ಸಚಿವ ಜಾರ್ಜ್ ಬೆನ್ನಿಗೆ ರಾಹುಲ್, ಸೋನಿಯಾ, ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಬೇರೆಯವರು ಯಾಕೆ ಬೇಕಯ್ಯಾ..?!

 

ಡಿಜಿಟಲ್ ಕನ್ನಡ ವಿಶೇಷ:

ಮುಗೀತು ಕತೆ.. !

ರಾಜಕೀಯದಲ್ಲಿ ಜಾತಿ ಮತ್ತು ಧರ್ಮ ಈ ಮಟ್ಟಿಗೆ ಕೆಲಸ ಮಾಡಿದರೆ ನ್ಯಾಯ, ನೀತಿ ಉಳಿಯುವುದಾದರೂ ಎಲ್ಲಿಂದ?

ಅದೇನಾಗುತ್ತೋ ಆಗಲಿ, ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ ಕೊಡುವ ಅಗತ್ಯವಿಲ್ಲ ಅಂತಾ ಏಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಮತ್ತು ಕಾಂಗ್ರೆಸ್ ಕುಲತಿಲಕ ರಾಹುಲ್ ಗಾಂಧಿ ಅಭಯ ನೀಡಿದ್ದಾರಂತೆ. ಅಲ್ಲಿಗೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಕತೇನೂ ಮುಗೀತು. ಜತೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಕತೇನೂ..!!

ಪ್ರತಿಪಕ್ಷಗಳು ಗಣಪತಿ ಆತ್ಮಹತ್ಯೆ ಪ್ರಕರಣ ಹಿಡಿದುಕೊಂಡಿರುವುದರ ಹಿಂದೆ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎನ್ನುವುದರ ಜತೆಗೆ ರಾಜಕೀಯ ಲಾಭ ಗಳಿಕೆಯ ಉದ್ದೇಶವೂ ಇರಬಹುದು. ಆದರೆ ಗಣಪತಿ ಆತ್ಮಹತ್ಯೆಗೆ ಮಮ್ಮುಲ ಮರುಗುತ್ತಿರುವ ಕರ್ನಾಟಕದ ಜನರ ಭಾವನೆಗಳ ಹಿಂದೆ ಇರುವುದು ಮಾನವೀಯತೆಯ ತುಡಿತವೇ ಹೊರತು ಮತ್ಯಾವ ಲಾಭ-ಪ್ರಲೋಭಗಳು ಅಲ್ಲ. ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡಂತ ನೋವು, ದುಃಖ ನಾಡಿನ ಬಹುಪಾಲು ಜನರಲ್ಲಿ ಮನೆ ಮಾಡಿದೆ. ಗಣಪತಿ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಆಕ್ರೋಶವಿದೆ. ಅನ್ಯಾಯ ಮಾಡಲು ಟೊಂಕ ಕಟ್ಟಿ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಬಗ್ಗೆ ಅಸಹ್ಯವಿದೆ. ನ್ಯಾಯ ಗೆಲ್ಲಬೇಕೆಂಬ ಹಪಾಹಪಿ ಇದೆ.

ಸಚಿವ ಜಾರ್ಜ್ ರಾಜೀನಾಮೆ, ಗಣಪತಿ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿ ಜನ  ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆ ಬಂದ್ ಗುರುವಾರ ಸಂಪೂರ್ಣ ಯಶಸ್ವಿ ಆಗಿದೆ. ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿವೆ. ಎಲ್ಲಕ್ಕಿಂತ ಮಿಗಿಲಾಗಿ ಗಣಪತಿ ಪತ್ನಿ ಪಾವನಾ ಸಿಬಿಐ ತನಿಖೆಯೇ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಇಂಥ ಹೊತ್ತಿನಲ್ಲಿ ತಾವೊಬ್ಬರು ಮಹಿಳೆಯಾಗಿ ಸೋನಿಯಾ ಗಾಂಧಿ ಅವರು ಗಣಪತಿ ಕುಟುಂಬದವರ ಮೈದಡವುತ್ತಾರೆ, ಅನ್ಯಾಯ ಆಗಲು ಬಿಡುವುದಿಲ್ಲ, ಧೈರ್ಯ ಹೇಳುತ್ತಾರೆಂದು ಬಗೆದಿದ್ದ ಕರ್ನಾಟಕ ಜನರ ಭಾವನೆಗಳಿಗೆ ಕೊಳ್ಳಿ ಇಟ್ಟಿದ್ದಾರೆ. ಸ್ವಧರ್ಮೀಯ ಎನ್ನುವ ಏಕೈಕ ಕಾರಣಕ್ಕೆ ಜಾರ್ಜ್ ಬೆಂಬಲಕ್ಕೆ ನಿಲ್ಲುವ ಮೂಲಕ ಸೋನಿಯಾ ಮತ್ತು ರಾಹುಲ್ ಗಾಂಧಿ ಕರ್ನಾಟಕದ ಮಟ್ಟಿಗೂ ತಮ್ಮ ಪಕ್ಷದ ಬುಡಕ್ಕೆ ತಾವೇ ಬಿಸಿನೀರು ಬಿಡಲು ಹೊರಟ್ಟಿದ್ದಾರೆ.

