ಪಾಕ್ ಪ್ರೇರಿತ ಕಾಶ್ಮೀರಿ ಮುಸ್ಲಿಮರ ಕಲ್ಲುತೂರಾಟ ತಾರಕಕ್ಕೇರುತ್ತಿದ್ದಂತೆ ಇಲ್ಲಿ ಚಿಗಿತುಕೊಳ್ಳುತ್ತಿದೆ ‘ಮಾನವ ಹಕ್ಕು’ ಹಣೆಪಟ್ಟಿಯ ಇಂಡಸ್ಟ್ರಿ!

ಡಿಜಿಟಲ್ ಕನ್ನಡ ವಿಶೇಷ:

ಭಾರತೀಯ ಪಡೆಗಳು ಉಗ್ರ ಬುರ್ಹನ್ ವಾನಿಯನ್ನು ಕೊಂದಿದ್ದನ್ನು ಪ್ರತಿಭಟಿಸಿ ಜುಲೈ 19ನ್ನು ಕರಾಳ ದಿನವನ್ನಾಗಿ ಆಚರಿಸುವುದಾಗಿ ಪಾಕಿಸ್ತಾನ ಘೋಷಿಸಿದೆ. ಇದಕ್ಕೆ ಭಾರತ ಅಧಿಕೃತವಾಗಿ ಖಂಡನೆ ವ್ಯಕ್ತಪಡಿಸಿ, ‘ಜಮ್ಮು-ಕಾಶ್ಮೀರದಲ್ಲಿ ಏನಾದರೂ ಅದು ಭಾರತದ ಆಂತರಿಕ ವಿಷಯ’ ಎಂದು ಹೇಳಿದೆ.

ಪಾಕಿಸ್ತಾನದ ವಿರುದ್ಧ ಉರಿದುಬೀಳುವುದರಲ್ಲಿ ಯಾವ ಲಾಭವಿಲ್ಲ. ಆದರೆ ಪಾಕಿಸ್ತಾನದ ಧೋರಣೆಯನ್ನೇ ಬಿಂಬಿಸುವ ಅಭಿಪ್ರಾಯ ಬರಹಗಳು, ಕಾಶ್ಮೀರದಲ್ಲಿ ಸರ್ಕಾರವೇ ತನ್ನ ಪ್ರಜೆಗಳನ್ನು ಹತ್ತಿಕ್ಕುತ್ತಿದೆ ಎಂಬ ಮಾತುಗಳು ದೇಶದ ಅಲ್ಲಲ್ಲಿಯೂ ಕೇಳುತ್ತಿವೆ. ಇವರೆಲ್ಲರ ಸಂಖ್ಯೆ ಬೆರಳೆಣಿಕೆಯದ್ದು. ಆದರೆ ಲಾಗಾಯ್ತಿನಿಂದ ಅಭಿವ್ಯಕ್ತಿ ವೇದಿಕೆಗಳನ್ನು ಕಬ್ಜಾ ಮಾಡಿಕೊಂಡಿರುವವರಿವರು. ತೀರ ಬೆಂಗಳೂರಿನಲ್ಲೂ ಕಾಶ್ಮೀರದ ಕಲ್ಲು ತೂರಾಟಗಾರರ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ, ಅವರಿಗೆ ಬೆಂಬಲ ಸೂಚಿಸುವ ಕಾರ್ಯಕ್ರಮಗಳ ಆಯೋಜನೆಗೆ ಪ್ರಯತ್ನ ನಡೆದಿದೆ. ಫೇಸ್ಬುಕ್’ನಲ್ಲಿ ಇಂಥ ಕಾರ್ಯಕ್ರಮಕ್ಕೆ ಆಹ್ವಾನಿಸುವ ಪ್ರಕ್ರಿಯೆಗಳು ತೆರೆದುಕೊಂಡವಾದರೂ, ರಾಷ್ಟ್ರವಾದಿ ಸಂಘಟನೆಗಳು ಇದರ ವಿರುದ್ಧ ಪೊಲೀಸ್ ವ್ಯವಸ್ಥೆಗೆ ಅರ್ಜಿಪತ್ರಗಳನ್ನು ಸಲ್ಲಿಸಿದ ಪರಿಣಾಮ ಇದು ಅಷ್ಟಕ್ಕೇ ನಿಂತಿದೆ. ಮಾನವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸುವ ಕಾರ್ಯಕ್ಕೆ ಮುಂದಾಗಿದ್ದವರು ಯಾರು ಎಂಬುದು ಸ್ಪಷ್ಟವಾಗಿಲ್ಲವಾದರೂ ಮುಂದಿನ ದಿನಗಳಲ್ಲಿಚಿತ್ರಣ ತೆರೆದುಕೊಂಡೀತು.

