ಅಂತೂ-ಇಂತೂ ಜಾರ್ಜ್ ರಾಜೀನಾಮೆ, ಗಣಪತಿ ಆತ್ಮಹತ್ಯೆ ಸಂಬಂಧ ಎಫ್ಐಆರ್ ದಾಖಲಿಸಲು ನ್ಯಾಯಾಲಯದ ಆದೇಶ ಹಿನ್ನೆಲೆ

ಡಿಜಿಟಲ್ ಕನ್ನಡ ಟೀಮ್:

‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಪೊಲೀಸ್ ಅಧಿಕಾರಿಗಳ ವಿರುದ್ಧ  ಎಫ್ಐಆರ್ ದಾಖಲಿಸಲು ಕೊಡಗು ಜಿಲ್ಲಾ ನ್ಯಾಯಾಲಯವು ಸೋಮವಾರ ಸ್ಥಳೀಯ ಪೊಲೀಸರಿಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಜಾರ್ಜ್ ಸಲ್ಲಿಸಿರುವ ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗೀಕರಿಸಿದ್ದು, ಉಳಿದಿಬ್ಬರು ಅಧಿಕಾರಿಗಳನ್ನು ರಜೆ ಮೇಲೆ ಕಳುಹಿಸಲಾಗಿದೆ.

ಸಚಿವ ಜಾರ್ಜ್ ಅವರು ಸ್ವಪ್ರೇರಣೆಯಿಂದ ರಾಜೀನಾಮೆ ಸಲ್ಲಿಸಿದ್ದು, ಅದನ್ನು ಅಂಗೀಕರಿಸಲಾಗಿದೆ ಎಂದು ಸಿದ್ದರಾಮಯ್ಯನವರು ಮಾಧ್ಯಮದವರಿಗೆ ಸೋಮವಾರ ರಾತ್ರಿ ತಿಳಿಸಿದರು.

ಇದರೊಂದಿಗೆ ಎಫ್ಐಆರ್ ದಾಖಲಿಸುವುದಕ್ಕೇ ನಿರಾಕರಿಸಿದ್ದ ಸರ್ಕಾರದ ಧೋರಣೆಗೆ ಏಟು ಬಿದ್ದಿದೆ. ಗಣಪತಿ ಅವರ ಪುತ್ರ ನೇಹಾಲ್ ದಾಖಲಿಸಿದ್ದ ಖಾಸಗಿ ದೂರಿನ ಮೇಲೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಗಣಪತಿಯವರ ಪತ್ನಿ ಮತ್ತು ಪುತ್ರ ಹಾಗೂ ಗಣಪತಿ ಸಹೋದರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದಾಗ, ಅಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸುವುದಕ್ಕೆ ನಿರಾಕರಿಸಿದ್ದರು. ಸಿಐಡಿ ಇದರ ತನಿಖೆ ಹೊಣೆ ಹೊತ್ತುಕೊಳ್ಳುತ್ತಿರುವುದರಿಂದ ಅಲ್ಲಿಗೆ ನಿಮ್ಮ ದೂರನ್ನು ವರ್ಗಾಯಿಸುತ್ತೇವೆ ಎಂದಷ್ಟೇ ಹೇಳಿದ್ದರು. ಇದರಿಂದ ಅಸಮಾಧಾನಗೊಂಡ ಕುಟುಂಬದವರು ಜೆಡಿಎಸ್ ಮುಖಂಡ ಕುಮಾರಸ್ವಾಮಿ ಸಲಹೆ ಮೇರೆಗೆ ನ್ಯಾಯಾಲಯದ ಮೆಟ್ಟಿಲೇರಿ ಪಡೆದುಕೊಂಡಿರುವ ನಿರ್ದೇಶನ ಇದಾಗಿದೆ.

‘ಎಫ್ ಐ ಆರ್ ದಾಖಲಿಸುವಂತೆ ಹೇಳಿರುವ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಳ್ಳುತ್ತೇನೆ. ಆದರೆ ರಾಜಿನಾಮೆ ಬಗ್ಗೆ ಏನೂ ನಿರ್ಧರಿಸಿಲ್ಲ. ಅದನ್ನು ಪಕ್ಷದ ಜತೆ, ಮುಖ್ಯಮಂತ್ರಿ ಜತೆ ಚರ್ಚಿಸಿ ನಂತರ ಹೇಳುವೆ. ವಿರೋಧ ಪಕ್ಷಗಳು ಮೊದಲಿನಿಂದಲೂ ರಾಜಿನಾಮೆ ಕೇಳಿಕೊಂಡಿವೆ. ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ’ ಎನ್ನುತ್ತಲೇ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಉನ್ನತ ಸಭೆಗೆ ಹೋಗಿದ್ದರು ಸಚಿವ ಜಾರ್ಜ್. ಅಲ್ಲಿ ಹೆಚ್ಚಿನವರು ತಮ್ಮ ಬೆಂಬಲಕ್ಕೆ ನಿಲ್ಲದ ಕಾರಣ ಜಾರ್ಜ್ ಈ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಯಿತು.

