ಭಾರತೀಯ ಸೇನೆಯ ಹೆಚ್ಚುಗಾರಿಕೆ ಮನದಟ್ಟಾಗುವುದಕ್ಕಾದರೂ ತಿಳಿಯಬೇಕಿದೆ ಟರ್ಕಿಯ ಟುಸ್ಸೆಂದ ಕ್ಷಿಪ್ರಕ್ರಾಂತಿ ವಿವರ

ಚೈತನ್ಯ ಹೆಗಡೆ

ಮಿಲಿಟರಿಯ ಒಂದು ಗುಂಪು ಶುಕ್ರವಾರ ರಾತ್ರಿ ಟರ್ಕಿಯ ಅಂಕಾರಾ ಮತ್ತು ಇಸ್ತಾನಬುಲ್’ಗಳಲ್ಲಿ ಸಂಚಾರವನ್ನೆಲ್ಲ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದಂತೆ ಮಿಲಿಟರಿ ಕ್ಷಿಪ್ರಕ್ರಾಂತಿಯ ಅಧ್ಯಾಯ ತೆರೆದುಕೊಂಡಿತು. ಆ ವೇಳೆಗೆ ಟರ್ಕಿ ಅಧ್ಯಕ್ಷ ಎರ್ದೊಗನ್ ರಾಜಧಾನಿಯಿಂದ ಬಹುದೂರದಲ್ಲಿ ರೆಸಾರ್ಟ್ ಒಂದರಲ್ಲಿ ಪವಡಿಸಿದ್ದರು. ಟರ್ಕಿಯದ್ದು ಪ್ರಧಾನಿಯನ್ನು ಹೊಂದಿರುವ ಸಂಸದೀಯ ವ್ಯವಸ್ಥೆ ಆದರೂ ಅಧ್ಯಕ್ಷನ ಮಾತಿಗೆ ತೂಕ. ಸರಿ, ವಿಷಯ ಗೊತ್ತಾಗುತ್ತಲೇ ಆತ ತನ್ನ ಸ್ಮಾರ್ಟ್’ಫೋನ್ ತೆಗೆದು ಅಂತರ್ಜಾಲದಲ್ಲಿ ತನ್ನ ಜನರಿಗೊಂದು ವಿಡಿಯೋ ಮೆಸೇಜ್ ಕೊಟ್ಟ. ‘ದೇಶದ್ರೋಹಿ ಪಡೆಯನ್ನು ಜನರೇ ಬೀದಿಗಿಳಿದು ಹಿಮ್ಮೆಟ್ಟಿಸಬೇಕು. ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದಿದ್ದಲ್ಲದೇ ಬಂಡಾಯ ಎದ್ದಿರದ ತನಗೆ ನಿಷ್ಠರಾದ ಸೇನೆಯ ಗುಂಪನ್ನೂ ಫೀಲ್ಡಿಗಿಳಿಸಿದ.