ಮಾನವ ಹಕ್ಕುಗಳು, ನಾಗರಿಕರ ಮೇಲೆ ಭದ್ರತಾ ಪಡೆ ದಮನ ಎಂಬೆಲ್ಲ ಕೂಗೆಬ್ಬಿಸುತ್ತಿರುವವರು ಹಾಗೂ ಆ ಕೂಗುಗಳಿಂದ ‘ಹಾಗಿದ್ದರೂ ಇರಬಹುದೇನೋ’ ಅಂದುಕೊಳ್ಳುತ್ತಿರುವವರು ಜಮ್ಮು-ಕಾಶ್ಮೀರದ ಕೆಲ ಜಿಲ್ಲೆಗಳು ಹಿಂಸಾಗ್ರಸ್ತವಾಗಿರುವ ಸಮಯದಲ್ಲಿ ಗಮನಿಸಬೇಕಾದ ಕೆಲ ಸಂಗತಿಗಳು ಇವು.

  • ಕತೆಯನ್ನು ಕಲ್ಲು ತೂರಾಟಗಾರರಿಂದ ಆರಂಭಿಸುವುದೇ ಮಾನವ ಹಕ್ಕು ಕಥಾನಕಕ್ಕೆ ಮಾಡುವ ಬಹುದೊಡ್ಡ ಅವಮಾನ. ಕಾಶ್ಮೀರದ ಮಸೀದಿಗಳಿಂದ ಪಂಡಿತರನ್ನೆಲ್ಲ ಕಾಶ್ಮೀರ ಬಿಟ್ಟು ತೊಲಗುವಂತೆ ಹೇಳಿದವರು, ದಿನಕ್ಕೆ ಹತ್ತು ಹೆಣಗಳನ್ನು ಬೀಳಿಸಿ ಲಕ್ಷಾಂತರ ಮಂದಿ ಕಣಿವೆ ತೊರೆಯುವಂತೆ ಮಾಡಿ ಅಲ್ಲಿನ ಜನಸಂಖ್ಯಾ ಸಂರಚನೆಯನ್ನೇ ತಮಗೆ ಬೇಕಾದಂತೆ ಬದಲಿಸಿಕೊಂಡವರಿಗೆ ‘ಮಾನವ ಹಕ್ಕು’ಗಳ ಮಾತಾಡುವ ಅರ್ಹತೆ ಇದೆಯೇ? ಯಾರೋ ನಾಲ್ಕು ಮಂದಿ ಮಾಡಿದ್ದಕ್ಕೆ ಕಾಶ್ಮೀರಿ ಮುಸ್ಲಿಮರೆಲ್ಲ ಉತ್ತರಿಸಬೇಕೇ ಎಂಬ ಮುಗ್ಧ ಪ್ರಶ್ನೆ ಬೇಕಾಗಿಲ್ಲ. ‘ಯಾರೋ ನಾಲ್ಕು ಪ್ರತ್ಯೇಕತಾವಾದಿ’ಗಳಿಂದ ಸಮುದಾಯವೊಂದನ್ನು ಒಕ್ಕಲೆಬ್ಬಿಸಲು ಆಗುವುದಿಲ್ಲ. ಈಗ ಕಾಶ್ಮೀರಿ ಪಂಡಿತರ ಪುನರ್ವಸತಿ, ಸೈನಿಕ ಕಾಲೋನಿಗಳ ಪ್ರಸ್ತಾವಗಳಾಗುತ್ತಿರುವಾಗ ಮತ್ತೆ ಕಲ್ಲುಗಳು ಕೈಗೆ ಬಂದಿವೆ. 1990ರಲ್ಲಾದಂತೆ ಗನ್ನುಗಳನ್ನೇ ಕೈಗೆತ್ತಿಕೊಳ್ಳುತ್ತಿದ್ದರೇನೋ. ಆದರೆ ಜಗತ್ತೇ ಭಯೋತ್ಪಾದನೆ ಬಗ್ಗೆ ಆತಂಕಿತವಾಗಿರುವಾಗ ಹಾಗೆ ಮಾಡಿದರೆ ಪರಿಣಾಮ ಎದುರಿಸುವಷ್ಟು ಶಕ್ತರಲ್ಲ ಎಂಬುದವರಿಗೆ ತಿಳಿದಿದೆ. ಈ ಬುರ್ಹಾನ್ ವನಿ ಸಹ ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ವಸತಿ ನಿಲಯಗಳ ನಿರ್ಮಾಣವನ್ನು ವಿರೋಧಿಸಿದವನೇ.
