ಕಾಶ್ಮೀರಿ ನಾಗರಿಕರ ಮೇಲೇಕೆ ಸರ್ಕಾರದ ಪ್ರಹಾರ ಎಂಬ ಗುಲಾಂ ನಬಿ ಪ್ರಶ್ನೆಗೆ ಅರುಣ್ ಜೇಟ್ಲಿ ಕೊಟ್ಟ ಉತ್ತರವೇನು?

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರ ಹಿಂಸಾಚಾರದ ಬಗ್ಗೆ ಸೋಮವಾರ ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯಾಯಿತು. ಅಭಿಪ್ರಾಯ ಭೇದಗಳ ಮಾತಿನ ಬಾಣಗಳಿದ್ದಾಗಿಯೂ, ಪಾಕಿಸ್ತಾನ ಪ್ರೇರಿತ ಉಗ್ರವಾದಕ್ಕೆ ಪಕ್ಷಭೇದ ಮರೆತ ಖಂಡನೆಗೆ ಕಲಾಪ ಸಾಕ್ಷಿಯಾಗಿದ್ದು ವಿಶೇಷ.

ಕಾಶ್ಮೀರ ಕಣಿವೆಯಲ್ಲಿ ಅರಾಜಕತೆ ಸುಧಾರಣೆಗೆ ಹಾಗೂ ಉಗ್ರವಾದಿಗಳ ವಿರುದ್ಧ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳುತ್ತಲೇ ಪ್ರತಿಪಕ್ಷಗಳು ಈ ವಿಷಯದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರದ ವಿರುದ್ಧ ವೈಫಲ್ಯದ ಆರೋಪ ಹೊರೆಸಿದವು. ಇದಕ್ಕೆ ಸರ್ಕಾರದ ಪರವಾಗಿ ಉತ್ತರವೂ ಬಂತು.

ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಕಾಂಗ್ರೆಸ್ಸಿನ ಗುಲಾಂ ನಬಿ ಆಜಾದ್, ‘ಉಗ್ರವಾದಿಯನ್ನು ಹತ್ಯೆಗೈದಿರುವುದಕ್ಕೆ ಹಾಗೂ ಆತಂಕವಾದಿಗಳನ್ನು ಹತ್ತಿಕ್ಕುವುದಕ್ಕೆ ನಮ್ಮ ಬೆಂಬಲವೂ ಇದೆ. ಈ ವಿಷಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಅಲ್ಲದೇ, ಜಮ್ಮು-ಕಾಶ್ಮೀರದಲ್ಲಿ ನಮ್ಮ ಸರ್ಕಾರವೂ ಸೇರಿದಂತೆ ಎಲ್ಲ ಪಕ್ಷಗಳ ಅಧಿಕಾರವಧಿಯಲ್ಲೂ ಇಂಥ ಘಟನೆಗಳಾಗಿವೆ. ಆದರೆ ಈ ಮೈತ್ರಿ ಸರ್ಕಾರ ಮಾತ್ರ ಪರಿಸ್ಥಿತಿ ಹತೋಟಿ ಮಾಡುವಲ್ಲಿ ವಿಫಲವಾಗಿದೆ. ಉಗ್ರವಾದಿಗಳನ್ನು ಹತ್ತಿಕ್ಕುವುದು ಸರಿ. ಆದರೆ ಕಾಶ್ಮೀರಿಗಳ ಮೇಲೂ ದಾಳಿ ಆಗುತ್ತಿದೆ. ಕಾಶ್ಮೀರದ ಆಸ್ಪತ್ರೆಗಳು ನಾಗರಿಕರಿಂದ ತುಂಬಿಹೋಗಿವೆ.ಇದಕ್ಕೆ ಸರ್ಕಾರ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಅಲ್ಲಿನ ಜನರ ವಿಶ್ವಾಸವನ್ನು ಸಂಪೂರ್ಣ ಗಳಿಸಿಬಿಟ್ಟಿದ್ದೆ ಎಂದು ಸುಳ್ಳಾಡುವುದಿಲ್ಲ. ಆದರೆ ನಾವು ಸಂವಾದಕ್ಕೆ ತೆರೆದುಕೊಂಡಿದ್ದೆವು. ಪ್ರತ್ಯೇಕತಾವಾದಿಗಳನ್ನು ನಿಯಂತ್ರಿಸುತ್ತಲೇ, ಉಗ್ರಗಾಮಿ ಕೃತ್ಯಗಳನ್ನು ನಿಯಂತ್ರಿಸುತ್ತಲೇ ಆದಷ್ಟೂ ಜನರಿಗೆ ಹತ್ತಿರವಾಗಲು ಪ್ರಯತ್ನಿಸಿದ್ದೆವು. ಆದರೆ ಈ ಸರ್ಕಾರ ಕಣಿವೆಯಲ್ಲಿ ಆರೆಸ್ಸೆಸ್ ನೀತಿ ತಂದು ಅಲ್ಲಿನ ಸಮಸ್ಯೆ ಬಗೆಹರಿಸಲು ನೋಡುತ್ತಿದೆ. ಇದು ಎಂದೂ ಆಗುವಂಥದ್ದಲ್ಲ…’ ಎಂದು ಹೇಳುತ್ತ, ಮೂಲತಃ ಕಾಶ್ಮೀರಿಗಳ ಹೃದಯದಲ್ಲಿ ಪ್ರೀತಿಯಿದೆ, ಅದನ್ನು ಪಡೆಯುವುದಕ್ಕೆ ನಾವು ಸಜ್ಜುಗೊಳ್ಳಬೇಕು ಎಂಬ ಪ್ರತಿಪಾದನೆಗೆ ಇಳಿದರು. ಐ ಎಸ್ ಐ ಎಸ್ ಬೇರೆ ಕಡೆಗಳಲ್ಲೆಲ್ಲ ಪ್ರಬಲವಾದರೂ ಇಲ್ಲಿನ ಮುಸ್ಲಿಮರು ಅದರಲ್ಲಿ ಪಾಲುಗೊಳ್ಳುವಿಕೆ ಇಲ್ಲವೇ ಇಲ್ಲ ಎಂಬಷ್ಟರಮಟ್ಟಿಗೆ ದೂರವಿದ್ದಾರೆ, ಇದವರ ದೇಶಭಕ್ತಿಯಲ್ಲವೇ ಅಂತ ವಕಾಲತ್ತು ವಹಿಸಿದರು. ಈ ನಿಟ್ಟಿನಲ್ಲಿ ಗುಲಾಂ ನಬಿ ಎರಡು ಉದಾಹರಣೆಗಳನ್ನು ನೀಡಿದರು. ‘ಕಾಶ್ಮೀರ ಕಣಿವೆಯಲ್ಲಿ ಯುವಕರು ಕಲ್ಲು ತೂರುವುದಕ್ಕೆ ಮಾತ್ರ ಬರುತ್ತಿದ್ದಾರೆ ಎಂಬ ಗ್ರಹಿಕೆ ಸರಿಯಲ್ಲ. ಅಮರನಾಥ ಯಾತ್ರೆಯಲ್ಲಿ ಅಪಘಾತ ಸಂಭವಿಸಿದಾಗ ಸ್ಥಳೀಯ ಮುಸ್ಲಿಮರು ಸಹಕರಿಸಿರುವುದನ್ನು ಟಿವಿಗಳಲ್ಲಿ ನೋಡಿದ್ದೇನೆ. ಹಿಂಸಾಗ್ರಸ್ತ ಕಾಶ್ಮೀರದಲ್ಲಿ ಪಂಡಿತ ಸಮುದಾಯದವರೊಬ್ಬರ ಸಾವಾದಾಗ ಕರ್ಫ್ಯೂ ವಿಧಿಸಿದರೂ ಅಂತಿಮ ಸಂಸ್ಕಾರಕ್ಕೆ ಮುಸ್ಲಿಮರು ಸಹಕರಿಸಿದ್ದಾರೆ’ ಎಂದರು ಗುಲಾಂ ನಬಿ.

