10 ವರ್ಷ ಹಳೆಯ ಡಿಸೇಲ್ ವಾಹನ ನೊಂದಣಿ ರದ್ದುಗೊಳಿಸಿ.. ದೆಹಲಿ ಆರ್ ಟಿಒ ಗೆ ಹಸಿರು ನ್ಯಾಯಾಲಯ ಕೊಟ್ಟ ಸೂಚನೆ

ಡಿಜಿಟಲ್ ಕನ್ನಡ ಟೀಮ್:

‘10 ವರ್ಷಕ್ಕಿಂತ ಹಳೆಯದಾದ ಡಿಸೇಲ್ ವಾಹನಗಳ ನೊಂದಣಿ ರದ್ದುಗೊಳಿಸಿ..’ ಇದು ದೆಹಲಿಯಲ್ಲಿ ಮಾಲಿನ್ಯ ತಡೆಗಟ್ಟಲು ದ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ (ಎನ್ ಜಿ ಟಿ) ದೆಹಲಿ ಆರ್ ಟಿ ಒಗೆ ನೀಡಿರೋ ಸ್ಪಷ್ಟ ಸೂಚನೆ.

ಕಳೆದ ಏಪ್ರಿಲ್ ನಲ್ಲಿ ಈ ತೀರ್ಪು ನೀಡಿತ್ತಾದರೂ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದ ಕುರಿತ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ದೆಹಲಿ ರೀಜನಲ್ ಟ್ರಾನ್ಸ್ ಪೋರ್ಟ್ ಕಚೇರಿ (ಆರ್ ಟಿ ಒ) ಗೆ ಈ ಸೂಚನೆ ನೀಡಿದೆ. ಯಾವ ಯಾವ ವಾಹನಗಳ ನೊಂದಣಿ ರದ್ದು ಮಾಡಬೇಕು ಎಂಬ ಪಟ್ಟಿಯನ್ನು ನಗರ ಸಂಚಾರಿ ಪೊಲೀಸರಿಗೆ ನೀಡಿ ಎಂದು ನಿರ್ದೇಶನ ನೀಡಿದೆ.

15 ವರ್ಷಕ್ಕೂ ಮೇಲ್ಪಟ್ಟ ಡಿಸೇಲ್ ಹಾಗೂ ಪೆಟ್ರೋಲ್ ವಾಹನಗಳು ನಗರ ಪ್ರದೇಶದಲ್ಲಿ ಸಂಚರಿಸಬಾರದು ಎಂದು 2014 ರಲ್ಲೇ ಎನ್ ಜಿ ಟಿ ಸೂಚಿಸಿತ್ತು. ಇನ್ನು ಕಳೆದ ಏಪ್ರಿಲ್ ನಲ್ಲಿ 10 ವರ್ಷ ಹಳೆಯದಾದ ಡಿಸೇಲ್ ವಾಹನಗಳಿಗೆ ನಿಷೇಧ ಹೇರಿತ್ತು. ಈ ಆದೇಶದ ಹೊರತಾಗಿಯೂ 10 ವರ್ಷಕ್ಕೂ ಮೇಲ್ಪಟ್ಟ ಕಾರುಗಳು ದೆಹಲಿಯ ರಸ್ತೆಗಳಲ್ಲಿ ಸಂಚಾರ ಮುಂದುವರಿಸಿದ್ದವು.

ದೂರಿನ ವಿಚಾರಣೆ ವೇಳೆ, ತನ್ನ ಆದೇಶ ಜಾರಿಯ ಕುರಿತಂತೆ ಹಸಿರು ನ್ಯಾಯಾಲಯ ದೆಹಲಿ ಸರ್ಕಾರಕ್ಕೆ ವರದಿ ಕೇಳಿತ್ತು. ಇದಕ್ಕೆ ಉತ್ತರವಾಗಿ, ಕಳೆದ ವರ್ಷ 3000 ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತಾದರೂ, ನಂತರ ಅವುಗಳನ್ನು ಬಿಡುಗಡೆ ಮಾಡಿದ್ದೇವೆ. ಮೊಟಾರ್ ವೆಹಿಕಲ್ ಕಾಯ್ದೆ ಪ್ರಕಾರ ವಾಹನಗಳ ನೊಂದಣಿ ರದ್ದುಗೊಳಿಸುವ ಅಧಿಕಾರ ಆರ್ ಟಿ ಒಗೆ ಮಾತ್ರ ಇದ್ದು, ನಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದಿತ್ತು ದೆಹಲಿ ಸರ್ಕಾರ. ಹೀಗಾಗಿ ಎನ್ ಜಿ ಟಿ ಈಗ ದೆಹಲಿಯ ಆರ್ ಟಿ ಒಗೆ ಸ್ಪಷ್ಟ ಸೂಚನೆ ನೀಡಿದೆ.

Leave a Reply