  • ಬುರ್ಹಾನ್ ಸಾವಿನ ನಂತರ ಕಾಶ್ಮೀರದ ಕಲ್ಲುತೂರಾಟಗಾರರಿಂದ ಶುರುವಾಗಿರುವ ಹಿಂಸೆಗೆ ಭದ್ರತಾ ಪಡೆ ಪ್ರತಿಕ್ರಿಯೆ ಕೊಡಬಾರದು ಎಂಬುದು ವಿತಂಡವಾದ. ಸೀಸದ ಅಂಶ ಹೊಂದಿರುವ ‘ಪೆಲ್ಲೆಟ್ ಗನ್’ ಬಳಸಿದ್ದೇಕೆ ಎಂದೆಲ್ಲ ಮಾನವ ಹಕ್ಕಿನ ಮುಸುಕಿನಲ್ಲಿ ಪ್ರಶ್ನೆಗಳೇಳುತ್ತಿವೆ. ಅಶ್ರುವಾಯುವೋ, ತಳ್ಳಾಟವನ್ನೋ ಮಾಡಿ ಸುಮ್ಮನಾಗಿಸುವುದಕ್ಕೆ ಅವರೇನು ದೆಹಲಿ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಸೇರಿದ ನಾಗರಿಕರೇನು? ನಾಗರಿಕತೆ ಎಂಬುದನ್ನೇ ಹತ್ತಿರಕ್ಕೆ ಬಿಟ್ಟುಕೊಡದ, ಬ್ಯಾಗಲ್ಲಿ ಕಲ್ಲು ತುಂಬಿಸಿಕೊಂಡುಬಂದು ರಕ್ಷಣಾ ಪಡೆಯನ್ನೇ ಗುರಿಯಾಗಿಸಿ ದಾಳಿ ಮಾಡುವ, ಹಿಂಸೆಗೆ ತಾಲೀಮು ಮಾಡಿಕೊಂಡು ಬಂದಿರುವ ಸಮೂಹ. ಆಸ್ಪತ್ರೆಯಲ್ಲಿ ಗಾಯಗೊಂಡು ಬಿದ್ದಿರುವವರನ್ನು ಮಾಧ್ಯಮಗಳಲ್ಲಿ ತೋರಿಸಿ ಅನುಕಂಪ ಗಿಟ್ಟಿಸುವುದಕ್ಕೆ ಪ್ರಯತ್ನಿಸುತ್ತಿರುವವರು ಅವರೇಕೆ ಬೀದಿಯಲ್ಲಿ ಪ್ರತಿಭಟನೆ ನಿರತರಾಗಿದ್ದರು ಎಂಬುದಕ್ಕೆ ಉತ್ತರಿಸಬೇಕಲ್ಲವೇ? ಭದ್ರತಾ ಪಡೆಯ ಯೋಧರು ಮನೆಗಳಿಗೆ ನುಗ್ಗಿ ಘಾಸಿಗೊಳಿಸಿದ್ದರೆ ಅದು ಮಾನವ ಹಕ್ಕು ಉಲ್ಲಂಘನೆ ಸರಿ. ಆದರೆ, ನಾವು ಕಲ್ಲು ತೂರಿಕೊಂಡು ಉಗ್ರ ಪ್ರತಿಭಟನೆ ಮಾಡುತ್ತೇವೆ ಎನ್ನುವವರು ಪ್ರತಿಯಾಗಿ ನಮ್ಮ ಮೇಲೆ ಹೂಮಳೆ ಬೀಳಬೇಕು ಎಂದು ಬಯಸುವುದು ಯಾವ ಸೀಮೆ ನ್ಯಾಯ?