‘ಪ್ರತಿಭಟನೆ ನಿಯಂತ್ರಿಸುವಲ್ಲಿ ಭದ್ರತಾ ಪಡೆಯ ಬಲಪ್ರಯೋಗ ಅಗತ್ಯಕ್ಕಿಂತ ಹೆಚ್ಚಾಗಿದೆ. ನಾಗರಿಕರನ್ನು ಘಾಸಿಗೊಳಿಸುತ್ತಿರುವ, ಅಮಾಯಕ ಕಂದಮ್ಮಗಳನ್ನು ಕುರುಡಾಗಿಸುತ್ತಿರುವ ಪೆಲ್ಲಟ್ ಗನ್ (ಜನರನ್ನು ಚದುರಿಸುವ ಸೀಸಯುಕ್ತ ಆಯುಧ) ಬಳಕೆ ಏಕೆ ಆಗುತ್ತಿದೆ? ಕಾಶ್ಮೀರದಲ್ಲಿ ಪತ್ರಿಕೆಗಳು, ಕೇಬಲ್ ಟಿವಿಗಳ ಮೇಲೆ ನಿಷೇಧ ಹೇರಿರುವುದು ಸರಿಯಲ್ಲ. ಅಲ್ಲಿ ಹಾಗಾದರೆ, ಇತ್ತನಮ್ಮ ಸುದ್ದಿವಾಹಿನಿಗಳಲ್ಲಿ ಇಸ್ಲಾಂ ವಿರುದ್ಧ ವಿಷ ಕಾರಲಾಗುತ್ತಿದೆ. ಜಾಕಿರ್ ನಾಯ್ಕ್ ದ್ವೇಷಭಾಷಣ ಮಾಡಿದ್ದಾದಲ್ಲಿ ತನಿಖೆ ಆಗಲಿ. ಆದರೆ ಜಾಕಿರ್ ತಲೆಗೆ ಲಕ್ಷ ಇನಾಮು ಎಂದು ಹೇಳುತ್ತಿರುವ ದ್ವೇಷದ ಮಾತುಗಳಿಗೂ ಶಿಕ್ಷೆಯಾಗಬೇಕು. ಮಂತ್ರಿಮಂಡಲದಲ್ಲಿರುವವರ ದ್ವೇಷದ ಮಾತುಗಳೇ ಕಾಶ್ಮೀರದಂಥ ಪರಿಸ್ಥಿತಿ ಸೃಷ್ಟಿಸುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು ನಬಿ.

ಈ ವಿಷಯದಲ್ಲಿ ಪಾಕಿಸ್ತಾನದ ಪ್ರೇರಣೆಯನ್ನು ಖಂಡಿಸುವುದಕ್ಕೆ ಗುಲಾಂ ನಬಿ ಮರೆಯಲಿಲ್ಲ. ‘ಉಗ್ರಗಾಮಿ ಹತ್ಯೆಗೆ ಪಾಕಿಸ್ತಾನ ಕರಾಳ ದಿನ ಆಚರಿಸುತ್ತದೆಯೇ? ಪಾಕಿಸ್ತಾನದಲ್ಲಾಗುತ್ತಿರುವ ಹತ್ಯೆ- ಅರಾಜಕತೆಗಳಿಗೆ ನಾವು ಕರಾಳ ದಿನ ಆಚರಿಸುವುದಾದರೆ ಪ್ರತಿದಿನವೂ ಕರಾಳ ದಿನವಾಗುತ್ತದೆ’ ಅಂತ ಕುಟುಕಿದರು ನಬಿ.

