ್ತಿ ಬಂದಿತ್ತು.

ಇಂತಹ ರಾಜಕೀಯ ಚಿತ್ರಗಳು ತಪ್ಪು ಪರಿಕಲ್ಪನೆಗಳನ್ನೂ ಕೂಡ ತೇಲಿ ಬಿಡುತ್ತವೆ. ‘ಮೈ ನೇಮ್ ಇಸ್ ಖಾನ್‍’ಚಿತ್ರ ‘ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ’ ಎನ್ನುವ ಒಂದು ವಾಕ್ಯವನ್ನು ಹಲವು ರೂಪದಲ್ಲಿ ಹೇಳಿತ್ತು, ಆದರೆ ‘ಭಯೋತ್ಪಾದನೆಗೆ  ಮುಸ್ಲಿಂ ಮೂಲಭೂತವಾದ ಕೂಡ ಮುಖ್ಯಕಾರಣ’ ಎನ್ನುವ ಸರಳ ಸತ್ಯವನ್ನು ಮರೆಮಾಚಿತ್ತು. ಭಾರತ-ಪಾಕಿಸ್ತಾನ ಸಂಬಂಧ ಹದಗೆಡಲು, ಕಾಶ್ಮೀರ ವಿವಾದಕ್ಕೆ ರಾಜಕಾರಣಿಗಳೇ ಕಾರಣ ಇಲ್ಲದಿದ್ದರೆ ಚಟಿಕೆ ಹೊಡೆಯುವಷ್ಟು ಸುಲಭವಾಗಿ ಈ ಸಮಸ್ಯೆಯನ್ನು ಪರಿಹರಿಸ ಬಹುದು ಎನ್ನುವ ಚಿಂತನೆ ಹೊತ್ತು ಅನೇಕ ಚಿತ್ರಗಳು ಬಂದಿವೆ. ಇವೆಲ್ಲವೂ ಪಾಕಿಸ್ತಾನದ ಆಕ್ರಮಣಕಾರಿ ಧೋರಣೆಯನ್ನು ಮರೆಮಾಚಿವೆ. ಹುಸಿ ಸೆಕ್ಯೂಲರಿಸಂ ಮಾತನ್ನಾಡಿ ವಾಸ್ತವವನ್ನು ಮರೆಮಾಚಿದ ಸಿನಿಮಾಗಳಿಗೂ ನಮ್ಮಲ್ಲಿ ಕೊರತೆ ಇಲ್ಲ. ಈಗಾಗಲೇ ಗಣಪತಿಯವರ ಸಾವಿನ ಕುರಿತು ಚಿತ್ರ ತೆಗೆಯುವ ಪ್ರಯತ್ನ ಗಾಂಧಿನಗರದಲ್ಲಿ ಆರಂಭವಾಗಿದೆ.  ಕೊನೆಯ ದೃಶ್ಯದಲ್ಲಿ ಗಣಪತಿಯವರು ಜಾರ್ಜ್‍ ಅವರ ತಲೆಗೆ ಗುಂಡಿಕ್ಕುವ ದೃಶ್ಯದಿಂದ ಚಿತ್ರ ಮುಕ್ತಾಯವಾದೀತು!

ಇದನ್ನು ನಾವು ಬಯಸಿದ್ದೇವೆಯೆ?

Leave a Reply