kashmir violence1

  • ಮಾನವ ಹಕ್ಕುಗಳು ಕಲ್ಲು ತೂರಾಟಗಾರರಿಗೆ ಮಾತ್ರ ಎಂದುಕೊಳ್ಳುವುದೇ ಅಮಾನವೀಯ. ಜಮ್ಮು-ಕಾಶ್ಮೀರದವರನ್ನು ಸಂಭಾಳಿಸುವುದಕ್ಕೆ ಪ್ಯಾರಾ ಮಿಲಿಟರಿ, ಮಿಲಿಟರಿ ಬಿಟ್ಟಿರುವುದೇ ತಪ್ಪು ಎಂಬೆಲ್ಲ ವಾದಗಳಿವೆ. ಖಂಡಿತ, ಜಮ್ಮು-ಕಾಶ್ಮೀರ ಉಳಿದೆಲ್ಲ ಭಾರತದ ರಾಜ್ಯಗಳಂತೆ ಇದ್ದಿದ್ದರೆ ಅಲ್ಲಿ ಪೊಲೀಸರೇ ಸಾಕಾಗಿತ್ತು. ಆದರೆ, ಪಾಕಿಸ್ತಾನದೊಂದಿಗೆ ಕೈಜೋಡಿಸಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವ ಅಲ್ಲಿನ ಮುಸ್ಲಿಂ ಪ್ರತಿಭಟನಾಕಾರರು, ಐಎಸ್ ಐಎಸ್ ಬಾವುಟವನ್ನು ಪಟಪಟಿಸುವುದಕ್ಕೆ ಇಲ್ಲದ ಹಿಂಜರಿಕೆ ಇವೆಲ್ಲ ಬೇರೆಡೆ ಕಾಣಲಾಗುತ್ತಿಲ್ಲ. ಅಲ್ಲದೇ, ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಾಗ ಸೇನೆಯ ಸಹಾಯ ಬೇಕು ಉಳಿದ ಸಮಯದಲ್ಲಿ ದ್ವೇಷಿಸುತ್ತೇವೆ ಎಂದರೆ ಯಾವ ತರ್ಕ? ನಮಗೆ ಭಾರತ ಸರ್ಕಾರದ ಯಾವ ಪ್ರಾತಿನಿಧ್ಯ ಕಂಡರೂ ಸಹಿಸೋಕಾಗಲ್ಲ ಎನ್ನುವ ಪ್ರತ್ಯೇಕತಾವಾದಿಗಳು ಪ್ರವಾಹದಲ್ಲಿ ಸಿಕ್ಕಾಗಲೂ ‘ಜೀವ ಬಿಡುತ್ತೇವೆ, ಆದರೆ ನಿಮ್ಮ ಸಹಾಯ ಬೇಡ’ ಎನ್ನಲಿಲ್ಲವೇಕೆ? ಹೀಗೆ ಪ್ರವಾಹದಿಂದ ಎತ್ತಿದವರನ್ನು ಇವರು ಯಾವಮಟ್ಟದಲ್ಲಿ ವೈರಿಯಂತೆ ಕಾಣುತ್ತಿದ್ದಾರೆಂದರೆ, ಮೊನ್ನೆ ಯೋಧನೊಡಗೂಡಿಯೇ ಜೀಪನ್ನು ಜೇಲಂ ನದಿಗೆ ದೂಡಿದ್ದಾರೆ. ಪ್ರವಾಹದಿಂದೆತ್ತಿದವರನ್ನು ನೀರಿಗೆ ದೂಡುವ ಕೃತಘ್ನ ಮಾದರಿ ಕಾಶ್ಮೀರಿ ಮುಸ್ಲಿಮರದ್ದು! ಇಷ್ಟಕ್ಕೂ 3 ಸಾವಿರಕ್ಕೂ ಹೆಚ್ಚು ಗಾಯಾಳುಗಳ ಪಡೆಯಲ್ಲಿ ಒಂದೂವರೆ ಸಾವಿರ ಪೊಲೀಸರು/ಯೋಧರೂ ಗಾಯಗೊಂಡಿದ್ದಾರೆ ಎಂಬುದನ್ನು ಗಮನಿಸಬೇಕಲ್ಲದೇ, ಪೆಲಟ್ ಗನ್’ಗೆ ಸಿಕ್ಕಿ ಘಾಸಿಗೊಂಡ ಕಾಶ್ಮೀರಿ ಯುವಕರನ್ನಷ್ಟೇ ತೋರಿಸುವುದಲ್ಲ.

