ಲೋಕಸಭೆಯಲ್ಲಿ ಖರ್ಗೆ ಕಿಡಿ, ಅಕ್ರಮ ಸಕ್ರಮಕ್ಕೆ ದಂಡ ಫಿಕ್ಸ್, ಕಲ್ಲಪ್ಪ ಪ್ರಕರಣದಲ್ಲಿ ಭಜರಂಗದಳ ಕೈವಾಡ ಅಂದ್ರು ಪರಮೇಶ್ವರ್, ಗುಜರಾತಿನಲ್ಲಿ ದಲಿತರ ಆಕ್ರೋಶ…

ಗುರುಪೂರ್ಣಿಮೆ… ಇದು ಹಲಸೂರಿನ ಸಾಯಿಬಾಬಾ ದೇವಸ್ಥಾನದಲ್ಲಿ ಕಂಡ ಭಕ್ತಿ ಬಿಂಬ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರವನ್ನು ತರಾಟೆಗೆ ತಗೊಂಡ್ರು ಖರ್ಗೆ, ಪ್ರತ್ಯುತ್ತರ ನೀಡಿದ್ರು ರಾಜನಾಥ್ ಸಿಂಗ್

‘ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟಿಗೆ ಕಾರಣ ಬಿಜೆಪಿ.. ಬಿಜೆಪಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ..’ ಇದು ಲೋಕಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ಧ ಕಿಡಿ ಕಾರಿದ ಪರಿ.

ಮಂಗಳವಾರ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆ ಅರುಣಾಚಲ ಪ್ರದೇಶದಲ್ಲಿ ಉದ್ಭವಿಸಿದ್ದ ರಾಜಕೀಯ ಬಿಕ್ಕಟ್ಟಿನ ವಿಷಯ ಪ್ರಸ್ತಾಪಿಸಿದ ಖರ್ಗೆ ಅವರು ಹೇಳಿದಿಷ್ಟು:

‘ಬಿಜೆಪಿ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿದೆ. ಹಳೆಯ ಇತಿಹಾಸ ಹೊಂದಿರುವ ಪಕ್ಷಕ್ಕೆ ಕೆಡಕು ಬಯಸಿದ್ದ ಬಿಜೆಪಿಗೆ ಸುಪ್ರೀಂ ಕೋರ್ಟ್ ಸೂಕ್ತ ಉತ್ತರ ನೀಡಿದೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸಂಖ್ಯಾಬಲದ ಕೊರತೆ ಎದುರಿಸುತ್ತಿದ್ದರೂ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಹಾಳು ಮಾಡುವ ಪ್ರಯತ್ನದಲ್ಲಿದೆ.’

ಇದಕ್ಕೆ ಪ್ರತಿಯಾಗಿ ಈ ರಾಜ್ಯಗಳ ರಾಜಕೀಯ ಬಿಕ್ಕಟ್ಟಿಗೆ ಆಂತರಿಕ ಬಂಡಾಯ ಕಾರಣವೇ ಹೊರತು ಬಿಜೆಪಿ ಅಲ್ಲ.. ಎಂದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೊಟ್ಟ ಉತ್ತರ ಹೀಗಿತ್ತು:

‘ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿನ ರಾಜಕೀಯ ಅಸ್ಥಿರತೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಸ್ವತಂತ್ರ ಭಾರತ ಇತಿಹಾಸದಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸುವ ಹವ್ಯಾಸ ಇರೋದು ಕಾಂಗ್ರೆಸ್ಸಿಗೆ ಮಾತ್ರ. ಖರ್ಗೆ ಅವರು ನಮ್ಮ ಸರ್ಕಾರ, ರಾಜ್ಯ ಸರ್ಕಾರಗಳನ್ನು ನಾಶ ಮಾಡುವ ಪ್ರಯತ್ನ ನಡೆಸುತ್ತಿದೆ ಎನ್ನುತ್ತಿದ್ದಾರೆ. ಆದರೆ, ತೂತಾಗಿರುವ ದೋಣಿಯನ್ನು ನೀರಿನಲ್ಲಿ ಬಿಟ್ಟರೆ ಅದು ತಾನಾಗಿಯೇ ಮುಳುಗುತ್ತದೆ. ಅದಕ್ಕೆ ನೀರನ್ನು ಬಯ್ದರೇನು ಬಂತು?’

ಕಲ್ಲಪ್ಪ ಪ್ರಕರಣದಲ್ಲಿ ಬಜರಂಗದಳ ಕೈವಾಡ: ಪರಮೇಶ್ವರ್

ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಅಂಗ ಸಂಸ್ಥೆಗಳಾದ ಸಂಘ ಪರಿವಾರ ಮತ್ತು ಬಜರಂಗದಳದವರ ಕೈವಾಡವಿರೋದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದಿದ್ದಾರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಈ ಬಗ್ಗೆ ಅವರು ಹೇಳಿರುವುದಿಷ್ಟು:

‘ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರನ್ನು ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದವರಲ್ಲಿ ಬಜರಂಗದಳದವರ ಕೈವಾಡವಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಬಜರಂಗದಳದ ಪ್ರಮುಖರನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಪ್ರವೀಣ್ ಖಾಂಡ್ಯ ಸೇರಿದಂತೆ ಮತ್ತಿಬ್ಬರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇವರ ಬಂಧನ ನಂತರ ಸತ್ಯಾಂಶ ಹೊರಬರಲಿದೆ.’