ಗುಲಾಂ ನಬಿ ಮಾತು ಮುಗಿಯುತ್ತಲೇ ರಾಜ್ಯಸಭೆಯ ಸಭಾನಾಯಕ ಅರುಣ್ ಜೇಟ್ಲಿ ಮಾತಿಗಿಳಿದರು. ಗುಲಾಂ ನಬಿಯವರ ವಾದಸರಣಿ ಯಾರೂ ಉಪೇಕ್ಷಿಸುವಂಥದ್ದಾಗಿರಲಿಲ್ಲ. ಅವಕ್ಕೆ ಅದೇ ಓಘದಲ್ಲಿ ಉತ್ತರ ನೀಡತೊಡಗಿದರು ಜೇಟ್ಲಿ.

‘ಇದು ನಾವೆಲ್ಲ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಚರ್ಚಿಸಬೇಕಾದ ವಿಷಯ. ಅದೇ ನಿಟ್ಟಿನಲ್ಲಿ ಗಂಭೀರ ಚರ್ಚೆಗೆ ತೊಡಗಿಸಿಕೊಂಡಿರುವುದಕ್ಕೆ ಪ್ರತಿಪಕ್ಷವನ್ನು ಅಭಿನಂದಿಸುವೆ. ಗುಲಾಂ ನಬಿ ಮಾತುಗಳಲ್ಲೇ ತಿಳಿಯುವಂತೆ ಜಮ್ಮು-ಕಾಶ್ಮೀರ ಒಂದು ದೀರ್ಘ ಅವಧಿಗೆ ಸುಸ್ಥಿತಿಯಲ್ಲಿತ್ತು. ದಿನವೂ ನಲ್ವತ್ತು ವಿಮಾನಗಳ ಹಾರಾಟವಿತ್ತು ಅಂತ ನಬಿ ಹೇಳಿರುವುದರಲ್ಲೇ ಇಲ್ಲಿನ ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳು ಉತ್ತಮ ಸ್ಥಿತಿ ಹೊಂದಿದ್ದವು ಎಂಬುದನ್ನು ಒಪ್ಪಿಕೊಂಡಂತೆ. ಆದರೆ ಈಗ ಬಿಜೆಪಿ-ಪಿಡಿಪಿ ಮೈತ್ರಿ ಅಧಿಕಾರದಲ್ಲಿರುವುದೇ ವಾತಾವರಣ ಹತೋಟಿ ತಪ್ಪಿರುವುದಕ್ಕೆ ಕಾರಣ ಅಂತ ಅರ್ಥೈಸುವುದಿದೆಯಲ್ಲ… ಇಲ್ಲೇ ಸಮಸ್ಯೆ ಇರುವುದು. ಜಮ್ಮು-ಕಾಶ್ಮೀರ ರಾಜಕಾರಣದಲ್ಲಿ ತಮ್ಮ ಆಡಳಿತದ ದಿನಗಳು ಚೆನ್ನಾಗಿದ್ದವು ಎನ್ನುತ್ತಿದ್ದಾರೆ ನಬಿ. ಕಾಂಗ್ರೆಸ್ ಹೇಗೆ ಕಣಿವೆಯ ರಾಜಕಾರಣದಲ್ಲಿ ಆಟವಾಡಿದೆ, ಅಲ್ಲಿನ ಸರ್ಕಾರಗಳನ್ನು ಅಸ್ಥಿರಗೊಳಿಸುವಲ್ಲಿ ಹೇಗೆ ತೊಡಗಿಸಿಕೊಂಡಿತ್ತು ಎಂಬ ಇತಿಹಾಸಕ್ಕೆ ನಾನೇನಾದರೂ ಕೈಹಾಕಿದರೆ ಅದು ರಾಜಕೀಯ ಚರ್ಚೆಯಾಗುತ್ತದೆ. ಆದರೆ ಬಿಜೆಪಿ- ಪಿಡಿಪಿ ಸರ್ಕಾರದಿಂದ ಪರಿಸ್ಥಿತಿ ಕೆಟ್ಟಿದೆ ಎಂಬ ಮಾತು ಬಿಟ್ಟುಬಿಡಿ. ಏಕೆಂದರೆ ವಾಸ್ತವ ನಿಮಗೂ ಗೊತ್ತಿದೆ. ಚುನಾವಣೆಯ ಫಲಿತಾಂಶವೇ ಹಾಗಿತ್ತು. ಜಮ್ಮುವಿನಲ್ಲಿ ಬಿಜೆಪಿಗೆ ಕಾಶ್ಮೀರದಲ್ಲಿ ಪಿಡಿಪಿಗೆ ಸಮರ್ಥನೆ ಸಿಕ್ಕಿತ್ತು. ನಮ್ಮಿಬ್ಬರನ್ನು ಬಿಟ್ಟು ಇನ್ಯಾರೂ ಸರ್ಕಾರ ರಚಿಸುವಂತೆಯೇ ಇರಲಿಲ್ಲ. ಪಿಡಿಪಿ ಜತೆಗೆ ನಮಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದನ್ನು ಮೊದಲೇ ಒಪ್ಪಿಕೊಂಡಿದ್ದೇವೆ. ಆದರೆ ಜನಾದೇಶದ ಚೌಕಟ್ಟಿನಲ್ಲಿ ಬೇರೆ ಆಯ್ಕೆಯೇ ಇರಲಿಲ್ಲ. ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಹತ್ತಿಕ್ಕಬೇಕೆಂದರೆ ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಜತೆ ರಾಷ್ಟ್ರೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಲೇಬೇಕು. ಕಾಂಗ್ರೆಸ್ ಸಹ ಈ ಹಿಂದೆ ಇವೆರಡೂ ಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಂಡಿದೆ. ಹೀಗಾಗಿ ಈ ರಾಜಕೀಯ ದೃಷ್ಟಿಕೋನವನ್ನು ದೂರುವುದನ್ನು ಮೊದಲು ಬಿಡಿ…’