kashmir-ranga

kashmir-ranga1

kashmir-ranga2

  • ಯಾವುದೇ ಹಿಂಸಾಗ್ರಸ್ತ ಭೂಮಿಯಲ್ಲಿಮುಗ್ಧ ಮಹಿಳೆಯರು ಮಕ್ಕಳಿಗೂ ನೋವುಣ್ಣಬೇಕಾದ ಸ್ಥಿತಿ ಬರುವುದು ಸಹನಿಯವಲ್ಲದ್ದು. ಆದರೆ ಇದನ್ನು ಆಹ್ವಾನಿಸಿಕೊಂಡಿದ್ದು ಕಾಶ್ಮೀರಿ ಮುಸ್ಲಿಮರೇ ಅಲ್ಲವೇ? ರಣರಂಗ ಸೃಷ್ಟಿಸಿದ ಮೇಲೆ, ನಮ್ಮ ಪೈಕಿ ಮಕ್ಕಳಿಗೆ ಮಹಿಳೆಯರಿಗೆ ಏನೂ ಆಗಬಾರದು ಎಂದು ನಿರೀಕ್ಷಿಸಿದರೇನು ಬಂತು. ಜಮ್ಮು-ಕಾಶ್ಮೀರವೇ ಆಜಾದಿ ಬಯಸಿದೆ ಎಂದು ಬಿಂಬಿಸುವವರು ಮರೆಮಾಚುವ ಸತ್ಯವೇನೆಂದರೆ ಕರ್ಫ್ಯೂ ಜಾರಿಯಾಗಿರುವ 10 ಜಿಲ್ಲೆಗಳಷ್ಟೇ ರಾಜ್ಯವಲ್ಲ. ಲಢಾಕ್, ಜಮ್ಮುವಿನ ಬಹುದೊಡ್ಡ ಭಾಗ ಶಾಂತಿಯಿಂದ ಜೀವಿಸುತ್ತಿದೆ. ವಿಸ್ತಾರ- ಜನಸಂಖ್ಯೆಗಳಲ್ಲಿ ಕಾಶ್ಮೀರಕ್ಕಿಂತ ದೊಡ್ಡದಿರುವ ಭಾಗಕ್ಕೆ ಇವರ ಆರ್ಟಿಕಲ್ 370 ದೆಸೆಯಿಂದ ರಾಜಕೀಯ ಪ್ರಾತಿನಿಧ್ಯ, ಅನುದಾನದ ಹಣ ಎಲ್ಲವೂ ಕಡಿಮೆಯೇ. ಹೀಗೆ ತನ್ನ ಕೈ ಮೇಲಾಗಿಸಿಕೊಂಡಿರುವ ಮುಸ್ಲಿಂ ಪಡೆಯ ಪರ ಪ್ರಜಾಪ್ರಭುತ್ವ, ಮಾನವ ಹಕ್ಕು, ಆಜಾದಿ ಕಲ್ಪನೆಗಳಲ್ಲಿ ವಕಾಲತ್ತು ವಹಿಸುವವರ ತಲೆಯಲ್ಲೇನಿದೆ? ಈ ಎಲ್ಲ ಕಲ್ಪನೆಗಳ ವಿರೋಧಿ ಗುಂಪಿದು.

