ಗುಡ್ ನ್ಯೂಸ್: ಅಂಟಾರ್ಕ್ಟಿಕದ ನೆತ್ತಿಯಲ್ಲಿ ಓಜೋನ್ ರಂಧ್ರ ಕುಗ್ಗುತ್ತಿದೆ, ಬ್ಯಾಡ್ ನ್ಯೂಸ್: ಜ್ವಾಲಾಮುಖಿ ದಾಳಿಮಾಡಿ ರಂಧ್ರ ಹಿಗ್ಗುತ್ತಿದೆ

author-ananthramuನೀವು ಬೆಕ್ಕು, ನಾಯಿ ಮುಂತಾದ ಪ್ರಾಣಿಗಳು ತಮ್ಮ ನಾಲಗೆಯಿಂದ ಅವುಗಳ ಗಾಯದ ಮೇಲೆ ನೆಕ್ಕಿ ನೆಕ್ಕಿ ವಾಸಿಮಾಡಿಕೊಳ್ಳುವುದನ್ನು ಗಮನಿಸಿರಬಹುದು. ಅವುಗಳ ಜೊಲ್ಲಿನಲ್ಲಿ ಬ್ಯಾಕ್ಟೀರಿಯ ಕೊಲ್ಲುವ ಎನ್‍ಜೈಮ್ ಇರುತ್ತದಂತೆ. ಭೂಮಿಗೂ ಇಂಥದೇ ಗುಣವಿದ್ದು, ಗಾಯವಾದ ಭಾಗಗಳನ್ನು ಅದೇ ವಾಸಿಕೊಳ್ಳುತ್ತಿದ್ದರೆ ಮನುಷ್ಯ ಗಾಯಮಾಡುತ್ತಲೇ ಹೋಗುತ್ತಿದ್ದ ಹೇಗಿದ್ದರೂ ಭೂಮಿಗೆ ವಾಸಿಮಾಡಿಕೊಳ್ಳುವ ತಾಕತ್ತು ಇದೆಯಲ್ಲ ಎಂದು. ಕಾಡುಕಡಿದರೆ ಏನಂತೆ? ನೆಲ, ನೀರು, ಗಾಳಿ ಮಾಲಿನ್ಯವಾದರೆ ಏನಂತೆ? ಎಂದು ಇನ್ನಷ್ಟು ಉಡಾಯಿಸುತ್ತ ಉಡಾಫೆಯಿಂದ ಇರುತ್ತಿದ್ದ.

ಜೇಮ್ಸ್ ಲೌಲಾಕ್ ಎಂಬ ಬ್ರಿಟಿಷ್ ವಿಜ್ಞಾನಿ ಮತ್ತು ಪರಿಸರ ಚಿಂತಕನಿಗೆ 1970ರಲ್ಲಿ ಜ್ಞಾನೋದಯವಾಗಿ ಒಂದು ಸಿದ್ಧಾಂತವನ್ನು ಪ್ರತಿಪಾದಿಸಿದ. ಭೂಮಿ ಒಂದು ಜೀವಂತ ದೊಡ್ಡಜೀವಿ. ಅದರಲ್ಲಿ ಸ್ವನಿಯಂತ್ರಣ ವ್ಯವಸ್ಥೆ ಇದೆ. ಅದಕ್ಕೆ ಹಾನಿಯಾದಾಗ ಚೇತರಿಸಿಕೊಳ್ಳುವ ತ್ರಾಣವೂ ಅದಕ್ಕಿದೆ ಎಂದು ವಾದಿಸಿದ. ತನ್ನ ಈ ಆಲೋಚನೆಗೆ ‘ಗೆಯ (ಗಯಾ) ಸಿದ್ಧಾಂತ’ ಎಂದ. ಗ್ರೀಕ್ ಪುರಾಣದಲ್ಲಿ ಹೀಗೆಂದರೆ ಭೂಮಾತೆ ಎಂಬ ಅರ್ಥವಿದೆ. ಕೆಲವು ವಿಜ್ಞಾನಿಗಳನ್ನು ಹೊರತುಪಡಿಸಿ ಉಳಿದವರು ‘ಅದ್ಭುತ ಕಲ್ಪನೆ’ ಎಂದರು, ಆತ 1991ರಲ್ಲಿ ಬರೆದ ‘ಗೆಯ’ ಎನ್ನುವ ಕೃತಿ ಜಗತ್ತಿನಾದ್ಯಂತ ಜನಪ್ರಿಯವಾಯಿತು. 2006ರಲ್ಲಿ ಅವನಿಗೆ ಮತ್ತೊಮ್ಮೆ ಜ್ಞಾನೋದಯವಾಯಿತು. ಈ ಸಲ ‘ರಿವೆಂಜ್ ಆಫ್ ಗೆಯ’ ಎಂಬ ಕೃತಿ ಬರೆದ. ಅದರಲ್ಲಿ ಭೂಮಿಗೆ ತನಗೆ ತಾನೇ ರಿಪೇರಿ ಮಾಡಿಕೊಳ್ಳುವ ಹಂತ ಮೀರಿಹೋಗಿದೆ. ಮನುಷ್ಯನ ಕೈವಾಡ ಮೇಲಾಗಿದೆ ಎಂದು ಬರೆದ. ಈಗ ಜಗತ್ತು ‘ಹೌದು, ಈ ವಾಸ್ತವಕ್ಕೆ ಬಾ’ ಎಂದಿತ್ತು ಜೇಮ್ಸ್ ಲೌಲಾಕ್‍ನನ್ನು.