ನಂತರ ವಿಧಾನ ಪರಿಷತ್ ಗೆ ಮುಖ್ಯಮಂತ್ರಿ ಅವರು ಹಣಕಾಸು ವಿಧೇಯಕಗಳ ಅನುಮೋದನೆಗೆ ಆಗಮಿಸಿದಾಗಲೂ ಈ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ. ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಸರ್ಕಾರದ ತೀರ್ಮಾನವನ್ನು ಸದನಕ್ಕೆ ತಿಳಿಸಬೇಕು ಎಂದು ಪ್ರತಿಪಕ್ಷ ನಾಯಕ ಈಶ್ವರಪ್ಪ ಪಟ್ಟು ಹಿಡಿದಾಗಲೂ, ‘ಆದೇಶದ ಪ್ರತಿ ಕೈಗೆ ತಲುಪಿ ಅದನ್ನು ಓದಿದ ನಂತರವೇ ಏನು ಹೇಳಬೇಕೋ ಹೇಳುತ್ತೇನೆ. ಆವರೆಗೆ ಏನನ್ನೂ ಹೇಳುವುದಿಲ್ಲ’ ಎಂದಿದ್ದರು ಸಿದ್ದರಾಮಯ್ಯ.

‘ಸದನದಲ್ಲಿ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಅವರ ನೇತೃತ್ವದ ಹೋರಾಟಕ್ಕೆ ಫಲ ಸಿಕ್ಕಿದೆ. ಜಾರ್ಜ್ ಹಾಗೂ ಆರೋಪಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂಬುದು ನಮ್ಮ ಆಗ್ರಹವಾಗಿತ್ತು. ನ್ಯಾಯಾಲಯದ ಆದೇಶವೂ ಅದನ್ನೇ ಹೇಳಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

‘ಎಫ್ ಐ ಆರ್ ದಾಖಲಾಗಿ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂಬುದೇ ನನ್ನ ಒತ್ತಾಯವಾಗಿತ್ತು. ಉಳಿದಂತೆ ಇನ್ನಿಬ್ಬರು ಅಧಿಕಾರಿಗಳನ್ನು ಅಮಾನತಿನಲ್ಲಿಡುವುದರ ಜತೆಗೆ, ಮೊದಲು ಈ ಸರ್ಕಾರದ ಸಲಹೆಗಾರರಾದ ಕೆಂಪಯ್ಯನವರನ್ನು ವಜಾಗೊಳಿಸಲಿ. ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಈಗ ಸಲಹೆಗಾರರ ಹುದ್ದೆಯಲ್ಲಿ ಕುಳಿತಿರುವ ಇಂಥವರಿಂದಲೇ ರಾದ್ಧಾಂತಗಳು ಸೃಷ್ಟಿಯಾಗುತ್ತಿವೆ. ಜನರ ತೆರಿಗೆ ಹಣ ಇಂಥವರಿಗೆ ಖರ್ಚು ಮಾಡಬೇಕಿಲ್ಲ. ಉಳಿದಂತೆ ಸಿಬಿಐ ತನಿಖೆ ಒತ್ತಾಯ ನಾನಂತೂ ಮಾಡಿರಲಿಲ್ಲ. ಡಿಕೆ ರವಿ ಪ್ರಕರಣದಲ್ಲಿ ನಾನೇ ಸಿಬಿಐಗೆ ಪ್ರಕರಣ ಕೊಡಿ ಎಂದು ಹೋರಾಡಿ ಅದು ಸಾಕಾರವಾದ ನಂತರವೂ ನ್ಯಾಯ ಸಿಗಲಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ.

ಇನ್ನು ಎಫ್ಐಆರ್ ದಾಖಲಾದ ನಂತರ ಆರೋಪಿಗಳ ಸ್ಥಾನದಲ್ಲಿರುವ ಈ ಮೂವರನ್ನು ಕೇವಲ ವಿಚಾರಣೆ ನಡೆಸುವುದೋ, ಬಂಧನದ ಅಗತ್ಯ ಇದೆಯೋ ಎಂಬುದು ತನಿಖಾ ಸಂಸ್ಥೆಗೆ ಬಿಟ್ಟ ವಿಚಾರವಾಗಿರುತ್ತದೆ. ಜಿಲ್ಲಾ ನ್ಯಾಯಾಲಯದ ನಿರ್ದೇಶನವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸುವ ಅವಕಾಶದ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾತು ಕೇಳಿಬಂದಿದೆ.

Leave a Reply