ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಕೊಟ್ಟ ಕೊನೆಕ್ಷಣದ ಏಟಿಗೆ ಅಮಿತ್ ಶಾ ತಿರುಮಂತ್ರವೇನು?

ಡಿಜಿಟಲ್ ಕನ್ನಡ ವಿಶೇಷ:

ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿ ಪೆಮಾ ಖಂಡು ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ಬಂಡಾಯದ ಬಿಕ್ಕಟ್ಟಿನಿಂದ ಅರುಣಾಚಲ ಪ್ರದೇಶದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದ ಕಾಂಗ್ರೆಸ್ ಅಂತಿಮ ಕ್ಷಣದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ಎದುರಾಳಿ ಬಿಜೆಪಿಗೆ ಭರ್ಜರಿ ಹೊಡೆತವನ್ನೇ ನೀಡಿದೆ.

ಕಾಂಗ್ರೆಸ್ ಬಂಡಾಯ ಬಿಸಿಯಲ್ಲಿ ಅಲ್ಲಿನ ಅಧಿಕಾರ ಸೂತ್ರದಲ್ಲಿ ತನ್ನ ಪಾಲು ಪಡೆದುಕೊಳ್ಳುವುದಕ್ಕೆ ಬಿಜೆಪಿ ಉತ್ಸುಕವಾಗಿತ್ತು. ಕಳೆದ ಡಿಸೆಂಬರ್ ನಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ನಬಮ್ ತುಕಿ ವಿರುದ್ಧ ಪಕ್ಷದಲ್ಲೇ ಅಸಮಾಧಾನ ಮೂಡಿತ್ತು. ಆಗ ಕಲಿಖೊ ಪುಲ್ ಅವರ ನೇತೃತ್ವದಲ್ಲಿ 30 ಶಾಸಕರು ಬಂಡಾಯ ಎದ್ದಿದ್ದರು. ಇದರೊಂದಿಗೆ ಕಾಂಗ್ರೆಸ್ ಪಕ್ಷದ ಸಾಮರ್ಥ್ಯ ಕೇವಲ 15 ಸ್ಥಾನಕ್ಕೆ ಇಳಿದಿತ್ತು. ಹೀಗಾಗಿ ಗವರ್ನರ್ ಜ್ಯೋತಿಪ್ರಸಾದ್ ರಾಜ್ಕೋವಾ ಸರ್ಕಾರವನ್ನು ವಜಾಗೊಳಿಸಿದ್ದರು. ಈ ವಜಾ ಪ್ರಕ್ರಿಯೆ ನಡೆದಿದ್ದು ಕೇಂದ್ರದ ಬಿಜೆಪಿ ಸರ್ಕಾರದ ಸಂಪುಟ ಸಭೆಯ ಅನುಮೋದನೆ ಮೇರೆಗೆ. ಇದರ ವಿರುದ್ಧ ಆದೇಶ ನೀಡಿದ ಸುಪ್ರೀಂಕೋರ್ಟ್ ಅಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮರುಸ್ಥಾಪಿಸಿತ್ತು.

Pema-Khanduಇಷ್ಟಾಗಿಯೂ ಬಿಜೆಪಿ ಮುಜುಗರ ಮರೆಮಾಚುತ್ತ ಖುಷಿಯಲ್ಲೇ ಇತ್ತು. ಏಕೆಂದರೆ, ನಬಮ್ ತುಕಿ ಹೇಗೆಂದರೂ ಬಹುಮತ ಸಾಬೀತು ಮಾಡಲಾಗುವುದಿಲ್ಲ ಎಂದು. ಆದರೆ ಈ ವಿಷಯದಲ್ಲಿ ಮಾತ್ರ ಮಾಸ್ಟರ್’ಸ್ಟ್ರೋಕ್ ನೀಡಿದ ಕಾಂಗ್ರೆಸ್, ತುಕಿ ಅವರಿಂದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಿಸಿ ಬಂಡಾಯದ ಪಾಳಯದಲ್ಲಿದ್ದ ಪೆಮಾ ಅವರಿಗೆ ಸಿಎಂ ಪಟ್ಟ ಕಟ್ಟಿದೆ. ಇದರೊಂದಿಗೆ ಪಕ್ಷದ ಸಾಮರ್ಥ್ಯ ಮತ್ತೆ 45ಕ್ಕೆ ಏರಿದೆ. ಈಗ 2 ಪಕ್ಷೇತರರ ಜತೆಗೆ ತನ್ನ ಸಾಮರ್ಥ್ಯವನ್ನು 47 ಕ್ಕೆ ಏರಿಸಿಕೊಂಡು ಮತ್ತೆ ಅಧಿಕಾರ ಹಿಡಿದಿದೆ.