ಇದರ ಪ್ರತ್ಯಕ್ಷ ದರ್ಶನ ಇಂದಿಗೂ ಅಂಟಾರ್ಕ್ಟಿಕ ಖಂಡದ ನೆತ್ತಿಯ ಮೇಲೆ ನೋಡಬಹುದು. ಜಗತ್ತಿನ 95 ಭಾಗ ಶುದ್ಧ ನೀರನ್ನು ಹಿಮದ ಬಂಡೆಗಳಲ್ಲಿ ಹಿಡಿದಿಟ್ಟಿರುವ ಅಂಟಾರ್ಟಿಕ ಖಂಡ ಸುದ್ದಿಯಾಗಿರುವುದು ಆ ಕಾರಣಕ್ಕಲ್ಲ. ಬದಲು ಅದರ ನೆತ್ತಿಯಲ್ಲಿ ಓಜೋನ್ ಪದರ ತೆಳುವಾಗಿ ಅದರಲ್ಲಿಇಡೀ ಅಮೆರಿಕ ಸಂಯುಕ್ತ ಸಂಸ್ಥಾನ ತೂರಬಹುದಾಗಿತ್ತು ಎಂಬ ವರದಿ ಬಂದಮೇಲೆ. ಇದನ್ನು ಭೂಮಿ ರಿಪೇರಿ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಈ ಓಜೋನ್ ಪದರ ಕ್ಷೀಣಿಸಿದ್ದು ನಾವು ವಾಯುಗೋಳಕ್ಕೆ ಸೇರಿಸಿರುವ ಕ್ಲೋರೋಫ್ಲೂರೋಕಾರ್ಬನ್ (CFC) ಎಂಬ ರಾಸಾಯನಿಕದಿಂದ; ಅದರಲ್ಲಿರುವ ಕ್ಲೋರಿನ್ನಿನಿಂದ ಎಂದು ತಿಳಿಯಿತು.

