ಆರ್ಬಿಐ ನಿರ್ವಹಣೆ ಬಗ್ಗೆ ಬಿಜೆಪಿಯನ್ನು ಟೀಕಿಸಿದ್ದ ಚಿದಂಬರಂ ಇಬ್ಬಂದಿತನವನ್ನು ಪ್ರಶ್ನಿಸುವಂತಿದೆ ಸುಬ್ಬರಾವ್ ಪುಸ್ತಕ

 

ಡಿಜಿಟಲ್ ಕನ್ನಡ ಟೀಮ್:

‘ರಾಜನ್ ಅವರಂಥ ಅರ್ಹರನ್ನು ಹೊಂದುವುದಕ್ಕೆ ಮೋದಿ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಬಿಡಿ’ ಅಂತ ಪ್ರತಿಕ್ರಿಯಿಸಿದ್ದರು ಮಾಜಿ ವಿತ್ತ ಸಚಿವ ಪಿ. ಚಿದಂಬರಂ. ರಘುರಾಮ ರಾಜನ್ ಅವರನ್ನು ಕೇಂದ್ರ ಸರ್ಕಾರ ಎರಡನೇ ಅವಧಿಗೇನೂ ಮುಂದುವರಿಸುವುದಿಲ್ಲ ಎಂಬ ಚಿತ್ರಣ ಸಿಗುತ್ತಿದ್ದ ಸಂದರ್ಭದಲ್ಲಿ, ಇತ್ತ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿಯವರು ರಾಜನ್ ಮೇಲೆ ವಾಗ್ದಾಳಿ ತೀವ್ರಗೊಳಿಸಿದ್ದಾಗ ಚಿದಂಬರಂ ನೀಡಿದ್ದ ಹೇಳಿಕೆ ಇದು. ರಾಜನ್ ಪ್ರಶಂಸೆ ಹಾಗೂ ಕೇಂದ್ರವು ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಟೀಕೆ ಎರಡನ್ನೂ ಅಭಿವ್ಯಕ್ತಿಸಿದ ಹೇಳಿಕೆ ಇದು.

ವಾಸ್ತವವಾಗಿ, ಕೇಂದ್ರ ಮತ್ತು ಆರ್ಬಿಐ ನಡುವೆ ಇದ್ದ ಜಟಾಪಟಿ ರೆಪೊ ರೇಟ್ ಕಡಿತದ ಬಗ್ಗೆ ಹಾಗೂ ಸ್ವಾಯತ್ತತೆ ಬಗ್ಗೆ ಆರ್ಬಿಐ ಹೊಂದಿದ್ದ ದೃಢ ನಿಲುವಿನಿಂದ. ರಾಜನ್ ವರ್ಸಸ್ ಕೇಂದ್ರ ಎಂಬಂಥ ಚಿತ್ರಣ ರೂಪುಗೊಳ್ಳುವುದಕ್ಕೆ ಇವು ಬಿಟ್ಟರೆ ಮತ್ತೇನು ಕಾರಣಗಳು ಇರಲಿಕ್ಕಿಲ್ಲ.

ಆದರೆ…

ಯುಪಿಎ ಅಧಿಕಾರದಲ್ಲಿದ್ದಾಗ ಸಹ, ಅದರಲ್ಲೂ ಪಿ. ಚಿದಂಬರಂ ಅವರು ವಿತ್ತ ಮಂತ್ರಿಯಾಗಿದ್ದಾಗಲೂ ಆರ್ಬಿಐ ಸ್ವಾಯತ್ತತೆಯನ್ನು ಮೀರಿ ತನ್ನದೇ ಮಾತು ನಡೆಸುಕೊಳ್ಳುವುದಕ್ಕೆ ನಿರಂತರ ಪ್ರಯತ್ನಗಳಾಗಿದ್ದವು ಎಂಬುದನ್ನು ಇದೀಗ ಬಿಡುಗಡೆಯಾಗುತ್ತಿರುವ ಹೊಸ ಪುಸ್ತಕ ‘ಹೂ ಮೂವ್ಡ್ ಮೈ ಇಂಟರೆಸ್ಟ್ ರೇಟ್’ ಬಿಚ್ಚಿಟ್ಟಿದೆ. 2008-13ರ ಅವಧಿಗೆ ಆರ್ಬಿಐ ಗವರ್ನರ್ ಆಗಿದ್ದ ದುವ್ವುರಿ ಸುಬ್ಬರಾವ್ ಅವರು ನೆನಪಿನ ಕತೆಯಾಗಿ ಬರೆದುಕೊಂಡಿರುವ ಪುಸ್ತಕ ಇದು. ಇದರ ಕೆಲವು ಭಾಗಗಳು ಅದಾಗಲೇ ರಾಷ್ಟ್ರೀಯ ಸ್ತರದ ಪತ್ರಿಕೆಗಳಲ್ಲಿ ಉಲ್ಲೇಖವಾಗಿವೆ.