‘ಜಮ್ಮು-ಕಾಶ್ಮೀರದಲ್ಲಿ ವಾತಾವರಣ ಕದಡಿರುವುದಕ್ಕೆ ಕಾರಣವಾಗಿರುವುದು ನಬಿ ಆರೋಪಿಸುತ್ತಿರುವಂತೆ ದೆಹಲಿಯ ಟಿವಿ ಟಾನೆಲ್ ಚರ್ಚೆಗಳೂ ಅಲ್ಲ, ಮಂತ್ರಿಮಂಡಲದಲ್ಲಿ ಯಾರೋ ಕೊಟ್ಟ ಹೇಳಿಕೆಗಳೂ ಅಲ್ಲ. ಮುಖ್ಯ ವಿಷಯಕ್ಕೆ ಬನ್ನಿ. ಕಾಶ್ಮೀರ ಭಾರತದ ಅಂಗ ಎಂದು ಪಾಕಿಸ್ತಾನ ಒಪ್ಪಿಲ್ಲ. ಹಾಗೆಂದು ಸಾಂಪ್ರದಾಯಿಕ ಯುದ್ಧದಲ್ಲಿ ನಮ್ಮನ್ನು ಗೆಲ್ಲುವುದು ಅಸಾಧ್ಯ ಅಂತ ಅವರಿಗೂ ಮನವರಿಕೆ ಆಗಿದೆ. ಇದಕ್ಕೆ ಅವರು ಉಗ್ರವಾದವನ್ನು ಸಾಧನವಾಗಿಸಿಕೊಂಡಿದ್ದಾರೆ. ಇಂಥ ಪಾಕ್ ಪ್ರೇರಿತ ಉಗ್ರನನ್ನು ಕೊಂದಿರುವುದರಿಂದಲೇ ಕಾಶ್ಮೀರದಲ್ಲಿ ಪ್ರತಿಭಟನೆ ಶುರುವಾಗಿದೆ. ಕಾಶ್ಮೀರದ ಜನರನ್ನು ಹಿಂಸೆಗೆ ಒಳಪಡಿಸುವುದರಿಂದ ಸರ್ಕಾರಕ್ಕೇನು ಸಿಗುತ್ತದೆ? ಇಲ್ಲಿ ಸರ್ಕಾರ ಹೋರಾಡುತ್ತಿರುವುದು ಯಾವ ನಾಗರಿಕರ ವಿರುದ್ಧವೂ ಅಲ್ಲ. ಆತಂಕವಾದಿಗಳ ವಿರುದ್ಧ. ಈ ಆತಂಕವಾದದ ಪರ ವಹಿಸಿಕೊಂಡು ಬೀದಿಗಿಳಿದು ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟ ಸಂದರ್ಭದಲ್ಲಿ, ದೇಶದ ಏಕತೆ ವಿರುದ್ಧವೇ ಪ್ರಹಾರವಾಗುತ್ತಿರುವಾಗ ಅದನ್ನು ನೋಡುತ್ತ ಕುಳಿತುಕೊಳ್ಳಲಾಗುವುದಿಲ್ಲ.’

