ಇಷ್ಟಕ್ಕೂ ಈ ಪ್ರಕರಣಗಳಲ್ಲಿ ಕಣ್ಣಿಗೆ ರಾಚುತ್ತಿರುವುದು ‘ಕಾಂಗ್ರೆಸ್ ಕಾರ್ಡ್ ಹೋಲ್ಡರ್’ಗಳ ಉದ್ಧಟತನವೇ ಅಲ್ಲವೇ?

 

ಪ್ರವೀಣ್ ಕುಮಾರ್

ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ಪಿಎಸ್ಐ ಉದ್ದಪ್ಪ ಕಟ್ಟೀಕಾರ ಅವರಿಗೆ ಧಮ್ಕಿ ಹಾಕಿರುವ ಆಡಿಯೋ 15 ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದಿರುವುದಕ್ಕೆ ರಾಜಕೀಯ ಲೆಕ್ಕಾಚಾರ ಇದೆಯೇ? ರಾಜಕೀಯದಲ್ಲಿ ಎಲ್ಲವೂ ಆಯಾ ಗುಂಪುಗಳ ಲೆಕ್ಕಾಚಾರ, ವ್ಯೂಹ ಹೊಂದಿರುತ್ತಾದ್ದರಿಂದ ಅವೇನಾದರೂ ಇದ್ದಿರಬಹುದು.

ಆದರೆ ಪ್ರಶ್ನೆ ಅದಲ್ಲ. ಲಕ್ಷ್ಮೀ ಹೆಬ್ಬಾಳಕರರೇ ಈಗ ಒಪ್ಪಿಕೊಳ್ಳುತ್ತಿರುವಂತೆ ಸಂಭಾಷಣೆ ನಡೆದಿರುವುದಂತೂ ಹೌದು. ಆದರೆ ತಾವು ಮಾಡಿದ್ದು ಕ್ಷೇತ್ರದ ಜನರಿಗೆ ಸ್ಪಂದಿಸುವ ದೃಷ್ಟಿಯಿಂದ ಹಾಗೂ ಲಾರಿ ತಡೆಹಿಡಿದಿದ್ದಕ್ಕೆ ಪಿಎಸ್ಐ ಉದ್ಧಟತನದ ಪ್ರತಿಕ್ರಿಯೆ ನೀಡಿದ್ದರಿಂದ ಧ್ವನಿ ಏರಿಸಬೇಕಾಯಿತು ಎಂಬ ಸಮಜಾಯಿಷಿ ಲಕ್ಷ್ಮೀ ಅವರದ್ದು.

ಪ್ರಕರಣದ ಉಳಿದಂಶಗಳೇನೇ ಇರಲಿ, ಪಿಎಸ್ಐ ಉದ್ಧಟತನ ಮರೆದರು ಎಂದು ಮಾತ್ರ ಆ ಆಡಿಯೋ ಸಂಭಾಷಣೆ ಕೇಳಿಸಿಕೊಂಡ ಯಾರಿಗೂ ಅನ್ನಿಸುವುದಿಲ್ಲ. ನನ್ನ ಕರ್ತವ್ಯ ನಾನು ಮಾಡಿದ್ದೀನಿ ಎಂಬ ದೃಢತೆಯೇ ಉದ್ದಕ್ಕೂ ಕಾಣುವಂಥದ್ದು. ಪಾಸ್ ಇದ್ರೂ ಯಾಕ್ರೀ ಲಾರಿ ಹಿಡಿದ್ರಿ ಎಂಬ ಅವಾಜಿಗೆ ಉದ್ದಪ್ಪ ನೀಡಿರುವ ಉತ್ತರ ತಾರ್ಕಿಕವಾಗಿದೆ. ‘ಡಿಸಿ ಆದೇಶದ ಪ್ರಕಾರ ಹಿಡಿದಿದ್ದೀನಿ. ಅವರ್ಯಾರೂ ಪಾಸ್ ತೋರಿಸಿಲ್ಲ. ನಿಮಗೆ ತೊಂದರೆ ಇದ್ದರೆ ಅದನ್ನು ಡಿಸಿಯವರಿಗೆ ಹೇಳಿ. ಅವರಿಂದ ಆದೇಶ ಏನು ಬರುತ್ತದೋ ಅದನ್ನು ಮಾಡುತ್ತೇನೆ’ ಎಂಬ ನೇರ ಉತ್ತರ ನೀಡಿದ್ದಾರೆ ಉದ್ದಪ್ಪ.