kashmir violence2

  • ಇವತ್ತು ಜಮ್ಮು-ಕಾಶ್ಮೀರವನ್ನು ಚರ್ಚಿಸುತ್ತಿರುವ ರೀತಿಯಲ್ಲೇ ಪಂಜಾಬಿನ ಆಜಾದಿ ವಾದವನ್ನೂ ಭಾರತ ಕೇಳಿಕೊಂಡಿರಬೇಕಿತ್ತು. ಕೆಪಿಎಸ್ ಗಿಲ್ ಎಂಬ ನಿರ್ಭಿಡೆಯ ಮನುಷ್ಯನ ನೇತೃತ್ವದಲ್ಲಿ ಅವತ್ತಿನ ಖಾಲಿಸ್ತಾನ ಉಗ್ರವಾದವನ್ನು ಹತ್ತಿಕ್ಕಲು ಆಗದಿರುತ್ತಿದ್ದರೆ… ಅಲ್ಲೂ ಬಲ ಪ್ರಯೋಗಗಳಾಗಿವೆ, ಉಗ್ರರನ್ನು ಹಣಿಯುವ ನಿಟ್ಟಿನಲ್ಲಿ ಪೊಲೀಸ್ ಮತ್ತು ನಾಗರಿಕರೆಡರ ಕಡೆಯಿಂದಲೂ ಹಲವರು ಬೆಲೆ ತೆರಬೇಕಾಗಿ ಬಂತು. ಆದರೆ ಇವತ್ತು ಪಂಜಾಬಿಗೆ ಬೇರೆ ಬೇರೆ ಸಮಸ್ಯೆಗಳಿದ್ದಿರಬಹುದು, ಆದರೆ ಪಾಕಿಸ್ತಾನ ಪ್ರೇರಿತ ಉಗ್ರವಾದಕ್ಕೆ ಕುಣಿದು ದೇಶದ ಸಾರ್ವಭೌಮತೆ ಪ್ರಶ್ನಿಸುವ ಕೂಟ ಕೊನೆಗೊಂಡಿದೆ.

ಆಸ್ಪತ್ರೆಗೆ ಸೇರುತ್ತಿರುವ ಮಕ್ಕಳು, ಕಾಶ್ಮೀರದ ಮಾಧ್ಯಮಗಳ ಮೇಲೆ ಪ್ರತಿಬಂಧ ಇವೆಲ್ಲ ಒಪ್ಪಲಾಗದ ವಿಷಯಗಳೇ. ಆದರೆ ಈ ಪರಿಸ್ಥಿತಿಯನ್ನು ಸ್ಟೇಟ್ ವರ್ಸಸ್ ಕಾಶ್ಮೀರದ ಮುಗ್ಧರು ಎಂದು ವ್ಯಾಖ್ಯಾನಿಸುವುದರಲ್ಲಿ ದೋಷವಿದೆ. ನಾಗರಿಕ ಸಮಾಜದಲ್ಲಿ ಮಿಲಿಟರಿ ನೆರಳು ಇರಬಾರದು. ಆದರೆ ನಾಗರಿಕತೆ ಬಿಟ್ಟು ನೆಲವನ್ನು ರಣರಂಗವಾಗಿಸಿದವರಿಗೆ ಮಿಲಿಟರಿಯನ್ನು ಪ್ರಶ್ನಿಸುವ ನೈತಿಕತೆ ಇಲ್ಲ. ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ದಮನ ಎಂದು ನಿಮ್ಮ ಬುದ್ಧಿಜೀವಿ ಗೆಳೆಯ ಕತೆ ಹೇಳುವುದಕ್ಕೆ ಬಂದಾಗ ಇವೆಲ್ಲ ತಿಳಿದಿರಲಿ.

Leave a Reply