ಸೇನೆ ವಿರುದ್ಧ ಹೂಂಕರಿಸಿದ ದಿನವೇ ನಿನ್ನ ಸಾವು ಶತಃಸಿದ್ಧವಾಗಿತ್ತು- ಹತ ಉಗ್ರನಿಗೆ ಭಾರತದ ಮೇಜರ್ ಬರೆದ ಮೈನವಿರೇಳಿಸುವ ಪತ್ರ

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರದಲ್ಲಿ ಉಗ್ರನ ಹತ್ಯೆ ವಿರೋಧಿಸಿ ಪ್ರತಿಭಟನೆಗಳಾದರೆ, ದೇಶದ ಇತರೆಡೆಗಳಲ್ಲಿ ಬುದ್ಧಿಜೀವಿಗಳೆನಿಸಿಕೊಂಡವರು ಮಾನವ ಹಕ್ಕುಗಳ ನೆಪ ಇಟ್ಟುಕೊಂಡು ಅಪಸ್ವರ ತೆಗೆದಿದ್ದೂ ಇದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಗಮನಸೆಳೆದಿರೋದು ಭಾರತೀಯ ಸೇನೆಯ ಹಿರಿಯ ಅಧಿಕಾರಿ ಮೇಜರ್ ಗೌರವ್ ಆರ್ಯ, ಮೃತ ಬುರ್ಹನ್ ವನಿಗೆ ಬರೆದಿರುವ ಬಹಿರಂಗ ಪತ್ರ.

ಈ ಪತ್ರವನ್ನು ಪ್ರತಿಯೊಬ್ಬರು ಓದಬೇಕು. ಅದರಲ್ಲೂ ಉಗ್ರ ಬುರ್ಹನ್ ವನಿ ಹತ್ಯೆಯನ್ನು ಖಂಡಿಸುತ್ತಿರುವವರು ಹಾಗೂ ಆತನ ಬೆಂಬಲಿಗರು ಮಿಸ್ ಮಾಡಲೇ ಬಾರದು. ಕಾಶ್ಮೀರವನ್ನು ಸೇನೆ ಎಂದೆಂದಿಗೂ ಬಿಟ್ಟುಕೊಡದು ಎಂಬುದನ್ನು ನಿಖರವಾಗಿ ಹೇಳುತ್ತಲೇ, ಪ್ರತ್ಯೇಕತವಾದಿ ನಾಯಕರೆನಿಸಿಕೊಂಡಿರುವ ಗಿಲಾನಿಯಂತವರು ಹೇಗೆ ತಮ್ಮ ಕುಟುಂಬದ ಕುಡಿಗಳನ್ನು ಈ ಹೋರಾಟಕ್ಕೆ ಕಳುಹಿಸದೇ ಕಣಿವೆಯಲ್ಲಿ ರಕ್ತಹರಿಸುತ್ತಿದ್ದಾರೆ ಎಂಬ ಕಟು ವಾಸ್ತವವನ್ನು ಈ ಪತ್ರ ತೆರೆದಿಟ್ಟಿದೆ.

ತಮ್ಮ ಬಹಿರಂಗ ಪತ್ರದಲ್ಲಿ ಮೇಜರ್ ಗೌರವ್ ಆರ್ಯ ಹೇಳಿರೋದಿಷ್ಟು:

‘ಮೃತ ಬುರ್ಹನ್ ವನಿ,

ಭಾರತೀಯ ಸೇನೆ ನಿನ್ನನ್ನು ಬೇಟೆಯಾಡಿದ ನಂತರ ಕಣಿವೆ ರಾಜ್ಯದಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಅವರು ಯಾಕೆ ಸತ್ತರೋ ಗೊತ್ತಿಲ್ಲ. ಆ ಪೈಕಿ ಹೆಚ್ಚಿನವರು ನಿನ್ನ ಸಾವಿಗೆ ಬೇಸರಗೊಂಡು, ಆವೇಶದಿಂದ ಪ್ರತೀಕಾರ ತೀರಿಸಿಕೊಳ್ಳಲು ಬಂದವರು ಎಂಬುದಂತೂ ನಿಜ. ಆದರೆ ಅವರಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಸುಲಭ ಸಾಧ್ಯವಾಗಲಿಲ್ಲ. ನಿನ್ನ ಹಾಗೂ ಪ್ರಾಣ ಕಳೆದುಕೊಂಡ ಇತರರ ಕುಟುಂಬದ ಜತೆ ನಾನು ಸಹ ಮರುಗುತ್ತೇನೆ. ಕಾರಣ, ನೀನು ನೀಚನಾಗಿದ್ದರೂ ನಿನ್ನ ಕುಟುಂಬದವರನ್ನು ದೂಷಿಸಲು ನನಗೆ ಸಾಧ್ಯವಾಗುತ್ತಿಲ್ಲ.