ಈ ಆಯ್ದ ಭಾಗಗಳಿಂದ ಸ್ಪಷ್ಟವಾಗುತ್ತಿರುವ ಸಂಗತಿ ಎಂದರೆ ಪಿ. ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಇವರಿಬ್ಬರೂ ತಾವು ವಿತ್ತ ಸಚಿವರಾಗಿದ್ದ ಅವಧಿಗಳಲ್ಲಿ ಆರ್ಬಿಐಗೆ ನೀಡಬೇಕಾದ ಅಧಿಕಾರವ್ಯಾಪ್ತಿ ಹಾಗೂ ಗೌರವಗಳನ್ನು ನೀಡುವುದಕ್ಕೆ ಚೌಕಾಶಿ ಮಾಡಿದವರೇ ಅನ್ನೋದು.

ಸುಬ್ಬರಾವ್ ಹೇಳಿಕೊಂಡಿರುವಂತೆ- ಲಿಕ್ವಿಡಿಟಿ ನಿರ್ವಹಣೆಯ ಅಧಿಕಾರ ಆರ್ಬಿಐಗೇ ಸೇರಬೇಕು, ಆದರೆ 2008ರಲ್ಲಿ ಗವರ್ನರ್ ಸುಬ್ಬರಾವ್ ಅವರ ಅಭಿಪ್ರಾಯವನ್ನು ಕೇಳದೇ ವಿತ್ತ ಸಚಿವ ಚಿದಂಬರಂ ಅವರು ‘ಲಿಕ್ವಿಡಿಟಿ ಮ್ಯಾನೇಜ್ಮೆಂಟ್ ಕಮಿಟಿ’ ಸ್ಥಾಪಿಸಿ ಅದರ ನೇತೃತ್ವವನ್ನು ವಿತ್ತ ಸಚಿವಾಲಯದ ಕಾರ್ಯದರ್ಶಿಗೆ ಕೊಡುತ್ತಾರೆ. ಈ ಬಗ್ಗೆ ತಾವು ನೊಂದುಕೊಂಡಿದ್ದಾಗಿ ಸುಬ್ಬರಾವ್ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, 2013ರಲ್ಲಿ ಚಿದಂಬರಂ ಅವರು ಆರ್ಬಿಐ ಜತೆ ಇರಿಸಬೇಕಾದ ನಗದು ಪ್ರಮಾಣ ಮಿತಿಯನ್ನು ತಗ್ಗಿಸುವಂತೆ ಒತ್ತಡ ತಂದಿದ್ದರು. ಆದರೆ ಆಗ ರುಪಾಯಿ ಒತ್ತಡದಲ್ಲಿದ್ದ ಕಾರಣ ಇದನ್ನು ಸುಬ್ಬರಾವ್ ವಿರೋಧಿಸಿದ್ದರು. 2015ರಲ್ಲಿ ವಿತ್ತ ಸಚಿವ ಚಿದಂಬರಂ ಅವರು ತಮ್ಮ ಅಂಕಣ ಬರಹದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯವನ್ನೂ ಸುಬ್ಬರಾವ್ ಒಪ್ಪಿಲ್ಲ.

‘ಸರ್ಕಾರವು ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವುದಾಗಿ ವಿಶ್ಲೇಷಕರು ಬರೆಯುತ್ತಿದ್ದಾರೆ. ಹಾಗೇನೂ ಇಲ್ಲ. ಹಣಕಾಸಿಗೆ ಸಂಬಂಧಿಸಿದ 10 ಹೇಳಿಕೆಗಳಲ್ಲಿ ನಾವು 8ರಲ್ಲಿ ಸಹಮತವನ್ನೇ ಹೊಂದಿರುತ್ತೇವೆ’ ಎಂದಿದ್ದರು ಚಿದಂಬರಂ.

