ರಾಜ್ಯಸಭೆ ಸ್ಥಾನಕ್ಕೆ ಸಿಧು ರಾಜಿನಾಮೆ, ಮುಂದಿನ ಪಯಣ ಆಮ್ ಆದ್ಮಿಯತ್ತ?

 

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಯ ನವಜ್ಯೋತ್ ಸಿಂಗ್ ಸಿಧು ಸೋಮವಾರ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಅವರು ಬಿಜೆಪಿಯನ್ನೂ ತೊರೆಯಲಿದ್ದು, ಆಮ್ ಆದ್ಮಿ ಪಕ್ಷವನ್ನು ಸೇರಲಿದ್ದಾರೆ ಅಷ್ಟೇ ಅಲ್ಲದೇ ಮುಂದಿನ ವರ್ಷದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಲಿದ್ದಾರೆ ಎಂಬ ವದಂತಿಗಳು ರೆಕ್ಕೆ ಬಿಚ್ಚಿವೆ.

ನವಜೋತ್ ಸಿಂಗ್ ಸಿಧು ಅವರು ಬಿಜೆಪಿಯ ಜತೆ ಮುನಿಸಿಕೊಂಡಿದ್ದು ಹೊಸ ವಿದ್ಯಮಾನವೇನೂ ಅಲ್ಲ. ಲೋಕಸಭೆ ಚುನಾವಣೆಯಲ್ಲಿ ಅಮೃತಸರ ಕ್ಷೇತ್ರದಿಂದ ಅವರನ್ನು ತಪ್ಪಿಸಿ, ಅರುಣ್ ಜೇಟ್ಲಿ ಅವರಿಗೆ ಟಿಕೆಟ್ ನೀಡಲಾಯಿತು. ಅಲ್ಲಿ ಜೇಟ್ಲಿ ಸೋತು ನಂತರ ರಾಜ್ಯಸಭೆ ಸದಸ್ಯರಾದರು.

10 ವರ್ಷ ಅಮೃತಸರವನ್ನು ಪ್ರತಿನಿಧಿಸಿದ್ದ ಸಿಧು ಆಗಲೇ ಅಸಮಾಧಾನಗೊಂಡಿದ್ದರೂ ಬೇರೆ ಆಯ್ಕೆಗಳು ಇರಲಿಲ್ಲ. ಇವರನ್ನು ಖುಷಿಪಡಿಸಲೆಂದೇ ಏಪ್ರಿಲ್ ನಲ್ಲಿ ಬಿಜೆಪಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಆದರೆ ಪಂಜಾಬಿನಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಅಧಿಕಾರದಲ್ಲಿರುವ ಅಕಾಲಿದಳದ ಕಾರ್ಯವೈಖರಿ ಬಗ್ಗೆ ಸಿಧು ಮೊದಲಿನಿಂದಲೂ ಅಸಮಾಧಾನ ಹೊಂದಿದ್ದಾರೆ. ಈ ಬಾರಿ ಆಮ್ ಆದ್ಮಿ ಪಕ್ಷ ಅಲ್ಲಿನ ರಾಜಕೀಯದಲ್ಲಿ ಪರ್ಯಾಯವಾಗಿ ಹೊಮ್ಮುವ ಅವಕಾಶಗಳಿವೆ. ಬಾದಲ್ ಕುಟುಂಬದ ಆಡಳಿತದ ಬಗ್ಗೆ ಜನರಲ್ಲಿ ಬೇಸರ ವ್ಯಕ್ತವಾಗುತ್ತಿದೆ. ಕಾನೂನು- ಸುವ್ಯವಸ್ಥೆ, ಡ್ರಗ್ ಮಾಫಿಯಾ ಇತ್ಯಾದಿ ಸಮಸ್ಯೆಗಳು ಪಂಜಾಬನ್ನು ಮಂಕಾಗಿಸಿ ಜನರನ್ನು ಪರ್ಯಾಯದತ್ತ ಯೋಚಿಸಲು ಪ್ರೇರೇಪಿಸುತ್ತಿವೆ.

ಬಹುಶಃ ಈ ಎಲ್ಲ ಯೋಚನೆಗಳೊಂದಿಗೆ ಸಿಧು ಬಿಜೆಪಿ ತೊರೆಯಲು ಯೋಚಿಸಿ ಅದಕ್ಕೆ ಪೂರ್ವಭಾವಿಯಾಗಿ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಧು ಅವರ ಪತ್ನಿ ಬಿಜೆಪಿ-ಅಕಾಲಿ ಕೂಟದಲ್ಲಿದ್ದಾರೆ. ಈ ಹಿಂದೆಯೇ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಫೇಸ್ಬುಕ್’ನಲ್ಲಿ ಘೋಷಿಸಿ ಹಿಂದಕ್ಕೆ ಪಡೆದಿದ್ದರು. ಈಗ ಅವರೂ ರಾಜೀನಾಮೆ ನೀಡಬಹುದೆನ್ನಲಾಗಿದೆ.

Leave a Reply