ನೀನು ಎಂಜಿನಿಯರೊ, ಡಾಕ್ಟರೊ ಆಗಬಹುದಿತ್ತು. ಆದ್ರೆ ಸಮಾಜಘಾತುಕನಾದೆ. ಸಾಮಾಜಿಕ ಜಾಲತಾಣದಲ್ಲಿ ನಿನ್ನ ಜನಪ್ರಿಯತೆಯನ್ನು ಬಳಸಿಕೊಂಡು ಯುವಕರನ್ನು ನಿನ್ನತ್ತ ಸೆಳೆಯುತ್ತಾ ಅವರನ್ನು ದೇಶದ್ರೋಹಿಗಳಾಗಿ ಮಾಡುವ ಪ್ರಯತ್ನ ನಡೆಸಿದೆ. ನಿನ್ನ ಸಹೋದರರ ಜತೆ ರಾಂಬೊಗಳ ರೀತಿಯಲ್ಲಿ ಬಂದೂಕು ಮತ್ತು ರೇಡಿಯೋಗಳನ್ನು ಹಿಡಿದಿರುವ ಫೋಟೊಗಳನ್ನು ಅಂತರ್ಜಾಲದಲ್ಲಿ ಹರಿಬಿಟ್ಟೆ. ಇದು ಹಾಲಿವುಡ್ ಚಿತ್ರಗಳಿಗೆ ಸೀಮಿತವಾಗಿದ್ದರೆ ಬಹಳ ಚೆನ್ನಾಗಿರುತಿತ್ತು. ನಿನ್ನ ಎಲ್ಲ ಪ್ರಯತ್ನಗಳು ಕಾರ್ಯಾಚರಣೆಯ ಪ್ರದೇಶಕ್ಕೆ ಸೂಕ್ತವಾಗಿರಲಿಲ್ಲ. ಈ ವಿಷಯದಲ್ಲಿ ತಡವಾಗಿ ಸಲಹೆ ನೀಡುತ್ತಿದ್ದೇನೆ.

ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ಆರಂಭಿಸಿದ ದಿನವೇ ನೀನು ಸತ್ತಿದ್ದೆ. ಕಾಶ್ಮೀರದ ಯುವಕರು ಭಾರತೀಯ ಸೈನಿಕರನ್ನು ಹತ್ಯೆಮಾಡುವಂತೆ ನೀನು ಪ್ರೇರೇಪಿಸಿದೆ. ನೀನು 22 ವರ್ಷವನಾಗಿದ್ದಾಗ ಮೃತಪಟ್ಟಿದ್ದೀಯ. ಒಂದು ವೇಳೆ ಈ ಕಾರ್ಯಾಚರಣೆಯಲ್ಲಿ ನೀನು ತಪ್ಪಿಸಿಕೊಂಡಿದ್ದರೆ, 23 ವರ್ಷಕ್ಕೆ ಸಾಯುತ್ತಿದ್ದೆ ಅಷ್ಟೇ. ಆಗಲೂ ಹಿಂಸಾಚಾರ ಹಾಗೂ ಅದರ ಪರಿಣಾಮ ಇದೇ ರೀತಿ ಇರುತ್ತಿತ್ತು. ಬದಲಾಗುತ್ತಿದ್ದದ್ದು ಕೇವಲ ನಿನ್ನ ಸಾವಿನ ದಿನಾಂಕ ಮಾತ್ರ.

ಒಂದು ವೇಳೆ ನೀನು ಸಾಯುವ ಮುನ್ನ ನನ್ನನ್ನು ಭೇಟಿಯಾಗಿದ್ದರೆ, ನಿನಗೆ ಹುರಿಯತ್ತರ ನಿಜವಾದ ಮುಖ ತೋರಿಸುತ್ತಿದ್ದೆ. ಹುರಿಯತ್ ಕಾನ್ಫೆರೆನ್ಸ್ ನ ನಾಯಕರು ಜಿಗಣೆಯಂತವರು. ಕಾಶ್ಮೀರದ ಯುವಕರಿಗೆ ಮನುಷ್ಯರ ರಕ್ತದ ರುಚಿ ತೋರಿಸಿ ಭಾರತೀಯ ಸೈನ್ಯದ ವಿರುದ್ಧ ದಾಳಿ ಮಾಡಲು ಕಳುಹಿಸುತ್ತಿದ್ದಾರೆ. ಅದೂ ಸಿಂಹಗಳ ವಿರುದ್ಧ ಕುರಿಗಳನ್ನು ಯುದ್ಧಕ್ಕೆ ಕಳಿಸುವಂತೆ. ಇದು ಯಾವ ರೀತಿಯ ಯುದ್ಧವಾಗುತ್ತದೆ?

