ಗಣಪತಿ ನೇಣು ಹಗ್ಗದಿಂದ ನ್ಯಾಯದ ಕೊರಳು ಬಿಗಿವ ಹವಣಿಕೆಯೇ ಜಾರ್ಜ್ ಮಂತ್ರಿ ಪದವಿಗೆ ಉರುಳಾಯ್ತು!

author-thyagarajಇವರೆಲ್ಲ ಸೇರಿಕೊಂಡು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡ ಹಗ್ಗದಿಂದಲೇ ನ್ಯಾಯದ ಕೊರಳಿಗೂ ಉರುಳು ಹಾಕಲು ಹವಣಿಸಿದ್ದರು. ಆದರೆ ಅವರ ಪ್ರಯತ್ನವನ್ನು ನ್ಯಾಯಾಲಯ ‘ಲಯ’ ಮಾಡಿಟ್ಟಿದೆ. ತತ್ಪರಿಣಾಮವಾಗಿ ಕೆ.ಜೆ. ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿದ್ದಾರೆ.

ಹೌದು, ಜನಸಾಮಾನ್ಯರಿಗೆ ಒಂದು, ಪ್ರಭಾವಿಗಳಿಗೆ ಮತ್ತೊಂದು ಎಂದು ನ್ಯಾಯವನ್ನು ಅಡ್ಡಡ್ಡ-ಉದ್ದುದ್ದ ಸಿಗಿಯಲು ಹೊರಟಿದ್ದ ಸಿದ್ದರಾಮಯ್ಯನವರ ಸರಕಾರದ ಕಣ್ಣಿನ ಪೊರೆ ಹರಿಯಲು ಕೊನೆಗೂ ನ್ಯಾಯಲಯವೇ ಬರಬೇಕಾಯಿತು. ಅಧಿಕಾರದ ಅಹಂಕಾರ, ಧನಬಲದ ಮದ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆತುಕೊಳ್ಳುವಿಕೆ, ಕಾಂಗ್ರೆಸ್ ಪರಮೋಚ್ಚ ನಾಯಕಿ ಸೋನಿಯಾ ಗಾಂಧಿ ಅವರ ಕೃಪಾಕಟಾಕ್ಷ – ಇವ್ಯಾವವೂ ಕೆ.ಜೆ. ಜಾರ್ಜ್ ಮಂತ್ರಿಗಿರಿಯನ್ನು ಉಳಿಸಿಲ್ಲ.

ಗಣಪತಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದ ಅಡಿಯಲ್ಲೇ ಸಚಿವ ಜಾರ್ಜ್ ಮತ್ತಿಬ್ಬರು ಅಧಿಕಾರಿಗಳಾದ ಎ.ಎಂ. ಪ್ರಸಾದ್, ಪ್ರಣವ್ ಮೊಹಂತಿ ವಿರುದ್ಧ ಎಫ್ಐಆರ್ ದಾಖಲಿಸಲು ಮಡಿಕೇರಿ ಜೆಎಂಎಫ್ಸಿ ನ್ಯಾಯಲಯವು ಸೂಚಿಸಿದ ಹಿನ್ನೆಲೆಯಲ್ಲಿ ಜಾರ್ಜ್ ರಾಜೀನಾಮೆ ಕೊಟ್ಟಿದ್ದರೆ, ಅಧಿಕಾರಿಗಳಿಬ್ಬರನ್ನು ರಜೆ ಮೇಲೆ ಕಳುಹಿಸಲಾಗಿದೆ. ಸರಕಾರ ಈ ಕೆಲಸವನ್ನು ಹತ್ತು ದಿನ ಮೊದಲೇ ಮಾಡಿದ್ದರೆ ಮರ್ಯಾದೆ ಹಾನಿ ಪ್ರಮಾಣವನ್ನು ಸ್ವಲ್ಪವಾದರೂ ತಗ್ಗಿಸಬಹುದಿತ್ತು. ನಾಡಿನ ಭಾವನೆ, ವಿಧಾನ ಮಂಡಲದ ಒಳ ಮತ್ತು ಹೊರಗೆ ಪ್ರತಿಪಕ್ಷಗಳ ಹೋರಾಟ, ಎಲ್ಲಕ್ಕಿಂತ ಮಿಗಿಲಾಗಿ ಗಣಪತಿ ಪತ್ನಿ, ಪುತ್ರನ ಕಣ್ಣೀರಿಗೂ ಜಗ್ಗದಿದ್ದ ಸರಕಾರವು ಪ್ರಕರಣವನ್ನು ತಿರುಚಿ ಹಾಕಲು ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡಿತ್ತು. ಅದಕ್ಕಾಗಿ ತನಗಿರುವ ಅಧಿಕಾರವನ್ನು ಎಲ್ಲ ಮೂಲೆಗಳಿಂದಲೂ ಬಳಸಿತ್ತು.