‘ಇನ್ನು ಈ ಹಂತದಲ್ಲಿ ಅಗತ್ಯಕ್ಕಿಂತ ಹೆಚ್ಚು ಬಲ ಉಪಯೋಗಿಸಲಾಗಿದೆ ಎಂಬುದು ನಬಿ ಅವರ ಆರೋಪ. ಪ್ರತಿಭಟನೆ ಹಿಂಸಾಗ್ರಸ್ತವಾದಾಗ ಅದನ್ನು ನಿಯಂತ್ರಿಸುವುದಕ್ಕೆ ಎಷ್ಟು ಬಲ ಉಪಯೋಗಿಸಬೇಕು ಎಂಬುದನ್ನು ಸರ್ಕಾರ ನಡೆಸುತ್ತಿರುವವರು ನಿರ್ದೇಶಿಸುತ್ತ ಇರಲಾಗುವುದಿಲ್ಲ. ಅಲ್ಲಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಭದ್ರತಾ ಪಡೆಗಳಿಗಿರುತ್ತದೆ.’

‘ಭಾರತೀಯರು ಉಗ್ರರ ಪಾಳೆಯ್ಷ್ಟಾಗಿ ಸೇರುತ್ತಿಲ್ಲ ಎಂಬುದು ನಿಜವಾದರೂ, ಐ ಎಸ್ ಐಎಸ್ ಅನ್ನು ವಿರಳವಾಗಿಯಾದರೂ ಸೇರಿಕೊಳ್ಳುತ್ತಿರುವುದಕ್ಕೆ ಉದಾಹರಣೆಗಳಿವೆಯಲ್ಲ.. ನಿಜ, ಮುಗ್ಧರಿಗೆ ಹಾನಿಯಾಗಬಾರದು. ಆದರೆ ಈ ಬಗ್ಗೆ ನಾವೆಲ್ಲ ತಿಳಿಹೇಳಬೇಕಿರುವುದು ಕಾಶ್ಮೀರಿ ಯುವಕರಿಗೆ. ಅವರು ಈ ಆತಂಕವಾದಿ ಆಂದೋಲನದಿಂದ ದೂರ ನಿಲ್ಲಲಿ. ಆಗ ಹಿಂಸಾತ್ಮಕ ಪ್ರತಿಭಟನೆಯನ್ನು ಹತ್ತಿಕ್ಕುವ ಪರಿಸ್ಥಿತಿಯೇ ಬರದು..’

