ಅನಿರ್ದಿಷ್ಟಾವಧಿಗೆ ವಿಧಾನಮಂಡಲ ಉಭಯ ಸದನ ಕಲಾಪಗಳ ಮುಂದೂಡಿಕೆ

ಡಿಜಿಟಲ್ ಕನ್ನ ಟೀಮ್:

ಸರ್ಕಾರ ತನ್ನ ಬಿಗಿ ನಿಲುವು ಸಡಿಲ ಮಾಡ್ಲಿಲ್ಲ… ಪ್ರತಿ ಪಕ್ಷಗಳು ಧರಣಿ ಬಿಡ್ಲಿಲ್ಲ.. ಪರಿಣಾಮ ಇಂದೂ ವಿಧಾನ ಮಂಡಲದ ಉಭಯ ಸದನಗಳೂ ಅನಿರ್ದಿಷ್ಟಾವಧಿಗೆ ಮುಂದೂಡಲಾಯ್ತು. ಸೋಮವಾರವೂ ಸಹ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸಚಿವ ಕೆ.ಜೆ ಜಾರ್ಜ್ ರಾಜಿನಾಮೆಗೆ ಆಗ್ರಹ ಪಡಿಸಿದವು. ಇದಕ್ಕೆ ಸರ್ಕಾರ ಕ್ಯಾರೆ ಎನ್ನಲಿಲ್ಲ..

ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಬಿಜೆಪಿಯ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದ್ರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸಚಿವ ಜಾರ್ಜ್ ಅವರ ಪಡಿಬೇಕೆಂದು ಪ್ರತಿಪಕ್ಷ ಬಿಜೆಪಿ ತನ್ನ ಪಟ್ಟು ಮುಂದುವರಿಸಿತು.

‘ಸರ್ಕಾರ ಮೊಂಡುತನಕ್ಕಿಳಿದಿದೆ. ಜಾರ್ಜ್ ಅವರನ್ನು ರಕ್ಷಣೆ ಮಾಡುವುದೊಂದೇ ಅದರ ಕೆಲಸವಾಗಿದೆ. ಯಾವ ಕಾರಣಕ್ಕೂ ಇದನ್ನು ನಾವು ಒಪ್ಪಲ್ಲ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ರು. ಈ ಹಂತದಲ್ಲಿ ಪ್ರತಿಪಕ್ಷಗಳ ಸದಸ್ಯರನ್ನು ಸಮಾಧಾನ ಮಾಡುವ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಅವರ ಪ್ರಯತ್ನ ವಿಫಲವಾಯ್ತು.

ಈ ಮಧ್ಯೆ, ರಾಜ್ಯದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ತೆಂಗಿನ ಬೆಲೆ ಕುಸಿದಿದೆ. ಇದೇ ರೀತಿ ಹಲವಾರು ಸಮಸ್ಯೆಗಳು ರಾಜ್ಯವನ್ನು ಕಾಡತೊಡಗಿವೆ. ಹೀಗಾಗಿ ಇವೆಲ್ಲದರ ಕುರಿತು ಚರ್ಚೆ ನಡೆಯಬೇಕೆಂದು ಜೆಡಿಎಸ್ ನ ನಾಯಕರು ಒತ್ತಾಯಿಸಿದ್ರು. ಈ ಬಗ್ಗೆ ಜೆಡಿಎಸ್ ನ ಶಿವಲಿಂಗೇಗೌಡ್ರು ಹೇಳಿದ್ದಿಷ್ಟು: ‘ಕೊಬ್ಬರಿಯ ಬೆಲೆ ಕುಸಿದಿದೆ. ರೈತರು ಒಂದು ಟನ್ ಕೊಬ್ಬರಿಯನ್ನು ಕೇವಲ ₹ 6 ಸಾವಿರಕ್ಕೆ ಮಾರಾಟ ಮಾಡ್ತಿದ್ದಾರೆ. ಇದರಿಂದ ರೈತರು ಬೀದಿಗೆ ಬೀಳುವಂತಾಗಿದೆ. ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ಬರಬೇಕು, ಈ ವಿಷಯ ಚರ್ಚೆಗೆ 10 ನಿಮಿಷ ಸಮಯ ಕೊಡಿ. ನಂತ್ರ ನಾವು ಕೂಡ ಧರಣಿಯಲ್ಲಿ ಭಾಗವಹಿಸುತ್ತೇವೆ.’

ಈ ಮನವಿ ಹೊರತಾಗಿಯೂ ಬಿಜೆಪಿ ಪಟ್ಟು ಬಿಡಲಿಲ್ಲ. ಈ ಹಂತದಲ್ಲಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಹಲವು ಪ್ರಮುಖ ಮಸೂದೆಗಳನ್ನು ತರಾತುರಿಯಲ್ಲಿ ಮಂಡಿಸಿದರು. ಜತೆಗೆ ವಿತ್ತೀಯ ಕಾರ್ಯ ಕಲಾಪಗಳಿಗೆ ಚಾಲನೆ ನೀಡಿ, 2016-17 ನೇ ಸಾಲಿನ ಬಜೆಟ್‍ಗೆ ಪೂರ್ಣ ಪ್ರಮಾಣದ ಒಪ್ಪಿಗೆ ಕೋರಿ ಸದನದ ಮತಕ್ಕೆ ಹಾಕಿದರು.

ನಂತರ, ಪ್ರತಿಪಕ್ಷದ ವಿರೋಧ ತೀವ್ರವಾದ ಹಿನ್ನೆಲೆಯಲ್ಲಿ ಸದನ ಕಲಾಪವನ್ನು ಸಂಜೆಗೆ ಮುಂದೂಡಲಾಯಿತು. ಸಂಜೆಯೂ ಬಿಜೆಪಿ ಪ್ರತಿಭಟನೆ ಮುಂದುವರಿಸಿದ ಪರಿಣಾಮ ಕಲಾಪವನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಲಾಯಿತು. ಮತ್ತೊಂದೆಡೆ ವಿಧಾನಪರಿಷತ್ತಿನಲ್ಲೂ ಬಜೆಟ್ ಗೆ ಪೂರ್ಣ ಪ್ರಮಾಣದ ಒಪ್ಪಿಗೆ ನೀಡಿ ನಂತ್ರ ಕಲಾಪ ಮುಂದೂಡಲಾಯ್ತು.

Leave a Reply