ನಾಡಿನ ಜನರ ದಿಕ್ಕು ತಪ್ಪಿಸುವುದಿರಲಿ, ಸಂತ್ರಸ್ತ ಕುಟುಂಬದವರ ಭಾವನೆಯನ್ನೇ ಭ್ರಷ್ಟಗೊಳಿಸಲು ಯತ್ನಿಸಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಸಾಯುವ ಮೊದಲು ಗಣಪತಿ ಅವರು ವೃತ್ತಿಸಂಬಂಧ ತಮಗಾಗಿದ್ದ ನೋವು, ಅನ್ಯಾಯವನ್ನು ಸ್ಫಟಿಕದಷ್ಟೇ ಸ್ಪಷ್ಟವಾಗಿ ಬಿಚ್ಚಿಟ್ಟಿದ್ದರೂ ಅವರಿಗೆ ಹುಚ್ಚನ ಪಟ್ಟ ಕಟ್ಟಲು ಹೊರಟಿತ್ತು. ಅವರ ಕುಟುಂಬ ಸದಸ್ಯರ ಮರ್ಯಾದೆಯನ್ನೇ ಹರಾಜು ಹಾಕಲು ಹೊರಟಿತ್ತು. ಆದರೆ ನ್ಯಾಯ ಎಂಬುದು ಅದೆಲ್ಲವನ್ನೂ ತೊಳೆದು ಹಾಕಿದೆ.