ಈ ಮೇಲಿನಂತೆ ಜೇಟ್ಲಿ ಪ್ರತಿಪಕ್ಷದ ಬಿರುಸಿಗೆ ಅದೇ ಧಾಟಿಯಲ್ಲಿ ಉತ್ತರಿಸಿದ ನಂತರ ಜೆಡಿಯು, ಎಸ್ಪಿ, ಬಿಎಸ್ಪಿ ಸಂಸದರು ಸೇರಿದಂತೆ ಹಲವರು ಈ ವಿಷಯದ ಬಗ್ಗೆ ಮಾತನಾಡಿದರು. ಪಾಕಿಸ್ತಾನ ಪ್ರೇರಿತ ಉಗ್ರವಾದ ಹತ್ತಿಕ್ಕುವಲ್ಲಿ ಸರ್ಕಾರಕ್ಕೆ ಬೆಂಬಲ ಸಾರುತ್ತಲೇ, ಕಾಶ್ಮೀರದ ಜನ ಇದರಲ್ಲಿ ಸಿಲುಕಿಕೊಂಡಿದ್ದಾರೆ ಹಾಗೂ ಪತ್ರಿಕೆಗಳ ಮೇಲಿನ ನಿರ್ಬಂಧ ಸರಿಯಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾದವು.

ಅಂತಿಮವಾಗಿ ಇವೆಲ್ಲವಕ್ಕೂ ಪ್ರತಿಕ್ರಿಯಾತ್ಮಕವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು, ಜೇಟ್ಲಿ ಮಾರ್ಗಕ್ಕೆ ಹೊರತಾದ ಮೃದುಮಾತುಗಳಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದರು. ಆದರೆ ಈ ಸೌಮ್ಯ ಮಾತುಗಳಲ್ಲೇ ಪ್ರತಿಪಕ್ಷದ ಆರೋಪಗಳಾದ ಅತಿಬಲದ ಬಳಕೆ, ಪೆಲ್ಲೆಟ್ ಗನ್ ಬಳಕೆಗಳಿಗೆ ಮಾರ್ಮಿಕ ಉತ್ತರ ನೀಡುವಲ್ಲೂ ಸಫಲರಾದರು.

‘ಖಂಡಿತವಾಗಿಯೂ ನಾವು ಈ ವಿಷಯದಲ್ಲಿ ಸಂವೇದನಾಶೀಲರಾಗಿದ್ದೇವೆ. ನಿಮ್ಮ ಎಲ್ಲ ಆಕ್ಷೇಪಗಳನ್ನೂ ಕೇಳಿಸಿಕೊಂಡಿದ್ದೇನೆ. ಪ್ರಧಾನಿ ಮತ್ತು ನಾನು ಕಾಶ್ಮೀರದ ಪರಿಸ್ಥಿತಿ ಸುಧಾರಣೆಗೆ ಪ್ರತಿದಿನ ಪರಿಹಾರೋಪಾಯಗಳನ್ನು ಚರ್ಚಿಸುತ್ತೇವೆ. ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಜತೆ ದಿನಕ್ಕೆ ಮೂರ್ನಾಲ್ಕು ಬಾರಿ ದೂರವಾಣಿ ಸಂಪರ್ಕ ಮಾಡಿ ಸಮಾಲೋಚನೆ ಮಾಡುತ್ತಿದ್ದೇನೆ. ಅಲ್ಲಿನ ಸುರಕ್ಷಾ ಪಡೆಗಳ ಮುಖ್ಯಸ್ಥರ ಜತೆಗೆ ಮಾತನಾಡಿ ಪರಿಸ್ಥಿತಿ ನಿಭಾವಣೆಯಲ್ಲಿ ಸಂಯಮವನ್ನೇ ಆದ್ಯತೆಯಾಗಿರಿಸಿಕೊಳ್ಳುವುದಕ್ಕೆ ಸೂಚನೆ ನೀಡಿದ್ದೇವೆ. ಬಲಪ್ರಯೋಗಿಸಲೇಬೇಕಾಗಿ ಬಂದಾಗ ಅತಿಘಾತಕಾರಿ ಅಲ್ಲದ ಮಾರ್ಗವನ್ನೇ ಅನುಸರಿಸುವ ಸೂಚನೆ ಇದೆ’ ಎಂದ ಸಚಿವರು ಪೆಲ್ಲೆಟ್ ಗನ್ ಗಳಿಂದ ತೊಂದರೆ ಉಂಟಾಗುತ್ತಿದ್ದರೆ ಅದರ ಮರುಪರಿಶೀಲನೆ ಮಾಡುವ ಭರವಸೆಯನ್ನೂ ನೀಡಿದರು. ಆದರೆ ಇದೇ ಹಂತದಲ್ಲಿ, ಈ ಬಳಕೆ ತಮ್ಮಿಂದಲೇ ಶುರುವಾಗಿದ್ದೆಂಬ ಗ್ರಹಿಕೆಯನ್ನೂ ಹೊಗಲಾಡಿಸುವ ಬುದ್ಧಿವಂತಿಕೆ ತೋರಿದರು. ‘2010ರಲ್ಲೇ ಪೆಲ್ಲೆಟ್ ಗನ್ ಬಳಕೆ ಶುರುವಾಗಿದೆ. ಆಗ 198 ಮಂದಿ ಇದರಿಂದ ಘಾಸಿಗೊಳಗಾಗಿದ್ದಾಗಿ ಸಂಘಟನೆಯೊಂದರ ವರದಿ ಹೇಳುತ್ತಿದೆ. ಇವೆಲ್ಲ ಅಂಶಗಳನ್ನು ಖಂಡಿತ ಪರಾಮರ್ಶಿಸೋಣ. ಪತ್ರಿಕೆಗಳ ಮೇಲಿನ ನಿಯಂತ್ರಣ ರಾಜ್ಯ ಸರ್ಕಾರದ ನಿರ್ಧಾರವಾದರೂ ನಾವೂ ಸೂಚನೆ ನೀಡುತ್ತೇವೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುತ್ತದೆ’ ಎಂದರು.