‘ನಿಮ್ಮಂಥವರಿಂದ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ’ ಅಂತ ಲಕ್ಷ್ಮೀ ಹೆಬ್ಬಾಳಕರ ಅವಾಜು ಹಾಕಿದ್ದಾರೆ. ಉದ್ಧಟತನ ಎಂದರೆ ವಾಸ್ತವದಲ್ಲಿ ಇದಲ್ಲವೇ? ಮೇಲಿನ ಅಧಿಕಾರಿ ಆದೇಶದಂತೆ ಕೆಲಸ ಮಾಡುತ್ತಿದ್ದೇನೆ ಎಂದ ಮೇಲೂ ಪಿಎಸ್ಐ ಮೇಲೇಕೆ ಇವರ ಹಾರಾಟ? ಅಲ್ಲದೇ ಕೇಸ್ ದಾಖಲಾಗಿದೆ ಎಂದಮೇಲೆ ಕಾನೂನುರೀತ್ಯ ಮುಂದುವರಿಯುವುದಕ್ಕೆ ಎದುರು ಪಕ್ಷದವರು ಸ್ವತಂತ್ರರು. ಅದುಬಿಟ್ಟು ಹೀಗೆ ಪಿಎಸ್ಐಗೆ ತರಾಟೆ ತೆಗೆದುಕೊಳ್ಳುವ ಹಕ್ಕನ್ನು ಹೆಬ್ಬಾಳಕರರಿಗೆ ಕೊಟ್ಟಿದ್ಯಾರು? ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷಗಿರಿಗೆ ಸರ್ಕಾರಿ ಅಧಿಕಾರಿ ಅಥವಾ ನೌಕರರನ್ನು ತರಾಟೆಗೆ ತೆಗೆದುಕೊಳ್ಳುವ ಕಾನೂನು ವ್ಯಾಪ್ತಿಯನ್ನು ಅದ್ಯಾವ ಶಾಸನ ನೀಡಿದೆ? ಜನರ ಒಳಿತಿಗೆ ಎಂಬುದು ಎಲ್ಲ ಉದ್ಧಟತನಗಳನ್ನು ಮುಚ್ಚಿಕೊಳ್ಳಬಹುದಾದ ಉತ್ತರವೇ? ‘ಬಂದು ನನ್ನ ಭೇಟಿ ಆಗ್ರೀ’ ಅಂತ ಆಗ್ರಹಿಸೋಕೆ ಇವರೇನು ಪೊಲೀಸ್ ಇಲಾಖೆಯ ಮೇಲಧಿಕಾರಿ ಹುದ್ದೆಯಲ್ಲಿದ್ದಾರೆಯೇ? ಹೀಗೆಲ್ಲ ಹಾರಾಡಿದಾಗಲೂ ಪಿಎಸ್ಐ ಶಾಂತವಾಗಿ ಆದರೆ ಅಷ್ಟೇ ದೃಢವಾಗಿ ಉತ್ತರಿಸಿದ್ದಾರೆ. ‘ಸರ್ಕಾರಕ್ಕೆ ಕೆಟ್ಟ ಹೆಸರು ತರುವಂಥದ್ದೇನಿಲ್ಲ, ನೀವು ತಪ್ಪು ತಿಳಿದುಕೊಂಡಿದ್ದೀರಿ. ನನಗೆ ಡಿಸಿ ಕೊಟ್ಟಿರುವ ಮೌಖಿಕ ಆದೇಶ ಪಾಲಿಸುತ್ತಿದ್ದೇನೆ. ಅದಕ್ಕೂ ಪ್ರೂಫ್ ಬೇಕಂದ್ರೆ ತೋರಿಸ್ತೇನೆ..’

ಇಲ್ಲೆಲ್ಲೂ ಪಿಎಸ್ಐ ಗೌರವದ ಚೌಕಟ್ಟು ಮೀರಿದ ಭಾಷೆಯಲ್ಲಿ ಪ್ರತ್ಯುತ್ತರ ಕೊಡಲು ಹೋಗಿಲ್ಲ. ‘ಯಾರಿಂದ ಹೇಳಿಸ್ಬೇಕೋ ಗೊತ್ತಿದೆ’ ಎಂದು ಹೆದರಿಸಿದಾಗಲೂ ಆಯ್ತು ಹೇಳಿಸ್ರೀ ಅಂತ ಅಷ್ಟೇ ತಣ್ಣನೆ ಉತ್ತರ ಕೊಟ್ಟಿದ್ದಾರೆ.

