ಫ್ರಾನ್ಸ್ ಮೇಲಿನ ಉಗ್ರದಾಳಿಗೆ 80 ಬಲಿ, ಗುಂಡು-ಬಾಂಬುಗಳಲ್ಲ ಟ್ರಕ್ಕೇ ಉಗ್ರನ ಆಯುಧವಾಯ್ತು!

ಡಿಜಿಟಲ್ ಕನ್ನಡ ಟೀಮ್:

ಫ್ರಾನ್ಸ್ ನ ನೈಸ್ ಎಂಬ ಪ್ರಾಂತ್ಯದ ಸಮುದ್ರ ತೀರದಲ್ಲಿ ‘ರಾಷ್ಟ್ರೀಯ ದಿನಾಚರಣೆ’ಯ ಭಾಗವಾಗಿ ಪಟಾಕಿ ಉತ್ಸವದಲ್ಲಿ ಪಾಲ್ಗೊಂಡಿದ್ದವರ ಮೇಲೆ ಆಗಂತುಕನೊಬ್ಬ ಭಾರಿ ಟ್ರಕ್ ಒಂದನ್ನು ಹರಿಸಿ 80 ಜನರನ್ನು ಕೊಂದಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಯಾವುದೇ ಉಗ್ರಗಾಮಿ ಸಂಘಟನೆಗಳೂ ಈವರೆಗೆ ಇದರ ಹೊಣೆ ಹೊತ್ತಿಲ್ಲವಾದರೂ ಫ್ರಾನ್ಸ್ ಇದನ್ನು ಉಗ್ರಗಾಮಿ ಕೃತ್ಯ ಎಂದೇ ಕರೆದಿದೆ. ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾದ ಟ್ರಕ್ ಚಾಲಕ ಟ್ಯುನೇಷಿಯಾ ಮೂಲದವನು ಎನ್ನಲಾಗಿದೆ. ಟ್ರಕ್’ನಲ್ಲಿ ಶಸ್ತ್ರಗಳೂ ಇದ್ದಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈತನನ್ನು ಹೊಡೆದುರುಳಿಸುವುದಕ್ಕೂ ಮುಂಚೆ ಸುಮಾರು ಎರಡು ಕಿಲೋಮೀಟರ್’ಗಳವರೆಗೆ ಟ್ರಕ್ ಚಲಾಯಿಸಿ ಮಕ್ಕಳೂ ಸೇರಿದಂತೆ 80 ಮಂದಿ ಸಾವಿಗೆ ಕಾರಣನಾದ.

ಎಂಟು ತಿಂಗಳ ಹಿಂದಷ್ಟೆ ಇಸ್ಲಾಮಿಕ್ ಉಗ್ರರು ಪ್ಯಾರಿಸ್ ಮೇಲೆ ದಾಳಿ ಮಾಡಿ, 130 ಮಂದಿ ಸಾವಿಗೆ ಕಾರಣರಾಗಿದ್ದರು. ಆಗ ಅಲ್ಲಿನ ಸರ್ಕಾರ ಕೆಲವು ತಿಂಗಳವರೆಗೆ ಎಲ್ಲರೂ ಜಾಗರೂಕವಾಗಿರಬೇಕಾದ ತುರ್ತು ಅವಧಿಯನ್ನು ಘೋಷಿಸಿತ್ತು. ಅದು ಈ ಜುಲೈ 29ಕ್ಕೆ ಮುಗಿಯುತ್ತಿತ್ತು. ಅಷ್ಟರಲ್ಲಾಗಲೇ ಈ ದಾಳಿ ನಡೆದಿರುವುದರಿಂದ ಇನ್ನೂ 3 ತಿಂಗಳ ಮಟ್ಟಿಗೆ ಈ ಆತಂಕದ ತುರ್ತು ದಿನಗಳ ಗಣನೆಯನ್ನು ಸರ್ಕಾರ ಹೆಚ್ಚಿಸಿದೆ. ಫ್ರಾನ್ಸ್’ನ ರಾಷ್ಟ್ರೀಯ ದಿನವನ್ನೇ ಗುರಿಯಾಗಿರಿಸಿಕೊಂಡು ನಡೆಸಿರುವ ಈ ದಾಳಿ ಸಹ ಉಗ್ರರ ಯೋಜಿತ ಕೃತ್ಯ ಎಂಬುದು ಸ್ಪಷ್ಟ. ಈ ಹಿಂದಿನ ಉಗ್ರದಾಳಿಗಳಿಂದ ಎಚ್ಚೆತ್ತ ಫ್ರಾನ್ಸ್ ಸರ್ಕಾರ ಬಿಗಿ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿಸಿದ್ದು ಸುಳ್ಳಲ್ಲ. ಹಾಗೆಂದೇ, ಶಸ್ತ್ರಸಜ್ಜಿತರಾಗಿ ಜನರ ಮೇಲೆ ಎರಗುವುದಕ್ಕೆ ಸಾಧ್ಯವಾಗದೇ, ಈ ಟ್ರಕ್ ಮಾರ್ಗದ ಉಗ್ರವಾದವನ್ನು ಆರಿಸಿಕೊಂಡಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಫ್ರಾನ್ಸ್ ಮೇಲಿನ ಉಗ್ರಕೃತ್ಯವನ್ನು ಖಂಡಿಸಿದ್ದಾರೆ.

Leave a Reply