ಹೀಗೆ ಭಿನ್ನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮೊದಲೇ ಮಾಡಬಹುದಿತ್ತು. ಈಗಲಾದರೂ ಕಾಂಗ್ರೆಸ್ ಎಚ್ಚೆತ್ತುಕೊಂಡಿರುವುದು ಬಿಜೆಪಿಯ ಕಾರ್ಯತಂತ್ರ ಚಾಣಕ್ಯ ಎಂದೇ ಹೆಸರಾಗಿರುವ ಅಮಿತ್ ಶಾಗೆ ಎಚ್ಚರಿಕೆ ಹೊಡೆತವೇ ಸರಿ. ಈಶಾನ್ಯ ರಾಜ್ಯಗಳನ್ನು ಕಾಂಗ್ರೆಸ್ ಮುಕ್ತವಾಗಿಸುವುದಕ್ಕೆ ಬಿಜೆಪಿಯು ಅಸ್ಸಾಮಿನಿಂದ ಶುರುಮಾಡಿದ್ದ ಪ್ರಯತ್ನಕ್ಕೆ ಅರುಣಾಚಲದಲ್ಲೊಂದು ತೊಡರುಗಾಲಾಗಿದೆ. ಇನ್ನೇನು ದಕ್ಕಿಸಿಕೊಂಡುಬಿಡುತ್ತೇವೆ ಎಂಬಂತಿದ್ದಾಗ ಕೈಜಾರಿರುವ ಈ ತುತ್ತು, ಇನ್ನೊಂದು ಸಂದೇಶವನ್ನೂ ಕೊಡುತ್ತಿದೆ ಎಂಬುದಕ್ಕೆ ಈ ವಿದ್ಯಮಾನ ಮುಖ್ಯವಾಗುತ್ತದೆ.

ಆ ಸಂದೇಶವೆಂದರೆ ಕಾಂಗ್ರೆಸ್ ಎಚ್ಚತ್ತಿದೆ ಅನ್ನೋದು. ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಬಲ ಕುಂದಿಸಿಕೊಂಡಿದ್ದೇ ಬಿಜೆಪಿಗೆ ಬಂಡವಾಳವಾಗಿತ್ತಾಗಲೀ, ಅಲ್ಲಿ ಸ್ವಂತ ಸಂಘಟನೆಯ ಶಕ್ತಿ ಇತ್ತೆಂಬುದಲ್ಲ. ಅಸ್ಸಾಮಿನಲ್ಲಿ ಸಹ ಹಿಮಂತೊ ಬಿಸ್ವ ಸರ್ಮ ಎಂಬ ಹಳೆಯ ಕಾಂಗ್ರೆಸಿಗ ಬಿಜೆಪಿ ಜತೆ ಕೈಜೋಡಿಸಿದ್ದು ಗದ್ದುಗೆ ಹಿಡಿಯುವುದಕ್ಕೆ ಪ್ರಮುಖ ಕಾರಣವಾಗಿತ್ತು. ಹಿಮಂತೊರನ್ನು ಕಾಂಗ್ರೆಸ್ ಉಳಿಸಿಕೊಂಡಿದ್ದರೆ, ಅಕ್ರಮ ಬಾಂಗ್ಲಾ ವಲಸಿಗರ ಸಮಸ್ಯೆ ತಡೆಯುವ ಬಿಜೆಪಿ ಘೋಷಣೆಯ ಹೊರತಾಗಿಯೂ ಅಧಿಕಾರಕ್ಕೆ ಬರುವುದು ಸುಲಭವಾಗುತ್ತಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಭಿನ್ನರ ಧ್ವನಿಗಳನ್ನು ಆಲಿಸುವುದಕ್ಕೆ ವ್ಯವಧಾನ ತೋರದಿದ್ದದ್ದೇ ಸಮಸ್ಯೆಯ ಪ್ರಾರಂಭವಾಗಿತ್ತು. ಅರುಣಾಚಲದಲ್ಲೂ ಅಲ್ಲಿಂದಲೇ ಸಮಸ್ಯೆ ಶುರುವಾಗಿದ್ದು. ಆದರೆ ಇನ್ನೇನು ಅಧಿಕಾರ ಕೈತಪ್ಪಿಯೇ ಹೋಯಿತು ಎಂಬಂತಿರುವಾಗ ಬಂಡಾಯಗಾರರ ಮಾತು ಕೇಳಿಸಿಕೊಂಡು ಅವರಿಗೆ ಸಮಾಧಾನವಾಗುವಂತೆ ಪೆಮಾ ಖಂಡುರನ್ನು ಮುಖ್ಯಮಂತ್ರಿಯಾಗಿಸಿ, ಸಿಡಿದುಹೋದವನ್ನೆಲ್ಲ ಒಟ್ಟುಗೂಡಿಸಿದ್ದು ಜಡವಾಗಿದ್ದ ಕಾಂಗ್ರೆಸ್ ವಾತಾವರಣದ ಮಟ್ಟಿಗೆ ಹೇಳುವುದಾದರೆ ಒಂದು ಕ್ಷಿಪ್ರ ಕ್ರಾಂತಿಯೇ ಸರಿ. ಅರ್ಥಾತ್… ಕಾಂಗ್ರೆಸ್ ಹೈಕಮಾಂಡ್ ಈಶಾನ್ಯ ಭಾರತದ ರಾಜಕೀಯದ ವಿಷಯದಲ್ಲಿ ನಿದ್ದೆಯಿಂದೆದ್ದಿದೆ ಎಂದಾಯಿತು. ಹೆಂಗಂದ್ರೂ ಇವರು ಏಳುವುದಿಲ್ಲ ಎಂಬ ವಿಶ್ವಾಸದಲ್ಲಿದ್ದ ಬಿಜೆಪಿಗೆ ಈಗ ಬಿಸಿ ತಾಕಿಸಿಕೊಳ್ಳಬೇಕಾದ ಸಮಯ.