ಹುರಿಯತ್ ಕಾನ್ಫೆರೆನ್ಸ್ ನಾಯಕರ ಮಕ್ಕಳು ವಿದೇಶದಲ್ಲಿ ವೈಭವಯುತ ಹಾಗೂ ನೆಮ್ಮದಿಯ ಜೀವನ ನಡೆಸುತ್ತಿದ್ದರೆ, ನಿನ್ನಂತಹ ಕಾಶ್ಮೀರದ ಯುವಕರು ಜಿಹಾದಿ ಹಾದಿ ಹಿಡಿಯುತ್ತಿದ್ದಾರೆ. ಭಾರತ ಆಕ್ರಮಿತ ಕಾಶ್ಮೀರಕ್ಕಾಗಿ ಹೋರಾಟ ಮಾಡುತ್ತಿರುವ ಹುರಿಯತ್ ಕಾನ್ಫೆರೆನ್ಸ್ ಮುಖ್ಯಸ್ಥ ಸೈಯದ್ ಅಲಿ ಗಿಲಾನಿಯ ಒಬ್ಬ ಸಂಬಂಧಿ ಹೆಸರು ಹೇಳು ನೋಡೋಣ. ಗಿಲಾನಿಯ ಮೊದಲ ಮಗ ನಯೀಮ್ ಗಿಲಾನಿ ರಾವಲ್ಪಿಂಡಿಯಲ್ಲಿ ಡಾಕ್ಟರ್ ಆಗಿದ್ದು, ಪಾಕಿಸ್ತಾನದ ಐಎಸ್ಐನ ಆಶ್ರಯದಲ್ಲಿದ್ದಾನೆ. ಎರಡನೇ ಮಗ ಜಹೂರ್, ದಕ್ಷಿಣ ದೆಹಲಿಯಲ್ಲಿ ವಾಸವಾಗಿದ್ದಾನೆ. ಮತ್ತೊಬ್ಬ ನಾಯಕ ಮಿರ್ವೈಸ್ ಉಮರ್ ಫಾರೂಕ್ ಸಹೋದರಿ ರಾಬಿಯಾ ಅಮೆರಿಕದಲ್ಲಿ ಡಾಕ್ಟರ್… ಇನ್ನು ಮರಿಯಮ್ ಅಂದ್ರಾಬಿಯ ಸಹೋದರಿ ಅಸಿಯಾ ಅಂದ್ರಾಬಿ ತನ್ನ ಕುಟುಂಬದ ಜತೆ ಮಲೇಷ್ಯಾದಲ್ಲಿ ವಾಸ… ಹೀಗೆ, ಕಾಶ್ಮೀರ ಪ್ರತ್ಯೇಕವಾದಿ ಮುಖಂಡರ ಮಕ್ಕಳು ಮತ್ತು ಸಂಬಂಧಿಕರು ಶ್ರೀಮಂತರಾಗಿ ಸುಖವಾಗಿದ್ದಾರೆ. ಆದ್ರೆ, ಕಾಶ್ಮೀರದ ಮಕ್ಕಳು ತಲೆಗೆ ಗುಂಡೇಟು ತಿಂದು ಸಾಯುತ್ತಿದ್ದಾರೆ.

ಈಗ ಕಾಶ್ಮೀರದ ಯುವಕರು ನಿನ್ನ ಹತ್ಯೆಗೆ ಭದ್ರತಾ ಪಡೆಗಳನ್ನು ದೂಷಿಸುತ್ತಿದ್ದಾರೆ. ಆದ್ರೆ ಅವರು ಎಂದಿಗೂ ಹುರಿಯತ್ ನಾಯಕರನ್ನು ಪ್ರಶ್ನಿಸುವುದಿಲ್ಲ. ಬುರ್ಹನ್ ವನಿಯಂತಹವರು ನಿಮ್ಮ ಕುಟುಂಬದಿಂದ ಏಕೆ ಬಂದಿಲ್ಲ ಎಂದು ಸೈಯದ್ ಅಲಿ ಗಿಲಾನಿಯನ್ನು ಕೇಳುವುದಿಲ್ಲ.

