ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಎಫ್ಐಆರ್ ಹೊತ್ತ ಮಂತ್ರಿಗಳಿಲ್ಲವೇ?- ನಾವೂ ಜನರ ಬಳಿ ಈ ವಿಷಯ ಎತ್ತುತ್ತೇವೆ ಅಂದ್ರು ಸಿಎಂ ಮತ್ತು ಪರಂ

ಡಿಜಿಟಲ್ ಕನ್ನಡ ಟೀಮ್:

ಜಾರ್ಜ್ ರಾಜೀನಾಮೆ ಪ್ರಹಸನದಿಂದ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಇದೀಗ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ದ್ವಂದ್ವ ನಿಲುವುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಹೋರಾಟ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ.

ಜಾರ್ಜ್ ರಾಜೀನಾಮೆ ಬೆನ್ನಲ್ಲೇ ಅನಿರ್ದಿಷ್ಟಾವಧಿಗೆ ಅಧಿವೇಶನ ಮುಂದಕ್ಕೆ ಹಾಕಿಸಿದ್ದ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಬುಧವಾರ ಜಂಟಿ ಪತ್ರಿಕಾಗೋಷ್ಠಿ ಮೊರೆ ಹೋದರು. ಹತಾಶೆ, ಅಪಮಾನ, ನೋವು, ಪ್ರತೀಕಾರ ಮನೋಭಾವ ತುಂಬಿ ಹರಿದ ಗೋಷ್ಠಿಯಲ್ಲಿ ನಾಯಕರಿಬ್ಬರು ಹೇಳಿದ್ದಿಷ್ಟು:

‘ಪ್ರತಿಪಕ್ಷಗಳು ಅನುಕೂಲಸಿಂಧು ರಾಜಕೀಯ ಮಾಡುತ್ತಿವೆ. ನರೇಂದ್ರ ಮೋದಿ ಅವರು ಇತ್ತೀಚೆಗೆ ಸಂಪುಟಕ್ಕೆ ಸೇರಿಸಿಕೊಂಡ 19 ಮಂದಿಯಲ್ಲಿ 7 ಮಂದಿ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ರೋಹಿತ್ ವೇಮುಲ ಕೇಸಲ್ಲಿ ಬಂಡಾರು ದತ್ತಾತ್ರೇಯ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆಪಾದನೆ ಇದೆ. ಅದೇ ರೀತಿ ಸ್ಮೃತಿ ಇರಾನಿ ಅವರ ಮೇಲೂ ಎಫ್ಐಆರ್ ದಾಖಲಾಗಿದೆ. ಪ್ರತಿಪಕ್ಷದವರು ಆವರ ರಾಜೀನಾಮೆ ಕೇಳುತ್ತಾರೆಯೇ?’

‘ಇಲ್ಲಿ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಅವರ ಮೇಲೆ ಕ್ರಿಮಿನಲ್ ಎಫ್ಐಆರ್ ಗಳಿದ್ದರೂ ಆ ಬಗ್ಗೆ ಏಕೆ ಯಾರೂ ಮಾತಾಡುತ್ತಿಲ್ಲ. ಗಾಜಿನ ಮನೆಯಲ್ಲಿ ಕೂತು ಕಲ್ಲೂ ಹೊಡೆಯುತ್ತಿರುವ ಪ್ರತಿಪಕ್ಷಗಳು ನೈತಿಕವಾಗಿ ದಿವಾಳಿ ಆಗಿವೆ.’

‘ಜಾರ್ಜ್ ವಿಚಾರದಲ್ಲಿ ಸದನದ ಒಳಗೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧ. ಅವರು ಸ್ವಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಪ್ರತಿಪಕ್ಷದವರು ಸಿಬಿಐ ಅನ್ನು ಕಾಂಗ್ರೆಸ್ ಬಚಾವೋ ಸಂಸ್ಥೆ ಎಂದು ಲೇವಡಿ ಮಾಡುತ್ತಿದ್ದರು. ಮಾಜಿ ಪ್ರಧಾನಿ ದೇವೇಗೌಡರು ಇದನ್ನು ಚೋರ್ ಬಚಾವೋ ಸಂಸ್ಥೆ ಎನ್ನುತ್ತಿದ್ದರು. ಬಹುಶಃ ಅದಕ್ಕೇ ಇರಬೇಕು ಅಂತ ಕಾಣುತ್ತದೆ, ಕುಮಾರಸ್ವಾಮಿ ಗಣಪತಿ ಪ್ರಕರಣವನ್ನು ಸಿಬಿಐಗೆ ಕೊಡುವುದು ಬೇಡ ಅಂದಿದ್ದು. ದೇವೇಗೌಡರ ಭಯ ಒಂದು ಕಡೆಯಾದರೆ, ಇನ್ನೊಂದೆಡೆ ಅವರ ವಿರುದ್ಧವೇ ಸಿಬಿಐನಲ್ಲಿ ಕೇಸ್ ಇದೆಯೆಲ್ಲ. ಅದಕ್ಕೂ ಹೆದರಿರಬಹುದು. ನಮಗೆ ಸಿಬಿಐ ಬಗ್ಗೆ ನಂಬಿಕೆ, ಗೌರವ ಎಲ್ಲವೂ ಇದೆ. ಹೀಗಾಗಿಯೇ ಎಂಟು ಪ್ರಕರಣಗಳ ತನಿಖೆಯನ್ನು ಸಿಬಿಐಗೇ ವಹಿಸಿದ್ದೇವೆ.’

‘ಪ್ರತಿಪಕ್ಷಗಳ ದ್ವಂದ್ವ ನಿಲುವುಗಳು ಜನರಿಗೆ ಗೊತ್ತಾಗಬೇಕಿದೆ. ಹೀಗಾಗಿ ಕಾಂಗ್ರೆಸ್ ಬೀದಿಗೆ ಇಳಿದು ಹೋರಾಟ ಮಾಡುತ್ತದೆ. ಪ್ರಚಾರ ಮಾಡುತ್ತದೆ. ಅತಿ ಶೀಘ್ರದಲ್ಲೇ ಈ ಬಗ್ಗೆ ಜನರ ಮುಂದೆ ಪ್ರಚಾರ ಮಾಡುತ್ತೇವೆ. ಪ್ರತಿಪಕ್ಷಗಳಿಗೆ ತಕ್ಕ ಪಾಠ ಕಲಿಸುತ್ತೇವೆ.’

‘ತಮ್ಮ (ಮುಖ್ಯಮಂತ್ರಿ) ವಿರುದ್ಧ ಕ್ರಿಮಿನಲ್ ಕೇಸುಗಳಿವೆ ಎಂದು ಕುಮಾರಸ್ವಾಮಿ ಹೇಳಿರುವುದು ಸುಳ್ಳು. ನನ್ನ ವಿರುದ್ಧ ಯಾವ ಕೇಸೂ ಇಲ್ಲ. ಎಲ್ಲ ಕ್ಲಿಯರ್ ಆಗಿವೆ.’

Leave a Reply