ಏಕೆ ಓಜೋನ್ ಪದರ ನಾಶವಾಗುತ್ತದೆ? ಏನಿದು ಓಜೋನ್? ಏನಿದರ ಪಾತ್ರ? ಈ ಒಂದೊಂದು ಅಧ್ಯಯನವೂ ಹತ್ತಾರು ಪಿಎಚ್.ಡಿ.ಯನ್ನೇ ಸೃಷ್ಟಿಸಿಯಾವು. ಓಜೋನ್ ಅನಿಲ ರೂಪದ ಅಣು. ಆಕ್ಸಿಜನ್‍ನಲ್ಲಿ ಎರಡು ಪರಮಾಣು ಇರುತ್ತವಾದರೆ, ಇದರಲ್ಲಿ ಮೂರು-ಒಂದರ್ಥದಲ್ಲಿ ಆಕ್ಸಿಜನ್‍ನ ಅಣ್ಣ. ಇದರ ತವರು ಭೂಮಿಯಿಂದ ಮೇಲಕ್ಕೆ 10ರಿಂದ 50 ಕಿಲೋ ಮೀಟರ್ ಮಧ್ಯೆ ಇರುವ ಸ್ತರಗೋಳದಲ್ಲಿ. ಈ ವಲಯದಲ್ಲಿ ಸೂರ್ಯನ ಅತಿನೇರಿಳೆ ಕಿರಣಗಳು ಆಕ್ಸಿಜನ್ ಮೇಲೆ ವರ್ತಿಸಿ ಓಜೋನ್ ಅಣುವನ್ನು ಉತ್ಪಾದಿಸುತ್ತವೆ. ಎಷ್ಟೇ ಉತ್ಪಾದಿಸಿದರೂ ಓಜೋನ್ ಟನ್ನುಗಟ್ಟಲೆ ಉತ್ಪಾದನೆಯಾಗುವುದಿಲ್ಲ. ಗಾಳಿಯಲ್ಲಿ ಒಂದು ಕೋಟಿ ಬೇರೆ ಬೇರೆ ಅಣುಗಳಿವೆಯೆಂದರೆ ಓಜೋನ್‍ನಲ್ಲಿ ಕೋಟಿಗೆ ಮೂರು ಅಣು ಅಷ್ಟೇ. ಬೆಂಗಳೂರಿನ ಒಂದು ಕೋಟಿ ಜನಸಂಖ್ಯೆಯನ್ನು ಮೂರು ಮಂದಿ ನಾಯಕರು ರಕ್ಷಿಸುವಂತೆ, ಓಜೋನ್ ಪದರ ಇಡೀ ಜೀವಿಗೋಳವನ್ನು ಸೂರ್ಯನ ಅತಿನೇರಿಳೆ ಕಿರಣಗಳಿಂದ (200ರಿಂದ 315 ನ್ಯಾನೋ ಮೀಟರ್ ತರಂಗಾಂತರ) ರಕ್ಷಿಸುತ್ತಿದೆ. ಹಾಗೆ ಮಾಡದೆ ಹೋಗಿದ್ದರೆ ಎಂದೋ ಜೀವಿಕುಲ ನಾಶವಾಗುತ್ತಿತ್ತು. ಏಕೆಂದರೆ ಅತಿನೇರಿಳೆ ಕಿರಣ ಚರ್ಮದ ಕ್ಯಾನ್ಸರ್ ತರಬಲ್ಲದು, ಕಣ್ಣಿನ ರೆಟಿನಾವನ್ನು ಹರಿಯಬಲ್ಲದು, ಜೀವಿಗಳ ಕೋಶಗಳ ಡಿ.ಎನ್.ಎ. ಮೇಲೆ ಆಕ್ರಮಣಮಾಡಿ ಕೋಶಗಳು ಬದಲಾಗುವಂತೆ ಮಾಡಬಲ್ಲದು. ಹೀಗಾಗಿಯೇ ಓಜೋನ್ ರೂಪದ ಕೊಡೆ ಭೂಮಿಯನ್ನು ರಕ್ಷಿಸುತ್ತಿದೆ. ಅಂದಹಾಗೆ ಸ್ತರಗೋಳದಲ್ಲಿರುವ ಇಡೀ ಓಜೋನನ್ನು ಅದುಮಿ ಅದುಮಿ ಸಾಗರದ ಮಟ್ಟಕ್ಕೆ ಇಳಿಸಿದರೆ ಎಷ್ಟಾಗುತ್ತದೆ ಗೊತ್ತೆ? ಬರೀ ಮೂರು ಮಿಲಿ ಮೀಟರ್. ಅಂದರೆ ನಮ್ಮ ಒಂದು ರೂಪಾಯಿಯ ಎರಡು ನಾಣ್ಯಗಳನ್ನು ಒಂದರ ಮೇಲೆ ಒಂದನ್ನು ಇಟ್ಟಷ್ಟು ದಪ್ಪ.

ಓಜೋನನ್ನು ನಾಶಪಡಿಸುವುದರಲ್ಲಿ ಕ್ಲೋರೋಫ್ಲೂರೋಕಾರ್ಬನ್ ಪಾತ್ರ ದೊಡ್ಡದು. ಇದರ ಜೊತೆಗೆ ಹ್ಯಾಲಾನ್, ಮೀಥೇನ್ ಕ್ಲೋರೋಫಾರಂ, ಕಾರ್ಬನ್ ಟೆಟ್ರಾಕ್ಲೋರೈಡ್ ಕೂಡ ಓಜೋನ್‍ನ ಶತ್ರು. ಇವು ಬಿಡುಗಡೆಮಾಡುವ ಕ್ಲೋರಿನ್ ಪರಮಾಣು 50ರಿಂದ 100 ವರ್ಷಗಳವರೆಗೆ ಸ್ತರಗೋಳದಲ್ಲಿದ್ದು ಆಕ್ಸಿಜನ್ ಪರಮಾಣುಗಳು ಕೂಡಿಕೊಳ್ಳದಂತೆ ಕತ್ತಿವರಸೆ ಮಾಡುತ್ತಲೇ ಹೋಗುತ್ತವೆ. ಹಾಗೆ ಮಾಡಿದಾಗಲೆಲ್ಲ ಇರುವ ಓಜೋನ್ ಪದರ ತೆಳುವಾಗುತ್ತಲೇ ಹೋಗುತ್ತದೆ, ಕೊಡೆಯಲ್ಲಿ ತೂತುಬಿದ್ದಹಾಗೆ.

