ಸಚಿವರು, ಐಎಎಸ್ ಅಧಿಕಾರಿಗಳಿಗೆ ಬಿಸಿಸಿಐನಲ್ಲಿ ಜಾಗವಿಲ್ಲ.. ಲೋಧಾ ಸಮಿತಿ ಬಹುತೇಕ ಶಿಫಾರಸ್ಸುಗಳಿಗೆ ಸುಪ್ರೀಂ ಗ್ರೀನ್ ಸಿಗ್ನಲ್

ಡಿಜಿಟಲ್ ಕನ್ನಡ ಟೀಮ್:

ಬಿಸಿಸಿಐ ಸದಸ್ಯರಾಗಲು ಸಚಿವರು ಮತ್ತು ಐಎಎಸ್ ಅಧಿಕಾರಿಗಳು ಅನರ್ಹರು.. ಒಂದು ರಾಜ್ಯಕ್ಕೆ ಒಂದು ಮತ.. 70 ವರ್ಷ ಮೇಲ್ಪಟ್ಟವರಿಗೆ ಬಿಸಿಸಿಐನಲ್ಲಿ ಜಾಗವಿಲ್ಲ.. ಬಿಸಿಸಿಐ ವ್ಯಾಪ್ತಿಯಲ್ಲಿ ಆಟಗಾರರ ಸಂಸ್ಥೆ ಸ್ಥಾಪನೆ.. ಇವಿಷ್ಟೂ ಬಿಸಿಸಿಐನ ಆಡಳಿತಾತ್ಮಕ ಸುಧಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿರುವ ಲೋಧಾ ಸಮಿತಿಯ ಪ್ರಮುಖ ಶಿಫಾರಸ್ಸುಗಳು.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದ ನಂತರ ಬಿಸಿಸಿಐ ವ್ಯವಸ್ಥೆ ಸುಧಾರಣೆಗೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರಲು ನೇಮಿಸಲಾಗಿದ್ದ ನ್ಯಾ.ಎಂ.ಆರ್ ಲೋಧಾ ಸಮಿತಿಯ ಬಹುತೇಕ ಶಿಫಾರಸ್ಸುಗಳನ್ನು ಸುಪ್ರೀಂ ಒಪ್ಪಿಕೊಂಡಿದೆ. ಈ ಶಿಫಾರಸ್ಸುಗಳ ಅಳವಡಿಕೆಗೆ ಬಿಸಿಸಿಐಗೆ ಆರು ತಿಂಗಳ ಕಾಲಾವಕಾಶ ನೀಡಿದೆ. ಉಳಿದಂತೆ ಬಿಸಿಸಿಐ ಅನ್ನು ಆರ್ ಟಿ ಐ ಅಡಿಯಲ್ಲಿ ಹಾಗೂ ಬೆಟ್ಟಿಂಗ್ ಗೆ ಕಾನೂನಿನ ಅನುಮತಿ ನೀಡುವ ನಿರ್ಧಾರವನ್ನು ಕೋರ್ಟ್ ಸಂಸತ್ತಿನ ತೀರ್ಮಾನಕ್ಕೆ ಬಿಟ್ಟಿದೆ.

ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವ ಶಿಫಾರಸ್ಸುಗಳ ಪೈಕಿ ಪ್ರಮುಖವಾಗಿ ಗಮನ ಸೆಳೆದಿರೋದು ಸಚಿವರಿಗೆ ಸ್ಥಾನವಿಲ್ಲ ಎಂಬುದು. ಲೋಧಾ ಸಮಿತಿ ನೀಡಿದ್ದ ಆರಂಭಿಕ ಶಿಫಾರಸ್ಸಿನಲ್ಲಿ ರಾಜಕಾರಣಿಗಳನ್ನೇ ಬಿಸಿಸಿಐನಿಂದ ದೂರವಿಡಲು ಸೂಚಿಸಲಾಗಿತ್ತು, ಈ ಬಗ್ಗೆ ಮರುಪರಿಶೀಲನೆ ನಡೆಸಿದ ನಂತರ ಸಚಿವರು, ಐಎಎಸ್ ಮತ್ತು ಸರ್ಕಾರಿ ಅಧಿಕಾರಿಗಳಿಗೆ ನಿಷೇಧ ಹೇರಲಾಗಿದೆ. ಅಲ್ಲದೆ ಸರ್ಕಾರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಿಸಿಸಿಐನಲ್ಲಿ ಸ್ಥಾನ ಪಡೆಯುವಂತಿಲ್ಲ ಹಾಗೂ ಬಿಸಿಸಿಐ ನಲ್ಲಿ ಅಧಿಕಾರ ಹೊಂದಿರುವವರು ಇತರ ಯಾವುದೇ ಸಂಸ್ಥೆಗಳ ಜವಾಬ್ದಾರಿ ಪಡೆಯುವಂತಿಲ್ಲ.

ಬಿಸಿಸಿಐಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದ ‘ಒಂದು ರಾಜ್ಯಕ್ಕೆ ಒಂದು ಮತ’ ಶಿಫಾರಸ್ಸನ್ನು ಸುಪ್ರೀಂ ಮಾನ್ಯ ಮಾಡಿದೆ. ಇದರ ಪರಿಣಾಮವಾಗಿ ಬಿಸಿಸಿಐ ಆಡಳಿತದಲ್ಲಿ ಒಂದು ರಾಜ್ಯ ಕೇವಲ ಒಂದು ಮತದಾನ ಮಾಡಬಹುದಷ್ಟೇ. ಇದರಿಂದ ಎರಡು ಮೂರು ಸಂಸ್ಥೆಗಳನ್ನು ಹೊಂದಿದ್ದ ರಾಜ್ಯಗಳಿಗೆ ತೀವ್ರ ಹಿನ್ನಡೆಯಾಗಿದೆ. ಮಹಾರಾಷ್ಟ್ರದಲ್ಲಿ (ಮುಂಬೈ, ಮಹಾರಾಷ್ಟ್ರ, ವಿದರ್ಭ), ಗುಜರಾತ್ ನಲ್ಲಿ (ಬರೋಡಾ, ಸೌರಾಷ್ಟ್ರ) ಕ್ರಿಕೆಟ್ ಸಂಸ್ಥೆಗಳಿವೆ. ಇಷ್ಟು ದಿನಗಳ ಕಾಲ ಈ ಸಂಸ್ಥೆಗಳು ಬಿಸಿಸಿಐನಲ್ಲಿ ಮತ ಚಲಾಯಿಸುವ ಅಧಿಕಾರ ಹೊಂದಿದ್ದವು. ಈ ಶಿಫಾರಸ್ಸಿನಿಂದಾಗಿ ಈ ಸಂಸ್ಥೆಗಳು ತಮ್ಮ ರಾಜ್ಯದಿಂದ ಒಂದು ಮತ ಚಲಾಯಿಸಬಹುದಾಗಿದೆ. ಇನ್ನು ಪ್ರಾದೇಶಿಕ ಹಿನ್ನಲೆ ಹೊಂದಿರದ ರೈಲ್ವೇಸ್, ಸರ್ವೀಸಸ್ ನಂತಹ ಸಂಸ್ಥೆಗಳು ಪೂರ್ಣ ಸದಸ್ಯತ್ವ ಕಳೆದುಕೊಳ್ಳಲಿದ್ದು ಸಹ ಸದಸ್ಯತ್ವ ಪಡೆಯಲಿವೆ. ಬಿಸಿಸಿಐನಲ್ಲಿ ಆಟಗಾರರ ಸಂಘಕ್ಕೆ ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿದೆ.

‘70 ವರ್ಷ ಮೇಲ್ಪಟ್ಟವರಿಗೆ ಬಿಸಿಸಿಐನಲ್ಲಿ ಜಾಗವಿಲ್ಲ’ ಎಂಬ ಶಿಫಾರಸ್ಸಿಗೆ ಒಪ್ಪಿಗೆ ಸಿಕ್ಕಿರುವುದು, ಬಿಸಿಸಿಐನ ಹಲವು ಪ್ರಭಾವಿ ವ್ಯಕ್ತಿಗಳಿಗೆ ಹಿನ್ನಡೆಯಾಗಿದೆ. ಈ ನಿರ್ಧಾರದಿಂದ ಬಿಸಿಸಿಐ ಮಾಜಿ ಅಧ್ಯಕ್ಷರುಗಳಾದ ಶರದ್ ಪವಾರ್, ಎನ್.ಶ್ರೀನಿವಾಸನ್ ಅವರ ಪಾಲಿಗೆ ಮಂಡಳಿ ಬಾಗಿಲು ಸಂಪೂರ್ಣವಾಗಿ ಮುಚ್ಚಿದಂತಾಗಿದೆ.