ಮನೆಗಳ ಅಕ್ರಮ ಸಕ್ರಮಕ್ಕೆ ದಂಡ ನಿಗದಿ

ಬಡ ಮತ್ತು ಮಧ್ಯಮ ವರ್ಗದವರು ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ₹2 ರಿಂದ 10 ಸಾವಿರವರೆಗೂ ದಂಡ ನಿಗದಿ ಮಾಡಿದೆ.

ಬಡ ಕುಟುಂಬದವರ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ದಂಡ ನಿಗದಿ ಮಾಡಿದ್ದು, ಇದರಂತೆ 30X40 ನಿವೇಶನಕ್ಕೆ ₹ ಎರಡು ಸಾವಿರ, 40X60 ಕ್ಕೆ ₹ ನಾಲ್ಕು ಸಾವಿರ, 50X80 ಚದರಡಿ ವಿಸ್ತೀರ್ಣದ ಸಕಾರ ಜಾಗಕ್ಕೆ ₹ ಆರು ಸಾವಿರ ದಂಡ ಫಿಕ್ಸ್ ಮಾಡಿದೆ. ಇನ್ನು ನಗರ ಪ್ರದೇಶದ ವ್ಯಾಪ್ತಿಯಲ್ಲಿ 20X30 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ₹ ಹತ್ತು ಸಾವಿರ ಸಾಂಕೇತಿಕ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಪರಿಶಿಷ್ಟ ಜಾತಿ/ಪಂಗಡ, ಅಂಗವಿಕಲರು, ಮಾಜಿ ಸೈನಿಕರು, ಮತ್ತು ಪೌರ ಕಾರ್ಮಿಕರಿಗೆ ಸಾಂಕೇತಿಕ ದರದಲ್ಲಿ ಶೇ 50 ರಷ್ಟು ರಿಯಾಯಿತಿ ಪಡೆಯಲಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಕಳಸಾ ಬಂಡೂರಿ ಯೋಜನೆಯಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು: ಕೋನರೆಡ್ಡಿ

ಕಳಸಾ ಬಂಡೂರಿ ಯೋಜನೆ ಜಾರಿಗೆ ಕುರಿತಂತೆ ಪ್ರಧಾನಿ ಮೋದಿ ಅವರು ಮಧ್ಯ ಪ್ರವೇಶಿಸಬೇಕು… ಈ ಯೋಜನೆ ಬಗ್ಗೆ ಕೇಂದ್ರಕ್ಕೆ ಇಚ್ಛಾಶಕ್ತಿ ಇದ್ರೆ ಪ್ರಧಾನಿ ಅವರು ಮಧ್ಯಸ್ತಿಕೆ ವಹಿಸಲಿ ಎಂದು ಆಗ್ರಹಿಸಿದ್ದಾರೆ ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ. ಈ ಬಗ್ಗೆ ಅವರು ಹೇಳಿರೋದಿಷ್ಟು:

‘ಈ ಹಿಂದೆ ಅಂತರ ರಾಜ್ಯಗಳ ಕುಡಿಯುವ ನೀರಿನ ವಿವಾದ ನ್ಯಾಯಾಧಿಕರಣದಲ್ಲಿದ್ದಾಗಲೂ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ದೇವೇಗೌಡರು ಮತ್ತು ಮನಮೋಹನ್ ಸಿಂಗ್  ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ ಉದಾಹರಣೆಗಳಿವೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರನ್ನು ಒಪ್ಪಿಸಲು ಸರ್ವಪಕ್ಷ ನಿಯೋಗ ತೆರಳಬೇಕು. ಕಳಸಾ ಬಂಡೂರಿ ಯೋಜನೆ ಜಾರಿ ಹಾಗೂ ರೈತರ ಸಮಸ್ಯೆಗಳ ಚರ್ಚೆಗಾಗಿಯೇ ವಿಶೇಷ ಅಧಿವೇಶನ ಕರೆಯಬೇಕು. ನಿನ್ನೆ ಮುಕ್ತಾಯಗೊಂಡ ಅಧಿವೇಶನದಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಪ್ರತಿಧ್ವನಿಸಿ ಯಾವುದೇ ವಿಚಾರ ಚರ್ಚೆಗೆ ಅವಕಾಶ ಸಿಗಲಿಲ್ಲ. ಕಳೆದ ಅಧಿವೇಶನದಲ್ಲೂ ಟಿಪ್ಪು ಜಯಂತಿ ಆಚರಣೆ ಗಲಾಟೆಯಿಂದಾಗಿ ಈ ಬಗ್ಗೆ ಯಾವುದೇ ಚರ್ಚೆಯಾಗಲಿಲ್ಲ. ಹೀಗಾಗಿ ರೈತರ ಸಮಸ್ಯೆಗಳಿಗೆ ಸೀಮಿತವಾಗಿ ಅಧಿವೇಶನ ಅಗತ್ಯವಿದೆ. ರೈತರ ಮಾಡು ಇಲ್ಲವೆ, ಮಡಿ ಹೋರಾಟವನ್ನು ರಾಜ್ಯ-ಕೇಂದ್ರ ಸರ್ಕಾರಗಳು ಲಘುವಾಗಿ ಪರಿಗಣಿಸಬಾರದು.’