ತಮ್ಮ ಪುಸ್ತಕದಲ್ಲಿ ಈ ಪ್ರತಿಪಾದನೆ ತಳ್ಳಿಹಾಕಿರುವ ಸುಬ್ಬರಾವ್, ‘ಇವರ ಈ ಲೆಕ್ಕಾಚಾರ ನನ್ನ ಅನುಭವದಲ್ಲಂತೂ ಸರಿ ಹೊಂದುತ್ತಿಲ್ಲ. ನನ್ನ ಗವರ್ನರ್ ಅವಧಿಯ ಉದ್ದಕ್ಕೂ ಸರ್ಕಾರವು ಆರ್ಬಿಐ ನೀತಿಗಳಿಂದಲೇ ನಾವು ಬೆಳವಣಿಗೆ ಸಾಧಿಸಲಾಗುತ್ತಿಲ್ಲ ಎಂಬ ಧೋರಣೆ ಹೊಂದಿತ್ತು’ ಎಂದಿದ್ದಾರೆ. ತಾವು ಸಾಲದ ಬಡ್ಡಿ ದರ ಇಳಿಕೆಗೆ ಒಪ್ಪದಿದ್ದಾಗ ಚಿದಂಬರಂ ಅವರು ಸಾರ್ವಜನಿಕ ಸಭೆಯೊಂದರಲ್ಲೇ ‘ಬೆಳವಣಿಗೆ ಹಾದಿಯನ್ನು ಸರ್ಕಾರವು ಏಕಾಂಗಿಯಾಗಿ ಕ್ರಮಿಸುವುದಕ್ಕೆ ಸಿದ್ಧವಿದೆ’ ಎನ್ನುವ ಮೂಲಕ ಆರ್ಬಿಐ ವಿರುದ್ಧ ಅಸಮಾಧಾನ ಹೊರಹಾಕಿದ್ದನ್ನು ನೆನೆದಿದ್ದಾರೆ ಸುಬ್ಬರಾವ್.

ಪ್ರಣಬ್ ಮುಖರ್ಜಿ ವಿತ್ತ ಸಚಿವರಾಗಿದ್ದಾಗಲೂ ರೆಪೊ ದರ ಇಳಿತವನ್ನೆಲ್ಲ ಗವರ್ನರ್ ಗೂ ಮೊದಲೇ ಘೋಷಿಸಿಬಿಡುವ ಅಸೂಕ್ಷ್ಮತೆ ತೋರಿದ್ದರು ಎಂಬುದನ್ನೂ ಉಲ್ಲೇಖಿಸುವ ಸುಬ್ಬರಾವ್, ತಮ್ಮ ಅವಧಿ ವಿಸ್ತರಣೆಗೆ ಪ್ರಣಬ್ ಮನಸ್ಸು ಮಾಡದಿದ್ದರೂ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಆಸ್ಥೆ ವಹಿಸಿದ್ದರಿಂದ ಅದು ಸಾಧ್ಯವಾಯಿತೆಂದಿದ್ದಾರೆ. ತಮಗೆ ಬೇಕಾದವರನ್ನು ವ್ಯವಸ್ಥೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನಕ್ಕೂ ಅಂದಿನ ಸರ್ಕಾರ ಸಾಥ್ ನೀಡಲಿಲ್ಲ ಅಂತ ಕೆಲ ಉದಾಹರಣೆಗಳನ್ನೂ ಕೊಟ್ಟಿದ್ದಾರೆ.

ಅಲ್ಲಿಗೆ ವಿಷಯ ಸ್ಪಷ್ಟ. ಸರ್ಕಾರಗಳು ಯಾವವೇ ಆದರೂ ಅವಕ್ಕೆ ಸಂಸ್ಥೆಯ ಸ್ವಾಯತ್ತೆ ಮತ್ತು ಮುಖ್ಯಸ್ಥರ ಬಗ್ಗೆ ಅಂಥ ಕಾಳಜಿಗಳೇನೂ ಇಲ್ಲ. ಚಿದಂಬರಂ ಆದರೂ ಅಷ್ಟೆ, ಜೇಟ್ಲಿಯಾದರೂ ಅಷ್ಟೆ. ಬಹುಶಃ ರಘುರಾಮ್ ರಾಜನ್ ಜಾಗತಿಕ ವರ್ಚಸ್ಸಿನ ಮಾಧ್ಯಮ ರಂಗು ಹೊದ್ದಿರುವ ವ್ಯಕ್ತಿಯಾದ್ದರಿಂದ ಅವರೊಂದಿಗಿನ ಸರ್ಕಾರದ ಭಿನ್ನಾಭಿಪ್ರಾಯಗಳು ಆ ಕ್ಷಣಕ್ಕೇ ಹೊರಬಂದವು. ಸುಬ್ಬರಾವ್ ಅಂಥವರು ಸರ್ಕಾರ ಬದಲಾಗುವುದನ್ನು ಕಾದು ಆತ್ಮಚರಿತ್ರೆ ಬರೆದು ವಿಷಯ ತಿಳಿಸುತ್ತಿದ್ದಾರೆ. ಉಳಿದಂತೆ, ಕೇಂದ್ರದಲ್ಲಿರುವ ಯಾರಿಗೇ ಆದರೂ ಸಾಲದ ಚಲಾವಣೆಯಲ್ಲೇ ಬೆಳವಣಿಗೆ ಸೌಧ ಕಟ್ಟುವ ಕನಸು ಖಾಯಂ ಆಗಿರುತ್ತದೆ.

ಇಲ್ಲಿ ಬಿಜೆಪಿ- ಕಾಂಗ್ರೆಸ್ ಭೇದಗಳಿಲ್ಲ!

Leave a Reply