ಬ್ಯಾಟನ್ ರೋಗ್ ಗುಂಡಿನ ಪ್ರಕರಣ, ಇದು ಅಮೆರಿಕದಲ್ಲಿ ಮುಂದುವರಿದಿರುವ ವರ್ಣ ಸಂಘರ್ಷದ ಅನಾವರಣ

 

ಡಿಜಿಟಲ್ ಕನ್ನಡ ಟೀಮ್:

ನಾವೆಲ್ಲ ಭಾನುವಾರ ರಾತ್ರಿ ಹಾಸಿಗೆಗೆ ಒರಗಲು ಹವಣಿಸುತ್ತಿರುವಾಗ ಅಮೆರಿಕದ ಲೂಸಿಯಾನದಲ್ಲಿ ಅದಾಗಲೇ ಬೆಳಗಿನ ಒಂಬತ್ತಾಗಿತ್ತು ಹಾಗೂ ಬ್ಯಾಟನ್ ರೋಗ್ ಪ್ರಾಂತ್ಯದಲ್ಲಿ ಮೂರು ಪೊಲೀಸ್ ಅಧಿಕಾರಿಗಳು ಗುಂಡಿಗೆ ಆಹುತಿಯಾಗಿದ್ದರು.

ಇನ್ನೊಂದು ಇಸ್ಲಾಮಿಕ್ ಉಗ್ರವಾದದ ದಾಳಿ ಎಂದುಕೊಂಡಿರಾ? ಹಂಗೇನಿಲ್ಲ. ಹೀಗೆ ಪೊಲೀಸರ ಮೇಲೆ ಬೇಕಾಬಿಟ್ಟಿ ಮುರಿದುಕೊಂಡುಬಿದ್ದ ಒಬ್ಬ ಶಂಕಿತನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇನ್ನಿಬ್ಬರು ಇದ್ದಿರಬಹುದೆಂಬ ಶಂಕೆಯ ಆಧಾರದಲ್ಲಿ ಹುಡುಕಾಟ ನಡೆದಿದೆ. ದಾಳಿ ಮಾಡಿ ಮೂವರು ಪೊಲೀಸರನ್ನು ಕೊಂದು, ಇನ್ನು ಮೂವರನ್ನು ಗಾಯಗೊಳಿಸಿ ಕೊನೆಯಲ್ಲಿ ತಾನೂ ಗುಂಡಿಗೆ ಬಲಿಯಾದವನನ್ನು ಆಫ್ರಿಕನ್- ಅಮೆರಿಕನ್ ಎಂದು ಗುರುತಿಸಲಾಗಿದೆ.

ಈ ವಿಚಿತ್ರ ಘಟನೆಯಲ್ಲಿ ದೂರಬೇಕಿರುವುದು ಯಾರನ್ನು ಎಂಬ ಗೊಂದಲ ಎದುರಾದರೆ ಕೆಲ ಸಂಗತಿಗಳನ್ನು ಗಮನಿಸಬೇಕು.

  1. ಪುರಸೊತ್ತು ಸಿಕ್ಕಾಗಲೆಲ್ಲ ಭಾರತಕ್ಕೆ ಸಹಿಷ್ಣುತೆ, ಸಾಮರಸ್ಯ, ವೈವಿಧ್ಯತೆಗಳ ಬಗ್ಗೆ ಪಾಠ ಮಾಡುವ ಅಮೆರಿಕದ ಈ ಘಟನೆ ಅಲ್ಲಿನ ಕಪ್ಪು- ಬಿಳಿ ವರ್ಣ ಸಮಸ್ಯೆಯೊಂದಿಗೆ ತಳುಕು ಹಾಕಿಕೊಂಡಿದೆ. ಜುಲೈ 8ರಂದು ಬ್ಯಾಟನ್ ರೋಗ್ ಪೊಲೀಸರು ಕಪ್ಪುವರ್ಣೀಯನೊಬ್ಬನನ್ನು ಗುಂಡಿಕ್ಕಿ ಕೊಂದಾಗಲೇ ಅಸಹನೆ ಶುರುವಾಗಿತ್ತು. ಅಂಥದೇ ಘಟನೆ ಮರುದಿನ ಮಿನೆಸೊಟ್ಟಾ ಪ್ರಾಂತ್ಯದಲ್ಲೂ ಜರುಗಿತು. ಇದನ್ನು ಖಂಡಿಸಿ ಡಲ್ಲಾಸ್ ನಲ್ಲಿ ಶಾಂತಿಯುತ ಪ್ರತಿಭಟನೆ ಆಗುತ್ತಿರುವಾಗಲೇ ಪೊಲೀಸರ ಮೇಲೆ ಕಪ್ಪುವರ್ಣೀಯನೊಬ್ಬ ಗುಂಡು ಹಾರಿಸಿ ಐವರ ಮರಣಕ್ಕೆ ಕಾರಣನಾಗಿದ್ದ. ಭಾನುವಾರದ ಘಟನೆ ಸಹ ಕಪ್ಪು ವರ್ಸಸ್ ಬಿಳಿ ಸಂಘರ್ಷದ ಭಾಗವಾಗಿ ತೋರುತ್ತಿದೆ.
  2. ಲೂಸಿಯಾನಾ ರಾಜ್ಯದಲ್ಲಿ ಗನ್ ಖರೀದಿಗೆ, ಅದನ್ನು ತನ್ನೊಂದಿಗೆ ಇಟ್ಟುಕೊಳ್ಳುವುದಕ್ಕೆ ಪರವಾನಗಿಯ ಅಗತ್ಯವೇ ಇಲ್ಲ.
  3. ಬ್ಯಾಟನ್ ರೋಗ್ ಕಪ್ಪು ವರ್ಣೀಯರೇ ಅಧಿಕವಾಗಿರುವ ಪ್ರದೇಶ. ಇಲ್ಲಿನ ಪೊಲೀಸ್ ಪಡೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವವರು ಶ್ವೇತವರ್ಣೀಯ ಅಧಿಕಾರಿಗಳು.