ನಿಜ, ಘಟನೆ ಸಂಭವಿಸಿದ ದಿನದಿಂದಲೂ ಸಿದ್ದರಾಮಯ್ಯನವರು ತಮ್ಮ ಸಹೋದ್ಯೋಗಿಯ ರಕ್ಷಣೆಗೆ ಅದ್ಯಾವ ಪರಿ ಟೊಂಕ ಕಟ್ಟಿ ನಿಂತಿದ್ದರೆಂದರೆ ಪ್ರಕರಣದ ವಿಚಾರಣೆ ಆರಂಭಕ್ಕೂ ಮೊದಲೇ ಜಾರ್ಜ್ ಅವರಿಗೆ ಕ್ಲೀನ್ ಚಿಟ್ ಕೊಟ್ಟು ಬಿಟ್ಟಿದ್ದರು. ಸದನದ ಒಳಗೆ ಮತ್ತು ಹೊರಗೆ ಅವರ ಸರಕಾರ ಕೊಟ್ಟ ಸರ್ಟಿಫಿಕೆಟ್ ಆರೋಪಿಗಳನ್ನು ಸಾಚಾ ಸ್ಥಾನದಲ್ಲಿಯೂ, ಸಾಚಾ ಆಗಿದ್ದ ಕುಟುಂಬ ಸದಸ್ಯರನ್ನೇ ಆರೋಪಿ ಸ್ಥಾನದಲ್ಲಿಯೂ ನಿಲ್ಲಿಸಿಬಿಟ್ಟಿತ್ತು. ನ್ಯಾಯದ ಕುತ್ತಿಗೆ ಕುಯ್ಯುವುದು ಅಂದರೆ ಇದೇ ಎನ್ನುವಷ್ಟರ ಮಟ್ಟಿಗೆ. ಯಾವುದಾದರೂ ಒಂದು ಆರೋಪ ಸತ್ಯ ಅಥವಾ ಅಸತ್ಯ ಎಂದು ಗೊತ್ತಾಗಬೇಕಿದ್ದರೆ ಆ ಬಗ್ಗೆ ತನಿಖೆ ಆಗಬೇಕು, ತನಿಖೆಯಿಂದಷ್ಟೇ ಅದು ಹೊರಬರಬೇಕು. ಆದರೆ ಪೊಲೀಸರಿಂದ ತನಿಖೆ ತಪ್ಪಿಸಲೆಂದೇ ಅಸ್ವಾಭಾವಿಕ ಸಾವು, ಪಂಚನಾಮೆ ಸೆಕ್ಷನ್ ಅಡಿ ಕೇಸು ಗುಜರಾಯಿಸಿ, ವಿಚಾರಣೆಯನ್ನು ಅತುರಾತುರದಲ್ಲಿ ಸಿಐಡಿಗೆ ವಹಿಸಲಾಗಿತ್ತು. ಆ ಸಿಐಡಿ ಇನ್ನೂ ವಿಚಾರಣೆಯನ್ನೇ ಆರಂಭಿಸಿಲ್ಲ. ಆಗಲೇ ಸಿದ್ದರಾಮಯ್ಯನವರು ಜಾರ್ಜ್ ನಿರಪರಾಧಿ, ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ರಾಜೀನಾಮೆ ಕೊಡುವ ಪ್ರಮೇಯ ಇಲ್ಲ ಎಂದು ವರಾತ ಶುರುಮಾಡಿಕೊಂಡರು. ಇದರ ಜತೆಗೆ ಗೃಹ ಸಚಿವ ಜಿ. ಪರಮೇಶ್ವರ್ ವಿಧಾನಸಭೆ ಅಧಿವೇಶನ ಆರಂಭದ ದಿನವೇ ಕಲಾಪ ಶುರುವಾಗುತ್ತಿದ್ದಂತೆ ಸ್ವಯಂಪ್ರೇರಣೆ ಹೇಳಿಕೆ ನೀಡಿ ಅಲ್ಲಿಯೂ ಸಹ ಗಣಪತಿ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಫರ್ಮಾನು ಹೊರಟಿಸಿಬಿಟ್ಟರು. ಸರಕಾರದ ಪರಮೋಚ್ಚ ನಾಯಕರಾದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಒಂದು ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಇಂತಹ ತೀರ್ಪು ಸ್ವರೂಪದ ಹೇಳಿಕೆಗಳನ್ನು ನೀಡಿಬಿಟ್ಟರೆ ಅವರು ನಿರ್ವಹಿಸುತ್ತಿರುವ ಸರಕಾರದ ಅಧೀನದಲ್ಲೇ ಇರುವ ಸಿಐಡಿ ಮುಕ್ತ ವಿಚಾರಣೆ ನಡೆಸಲು ಸಾಧ್ಯವೇ? ಈ ವಿಚಾರಣೆ ಮೇಲೆ ಸಿಎಂ ಮತ್ತು ಹೋಮ್ ಮಿನಿಸ್ಟರ್ ಹೇಳಿಕೆಗಳು ಪ್ರಭಾವ ಬೀರುವುದಿಲ್ಲವೇ? ಹೀಗೆ ಪ್ರಭಾವ ಬೀರಿದ ಮೇಲೆ ಇನ್ನೆಂಥ ನ್ಯಾಯ ಹೊರಬರಲು ಸಾಧ್ಯ? – ಇವು ಎಲ್ಲರನ್ನು ಕಾಡುತ್ತಿದ್ದ ಪ್ರಶ್ನೆಗಳು.

