ದಕ್ಷಿಣದಲ್ಲಿ ಕೇರಳದ ನಂತರ ಮುಸ್ಲಿಂ ಜನಸಂಖ್ಯೆ ತೀವ್ರ ಬೆಳವಣಿಗೆ ಕಾಣುತ್ತಿರುವ ರಾಜ್ಯ ಕರ್ನಾಟಕ

 

ಡಿಜಿಟಲ್ ಕನ್ನಡ ಟೀಮ್:

‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇರಳದ ನಂತರ ಮುಸ್ಲಿಂ ಸಮುದಾಯದ ಜನಸಂಖ್ಯೆ ಗಣನೀಯ ಏರಿಕೆ ಕಂಡಿರುವ ರಾಜ್ಯ ಎಂದರೆ ಕರ್ನಾಟಕ…’ ಹೀಗಂತಾ ಹೇಳ್ತಿರೋದು 2011 ರ ಜನಗಣತಿ ಆಧಾರವಾಗಿಟ್ಟುಕೊಂಡು ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ (ಸಿಪಿಎಸ್) ನೀಡಿರುವ ವರದಿ.

2011 ರ ಜನಗಣತಿ ಅಂಕಿಅಂಶಗಳನ್ನು ಈ ಹಿಂದಿನ ದಾಖಲೆಗಳಿಗೆ ಹೋಲಿಸಿ, ಧಾರ್ಮಿಕತೆ ಆಧಾರದಲ್ಲಿ ಜನಸಂಖ್ಯೆಯ ರಟನೆ ಹೇಗೆಲ್ಲ ಬದಲಾಗಿದೆ ಎಂಬುದನ್ನು ವಿಶ್ಲೇಷಿಸಿದೆ ಈ ಅಧ್ಯಯನ ಸಂಸ್ಥೆ. ದಕ್ಷಿಣ ಭಾರತ ಎನ್ನುವುದಕ್ಕಿಂತ, ಪೆನಿನ್ಸುಲಾರ್ ಭಾರತ (ಮೂರು ಕಡೆಯಿಂದ ನೀರು ಆವರಿಸಿ ಒಂದು ಭಾಗ ಮುಖ್ಯಭೂಮಿಯೊಂದಿಗೆ ಬೆಸೆದುಕೊಂಡಿರುವ ಸ್ಥಿತಿ) ಎಂದು ಯಾವುದನ್ನು ಗುರುತಿಸುತ್ತೇವೋ, ಅಲ್ಲಿ ಕೇರಳವನ್ನು ಹೊರತುಪಡಿಸಿದರೆ ಮುಸ್ಲಿಂ ಜನಸಂಖ್ಯೆ ಗಣನೀಯವಾಗಿ ಏರಿರುವುದು ಕರ್ನಾಟಕದಲ್ಲಿ ಎಂಬ ಅಂಶವನ್ನು ಇದು ಎತ್ತಿ ಹೇಳಿದೆ.

ಅಧ್ಯಯನವು ಕೇವಲ ಮುಸ್ಲಿಂ ಜನಸಂಖ್ಯೆಯನ್ನು ಮಾತ್ರವೇ ಕೇಂದ್ರೀಕರಿಸಿಕೊಂಡಿಲ್ಲ. ಉಳಿದೆಲ್ಲ ಧರ್ಮಗಳಲ್ಲೂ ಜನಸಂಖ್ಯಾ ರಚನೆ ಏನಾಗುತ್ತಿದೆ ಎಂಬುದನ್ನೂ ಗಮನಿಸಿದೆ. ಆದರೆ ಬಹಳ ಚಲನಶೀಲತೆ ಕಂಡುಬಂದಿರುವುದು ಈ ವಿಭಾಗದಲ್ಲಿ. 2001ರಲ್ಲಿ 3.93 ಲಕ್ಷಗಳಷ್ಟಿದ್ದ ಬೌದ್ಧರ ಸಂಖ್ಯೆ 2011ರಲ್ಲಿ 96 ಸಾವಿರಕ್ಕೆ ಕುಸಿದಿರುವ ಕೌತುಕವನ್ನೂ ಅಧ್ಯಯನ ವರದಿ ವಿಶ್ಲೇಷಿಸಿದೆ. 1991-2001ರ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಬೌದ್ಧಮತಕ್ಕೆ ಪರಿವರ್ತನಗೊಂಡವರಲ್ಲಿ ಬಹುದೊಡ್ಡ ಸಂಖ್ಯೆ ನಂತರದ ಅವಧಿಯಲ್ಲಿ ಮಾತೃಧರ್ಮಕ್ಕೆ ಮರಳಿರುವುದೇ ಈ ಸಂಖ್ಯಾ ಕುಸಿತಕ್ಕೆ ಕಾರಣ ಎಂದಿದೆ ವರದಿ.