ಹಾಗಂತ ಈ ವಿವೇಚನಾರಹಿತ ಹಿಂಸೆಗೆ ಬಲಿಯಾಗುತ್ತಿರುವವರ ವಿಷಯದಲ್ಲಿ ವರ್ಣಭೇದವಿಲ್ಲ. ಭಾನುವಾರದ ಬ್ಯಾಟನ್ ರೋಗ್ ಗುಂಡಿನ ಚಕಮಕಿ ವಿದ್ಯಮಾನದಲ್ಲಿ ಬಲಿಯಾದ ಪೊಲೀಸರಲ್ಲೊಬ್ಬ 32ರ ಹರೆಯದ ಮಾಂಟ್ರಿಲ್ ಜಾಕ್ಸನ್. ಆತ ವಾರದ ಚಕಮಕಿ ವಿದ್ಯಮಾನಗಳಿಗೆಲ್ಲ ಬೇಸತ್ತು ‘ಇಲ್ಲಿ ಕಪ್ಪು ವರ್ಣೀಯನಾಗಿ ಇರುವುದು ಅದರಲ್ಲೂ ಪೊಲೀಸ್ ಇಲಾಖೆಯಲ್ಲಿರೋದು ಎಷ್ಟು ಕಷ್ಟ’ ಎಂದೆಲ್ಲ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದ. ‘ನಾನೀ ನಗರವನ್ನು ಪ್ರೀತಿಸುತ್ತೇನೆ. ಆದರೆ ಈ ನಗರ ನನ್ನನ್ನು ಪ್ರೀತಿಸುತ್ತಿದೆಯೇ ಎಂಬುದು ಅನುಮಾನ’ ಎಂದು ಬರೆದುಕೊಂಡಿದ್ದರಲ್ಲಿ ಅಮೆರಿಕದ ಆ ಪ್ರಾಂತ್ಯದಲ್ಲಿ ಅದೆಂಥ ಅಸುರಕ್ಷತೆ, ಆತಂಕ ಮಡುಗಟ್ಟಿದೆ ಎಂಬುದರ ಪ್ರತಿಫಲನವಿದೆ.

ಕಾನೂನು ಅನುಷ್ಠಾನದ ಸಂಸ್ಥೆಗಳು ಹಾಗೂ ನಾಗರಿಕರ ನಡುವಿನ ಇಂಥ ಸಂಘರ್ಷಗಳಿಗೆ ಈ ವರ್ಷದಲ್ಲೇ ಇದುವರೆಗೆ 30 ಮಂದಿ ಬಲಿಯಾಗಿದ್ದಾರೆ.

ಪೊಲೀಸ್ ಪಡೆಯ ಮೇಲಾಗುತ್ತಿರುವ ಹಿಂಸೆಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ‘ಯಾರು ಸರಿ, ಯಾರು ತಪ್ಪು ಎಂಬ ರೋಚಕ ರಾಜಕೀಯ ಚರ್ಚೆಗಳಿಂದ ದೇಶ ದೂರವಿರಬೇಕು. ಈ ಸಂದರ್ಭದಲ್ಲಿ ಒಗ್ಗಟ್ಟಾಗುವ ಬಗ್ಗೆ ಗಮನ ಕೇಂದ್ರೀಕರಿಸಬೇಕು’ ಎಂದಿರುವುದು ಈಗಿನ ರಿಪಬ್ಲಿಕನ್ ವರ್ಸಸ್ ಡೆಮಾಕ್ರಟಿಕ್ ಅಧ್ಯಕ್ಷೀಯ ಚುನಾವಣೆ ತುರುಸಿನಲ್ಲಿ ಹೊಮ್ಮುತ್ತಿಸುವ ಭಾಷಣಗಳ ಕುರಿತು ಎಚ್ಚರಿಸಿದಂತಿದೆ.

Leave a Reply