ಏಕೆಂದರೆ ಅಸ್ಸಾಮಿನ ಹಿಮಂತೊ ಅವರನ್ನಿರಿಸಿಕೊಂಡು ಈಶಾನ್ಯ ಭಾರತವನ್ನು ಕಾಂಗ್ರೆಸ್ ಮುಕ್ತವಾಗಿಸುವ ಕಾರ್ಯಯೋಜನೆಗೆ ಅಮಿತ್ ಶಾ ಕೈ ಹಾಕಿದ್ದಾರೆ. ಇಲ್ಲಿನ ಕಾರ್ಯಶೈಲಿ ಎಂದರೆ ಪ್ರಾದೇಶಿಕ ಪಕ್ಷಗಳನ್ನೆಲ್ಲ ಕಾಂಗ್ರೆಸ್ ವಿರೋಧಿ ಪಾಳೆಯದಲ್ಲಿ ತಂದು ನಿಲ್ಲಿಸುವುದು. ಈಶಾನ್ಯದ ಎಂಟು ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ ಮೈತ್ರಿ, ನಾಲ್ಕರಲ್ಲಿ ಕಾಂಗ್ರೆಸ್ ಪ್ರಣೀತ ಸರ್ಕಾರಗಳು ಹಾಗೂ ಒಂದು ರಾಜ್ಯದಲ್ಲಿ ಸಿಪಿಎಂ ಸರ್ಕಾರ ಅಧಿಕಾರ ಪಡೆದಿವೆ.

ಇದೀಗ ಬಿಜೆಪಿಯ ಅಮಿತ್ ಶಾ ಪ್ರಾದೇಶಿಕ ಶಕ್ತಿಗಳನ್ನೆಲ್ಲ ಕಲೆಹಾಕಿ ‘ನೆಡ’ (ನಾರ್ತ್ ಈಸ್ಟ್ ಡೆಮಾಕ್ರಟಿಕ್ ಅಲೈಯನ್ಸ್) ರಚಿಸಿದ್ದಾರೆ. ನೆಡ ಗುಂಪಲ್ಲಿ ಸೇರಿಕೊಳ್ಳಲು ಸೈ ಎಂದಿರುವ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಹಾಗೂ ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್ ಕ್ರಮವಾಗಿ ಸಿಕ್ಕಿಂ ಮತ್ತು ನಾಗಾಲ್ಯಾಂಡ್ ಗಳಲ್ಲಿ ಅಧಿಕಾರ ನಡೆಸುತ್ತಿವೆ. ಮಿಜೋರಾಂನಲ್ಲಿ ಮಿಜೊ ನ್ಯಾಷನಲ್ ಫ್ರಂಟ್ ಜತೆ ಹಾಗೂ ಮೇಘಾಲಯದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ಹಾಗೂ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿಗಳ ಜತೆ, ತ್ರಿಪುರಾದಲ್ಲಿ ಇಂಡಿಜೀನಿಯಸ್ ಪೀಪಲ್ ಫ್ರಂಟ್  ಜತೆ ‘ನೆಡ’ ಸಾಕಾರವಾಗಿದೆ. ಕಾಂಗ್ರೆಸ್ ತಮ್ಮ ಮಾತಿಗೆ ಮಣೆಹಾಕುತ್ತಿಲ್ಲ ಹಾಗೂ ರಾಷ್ಟ್ರಮಟ್ಟದಲ್ಲಿ ಅಪ್ರಸ್ತುತವಾಗುತ್ತಿದೆ ಎಂಬಂಶ ಈ ಎಲ್ಲ ಪಕ್ಷಗಳಿಗೆ ಬಿಜೆಪಿ ಪ್ರಣೀತ ಕೂಟದಲ್ಲಿ ಭಾಗಿಯಾಗುವುದಕ್ಕೆ ಪ್ರೇರೇಪಿಸಿದೆ. ಈಗ ಕಾಂಗ್ರೆಸ್ ಅರುಣಾಚಲ ಪ್ರದೇಶ ವಿದ್ಯಮಾನದಲ್ಲಿ ನಿರೂಪಿಸಿರುವುದೇನೆಂದರೆ- ತಾನು ಭಿನ್ನರ ಜತೆ ಮಾತಾಡಿ ಮನವೊಲಿಸುವ ಶಕ್ತಿಯನ್ನೂ, ಕೊನೆಕ್ಷಣದಲ್ಲಿ ಪಂಚ್ ನೀಡುವ ಕೌತುಕವನ್ನೂ ಉಳಿಸಿಕೊಂಡಿದ್ದೇನೆ ಎಂಬುದು.. ಹೀಗಾಗಿ ಈಶಾನ್ಯ ಭಾರತವನ್ನು ಹೆಚ್ಚು-ಕಡಿಮೆ ಗೆದ್ದಿದ್ದೇ ಸೈ ಎಂಬ ಗುಂಗಿನಿಂದ ತುಸು ವಿಚಲಿತವಾಗಬೇಕಾದ ಸ್ಥಿತಿ ಬಿಜೆಪಿಗಿದೆ.