ಗುಲಾಂ ನಬಿ ಪ್ರಸ್ತಾಪಿಸಿದ್ದ ಬೇಡಿಕೆಗಳಿಗೆ ಒಪ್ಪಿಕೊಳ್ಳುತ್ತ, ಸರ್ವಪಕ್ಷ ಸಭೆ ಖಂಡಿತ ಕರೆಯೋಣ, ನಿಷೇಧಾಜ್ಞೆಯಲ್ಲಿ ಸಿಲುಕಿರುವವರಿಗೆ ಅಗತ್ಯ ವಸ್ತುಗಳ ಪೂರೈಕೆ, ಚಿಕಿತ್ಸೆಗೆ ವೈದ್ಯಬಲ ಇವೆಲ್ಲವನ್ನೂ ಸರ್ಕಾರ ಮುತುವರ್ಜಿಯಿಂದ ಮಾಡುತ್ತದೆ ಎಂದರು ರಾಜನಾಥ ಸಿಂಗ್.

‘ಕಾಶ್ಮೀರ ನಿರ್ವಹಣೆಯಲ್ಲಿ ನಮಗೆ ಸಂವೇದನೆ ಇಲ್ಲ ಅಂದುಕೊಳ್ಳಬೇಡಿ. ಕಾಶ್ಮೀರಿಯತ್ ಹಾಗೂ ಇನ್ಸಾನಿಯತ್ (ಮಾನವತೆ) ನೆಲೆ ಹಾಕಿಕೊಟ್ಟವರು ವಾಜಪೇಯಿ. ನಾವದೇ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇವೆ. ಆದರೆ ಉಗ್ರನ ಸಾವನ್ನು ಹುತಾತ್ಮಗೊಳಿಸಿ ವೈಭವೀಕರಿಸುವುದು ಮಾತ್ರ ಕಾಶ್ಮೀರಿಯತ್- ಇನ್ಸಾನಿಯತ್ ಎರಡೂ ಆಗುವುದಿಲ್ಲ’ ಅಂತಲೂ ಹೇಳಿದರು ಸಚಿವರು.

Leave a Reply