ಬ್ರಿಟಿಷ್ ವಿಜ್ಞಾನಿಗಳು 1985ರಲ್ಲಿ ಅಂಟಾರ್ಕ್ಟಿಕ ಖಂಡದ ಸರ್ವೇ ಮಾಡುತ್ತಿದ್ದಾಗ, ವಾಯುಗೋಳದಲ್ಲಿ ಓಜೋನ್ ಪದರ ತೆಳುವಾಗುತ್ತಿದ್ದುದನ್ನು ಕಂಡು ಬೆಚ್ಚಿದ್ದರು. ಏಕೆಂದರೆ ಆ ಹೊತ್ತಿಗೆ ಅದು ಅಮೆರಿಕ ಸಂಯುಕ್ತ ಸಂಸ್ಥಾನ ತೂರಬಹುದಾದಷ್ಟು ದೊಡ್ಡದಾಗಿತ್ತು. ಈ ವರದಿ ಕಂಡು ಜಗತ್ತು ಬೆಚ್ಚಿತು. 1987ರಲ್ಲಿ ಕೆನಡದ ಮಾಂಟ್ರಿಯಲ್‍ನಲ್ಲಿ 197 ದೇಶಗಳು ಸಭೆಸೇರಿ ಕ್ಲೋರಿನ್ ಮೂಲದ ಉತ್ಪನ್ನಗಳನ್ನು ಹಂತಹಂತದಲ್ಲಿ ತಗ್ಗಿಸಬೇಕೆಂದು ನಿರ್ಣಯ ತೆಗೆದುಕೊಂಡಿತು. ಇದು ಫಲಕೊಟ್ಟಿತು. ಜಗತ್ತು ಸಿ.ಎಫ್.ಸಿ. ಉತ್ಪಾದನೆಯ ಪ್ರಮಾಣವನ್ನು ತಗ್ಗಿಸಿತು. ನಿಧಾನ ಗತಿಯಲ್ಲಿ ಓಜೋನ್ ಪದರ ಮುಚ್ಚಿಕೊಳ್ಳಲು ಪ್ರಾರಂಭಿಸಿತು. ತೂತುಕೊಡೆಗೆ ಪ್ಯಾಚ್ ಹಾಕಿದಂತೆ. ಭಾರತ ರಸಗೊಬ್ಬರ ತಯಾರಿಕೆಯಲ್ಲಿ ಪೊಟಾಸಿಯಂ ಕ್ಲೋರೈಡ್ ಬಳಸುತ್ತಿತ್ತು. ‘ಟೈಂ ಕೊಡಿ ಪ್ಲೀಸ್’ ಎಂದು ಗೋಗರೆಯಿತು. ಈಗ ಭಾರತವೂ ಓಜೋನ್ ನಾಶಕ ಪದಾರ್ಥಗಳ ಉತ್ಪಾದನೆಯನ್ನು ತಗ್ಗಿಸಿದೆ. ಬಹುಶಃ ಈ ಜಾಗತಿಕ ನಿರ್ಣಯ ಬಹುದೊಡ್ಡ ಪರಿಣಾಮ ಬೀರಿತು. ಆದರೆ ಇಂದಿಗೂ ಕಾರ್ಬನ್ ಡೈ ಆಕ್ಸೈಡ್ ವಿಚಾರದಲ್ಲಿ ಈ ಮಾತನ್ನು ಹೇಳುವ ಧೈರ್ಯವಿಲ್ಲ. ಓಜೋನ್ ರಂಧ್ರ ಎಷ್ಟು ಕಡಿಮೆಯಾಯಿತೆಂದರೆ ಈಗ ಭಾರತ ಉಪಖಂಡ ತೂರಬಹುದಾದಷ್ಟು ಗಾತ್ರಕ್ಕೆ ಇಳಿಯಿತು.