ಆಶ್ಚರ್ಯದ ಸಂಗತಿ ಎಂದರೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡುವ ಭರದಲ್ಲಿ ಸಿದ್ದರಾಮಯ್ಯನವರು ಜಾರ್ಜ್ ರಕ್ಷಣೆಗೆ ಜಾತಿ ಅಸ್ತ್ರ ಪ್ರಯೋಗ ಮಾಡಿದ್ದರು. ಜಾರ್ಜ್ ಒಬ್ಬ ಅಲ್ಪಸಂಖ್ಯಾತ, ಪ್ರತಿಪಕ್ಷದವರಿಗೆ ಅದರಲ್ಲೂ ಬಿಜೆಪಿಯವರಿಗೆ ಆ ಕಾರಣಕ್ಕಾಗಿಯೇ ಜಾರ್ಜ್ ಮೇಲೆ ದ್ವೇಷ. ರೋಶನ್ ಬೇಗ್, ಖಮರುಲ್ ಇಸ್ಲಾಂ, ಜಾರ್ಜ್ ಮೇಲೆಯೇ ಯಾವಾಗಲೂ ಅವರ ಕಣ್ಣು. ಅವರು ಅಲ್ಪಸಂಖ್ಯಾತ ವಿರೋಧಿಗಳು ಎಂದು ಜರಿದಿದ್ದರು. ಜಾರ್ಜ್ ಕೂಡ ಮುಖ್ಯಮಂತ್ರಿ ಅಸ್ತ್ರವನ್ನೇ ಕವಚ ಮಾಡಿಕೊಂಡಿದ್ದರು. ‘ನಾನು ಜಾರ್ಜ್, ಅವರು ಶೆಟ್ಟರ್. ಹೀಗಾಗಿ ನನ್ನ ಮೇಲೆ ಧರ್ಮ ಕಾರಣದ ದ್ವೇಷ’ ಎಂದು ಗಿಳಿಪಾಠ ಒಪ್ಪಿಸಿದ್ದರು.

ಮೊದಲಿಗೆ ಸಿದ್ದರಾಮಯ್ಯನವರ ಹೇಳಿಕೆ ವಿಚಾರಕ್ಕೆ ಬರುವುದಾದರೆ ರೋಶನ್ ಬೇಗ್ ಅವರನ್ನು ತಡವಾಗಿ ಸಂಪುಟಕ್ಕೆ ಸೇರಿಸಿಕೊಂಡಿದ್ದಾಗಲಿ, ಖಮರುಲ್ ಇಸ್ಲಾಂ ಅವರನ್ನು ಸಂಪುಟದಿಂದ ತೆಗೆದು ಹಾಕಿದ್ದಾಗಲಿ ಸಿದ್ದರಾಮಯ್ಯನವರೇ ಹೊರತು ಪ್ರತಿಪಕ್ಷಗಳಲ್ಲ. ‘ಅಹಿಂದ’ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ನಂತರ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಪಕ್ಕಕ್ಕೆ ಸರಿಸಿ, ಹಿಂದುಳಿದ ವರ್ಗದವರ ಪೈಕಿಯೂ ಬರೀ ಕುರುಬ ಸಮುದಾಯದ ನಾಯಕರಾಗಿ ಉಳಿದುಕೊಂಡಿರುವ ಸಿದ್ದರಾಮಯ್ಯನವರು  ಪ್ರತಿಪಕ್ಷಗಳ ಮೇಲೆ ಜಾತಿ, ಧರ್ಮದ ಗೂಬೆ ಕೂರಿಸುತ್ತಿರುವುದರಲ್ಲಿ ಅಡಗಿರುವುದು ಸಮಯಸಾಧಕ ರಾಜಕಾರಣವೇ ಹೊರತು ಮತ್ತೇನೂ ಅಲ್ಲ.