ಆಡಳಿತ ಪಕ್ಷದ ಕಾರ್ಡ್ ಹೋಲ್ಡರ್’ಗಳಿಗೆಲ್ಲ ಹೀಗೆ ಸರ್ಕಾರದ ಕರ್ತವ್ಯಗಳಲ್ಲಿ ಹಸ್ತಕ್ಷೇಪ ಮಾಡುವ ದರ್ಪ ಮೈಗೂಡಿರುವುದರಿಂದಲೇ ಮೈಸೂರು ಡಿಸಿ ಮೇಲೆಯೂ ನಿಂದನೆ ಆಗಿರುವುದು. ಸರ್ಕಾರದ ಬೆಂಬಲಿಗರು, ಕಾಂಗ್ರೆಸ್ಸಿಗರು ಅಂತ ಹೇಳಿಕೊಳ್ಳುವವರಿಂದ ಇಂಥದ್ದು ಇನ್ನೂ ಆಗಿರಬಹುದಾದರೂ ಪಿಎಸ್ಐ ಉದ್ದಪ್ಪ, ಡಿಸಿ ಶಿಖಾ ಅಂಥವರು ಮಾತ್ರ ಚುರುಕು ಪ್ರತಿಕ್ರಿಯೆ ನೀಡಿದ್ದಾರೆ.

ಡಿಸಿ ಶಿಖಾ ವಿರುದ್ಧ ನಿಂದನೆ, ಕರ್ತವ್ಯಕ್ಕೆ ಅಡ್ಡಿ ಮಾಡಿ ಈಗ ನಿರೀಕ್ಷಣಾ ಜಾಮೀನು ಸಿಗದಂತೆ ತಲೆಮರೆಸಿಕೊಂಡಿರುವ ಮರಿಗೌಡ ಮಾಡಿದ್ದೂ ಇದನ್ನೇ. ಅದ್ಯಾವುದೋ ಪೂರ್ಣಗೊಳ್ಳಬೇಕಿರುವ ಕೆಲಸಕ್ಕೆ ಕಾನೂನುರೀತ್ಯ ಕಾಯಬೇಕಾಗುತ್ತದೆ ಎಂಬ ಡಿಸಿ ಉತ್ತರವನ್ನು ಒಪ್ಪಿಕೊಳ್ಳದೇ, ಅಸಭ್ಯವಾಗಿ ಕಿರುಚಾಡಿ ಹಲ್ಲೆಗೆ ಮುಂದಾಗಿದ್ದಕ್ಕೆ ತಕ್ಕಶಾಸ್ತಿ ಆಗಿದೆ. ಇಲ್ಲಂತೂ ಡಿಸಿ ಶಿಖಾ ಅವರ ಈವರೆಗಿನ ನಡೆ ಹೆಮ್ಮೆ ತರಿಸುವಂಥದ್ದು. ಮುಖ್ಯಮಂತ್ರಿ ಆಪ್ತ ಮರಿಗೌಡನ ವಿರುದ್ಧ ಪ್ರಕರಣ ದಾಖಲಿಸಿದ್ದಲ್ಲದೇ, ಎಂಥೆಂಥ ಒತ್ತಡಗಳೆಲ್ಲ ಬಂದು ರಾಜಿಗಾಗಿ ಒತ್ತಾಯಿಸಿದರೂ ಅವರು ಮಣಿದಿಲ್ಲ. ನಿರೀಕ್ಷೆಯಂತೆ, ಪೊಲೀಸರಿಗೆ ಈವರೆಗೆ ಮರಿಗೌಡನನ್ನು ಕಾನೂನಿನ ಎದುರು ತಂದು ನಿಲ್ಲಿಸುವುದಕ್ಕಾಗಿಲ್ಲ. ಪಾಪ, ಈ ಅಪ್ರತಿಮ ಆರೋಪಿಯನ್ನು ಹಿಡಿಯುವುದಕ್ಕೆ ವಿಶೇಷ ಪಡೆಯೇ ರಚನೆಯಾಗಬೇಕೋ ಏನೋ! ನಿರೀಕ್ಷಣಾ ಜಾಮೀನನ್ನು ನಿರಾಕರಿಸುತ್ತ ಮರಿಗೌಡ ಮೇಲೆ ಈ ಹಿಂದೆ ದಾಖಲಾಗಿರುವ ಪ್ರಕರಣಗಳನ್ನೂ ನ್ಯಾಯಾಲಯ ಉಲ್ಲೇಖಿಸಿತ್ತು ಎಂಬುದರಲ್ಲೇ ಈ ಆರೋಪಿಯ ಜಾತಕ ಗೊತ್ತಾಗುತ್ತದೆ.

ಅಧಿಕಾರಿವರ್ಗವೂ ಲೋಪದೋಷಕ್ಕೆ ಹೊರತಲ್ಲ. ಆದರೆ ಕಾಂಗ್ರೆಸ್ ಮೊದಲಿಗೆ ನಿಯಂತ್ರಿಸಬೇಕಿರುವುದು ಪಕ್ಷದೊಳಗಿನ ಉದ್ಧಟತನಗಳನ್ನು ಅಂತ ಈ ಎರಡು ಪ್ರಕರಣಗಳೂ ಸಾರುತ್ತಿವೆ.

1 COMMENT

Leave a Reply