ಕಾಶ್ಮೀರ ಜನರು ಈದ್ ಹಬ್ಬವನ್ನು ಪಾಕಿಸ್ತಾನದವರೊಂದಿಗೆ ಆಚರಿಸಿದರೆ ಪಾಕ್ ಮಾಧ್ಯಮಗಳು ಇಷ್ಟಪಡುತ್ತವೆ. ಆದ್ರೆ ಭಾರತದವರೊಂದಿಗೆ ಆಚರಿಸಿದರೆ ಸಹಿಸುವುದಿಲ್ಲ. ಇದು ಭಾರತದ ಒಗ್ಗಟ್ಟಿಗೆ ಪೆಟ್ಟು ನೀಡುತ್ತಿದೆ. 1400 ವರ್ಷಗಳ ಇಸ್ಲಾಂ ಇತಿಹಾಸದಲ್ಲಿ ಚಂದ್ರನನ್ನು ನೋಡದೇ ಕೇವಲ ಪಾಕಿಸ್ತಾನದ ದಿಕ್ಕನ್ನು ನೋಡುತ್ತಾ ಈದ್ ಹಬ್ಬವನ್ನು ಆಚರಿಸುತ್ತಿರುವುದು ಇದೇ ಮೊದಲು. ವೆಲ್ ಡನ್…

ಹುರಿಯತ್ತರು ಎಂದಿಗೂ ಕಾಶ್ಮೀರಿಗಳ ಏಳಿಗೆ ಬಗ್ಗೆ ಚಿಂತಿಸುವುದಿಲ್ಲ. ಈ ರಕ್ತದೊಕುಳಿ ಮೂಲಕ ತಮ್ಮ ಲಾಭದ ಹಾದಿಯನ್ನು ಕಂಡುಕೊಳ್ಳುತ್ತಿದ್ದಾರೆ. ಇದು ಸುಳ್ಳು ಎಂದು ವಾದಿಸುವುದಾದರೆ, ಹುರಿಯತ್ ನಾಯಕರ ಕುಟುಂಬದಿಂದ ಬಂದ ಹೋರಾಟಗಾರರ ಹೆಸರು ಹೇಳಿ ಸಾಕು.

ಕಾಶ್ಮೀರದಲ್ಲಿ ಪ್ರೇರಿತ ಸಂಘರ್ಷ ಸೃಷ್ಟಿಯಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ರೆ ಈ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ… ಭಾರತೀಯ ಸೇನೆಯನ್ನು ಕಣಿವೆ ರಾಜ್ಯದಲ್ಲಿ ನಿಯಂತ್ರಿಸಲು ಕಾಶ್ಮೀರ ವಿವಾದ ಪಾಕಿಸ್ತಾನಕ್ಕೆ ಸುಲಭ ಮಾರ್ಗ… ಎಂಬ ಅಂಶಗಳು ಹುರಿಯತ್ ನಾಯಕರಿಗೆ ಸ್ಪಷ್ಟವಾಗಿ ಗೊತ್ತಿದೆ. ಅದೇ ಕಾರಣಕ್ಕೆ ನಿಮ್ಮನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ನೀನು ಒಬ್ಬ ಉಗ್ರ. ಭಾರತದ ವಿರುದ್ಧ ಯುದ್ಧ ಮಾಡುವ ಹಾದಿಯನ್ನು ಆಯ್ಕೆ ಮಾಡಿಕೊಂಡೆ. ಈ ಹಿಂದೆ ಬಂದ ಅನೇಕ ಉಗ್ರರಂತೆ ನೀನು ಸಹ ಇದರಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಭಾರತ ಸೇನೆ ವಿರುದ್ಧ ಯುದ್ದ ಆರಂಭಿಸುವ ಮುನ್ನ, ಭಾರತೀಯ ಸೇನೆಯಿಂದ ನೀವು ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬ ಸತ್ಯವನ್ನು ನೀವು ಅರಿತುಕೊಳ್ಳಬೇಕು.

ನಿನ್ನ ಅನುಯಾಯಿಗಳಿಗೂ ರಕ್ತದ ದಾಹವಿದೆ. ಹೀಗಿರುವಾಗ ಕಣಿವೆ ರಾಜ್ಯದಲ್ಲಿ ನಿನ್ನಂತವರ ರಕ್ತ ಮತ್ತಷ್ಟು ಹರಿಯಲಿ ಬಿಡು…’

1 COMMENT

Leave a Reply