1961 ರಲ್ಲಿ ರಾಜ್ಯದ ಜನಸಂಖ್ಯೆಯಲ್ಲಿ ಶೇ. 9.87 ರಷ್ಟಿದ್ದ ಮುಸ್ಲಿಂ ಸಮುದಾಯ 2011ರ ವೇಳೆಗೆ ಶೇ. 12.92 ರಷ್ಟು ಏರಿಕೆಯಾಗಿದೆ. ಕರ್ನಾಟಕದ ದಕ್ಷಿಣ ಭಾಗದ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿದ್ರೆ, ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಮುಸ್ಲಿಮರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಅಧ್ಯಯನ ವರದಿ ವಿಶ್ಲೇಷಿಸಿದೆ. ಉತ್ತರ ಭಾಗದ ಬೀದರ್, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈ ಸಮುದಾಯ ವಿಸ್ತರಣೆ ನಿರೀಕ್ಷೆಯಂತೆ ಹೆಚ್ಚಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬೀದರ್ ಮತ್ತು ಗುಲ್ಬರ್ಗ (ಈಗಿನ ಕಲಬುರ್ಗಿ) ಪ್ರದೇಶಗಳು ಹೈದರಾಬಾದ್ ನ ನಿಜಾಮರ ಆಳ್ವಿಕೆಯಲ್ಲಿತ್ತು. ಹೀಗಾಗಿ ಸ್ವಾತಂತ್ರ್ಯದ ನಂತರ ಈ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ವಿಸ್ತರಿಸಿರುವುದು ಸಹಜ. ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳ ಜನಸಂಖ್ಯೆಯಲ್ಲಿ ಶೇ. 20 ರಷ್ಟು ಹಾಗೂ ವಿಜಯಪುರದಲ್ಲಿ ಶೇ.17 ರಷ್ಟು ಪಾಲು ಹೊಂದಿದೆ.

ನಂತರ ಗಮನಿಸಬೇಕಿರುವುದು ಧಾರವಾಡ ಮತ್ತು ಹಾವೇರಿ. ಈ ಪ್ರದೇಶಗಳಲ್ಲೂ ಮುಸ್ಲಿಂ ಜನಸಂಖ್ಯೆ ಏರಿಕೆಯಾಗಿದೆ. 2011 ರ ವೇಳೆಗೆ ಹಾವೇರಿಯಲ್ಲಿ ಶೇ.19 ರಷ್ಟು ಹಾಗೂ ಧಾರವಾಡದಲ್ಲಿ ಶೇ. 21 ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಇದರೊಂದಿಗೆ 1961 ರ ನಂತರ ಈ ಸಮುದಾಯದ ಜನಸಂಖ್ಯೆ ಶೇ.4 ರಷ್ಟು ಹೆಚ್ಚಿದೆ. ಅದರಲ್ಲೂ 1981 ರ ನಂತರ ಈ ಪ್ರದೇಶಗಳಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. ಅವಿಭಜಿತ ಧಾರವಾಡ (ಹಾವೇರಿ ಗದಗ ಸೇರಿದಂತೆ) ಪ್ರದೇಶದಲ್ಲಿ 1981 ರಲ್ಲಿ 15.3 ರಷ್ಟಿದ್ದ ಮುಸ್ಲಿಂ ಜನಸಂಖ್ಯೆ, 2011 ರ ವೇಳೆಗೆ 18.4 ರಷ್ಟಾಗಿದೆ.

ಇನ್ನು ಧಾರವಾಡ ಮತ್ತು ಹಾವೇರಿಯನ್ನು ಸುತ್ತುವರೆದಿರುವ ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ ಏರಿಕೆ ಪ್ರಮಾಣ ಸ್ವಲ್ಪ ಕಡಿಮೆ ಇದೆ. ಆದರೆ, ಸ್ವಾತಂತ್ರ್ಯದ ನಂತರ ಈ ಜಿಲ್ಲೆಗಳಲ್ಲಿ ಶೇಕಡಾವಾರು ಪ್ರಮಾಣ ಗಣನೀಯವಾಗಿ ಹೆಚ್ಚಿದೆ. 1981 ರಲ್ಲಿ ಈ ಪ್ರದೇಶದಲ್ಲಿ ಶೇ.8.8 ರಷ್ಟಿದ್ದ ಸಂಖ್ಯೆ 2012 ರಲ್ಲಿ 12.2 ರಷ್ಟಾಗಿರುವುದಾಗಿ ವರದಿ ಸ್ಪಷ್ಟಪಡಿಸಿದೆ.