ಇದಿಷ್ಟೇ ಆಗಿದಿದ್ದರೆ ಪರವಾಗಿರಲಿಲ್ಲ, ಸರಕಾರ ಆರಂಭದಿಂದಲೂ ಸುಳ್ಳಿನ ಮೇಲೆ ಸುಳ್ಳುಗಳನ್ನು ಪೋಣಿಸುತ್ತಾ ಬಂದಿತ್ತು. ಒಂದು ಸುಳ್ಳು ಮುಚ್ಚಿ ಹಾಕಲು ಮತ್ತೊಂದು ಸುಳ್ಳು. ಸಂತ್ರಸ್ತ ಕುಟುಂಬ, ಪ್ರತಿಪಕ್ಷಗಳು ಸಿಬಿಐ ತನಿಖೆಗೆ ಒತ್ತಾಯಿಸಿದಾಗ ಈಗಾಗಲೇ ಸಿಐಡಿ ವಿಚಾರಣೆ ಆರಂಭಿಸಿರುವುದರಿಂದ ಮತ್ತೊಂದು ವಿಚಾರಣೆ ಅಗತ್ಯವಿಲ್ಲ ಅಂತು. ಗಣಪತಿ ಪತ್ನಿ, ಪುತ್ರ ಜಾರ್ಜ್ ಮತ್ತಿಬ್ಬರು ಅಧಿಕಾರಿಗಳ ವಿರುದ್ಧ ಗಣಪತಿ ಆತ್ಮಹತ್ಯೆ ಪ್ರೇರಣೆ ಕೊಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರಿಗೆ ಕೊಟ್ಟ ದೂರನ್ನು ದಾಖಲಿಸಲಿಲ್ಲ. ಬದಲಿಗೆ ಈಗಾಗಲೇ ವಿಚಾರಣೆ ಆರಂಭಿಸಿರುವ ಸಿಐಡಿಗೆ ಅವನ್ನು ವರ್ಗಾಹಿಸುವುದಾಗಿ ಹೇಳಿ ಕೈ ತೊಳೆದುಕೊಂಡಿತು. ಎರಡೆರಡು ವಿಚಾರಣೆ ಅಗತ್ಯವಿಲ್ಲ ಎಂಬ ಸಬೂಬನ್ನೂ ಅದಕ್ಕೆ ಸೇರಿಸಿತು. ಆದರೆ ಸದನದ ಒಳಗೆ ಪ್ರತಿಪಕ್ಷಗಳು ಸಿಬಿಐ ತನಿಖೆಗೆ ಪಟ್ಟು ಬಿಗಿಗೊಳಿಸಿದಾಗ ನ್ಯಾಯಾಂಗ ವಿಚಾರಣೆ ನಡೆಸುವುದಾಗಿ ಹೇಳಿತು. ಹೇಳಿದ್ದಷ್ಟೇ ಅಲ್ಲ ಆದೇಶವನ್ನೂ ಹೊರಡಿಸಿತು. ಒಂದೇ ಪ್ರಕರಣಕ್ಕೆ ಎರಡೆರಡು ವಿಚಾರಣೆ ಅಗತ್ಯವಿಲ್ಲ ಎಂದ ಸರಕಾರ ಸಿಐಡಿ ತನಿಖೆ ನಡೆಯುತ್ತಿರುವಾಗ ನ್ಯಾಯಾಂಗ ವಿಚಾರಣೆಗೆ ಆದೇಶಿಸಿದ್ದು ಏಕೆ? ತಾನೇ ಹೇಳಿದ ಮಾತಿಗೆ ತಾನೇ ನಿಂತುಕೊಳ್ಳಲಿಲ್ಲ.

ಇಷ್ಟಕ್ಕೂ ವಿಚಾರಣೆಯೇ ಬೇರೆ. ತನಿಖೆಯೇ ಬೇರೆ. ಸಿಐಡಿ ಮತ್ತು ನ್ಯಾಯಾಂಗ ವಿಚಾರಣೆಯಿಂದ ಸತ್ಯ ಶೋಧನೆ ಆಗುತ್ತದೆಯೇ ಹೊರತು ತನಿಖೆ ಅಲ್ಲ. ತನಿಖೆ ನಡೆಸಬೇಕಾದವರು ಪೊಲೀಸರು. ಅವರ ಕೆಲಸವನ್ನು ತಪ್ಪಿಸುವ ದುರುದ್ದೇಶದಿಂದಲೇ ಸಿಐಡಿ, ನ್ಯಾಯಾಂಗ ತನಿಖೆ ಎಂದೆಲ್ಲ ನಾಟಕ. ರಾಜ್ಯದಲ್ಲಿ ಈವೆರೆಗೂ ಅನೇಕ ನ್ಯಾಯಾಂಗ ವಿಚಾರಣೆಗಳು ಆಗಿವೆ. ವರದಿಗಳೂ ಸಲ್ಲಿಕೆ ಆಗಿವೆ. ಆದರೆ ಅದನ್ನು ಅಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡ ನಿದರ್ಶನಗಳು ಇವೆಯೇ? ಬಿಲ್ ಕುಲ್ ಇಲ್ಲ. ಯಾರೋ ಒಬ್ಬರು ರಿಟೈರ್ಡ್ ಜಡ್ಜ್ ಕರೆದುಕೊಂಡು ಬಂದು, ಮೂರೋ-ಆರೋ ತಿಂಗಳಲ್ಲಿ ವರದಿ ಕೊಡಿ ಅಂಥ ಕೆಲಸ ಒಪ್ಪಿಸಿ, ಸಾರ್ವಜನಿಕರ ಹಣ ವಿನಿಯೋಗಿಸಿ ವರದಿ ತರಿಸಿಕೊಳ್ಳುತ್ತಾರೆ. ಕೊನೆಗೆ ಅದನ್ನ ರೆಕಾರ್ಡ್ ರೂಮಿಗೆ ತಳ್ಳಿ, ಧೂಳು ಹಿಡಿಸುತ್ತಾರೆ. ಅಷ್ಟೇ ಈ ಆಯೋಗಗಳ ವರದಿ ಹಣೆಬರಹ.