ಹೀಗೊಂದು ಪ್ರತಿರೋಧ ಹುಟ್ಟುತ್ತಲೇ, ರಸ್ತೆಗಿಳಿಸಿದ್ದ ತಮ್ಮ ಟ್ಯಾಂಕರ್’ಗಳನ್ನು ಅಲ್ಲಲ್ಲಿಯೇ ಬಿಟ್ಟು ಬಂಡೆದ್ದಿದ್ದ ಯೋಧರು ಕಾಲಿಗೆ ಬುದ್ಧಿ ಹೇಳಿದರು. ಕ್ಷಿಪ್ರಕ್ರಾಂತಿಯೇನೋ ಠುಸ್ಸೆಂದಿತು. ಆದರೆ ಅದಕ್ಕೆ ಟರ್ಕಿ ತೆತ್ತ ಬೆಲೆ ಹತ್ತಿರ ಹತ್ತಿರ 170 ಸಾವುಗಳು, ಒಂದೂವರೆ ಸಾವಿರಕ್ಕೂ ಮಿಕ್ಕಿ ಗಾಯಾಳುಗಳು. ಶನಿವಾರದಂದು ಜಗತ್ತಿನೆದುರು ತೆರೆದುಕೊಂಡ ಈ ಮಿಲಿಟರಿ ಕ್ಷಿಪ್ರಕ್ರಾಂತಿ ಪ್ರಯತ್ನವನ್ನು ಕಂಡು ಕೇಳರಿಯದ್ದು ಎಂಬಂತೇನೂ ಕಣ್ಣರಳಿಸಿ ನೋಡಬೇಕಿಲ್ಲ. ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ಹಿಂಗೆಲ್ಲ ಆವಾಗೀವಾಗ ಕ್ರಾಂತಿ ಮಾಡಿಕೊಂಡಿರುವುದು ಜೀವನ ವಿಧಾನದ ಒಂದು ಭಾಗ ಎಂದರೆ ಅವರನ್ನು ಅಣಕಿಸಿದಂತಾಗುತ್ತದೇನೋ. ಆದರೆ ಅದುವೇ ವಾಸ್ತವ. ಇದೇ ಟರ್ಕಿ ಈ ಹಿಂದೆಯೂ ನಾಲ್ಕು ಕ್ಷಿಪ್ರಕ್ರಾಂತಿ ಅಥವಾ ಮಿಲಿಟರಿ ಬಂಡಾಯಗಳನ್ನು ಕಂಡಿದೆ. ಈಗ ಅಧಿಕಾರದಲ್ಲಿರುವ ಎರ್ದೊಗನ್’ನನ್ನೂ ಪ್ರಜಾಪ್ರಭುತ್ವದ ಆದರ್ಶ ಪ್ರತಿನಿಧಿ ಎಂದೇನೂ ಕಾಣುವಂತಿಲ್ಲ. ಇಸ್ಲಾಮಿಕ್ ಉಗ್ರರಿಗೆ ಹೋಲಿಸಿದರೆ ಇಂಥವರು ಪರವಾಗಿಲ್ಲ ಎಂಬುದು ಬಿಟ್ಟರೆ, ಈತನೇನೂ ಸೆಕ್ಯುಲರ್ ರಾಜಕಾರಣದ ಪ್ರತಿಪಾದಕನೇನಲ್ಲ.

ಸಿರಿಯಾದಲ್ಲಿ ಅಸಾದ್ ಆಡಳಿತ ಕಿತ್ತೊಗೆಯುವುದಕ್ಕೆ ಬಂಡುಕೋರರಿಗೆ ಬೆಂಬಲಿಸಿ, ಇದೀಗ ಅವರು ಐ ಎಸ್ ಐ ಎಸ್ ಎಂಬ ರಣಭೀಕರ ನಾಮಧೇಯದಲ್ಲಿ ಜಿಹಾದಿ ಉಗ್ರರಾಗಿ ಟರ್ಕಿಗೇ ಬಾಂಬಿಕ್ಕುತ್ತಿರುವುದಕ್ಕೆ ಈತನ ಕೊಡುಗೆ ದೊಡ್ಡದೇ. ಈ ಐಎಸ್ ಐಎಸ್ ಕಿರಾತಕರಿಗಿಂತ ತನ್ನ ಗಡಿಯೊಳಗಷ್ಟೇ ಅನಾಚಾರ ಮಾಡಿಕೊಂಡಿದ್ದ ಅಸಾದ್ ಎಂಬ ಸಿರಿಯಾ ಮುಖ್ಯಸ್ಥನೇ ಪರವಾಗಿಲ್ಲ ಎಂಬ ಜ್ಞಾನೋದಯ ಟರ್ಕಿ ಮತ್ತು ಇದರ ಮಿತ್ರ ಅಮೆರಿಕಕ್ಕೆ ಆಗುವಷ್ಟರಲ್ಲಿ ಸಾಕಷ್ಟು ವಿಧ್ವಂಸ ಆಗಿರುವುದಕ್ಕೆ ಜಗತ್ತು ಸಾಕ್ಷಿ.