ಈ ಎಲ್ಲ ಜಿಲ್ಲೆಗಳಿಗಿಂತ ಹೆಚ್ಚು ಗಮನ ಸೆಳೆದಿರೋದು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಸಮುದಾಯದ ಸಾಮರ್ಥ್ಯ ಏರಿಕೆಯಾಗಿರೋದು. ದಕ್ಷಿಣ ಕನ್ನಡ ಜನಸಂಖ್ಯೆಯಲ್ಲಿ ಶೇ.24 ರಷ್ಟು ಪಾಲು ಮುಸ್ಲಿಂ ಸಮುದಾಯದ್ದು. ಕೊಡಗಿನಲ್ಲಿ ಶೇ.16 ರಷ್ಟಿದೆ. 1961 ರ ನಂತರ ಕೊಡಗಿನಲ್ಲಿ ಈ ಸಮುದಾಯದ ಜನಸಂಖ್ಯೆ ಶೇ.6 ರಷ್ಟು ಹೆಚ್ಚಿದೆ. 1951 ರಲ್ಲಿ ಉಡುಪಿ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಪ್ರದೇಶದಲ್ಲಿ ಶೇ.9.7 ರಷ್ಟಿದ್ದ ಜನಸಂಖ್ಯೆ 2011 ರಲ್ಲಿ 18.3 ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಕೊಡಗಿನಲ್ಲಿ ಶೆ.10 ರಿಂದ ಶೇ. 15.7 ರಷ್ಟು ಹೆಚ್ಚಿದೆ.

ಬೆಂಗಳೂರು-ಕೋಲಾರ ಪ್ರದೇಶಗಳಲ್ಲೂ ಏರಿಕೆ ಕಂಡಿದ್ದು, 1961 ರಲ್ಲಿ ಶೇ.9.6 ರಿಂದ ಈಗ ಶೇ. 12.5 ಕ್ಕೆ ಹೆಚ್ಚಿದೆ. ಸರಿಸುಮಾರು ಮೂರನೇ ಎರಡು ಭಾಗದಷ್ಟು ಮುಸ್ಲಿಂ ಸಮುದಾಯದವರು ನಗರ ಪ್ರದೇಶದಲ್ಲಿದ್ದಾರೆ. ಇದರೊಂದಿಗೆ ಜಿಲ್ಲಾವಾರುಗಿಂತ ನಗರವಾರು ಜನಸಂಖ್ಯೆ ಪರಿಗಣಿಸೋದಾದ್ರೆ, ಮುಸ್ಲಿಮರು ಹೆಚ್ಚಿನ ಸಂಖ್ಯೆ ಹೊಂದಿದ್ದಾರೆ.

ಕರ್ನಾಟಕದಲ್ಲಿರುವ 248 ಪಟ್ಟಣಗಳ ಪೈಕಿ 22 ಟೌನ್ ಪ್ರದೇಶಗಳಲ್ಲಿ ಇವರು ಬಹುಸಂಖ್ಯಾತರಾಗಿದ್ದು, ಉಳಿದ 19 ಪಟ್ಟಣ ಪ್ರದೇಶಗಳಲ್ಲಿ ಶೇ.40- 50 ರಷ್ಟು ಪ್ರಾಬಲ್ಯ ಹೊಂದಿದ್ದಾರೆ.

ಉತ್ತರ ಕನ್ನಡದ ಭಟ್ಕಳದಲ್ಲಿ ಶೇ.74 ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದು, ಇದು ಗರಿಷ್ಠ ಪ್ರಮಾಣವಾಗಿದೆ. ಭಟ್ಕಳ ಸೇರಿದಂತೆ ಒಟ್ಟು 7 ಪಟ್ಟಣ ಪ್ರದೇಶಗಳಲ್ಲಿ ಮುಸ್ಲಿಂ ಸಮುದಾಯ ಶೇ.70 ಕ್ಕೂ ಹೆಚ್ಚಿನ ಜನಸಂಖ್ಯಾ ಪ್ರಮಾಣ ಹೊಂದಿದೆ.

ಕ್ರೈಸ್ತ ಸಮುದಾಯ ಮಾತ್ರ ದಶಕಗಳ ಅವಧಿಯಲ್ಲಿ ಜನಸಂಖ್ಯೆ ಪಾಲಿನಲ್ಲಿ ಕುಸಿತವನ್ನೇ ಕಂಡಿದೆ. 1971ರಲ್ಲಿ ರಾಜ್ಯದ ಜನಸಂಖ್ಯೆಯ ಶೇ. 2.09ರಷ್ಟಿದ್ದ 2011ರಲ್ಲಿ ಶೇ 1.87ಕ್ಕೆ ಕುಸಿದಿದೆ. ಆದರೆ ಇರುವಷ್ಟೇ ಜನಸಂಖ್ಯೆ ಬೆಂಗಳೂರು ಮತ್ತು ದಕ್ಷಿಣ ಕನ್ನಡಗಳಲ್ಲಿ ಹೆಚ್ಚಾಗಿ ಏಕತ್ರವಾಗಿರುವುದು ಗಮನಾರ್ಹ ಅಂಶ.

Leave a Reply