ದಲಿತರ ಮೇಲಿನ ಹಲ್ಲೆ ಗುಜರಾತ್ ತೀವ್ರವಾಯ್ತು ಪ್ರತಿಭಟನೆ

ಕಳೆದ ವಾರ ಗುಜರಾತ್ ನ ಉನಾ ಪ್ರದೇಶದಲ್ಲಿ ಮೃತ ದನಗಳ ಚರ್ಮವನ್ನು ತೆಗೆದುಕೊಳ್ಳಲು ಮುಂದಾದ ನಾಲ್ವರು ದಲಿತ ಯುವಕರ ಮೇಲೆ ನಡೆದ ಅಮಾನವೀಯ ಹಲ್ಲೆ ಖಂಡಿಸಿ ಗುಜರಾತ್ ನಲ್ಲಿ ಪ್ರತಿಭಟನೆಗಳು ತೀವ್ರವಾಗ್ತಿದೆ. ಕೆಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಒಬ್ಬ ಹೆಡ್ ಕಾನ್ಸ್ ಟೇಬಲ್ ಮೃತಪಟ್ಟಿದ್ದು, ಹಲವು ಸರ್ಕಾರಿ ಬಸ್ ಗಳು ಹಾನಿಗೊಳಗಾಗಿವೆ. ಈ ವೇಳೆ ಏಳು ದಲಿತರು ಆತ್ಮಹತ್ಯೆಗೂ ಪ್ರಯತ್ನಿಸಿದ್ದಾರೆ. ಸರ್ಕಾರ ಈ ಕುರಿತ ತನಿಖೆಯನ್ನು ಸಿಐಡಿಗೆ ವಹಿಸಿದೆ. ಅಲ್ಲದೆ ಹಲ್ಲೆಗೆ ಒಳಗಾದವರಿಗೆ ಪರಿಹಾರವನ್ನು ನೀಡಲು ನಿರ್ಧರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 9 ಮಂದಿ ಬಂಧನವಾಗಿದ್ದು, ಕರ್ತವ್ಯ ಲೋಪಕ್ಕಾಗಿ ಇನ್ ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

 

ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಡಿಕೇರಿ ಜೆಎಂಎಫ್ ಕೋರ್ಟ್ ನೀಡಿರುವ ತೀರ್ಪನ್ನು ರದ್ದುಪಡಿಸಬೇಕು ಎಂದು ಪ್ರಣಬ್ ಮೊಹಂತಿ ಮತ್ತು ಎ.ಎಂ ಪ್ರಸಾದ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವಿಚಾರಣೆಯನ್ನು ಬೇಗ ನಡೆಸಬೇಕು ಎಂದು ಈ ಇಬ್ಬರು ಅಧಿಕಾರಿಗಳು ಅರ್ಜಿಯಲ್ಲಿ ಕೋರಿದ್ದರು. ಆದರೆ, ವಿಚಾರಣೆ ನಾಳೆಗೆ ಮುಂದೂಡಲಾಗಿದೆ.
  • ಕಲಬುರ್ಗಿಯ ಕೇಂದ್ರಿಯ ವಿಶ್ವವಿದ್ಯಾಲಯದ ಬಳಿ ಲಾರಿ ಮತ್ತು ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಈ ದುರ್ಘಟನೆ ನಡೆದಿದ್ದು, ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ.
  • ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ಬಿ. ಕೆ. ಬನ್ಸಲ್ ಎಂಬುವವರನ್ನು ಸಿಬಿಐ ಅಧಿಕಾರಿಗಳು ಶನಿವಾರ ಲಂಚದ ಪ್ರಕರಣದಲ್ಲಿ ಬಂಧಿಸಿದ್ದರು. ಕಂಪನಿಯೊಂದರಿಂದ ₹9 ಲಕ್ಷ ಲಂಚ ಸ್ವೀಕರಿಸುತ್ತಿರುವಾಗಲೇ ಈ ಬಂಧನವಾಗಿತ್ತು. ಮಂಗಳವಾರ ಇವರ ಪತ್ನಿ ಸತ್ಯ ಬಾಲಾ ಹಾಗೂ ಮಗಳು 28ರ ಹರೆಯದ ನೇಹಾ ದೆಹಲಿಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಬಂಧನಕ್ಕೂ ಆತ್ಮಹತ್ಯೆಗೂ ಏನಾದರೂ ಸಂಬಂಧವಿದೆಯೇ ಎಂಬುದು ಸದ್ಯಕ್ಕೆ ತಿಳಿಯುತ್ತಿಲ್ಲ.

Leave a Reply