ಬಹಳ ದೊಡ್ಡ ಜೋಕ್ ಎಂದರೆ, ಈ ಟರ್ಕಿ ಅನ್ನೋದು ಅಮೆರಿಕ ನೇತೃತ್ವದ ‘ನ್ಯಾಟೋ’ ಮಿಲಿಟರಿ ಪಡೆಯ ಭಾಗಿದಾರ. ಅಂದರೆ, ತನ್ನ ಸೇನೆಯಲ್ಲೇ ಯಾರು ತನ್ನವರೆಂದು ಗೊಂದಲದಲ್ಲಿರುವ ಟರ್ಕಿ ಜಗತ್ತಿನ ಜಂಜಡ ಪರಿಹರಿಸುವೆನೆಂದು ಸನ್ನದ್ಧವಾಗಿರುವ ನ್ಯಾಟೋ ಪಡೆಯಲ್ಲಿ ತನ್ನದೂ ಒಂದಿರಲಿ ಅಂತ ಪ್ರಾತಿನಿಧ್ಯ ಪಡೆದಿದೆ!

ಟರ್ಕಿಯ ಕ್ಷಿಪ್ರಕ್ರಾಂತಿ ಪ್ರಯತ್ನ ತೆರೆದುಕೊಳ್ಳುತ್ತಲೇ ಅಮೆರಿಕ ಹೇಳಿತು- ಪ್ರಜಾಪ್ರಭುತ್ವ ರೀತ್ಯಾ ಆಯ್ಕೆಯಾದ ಸರ್ಕಾರವನ್ನು ರಕ್ಷಿಸಿಕೊಳ್ಳುವುದಕ್ಕೆ ಟರ್ಕಿ ಜನತೆ ಹೋರಾಡಬೇಕು ಅಂತ. ಇದೇ ಅಮೆರಿಕ, 2014ರಲ್ಲಿ ಈಜಿಪ್ತ್ ಆರಿಸಿದ್ದ ಮೋರ್ಸಿ ವಿರುದ್ಧ ಮಿಲಿಟರಿ ಬಂಡಾಯವಾದಾಗ ಅಲ್ಲಿ ಬೆಂಬಲಿಸಿದ್ದು ಮಿಲಿಟರಿಯನ್ನು! ಹೀಗಾಗಿ ಅಮೆರಿಕ ಬಡಬಡಿಸುವ ಪ್ರಜಾಪ್ರಭುತ್ವದ ಬೈಬಲ್’ನಲ್ಲಿ ಆಗಾಗ ಸಾಲುಗಳು ಬದಲಾಗುತ್ತವೆ. ಈಗಲೂ ಈ ಎರ್ದೊಗನ್ ಏನಾದರೂ ಪ್ರಾರಂಭದಲ್ಲೇ ಬಂಡುಕೋರರಿಗೆ ಸೆರೆಸಿಕ್ಕಿ ಅವರ ಕೈ ಮೇಲಾಗಿದ್ದರೆ ಅಮೆರಿಕದ ಧ್ವನಿ ಇನ್ನೇನೋ ಇರುತ್ತಿತ್ತು.

ಅಲ್ಲಾ ಸಾರ್.. ಈ ಮಿಲಿಟರಿ ಬಂಡಾಯದ ಹಿಂದೆ ಯಾರಿದಾರೆ ಅಂತೀರಿ ಅಂತ ಎರ್ದೊಗನ್ ಮಹಾಶಯನನ್ನು ಕೇಳಿದರೆ, ಇನ್ಯಾರು…? ಆ ಮೊಹ್ಮದ್ ಗುಲೆನ್ ಅಂತ ಬುಸುಗುಟ್ಟುವುದನ್ನು ನಿರೀಕ್ಷಿಸಬಹುದು.