ಪದಾಧಿಕಾರಿಗಳ ಸಮಿತಿಯನ್ನು ಅಧ್ಯಕ್ಷ, ಕಾರ್ಯದರ್ಶಿ, ಒರ್ವ ಉಪಾಧ್ಯಕ್ಷ (ಈಗ ಐದು ಉಪಾಧ್ಯಕ್ಷರು ಇದ್ದಾರೆ.), ಖಜಾಂಚಿ ಮತ್ತು ಜಂಟಿ ಕಾರ್ಯದರ್ಶಿ ಸೇರಿದಂತೆ ಐವರು ಸದಸ್ಯರಿಗೆ ಮಾತ್ರ ಸೀಮಿತಗೊಳಿಸುವುದಕ್ಕೆ ಒಪ್ಪಿಗೆ ಸಿಕ್ಕಿದೆ. ಇಲ್ಲಿ ಪದಾಧಿಕಾರಿಗಳು ಈ ಅಧಿಕಾರವನ್ನು ಮೂರು ಅವಧಿಗಿಂತ ಹೆಚ್ಚು ಕಾಲ ಅಂದರೆ 9 ವರ್ಷಕ್ಕಿಂತ ಹೆಚ್ಚಿನ ಅವಧಿವರೆಗೂ ಹೊಂದಿರುವಂತಿಲ್ಲ. ಅಲ್ಲದೇ ಸತತ ಎರಡನೇ ಅವಧಿಗೆ ಅಧಿಕಾರದಲ್ಲಿ ಮುಂದುವರಿಯುಂವಂತಿಲ್ಲ. ಒಂದು ಅಧಿಕಾರ ಅವಧಿ ಮುಗಿದ ನಂತರ ಅವರು ವಿರಾಮ ತೆಗೆದುಕೊಳ್ಳಬೇಕು. ಲೋಧಾ ಸಮಿತಿ ಶಿಫಾರಸ್ಸಿನಿಂದ ಮಂಡಳಿಯ ಅಧ್ಯಕ್ಷರ ಅಧಿಕಾರವನ್ನು ಕಡಿಮೆ ಮಾಡಿದ್ದು, ಮಂಡಳಿಯ ಸಭೆಗಳಲ್ಲಿ ಅಧ್ಯಕ್ಷರಿಗಿದ್ದ ಹೆಚ್ಚುವರಿ ಮತದಾನ ಹಕ್ಕನ್ನು ತೆಗೆದು ಹಾಕಲಾಗಿದೆ. ಅದೇರೀತಿ ತಂಡದ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂಬ ಸೂಚನೆಯನ್ನು ನೀಡಿದೆ.

ಬಿಸಿಸಿಐ ಕಾರ್ಯಕಾರಿ ಸಮಿತಿಯಲ್ಲಿ 9 ಸದಸ್ಯರಿಗೆ ಅವಕಾಶ ನೀಡಲಾಗಿದ್ದು, ಆ ಪೈಕಿ ಆಟಗಾರರ ಪ್ರತಿನಿಧಿ, ಮಹಿಳಾ ಪ್ರತಿನಿಧಿಗಳ ಜತೆಗೆ ಮಹಾಲೇಖಪಾಲರ ಪ್ರತಿನಿಧಿ ಹೊಂದಿರಬೇಕು ಎಂದು ಸೂಚಿಸಿದೆ. ಒಂಬುಡ್ಸಮನ್ ಮತ್ತು ನೇಮಕದ ಶಿಫಾರಸ್ಸಿಗೆ ಒಪ್ಪಿಗೆ ಸಿಗುವ ಮೂಲಕ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ವೃತ್ತಿಪರತೆ ತರಲು ಉತ್ತೇಜನ ಸಿಕ್ಕಿದೆ. ಮಂಡಳಿಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಮೂಲಕ ಸ್ವಹಿತಾಸಕ್ತಿ ಸಂಘರ್ಷ ತಪ್ಪಿಸಲು ತೀರ್ಮಾನಿಸಿದೆ ಸುಪ್ರೀಂ ಕೋರ್ಟ್.

Leave a Reply