ಸಿಎಂ ಹೇಳಿದ ಮತ್ತೊಂದು ಸುಳ್ಳು ನೋಡಿ. ಜಾರ್ಜ್ ಅವರು ಸ್ವಪ್ರೇರಣೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಅವರ ಮೇಲೆ ಯಾರೂ ಒತ್ತಡ ಹಾಕಿಲ್ಲ. ತನಿಖೆಗೆ ಅನುಕೂಲ ಆಗಲಿ ಅಂತ ನೈತಿಕ ಹೊಣೆ ಹೊತ್ತುಕೊಂಡು ರಾಜೀನಾಮೆ ಕೊಟ್ಟರಂತೆ. ಅದರೆ ಇದೇ ಸಿದ್ದರಾಮಯ್ಯನವರು ಮತ್ತು ಜಾರ್ಜ್ ಈ ಹಿಂದೆ ನೀಡಿದ ಹೇಳಿಕೆಗಳನ್ನು ಹಾಗೇ ತಿರುಸಿಗಿ ನೋಡಿ. ಜಾರ್ಜ್ ಯಾವುದೇ ತಪ್ಪು ಮಾಡಿಲ್ಲ. ಅವರ ಮೇಲೆ ಆಪಾದನೆಗೆ ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದ ಸಿದ್ದರಾಮಯ್ಯನವರು ಪ್ರತಿಪಕ್ಷಗಳು ಹೀಗೆ ಪ್ರತಿಭಟನೆ ಮುಂದುವರಿಸಿದರೆ ಸದನದ ಕಲಾಪವನ್ನು ಮೊಟಕುಗೊಳಿಸಬೇಕಾಗುತ್ತದೆ ಎಂದು ಹೇಳಿದ್ದರೆ ವಿನಃ ಕೋರ್ಟ್ ಆದೇಶ ಬರುವವರೆಗೂ ಅವರನ್ನು ಕಿಂಚಿತ್ತೂ ಬಿಟ್ಟುಕೊಟ್ಟಿರಲಿಲ್ಲ. ಅದೇ ರೀತಿ ಜಾರ್ಜ್ ಕೂಡ. ನಾನು ಅಲ್ಪಸಂಖ್ಯಾತ ಎನ್ನುವ ಕಾರಣಕ್ಕೆ ಪ್ರತಿಪಕ್ಷದವರು ರಾಜೀನಾಮೆ ಕೇಳುತ್ತಿದ್ದಾರೆ. ಆದರೆ ನಾನು ಕೊಡಲ್ಲ ಅಂತ ಖಡಾಖಂಡಿತವಾಗಿ ಹೇಳಿದ್ದರು. ಇವರಿಗೆ ಸ್ವಪ್ರೇರಣೆ, ನೈತಿಕ ಹೊಣೆ ಇವೆಲ್ಲವೂ ಇದ್ದಿದ್ದರೆ ಗಣಪತಿ ಹೇಳಿಕೆ ಆಧರಿಸಿ ಅವತ್ತೆ ಎಫ್ಐಆರ್ ದಾಖಲಿಸಬಹುದಿತ್ತಲ್ಲ, ಅವತ್ತೇ ರಾಜೀನಾಮೆ ಕೊಡಬಹುದಿತ್ತಲ್ಲ. ಇವರ ನೈತಿಕ ಹೊಣೆ ಮತ್ತು ಸ್ವಪ್ರೇರಣೆ ಪ್ರಜ್ಞೆ ಮೂಡಲು ಮಡಿಕೇರಿ ಜೆಎಂಎಫ್ಸಿ ನ್ಯಾಯಾಲಯದ ಆದೇಶದವರೆಗೂ ಕಾಯಬೇಕಿತ್ತೇ? ಅಂದರೆ ನೈತಿಕ ಹೊಣೆ ಸಮಯ ನೋಡಿಕೊಂಡು ಬರುತ್ತದೆಯೇ?