ಇದು ಮುಂದುವರಿದ ಮಹಾ ತಮಾಷೆ. ಏಕೆ ಅಂತೀರಾ? ಟರ್ಕಿಯ ಅಧ್ಯಕ್ಷ ಯಾರನ್ನು ತನ್ನ ವೈರಿ ಎಂದು ಗಣಿಸುವುನೋ ಆ ಮೊಹ್ಮದ್ ಗುಲೆನ್ ಎಂಬ ಇಸ್ಲಾಂ ಭೋದಕ ದೇಶಭ್ರಷ್ಟನಾಗಿ ಹೋಗಿ ಕುಳಿತಿರುವುದು ಇದೇ ಅಮೆರಿಕದ ಪೆನ್ಸಿಲ್ವೇನಿಯಾಕ್ಕೆ. ಹೀಗೆ ದೇಶದ ನಾಲ್ಕು ಕುಳಗಳ ಪೈಕಿ ಅವರನ್ನೂ ನಗಿಸಿ, ಇವರನ್ನೂ ಖುಷಿಗೊಳಿಸಿ ತನ್ನ ಕಾರ್ಯಭಾರ ಮಾಡಿಕೊಳ್ಳುವ ಅಮೆರಿಕದ ಲಾಗಾಯ್ತಿನ ಈ ನೀತಿ, ನಮ್ಮದೇ ಪಕ್ಕದ ರಾಷ್ಟ್ರ ಪಾಕಿಸ್ತಾನ ಗುಜರಿ ಎದ್ದು ಹೋಗಿರುವುದಕ್ಕೂ ಸಾಕಷ್ಟು ಕೊಡುಗೆ ನೀಡಿದೆ.

ಅಂತೂ ಮಿಲಿಟರಿ ಬಂಡಾಯ ಹತ್ತಿಕ್ಕುವಲ್ಲಿ ಯಶಸ್ವಿಯಾಗಿರುವ ಎರ್ದೊಗೆನ್ ಅದರ ಬೆನ್ನಲ್ಲೇ ಆಡಳಿತ ವ್ಯವಸ್ಥೆಯ ಸಾವಿರಾರು ಶಂಕಿತರನ್ನು ಬಟ್ಟೆಬಿಚ್ಚಿ ನಿಲ್ಲಿಸುತ್ತಿದ್ದಾನೆ, ಅರ್ಥಾತ್ ವಜಾ ಮತ್ತು ಶಿಕ್ಷೆ ಪ್ರಕ್ರಿಯೆ ಆರಂಭಗೊಂಡಿದೆ. ಅನಾಮತ್ತು 2700 ನ್ಯಾಯಾಧೀಶರನ್ನು ಶನಿವಾರ ಮನೆಗೆ ಕಳುಹಿಸಿದ್ದಾಗಿದೆ. ಅಂದಮೇಲೆ ಬಂಡೆದ್ದ ಯೋಧರು ಗುಮ್ಮಿಸಿಕೊಳ್ಳುವ ವ್ಯಾಪ್ತಿ ಊಹೆಗೆ ಬಿಟ್ಟಿದ್ದು. ‘ಕಮಾಂಡರ್ ಹೇಳ್ದ ಅಂತ ಬೀದಿಗೆ ಬಂದ್ವಿ. ಇದು ಸರ್ಕಾರದ ವಿರುದ್ಧ ಬಂಡಾಯ ಅಂತ ಗೊತ್ತರ್ಲೇ ಇಲ್ಲ’ ಅಂತೆಲ್ಲ ಟರ್ಕಿ ಯೋಧರು ಅಲವತ್ತುಕೊಳ್ಳುತ್ತಿದ್ದಾರೆ. ಟರ್ಕಿಯ ಕುರ್ದ್ ಸಮುದಾಯದ ಜತೆ ಸರ್ಕಾರದ ವೈಷಮ್ಯ ಹಾಗೂ ಕುರ್ದ್ ಬಂಡುಕೋರರನ್ನು ಬೆಂಡೆತ್ತುತ್ತಿರುವ ವಿದ್ಯಮಾನ ಹಳೆಯದು. ಇವೆಲ್ಲವನ್ನೂ ತೂಗಿ ನೋಡಿದರೆ, ವ್ಯವಸ್ಥೆಯಲ್ಲಿ ತನಗಾಗದವರನ್ನು ಇನ್ನಷ್ಟು ಉನ್ಮತ್ತವಾಗಿ ಹಳಿಯುವುದಕ್ಕೆ ಖುದ್ದು ಎರ್ದೊಗೆನ್ ಹೀಗೊಂದು ಪ್ರಹಸನ ಮಾಡಿರಬಾರದೇಕೆ ಎಂಬ ‘ಸಂಚಿನ ಸಿದ್ಧಾಂತ’ವೂ ಹುಟ್ಟಿಕೊಂಡಿದೆ.

