ಮಕ್ಕಳಿಗೆ ಹಾಲಿನ ಜತೆ ಕೋಳಿಮೊಟ್ಟೆ, ಬಿಜೆಪಿ-ಜೆಡಿಎಸ್ ಅವಧಿಯಲ್ಲೇ ಹೆಚ್ಚಿನ ಪೊಲೀಸ್ ಆತ್ಮಹತ್ಯೆ… ಮಾಧ್ಯಮ ಸಂವಾದದಲ್ಲಿ ಮುಖ್ಯಮಂತ್ರಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ವಿಕಾಸಸೌಧದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಡೆದ ಮಾಧ್ಯಮ ಸಂವಾದದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದ ಪತ್ರಕರ್ತರು ಭಾಗವಹಿಸಿ ಪ್ರಶ್ನೆಗಳ ಮಳೆಗರೆದರು. ಈ ಪ್ರಶ್ನೋತ್ತರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿರುವ ಮುಖ್ಯ ಅಂಶಗಳು ಇವು.

– ಹಾಲಿನ ಪ್ರತಿ ಲೀಟರಿಗೆ ಸರ್ಕಾರ ನೀಡುವ 4 ರೂ. ಪ್ರೋತ್ಸಾಹ ಧನದಲ್ಲಿ ಕಡಿತ ಮಾಡುವುದಿಲ್ಲ. ಆದರ ಕೆಲವು ಹಾಲು ಒಕ್ಕೂಟಗಳು ರೈತರಿಗೆ ನಿದಗಿಪಡಿಸಿದ ಹಣ ನೀಡುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ.

– ಪೌಷ್ಟಿಕಾಂಶ ಹೆಚ್ಚಿಸುವುದಕ್ಕೆ ಗ್ರಾಮೀಣ ಶಾಲಾ ಮಕ್ಕಳಿಗೆ ವಾರಕ್ಕೆ ಮೂರು ದಿನ ನೀಡುತ್ತಿದ್ದ ಹಾಲಿನ ಯೋಜನೆಯನ್ನು ಐದು ದಿನಕ್ಕೆ ವಿಸ್ತರಿಸುವ ಯೋಚನೆ. ಹಾಲಿನ ಜೊತೆಗೆ ಕೋಳಿ ಮೊಟ್ಟೆಯನ್ನೂ ನೀಡುವ ಘೋಷಣೆ.

– ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಕಾನೂನು ರೂಪಿಸಲಾಗುತ್ತಿದ್ದು, ಸದ್ಯದಲ್ಲೇ ಹೊಸ ನೀತಿ ಪ್ರಕಟ.

-ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಜಾತಿ ಜನಾಂಗದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದಲೇ ಪ್ರತಿ ಹೋಬಳಿ ಕೇಂದ್ರದಲ್ಲೂ ಪ್ರಸಕ್ತ ವರ್ಷದಿಂದಲೇ ವಸತಿ ನಿಲಯಗಳ ಆರಂಭ.

– ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಹಮ್ಮಿಕೊಂಡಿರುವ ಎತ್ತಿನಹೊಳೆ ಯೋಜನೆಯಲ್ಲಿ ಯಾವುದೇ ಗೊಂದಲವಿಲ್ಲ. ನೇತ್ರಾವತಿ ನದಿಯಿಂದ ಮಳೆಗಾಲದಲ್ಲಿ 24 ಟಿಎಂಸಿ ನೀರು ತಂದು ಈ ಜಿಲ್ಲೆಗಳ ಕೆರೆಗಳಿಗೆ ತುಂಬಲಾಗುವುದು. ಕುಡಿಯುವ ನೀರಿಗಷ್ಟೇ ಬಳಕೆ.

-ನಷ್ಟದಲ್ಲಿರುವ ಭದ್ರಾವತಿ ಕಾಗದ ಕಾರ್ಖಾನೆ ಪುನಶ್ಚೇತನ ಅಸಾಧ್ಯ. ಅಲ್ಲಿನ ನೌಕರರಿಗೆ ಸ್ವಯಂ ನಿವೃತ್ತಿ ಕಲ್ಪಿಸಿ, ಆರ್ಥಿಕ ಸಹಾಯ.

– ಕಾಂಗ್ರೆಸ್ ಸರ್ಕಾರದ ಈಗಿನ ಅವಧಿಗೆ ಹೋಲಿಸಿದರೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಆಡಳಿತಾವಧಿಯಲ್ಲೇ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಾಗಲಿ, ಪೊಲೀಸರಿರಲಿ, ಅಥವಾ ಯಾರೇ ಆಗಿರಲಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಸರ್ಕಾರ ಯಾರಿಗೂ ಕಿರುಕುಳ ನೀಡುವುದಿಲ್ಲ. ಯಾರಿದಂಲಾದರೂ ಕಿರುಕುಳವುಂಟಾದರೆ, ಅದನ್ನು ಹಿರಿಯರ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು. ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ.

– ಕಾಡಾನೆಗಳು ನಾಡಿಗೆ ಬರುವುದನ್ನು ತಪ್ಪಿಸಲು ಕಾಡಿನಲ್ಲೇ ಅವುಗಳಿಗೆ ಮೇವು, ನೀರು ದೊರೆಯುವಂತೆ ನೋಡಿಕೊಳ್ಳಲಾಗುವುದು. ಅರಣ್ಯ ಗಡಿಯ ಗ್ರಾಮಗಳಿಗೆ ರಕ್ಷಣೆ ನೀಡಲು ಅಗತ್ಯವಿರುವಡೆ ರೈಲ್ವೆ ಕಂಬಿಗಳ ಮೂಲಕ ತಡೆಗೋಡೆಗಳನ್ನು ನಿರ್ಮಿಸುವ ಕಾರ್ಯ ನಡೆದಿದೆ.

– ಚಾಮುಂಡಿ ಬೆಟ್ಟದಲ್ಲಿ ವಾಣಿಜ್ಯ ಮಳಿಗೆ ಮತ್ತು ಬಸ್ ನಿಲ್ದಾಣಗಳಿಗೆ ಕಾಮಗಾರಿ ಕೈಗೊಳ್ಳಲಾಗುವುದು. ಮರಗಳನ್ನು ಕಡಿದು ಹೊಸ ರಸ್ತೆ ನಿರ್ಮಾಣವೆಂಬ ಆತಂಕ ಬೇಕಿಲ್ಲ.

Leave a Reply