ಹಾಗಂತ ಏಕಾಏಕಿ ಬಿಜೆಪಿ ಸಾಧಿಸಿರುವ ಹೊಸ ಮೈತ್ರಿಗಳಲ್ಲಿ ಏನೂ ಬದಲಾವಣೆಯ ಪ್ರಭಾವವಾಗದು. ಇಲ್ಲಿನ ಬಹುತೇಕ ರಾಜ್ಯಗಳು ಕೇಂದ್ರದ ಅನುದಾನವನ್ನು ಅವಲಂಬಿಸಿವೆಯಾದ್ದರಿಂದ, ಕೇಂದ್ರದಲ್ಲಿ ಗಟ್ಟಿಯಾಗಿರುವ ಪಕ್ಷವನ್ನೇ ಹೆಚ್ಚು ಆಶ್ರಯಿಸುವುದಕ್ಕೆ ನೋಡುತ್ತವೆ. ಅದೇನೇ ಇದ್ದರೂ, ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭೆಯಲ್ಲಿ ತಾನೇ ದೊಡ್ಡಣ್ಣ ಎಂದು ನಿರೂಪಿಸಬೇಕಾದ ಒತ್ತಡ ಬಿಜೆಪಿ ಮೇಲೆ ಹೆಚ್ಚಿದೆ. ಅಲ್ಲೆಲ್ಲ ಗೆದ್ದರೆ ಈಶಾನ್ಯದ ಮೈತ್ರಿಗಳೂ ಬಿಜೆಪಿ ಮೇಲೆ ಹೆಚ್ಚಿನ ಭರವಸೆ ಇರಿಸುತ್ತವೆ.

ಈ ನಿಟ್ಟಿನಲ್ಲಿ ಬಿಜೆಪಿಯದ್ದು ದೂರಗಾಮಿ ಕಾರ್ಯತಂತ್ರ. 2018ರಲ್ಲಿ ಚುನಾವಣೆಗೆ ಹೋಗಲಿರುವ ಕ್ರೈಸ್ತ ಬಾಹುಳ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮಿಜೊರಾಂ, ಮೇಘಾಲಯಗಳಲ್ಲಿ ಬಿಜೆಪಿ ಹೆಣೆಯುವ ತಂತ್ರಗಳು ಹೇಗಿರುತ್ತವೆ? ಅರುಣಾಚಲದಲ್ಲಿ ಲೆಕ್ಕಾಚಾರ ಬುಡಮೇಲಾಗಿದ್ದಕ್ಕೆ ಒಮ್ಮೆ ತಲೆ ತುರಿಸಿಕೊಂಡು ಮುಂದೆ ಉರುಳಿಸಬೇಕಾದ ದಾಳಗಳೇನು ಎಂಬ ಹೊಸ ಲೆಕ್ಕಾಚಾರ ಅದಾಗಲೇ ‘ನೆಡ’ತೊಡಗಿರಬಹುದು ಅಮಿತ್ ಶಾ.

Leave a Reply