ಇಲ್ಲಿ ಇನ್ನೂ ಒಂದು ವಿಷಯ. ಪ್ರತಿಪಕ್ಷಗಳು ಸಹಕರಿಸದಿದ್ದರೆ ಕಲಾಪ ಮೊಟಕುಗೊಳಿಸಲಾಗುವುದು ಎಂದು ಹೇಳಿದ್ದ ಸಿದ್ದರಾಮಯ್ಯನವರು ಜೆಎಂಎಫ್ಸಿ ನ್ಯಾಯಾಲಯದ ಆದೇಶ, ಅದರ ಬೆನ್ನಲ್ಲೆ ಜಾರ್ಜ್ ರಾಜೀನಾಮೆ ಕೊಡುತ್ತಿದ್ದಂತೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಪ್ರಮೇಯವಾದರೂ ಏನಿತ್ತು? ಧೈರ್ಯವಿದ್ದಿದ್ದರೆ ಪ್ರತಿಪಕ್ಷಗಳನ್ನು ಎದುರಿಸಬೇಕಿತ್ತು. ಎಫ್ಐಆರ್ ದಾಖಲಿಸುವಂತೆ ಕೋರ್ಟ್ ನೀಡಿರುವ ಸೂಚನೆ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ರುಬ್ಬುತ್ತವೆ ಎಂಬ ಕಾರಣಕ್ಕೆ ಪಲಾಯನ ಮಾಡಿದೆ. ವಿಧಾನ ಮಂಡಲ, ಅದರ ಕಲಾಪದ ಬಗ್ಗೆ ಪ್ರತಿಪಕ್ಷಗಳಿಗೆ ಗೌರವವಿಲ್ಲ ಎಂದು ಟೀಕಿಸುತ್ತಲೇ ಬಂದಿದ್ದ ಸರಕಾರ ಈ ರೀತಿ ಹಿಮ್ಮುಖ ಮಾಡಬಾರದಿತ್ತು.

ಈ ಸರಕಾರ ಮತ್ತು ಅದರ ಅಧಿನಾಯಕರಾದ ಸಿದ್ದರಾಮಯ್ಯನವರು, ಜಾರ್ಜ್ ಅವರು ಏನೇ ಹೇಳಿಕೊಳ್ಳಲಿ, ಅದೆಷ್ಟೇ ಸಬೂಬು ಸೃಷ್ಟಿಸಲಿ ಗಣಪತಿ ಪ್ರಕರಣದಲ್ಲಿ ಏನಾಗಿದೆ ಎಂಬುದು ಅವರೇ ನೀಡಿರುವ ಹೇಳಿಕೆಯಿಂದ ನಾಡಿನ ಜನರಿಗೆ ಸುಸ್ಪಷ್ಟವಾಗಿ ಗೊತ್ತಾಗಿದೆ. ಈ ಸರಕಾರ ಆದೇಶಿರುವ ವಿಚಾರಣೆಗಳಿಂದ ಬರುವ ಅಂಶಗಳವರೆಗೆ ಕಾಯುವ ಪ್ರಮೇಯ ಅವರಿಗೆ ಇಲ್ಲ. ಏಕೆಂದರೆ ಜನ ಪ್ರಜ್ಞಾವಂತರಿದ್ದಾರೆ, ಬುದ್ಧಿವಂತರಿದ್ದಾರೆ. ಯಾವ್ಯಾವ ಬೆಳವಣಿಗೆಗಳು ಯಾಕೆಲ್ಲ ನಡೆಯುತ್ತಿವೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಇವತ್ತು ಜಿಎಂಎಫ್ಸಿ ನ್ಯಾಯಲಯ ಕೊಟ್ಟಿರುವ ಆದೇಶವನ್ನು ಈ ಸರಕಾರ ಮೇಲಿನ ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು. ತಡೆಯಾಜ್ಞೆ ತರಬಹದು. ಎಫ್ಐಆರ್ ರದ್ದುಪಡಿಸಲು ಕಾನೂನು ಹೋರಾಟ ನಡೆಸಬಹುದು. ನಾಳೆ ಜಾರ್ಜ್ ಮತ್ತೆ ಸಂಪುಟಕ್ಕೆ ಬರಲೂಬಹುದು. ಆದರೆ ಈಗ ಅವರು ರಾಜೀನಾಮೆ ಕೊಟ್ಟಿದ್ದಾರೆ ಎಂಬುದು ಸತ್ಯ. ಅದಕ್ಕೆ ಅವರು ಮತ್ತು ಅವರು ಪ್ರತಿನಿಧಿಸುತ್ತಿರುವ ಸರಕಾರ ಮಾಡಿರುವ ತಪ್ಪೇ ಕಾರಣ ಎಂಬುದೂ ಅಷ್ಟೇ ಸತ್ಯ!

ಲಗೋರಿ : ಮತ್ತೊಬ್ಬರ ಪ್ರೇರಣೆಯಿಂದ ಸ್ವಪ್ರೇರಣೆ ಸೃಷ್ಟಿಗೆ ಜಾರ್ಜ್ ಸಿದ್ಧಾಂತ ಎನ್ನಬಹುದು!

Leave a Reply