turky1

ಒಟ್ಟಾರೆ ಸಾರವಿಷ್ಟೆ. ಟರ್ಕಿಯಲ್ಲಿ ಮಿಲಿಟರಿ ಸೂತ್ರ ಹಿಡಿದರೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟೀತು. ಹಾಗಂತ ಈಗ ಆಡಳಿತದಲ್ಲಿರುವವರು ಸುಭಗರೆಂದೇನೂ ಅಲ್ಲ. ಇರಾಕಿನಲ್ಲಿ ಸದ್ದಾಂ ಹುಸೇನ್ ಏಕಚಕ್ರಾಧಿಪತ್ಯವಿದ್ದಾಗ ಕ್ರೂರ ಆಡಳಿತ ಎಂದು ಜಗತ್ತು ಕೂಗಿಕೊಂಡಿತ್ತು. ಆದರೆ ಅಮೆರಿಕ ಸದ್ದಾಂಗೆ ಗತಿ ಕಾಣಿಸಿದ ನಂತರ ಇರಾಕು ಮತ್ತಷ್ಟು ಪ್ರಕ್ಷುಬ್ಧವಾಯಿತೇ ಹೊರತು ಯಾವ ಪುರುಷಾರ್ಥವೂ ಈಡೇರಲಿಲ್ಲ.

ಟರ್ಕಿಯ ಇಷ್ಟೆಲ್ಲ ಕತೆ ಕೇಳಿ ನಾವು ಸಮಾಧಾನಪಟ್ಟುಕೊಳ್ಳಬೇಕಿರುವುದು ಭಾರತದ ಪ್ರಜಾಪ್ರಭುತ್ವದ ಬಗ್ಗೆ. ಭ್ರಷ್ಟಾಚಾರ, ಬಡತನ, ಕಳಪೆ ಕಾಮಗಾರಿ… ಹಿಂಗೆಲ್ಲ ಹೇಳಿಕೊಳ್ಳುವುದಕ್ಕೆ ಸಾವಿರ ಕುಂದುಗಳಿವೆ ನಿಜ. ಆದರೆ, ಪಕ್ಕದ ಪಾಕಿಸ್ತಾನದಂತೆ ಪ್ರಜಾಪ್ರಭುತ್ವವನ್ನು ಜೋಕಾಗಿಸಿಕೊಂಡು ಅಸ್ಥಿರತೆಯನ್ನೇ ಜೀವನವಾಗಿಸಿಕೊಂಡಿಲ್ಲ. ಜಗತ್ತಿನ ಅಗ್ರಬಲಗಳಲ್ಲಿ ಒಂದಾಗಿರುವ ನಮ್ಮ ಸೇನೆ, ಅದರ ನೇತೃತ್ವ ವಹಿಸಿದವರು ಯಾವತ್ತೂ ರಾಜಕೀಯ ಸೂತ್ರವನ್ನು ತಾವೇ ಹಿಡಿದುಬಿಡೋಣ ಎಂದು ಹೊರಡಲಿಲ್ಲ. ಹೀಗೆಲ್ಲ ಮಾಡಿ ದಕ್ಕಿಸಿಕೊಳ್ಳಲಾಗುವುದಿಲ್ಲ ಎದು ಗೊತ್ತು, ಬ್ರಿಟಿಷರಿಂದ ನಿಷ್ಠೆಗೆ ಟ್ಯೂನ್ ಆದ ರೀತಿಯೇ ಹಂಗಿದೆ… ಅಂತೆಲ್ಲ ಏನೇನೋ ಕಾರಣ ಕೊಡಬಹುದು. ಆದರೆ ಸುತ್ತಮುತ್ತಲೆಲ್ಲ ಸೇನೆಯ ನೆರಳಿನ ನಾಮ್ಕೆವಾಸ್ತೆ ಸರ್ಕಾರಗಳೇ ಅಲುಗಾಡಿಕೊಂಡಿರುವಾಗ ಈ ಆರು ದಶಕಗಳ ಭಾರತದ ಪ್ರಜಾಪ್ರಭುತ್ವ ಯಾತ್ರೆಯ ಬಗ್ಗೆ, ನಮ್ಮ ಸೇನೆಯ ಬಗ್ಗೆ ಹೆಮ್ಮೆಯಾಗದೇ ಇದ್ದೀತೇ?

Leave a Reply