ಕೇರಳದಿಂದ ಬರಿಗೈಯಲ್ಲಿ ವಲಸೆ ಬಂದು ಇವತ್ತು ಕರ್ನಾಟಕದ ಪ್ರಭಾವಿ ಮಂತ್ರಿ ಆಗಿರುವ ಜಾರ್ಜ್ ಬೆಳವಣಿಗೆ ಹಿಂದೆ ಇರುವುದು ಅವರು ಪ್ರತಿನಿಧಿಸುವ ಸಮುದಾಯ ಮತ್ತು ಧರ್ಮವಾಗಲಿ ಅಲ್ಲ. ಇಡೀ ನಾಡಿನ ಬಳುವಳಿಯಾಗಿ ಅವರು ರಾಜಕೀಯ ಅಧಿಕಾರ ಮತ್ತದು ತಂದ ಅಂತಸ್ತು ಅನುಭವಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬರುವಾಗ, ಮಂತ್ರಿ ಆಗುವಾಗ ಬಳಸದ ಅಲ್ಪಸಂಖ್ಯಾತ ಪಟ್ಟಿಯನ್ನು ಒಬ್ಬ ಪೊಲೀಸ್ ಅಧಿಕಾರಿಯ ಆತ್ಮಹತ್ಯೆಗೆ ಪ್ರೇರಣೆ ಆರೋಪ ಬಂದಾಗ ಗುರಾಣಿಯಾಗಿ ಬಳಸುತ್ತಿರುವುದು ಅಸಹ್ಯದ ಪರಮಾವಧಿಯೇ ಸರಿ.

ಎಲ್ಲಕ್ಕಿಂತ ಮಿಗಿಲಾಗಿ ಇವತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಜಾರ್ಜ್ ನೆರವಿಗೆ ನಿಂತಿರುವುದೂ ಅವರೊಬ್ಬ ಮಹಾತ್ಮ ಗಾಂಧಿ ಎಂದಾಗಲಿ, ಗಡಿನಾಡ ಗಾಂಧಿ ಅಬ್ದುಲ್ ಗಫಾರ್ ಖಾನ್ ಎಂದಾಗಲಿ, ದಕ್ಷಿಣ ಆಫ್ರಿಕಾ ಗಾಂಧಿ ನೆಲ್ಸನ್ ಮಂಡೇಲಾ ಎಂದಾಗಲಿ ಅಲ್ಲ. ಸ್ವಧರ್ಮೀಯರು, ಸ್ವಜಾತಿ ಬಂಧುಗಳು ಎಂಬ ಕಾರಣಕ್ಕೆ. ಸಿದ್ದರಾಮಯ್ಯ ಮತ್ತು ಜಾರ್ಜ್ ಹೇಳಿರುವಂತೆ ಜಾತಿ, ಧರ್ಮ ಕೆಲಸ ಮಾಡುತ್ತಿರುವುದು ಪ್ರತಿಪಕ್ಷಗಳ ಹೋರಾಟದ ಹಿಂದಲ್ಲ. ಬದಲಿಗೆ ಸ್ವತಃ ಜಾರ್ಜ್ ರಕ್ಷಣೆ ಹಿಂದೆ. ತಾವೊಬ್ಬ ಮಹಿಳೆಯಾಗಿ ಸೋನಿಯಾ ಗಾಂಧಿ ಅವರು ಗಣಪತಿ ವಿಧವೆ ಪತ್ನಿ ಪಾವನಾ ಅವರ ಕಣ್ಣೀರು ಒರೆಸಬೇಕಿತ್ತು. ಅವರ ಅಂತರಾಳದ ನೋವಿಗೆ ಸ್ಪಂದಿಸಬೇಕಿತ್ತು. ಆದರೆ ಜಾರ್ಜ್ ಕಣ್ಣಲ್ಲಿರಲಿ, ಅವರ ಕನಸಲ್ಲೂ ಇಣುಕದ ನೀರು ಒರೆಸಲು ನಿಂತಿರುವುದು ದುರಂತವೇ ಸರಿ.

ಇಡೀ ಭಾರತದಲ್ಲಿ ಕಾಂಗ್ರೆಸ್ ಸರಕಾರವಾಗಿ ಉಳಿದುಕೊಂಡಿರುವ ಏಕೈಕ ಬೃಹತ್ ರಾಜ್ಯ ಕರ್ನಾಟಕ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತದ ಮಾತಾಡುತ್ತಿದ್ದಾರೆ. ರಾಜ್ಯ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಕರ್ನಾಟಕದ ಕನಸು ಹೊಸೆಯುತ್ತಿದ್ದಾರೆ. ಆದರೆ ಜಾರ್ಜ್, ಸಿದ್ದರಾಮಯ್ಯ, ಸೋನಿಯಾ, ರಾಹುಲ್ ಗಾಂಧಿ ಅವರು ಈ ಅವಕಾಶವನ್ನು ಬೇರೆಯವರಿಗೆ ಬಿಟ್ಟುಕೊಡುವಂತೆ ಕಾಣಿಸುತ್ತಿಲ್ಲ!

1 COMMENT

  1. ಕನ್ನಡದ ಕಲಿಗಳಿಗೆ, ಕೊಡಗಿನ ವೀರರಿಗೆ ಪರದೇಸಿ ಹೆಣ್ಣೊಂದರ ಸವಾಲೇ……?!!!

    ಹಾ ಧಿಕ್!…..

Leave a Reply