ಧ್ರುವದಲ್ಲೇ ಏಕೆ ಓಜೋನ್ ಪದರ ತೆಳುವಾಗುತ್ತಿದೆ? ವಾಸ್ತವವಾಗಿ ಉತ್ತರ ಮತ್ತು ದಕ್ಷಿಣ ಧ್ರುವ ಎರಡರಲ್ಲೂ ಈ ಪ್ರಕ್ರಿಯೆ ಕಂಡುಬರುತ್ತಿದೆ. ಧ್ರುವಪ್ರದೇಶಗಳಲ್ಲಿ ಮಂಜಿನ ಕಣಗಳು ಮೋಡದಂತೆ ಸ್ತರಗೋಳದಲ್ಲಿ ಎದ್ದು ಕ್ಲೋರಿನ್ ಪರಮಾಣುಗಳನ್ನು ಬಂಧಿಸುತ್ತವೆ. ವಸಂತ ಕಾಲದಲ್ಲಿ ಸೂರ್ಯ ಕಿರಣಗಳು ತೂರಿ ಅವನ್ನು ಮತ್ತೆ ಬಿಡುಗಡೆ ಮಾಡುತ್ತವೆ. ಉಷ್ಣವಲಯಗಳಲ್ಲಿ ಇಂಥ ವಾತಾವರಣ ಇರುವುದಿಲ್ಲ. ಅಂತೂ ಅಂಟಾರ್ಕ್ಟಿಕದ ನೆತ್ತಿಯಲ್ಲಿ ಓಜೋನ್ ರಂಧ್ರ ಮುಚ್ಚಿಕೊಳ್ಳುತ್ತಿದೆ ಎಂದು ಖುಷಿಯಲ್ಲಿದ್ದಾಗ ಕಳೆದ ವರ್ಷ ಚಿಲಿ ದೇಶದ ಕಾಲ್‍ಬುಕೋ ಎಂಬ ಜ್ವಾಲಾಮುಖಿ ಕೆರಳಿ ಅದರ ಹೊಟ್ಟೆಯಿಂದ 4,00,000 ಟನ್ನು ಸಲ್ಫರ್ ಡೈ ಆಕ್ಸೈಡನ್ನು ಕಕ್ಕಿತು. ಇದು ಮಾಡುವ ದಾಂಧಲೆ ವಿಜ್ಞಾನಿಗಳಿಗೆ ಚೆನ್ನಾಗಿ ಗೊತ್ತು. ಸೀದಾ ಸ್ತರಗೋಳಕ್ಕೆ ಲಗ್ಗೆಹಾಕಿ, ನೀರಿನ ಬಾಷ್ಪದೊಂದಿಗೆ ವರ್ತಿಸಿ ಸಲ್ಫರ್ ತುಂತುರನ್ನು ಸೃಷ್ಟಿಮಾಡುತ್ತದೆ. ಯಾವ ಯಾವ ರಾಸಾಯನಿಕ ಓಜೋನ್ ಮೇಲೆ ದಾಳಿಮಾಡುತ್ತವೋ ಅವಕ್ಕೆ ಇದು ಮಣೆಹಾಕುತ್ತದೆ. ಇವುಗಳ ಮೇಲೆ ಆ ರಾಸಾಯನಿಕಗಳು ಸವಾರಿಮಾಡಿ ಓಜೋನನ್ನು ನಾಶಮಾಡುತ್ತ ಹೋಗುತ್ತದೆ. ಇದರ ಪರಿಣಾಮ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಓಜೋನ್ ಅಳೆದಾಗ ತಿಳಿಯಿತು. ಕುಗ್ಗಿದ್ದ ಓಜೋನ್ ರಂಧ್ರ 25.3 ದಶಲಕ್ಷ ಚ.ಕಿ.ಮೀ.ಗಳಷ್ಟು ವಿಸ್ತರಿಸಿತ್ತು. ನಿಸರ್ಗದ ಸೃಷ್ಟಿ, ಲಯಗಳಿಗೆ ಇದೊಂದು ಉದಾಹರಣೆ. 1991ರಲ್ಲಿ ಫಿಲಿಪೀನ್ಸ್’ನ ಪಿನತುಬೋ ಜ್ಞಾಲಾಮುಖಿ ಕೆರಳಿದಾಗಲೂ ಅದು ಓಜೋನ್ ಪದರದ ಮೇಲೆ ದಾಳಿಮಾಡಿತ್ತು. ವಾಸ್ತವದಲ್ಲಿ ಯಾವ ಜ್ವಾಲಾಮುಖಿ ಕೆರಳದೆ, ಕ್ಲೋರಿನ್ ಇರುವ ಪದಾರ್ಥಗಳ ಉತ್ಪನ್ನ ಈಗಿನಂತೆಯೇ ಕಡಿತಗೊಳಿಸಿದರೆ ಈಗ ಆಗಿರುವ ಓಜೋನ್ ರಂಧ್ರ ಪೂರ್ತಿ ಮುಚ್ಚಿಕೊಳ್ಳಲು 2050ರವರೆಗೆ ಕಾಯಬೇಕು.

OZONE 5

Leave a Reply