ಕೋಬ್ರಾ ಪಡೆಯ 10 ಯೋಧರು ನಕ್ಸಲರ ದಾಳಿಗೆ ಬಲಿ, ದೇಶದ ಏಕತೆ ಕಾಪಿಡಲು ಪ್ರಾಣತೆತ್ತ ಇವರಿಗಿರಲಿ ಅಭಿಮಾನದ ಶ್ರದ್ಧಾಂಜಲಿ

ಪ್ರಾತಿನಿಧಿಕ ಚಿತ್ರ

ಡಿಜಿಟಲ್ ಕನ್ನಡ ಟೀಮ್:

ಬಿಹಾರದ ಔರಂಗಾಬಾದ್’ನ ಅರಣ್ಯ ಪ್ರದೇಶದಲ್ಲಿ ನಕ್ಸಲರನ್ನು ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ದಳದ ಕೋಬ್ರಾ ಪಡೆಯ 10 ಮಂದಿ ಹುತಾತ್ಮರಾಗಿದ್ದಾರೆ.

ಇಸ್ಲಾಮಿಕ್ ಉಗ್ರವಾದಕ್ಕೆ ಪೈಪೋಟಿ ಕೊಡುತ್ತ ಪ್ರಾಣಹಾನಿ ವಿಧ್ವಂಸಗಳನ್ನೆಸಗುತ್ತಿರುವ ನಕ್ಸಲ್ ಉಗ್ರವಾದ ಹತ್ತಿಕ್ಕುವಲ್ಲಿ ಪ್ರಾಣಾಹುತಿಗೈದ ಇವರಿಗಿರಲಿ ಕೃತಜ್ಞ ಶ್ರದ್ಧಾಂಜಲಿ. ಉಗ್ರನ ಸಾವು ಸಂತಾಪಕ್ಕೆ ಕಾರಣವಾಗುವ ವಿಕ್ಷಿಪ್ತ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವು ಈ ಯೋಧರಿಗೆ ಮಿಡಿಯುವುದು ಅಷ್ಟರಮಟ್ಟಿಗಾದರೂ ಭದ್ರತಾಪಡೆಗಳ ಸ್ಥೈರ್ಯ ಕಾಪಿಡುವುದಕ್ಕೆ ಪ್ರೇರೇಪಣೆ ಆದೀತು.

ನಕ್ಸಲರು ಇವರನ್ನು ಸುತ್ತುವರೆದು, ಇವರ ಸಹಾಯಕ್ಕೆ ಇನ್ನಷ್ಟು ಮಂದಿ ಬರಬೇಕಾದ ಸ್ಥಿತಿ ಸೃಷ್ಟಿಸಿದ್ದಾರೆ. ಹಾಗೆ ಬರುತ್ತಿರುವ ಹಾದಿಯಲ್ಲಿ ಸ್ಫೋಟಕಗಳನ್ನು ಇರಿಸಿ ಪೊಲೀಸರ ಪ್ರಾಣವನ್ನು ಬಲಿ ಪಡೆದಿದ್ದಾರೆ. ಇನ್ನೂ ಕೆಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಏರುವ ಭೀತಿ ಇದೆ.

ಮದನಪುರ ಎಂಬುದು ಬಿಹಾರದ ಅತಿ ನಕ್ಸಲ್ ಪೀಡಿತ ಪ್ರದೇಶ. ಇಲ್ಲಿ ಮಾವೋ ಉಗ್ರರ ಸಭೆ ನಡೆಯಲಿದೆ ಎಂಬ ಮಾಹಿತಿ ಮೇರೆಗೆ ಸಿಆರ್ ಪಿಎಫ್ ಕಾರ್ಯಾಚರಣೆಗೆ ತೆರಳಿತ್ತು. ನಕ್ಸಲರು ನಾಲೆಯಲ್ಲೇ ಬಾಂಬ್ ಇರಿಸಿ ಪ್ರಾಣಹಾನಿ ಎಸಗಿದ್ದಾರೆ. ಗುಂಡಿನ ಚಕಮಕಿಯೂ ನಡೆದು ಮೂವರು ನಕ್ಸಲ್ ಉಗ್ರರು ಸತ್ತಿದ್ದಾರೆ. ಕೆಲವು ಉಗ್ರರು ಗಾಯಗೊಂಡಿದ್ದರೂ ಅವರನ್ನು ತಮ್ಮ ಸುರಕ್ಷಿತ ನೆಲೆಗಳಿಗೆ ಒಯ್ಯುವುದರಲ್ಲಿ ನಕ್ಸಲರು ಯಶಸ್ವಿಯಾಗಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮಾತುಕತೆಯಲ್ಲಿ ಪರಿಸ್ಥಿತಿಯ ವಿವರ ಪಡೆದಿದ್ದಾರೆ.

Leave a Reply