ಗಾಂಧಿ ಹತ್ಯೆಗೆ ಆರೆಸ್ಸೆಸ್ ಕಾರಣ ಎಂಬ ಹೇಳಿಕೆಗೆ ಕ್ಷಮೆ ಕೇಳಿ, ಇಲ್ಲವೇ ವಿಚಾರಣೆ ಎದುರಿಸಿ- ರಾಹುಲ್ ಗಾಂಧಿಗೆ ಸುಪ್ರೀಂ ತಾಕೀತು

ಡಿಜಿಟಲ್ ಕನ್ನಡ ಟೀಮ್:

ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದು ಆರೆಸ್ಸೆಸ್ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೊಬ್ಬರು ಮಾನಹಾನಿ ಮೊಕದ್ದಮೆ ಹೂಡಿದ್ದರು. ಇದನ್ನು ವಜಾಗೊಳಿಸಬೇಕು ಎಂದು ರಾಹುಲ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಈ ಮೊಕದ್ದಮೆ ಮಂಗಳವಾರ ವಿಚಾರಣೆಗೆ ಬಂದಾಗ ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸುವುದಕ್ಕೆ ನಿರಾಕರಿಸಿತು. ‘ಆರೆಸ್ಸೆಸ್ ಜತೆ ಸಂಪರ್ಕದಲ್ಲಿರುವ ಎಲ್ಲರನ್ನೂ ಕೆಟ್ಟದಾಗಿ ಚಿತ್ರಿಸುವಂಥ ಹೇಳಿಕೆ ಏಕೆ ನೀಡಿದಿರಿ? ಹೀಗೆ ಹೇಳಿದ್ದಕ್ಕೆ ಕ್ಷಮೆ ಕೇಳಿ. ಇಲ್ಲದಿದ್ದರೆ ನಿಮ್ಮ ಹೇಳಿಕೆ ಮಾನನಷ್ಟ ಮಾಡಿಲ್ಲ ಎಂಬ ಬಗ್ಗೆ ವಿಚಾರಣೆ ಮುಂದುವರಿಯುತ್ತದೆ. ಒಂದಿಡೀ ಸಂಘಟನೆಯನ್ನು ಒಮ್ಮೆಗೇ ದೂರುವುದಕ್ಕೆ ಏನು ಆಧಾರ’ ಎಂದೆಲ್ಲ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ರಾಹುಲ್ ಗಾಂಧಿ ಪರ ವಕೀಲರು ಅವರ ಹೇಳಿಕೆ ಐತಿಹಾಸಿಕ ಸತ್ಯ ಹಾಗೂ ಸರ್ಕಾರಿ ದಾಖಲೆಗಳಲ್ಲಿ ಹೇಳಿರುವುದನ್ನೇ ಪ್ರತಿಪಾದಿಸಿದೆ ಎಂದು ವಾದಿಸಿದರು. ಆದರೆ, ಹೀಗೆ ವಾದಿಸುವುದೇ ಆದಲ್ಲಿ ವಿಚಾರಣೆ ಮುಂದುವರಿಯಲಿ ಎಂದು ನ್ಯಾಯಾಲಯ ಹೇಳಿತು. ಆರೆಸ್ಸೆಸ್ ವಿರುದ್ಧ ಹೇಳಿಕೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿತ್ತು ಎಂಬುದನ್ನು ವಿಚಾರಣೆ ಎದುರಿಸಿ ಸ್ಪಷ್ಟಪಡಿಸಬೇಕಾಗುತ್ತದೆ ಎಂದಿತು ಸುಪ್ರೀಂಕೋರ್ಟ್.

ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಎರಡು ವಾರಗಳ ಕಾಲಾವಕಾಶ ಕೋರಿರುವುದರಿಂದ ಜುಲೈ 27ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಆರೋಪದ ಹೇಳಿಕೆಗಳನ್ನು ಹಿಡಿದುಕೊಂಡು ಸಂಬಂಧಪಟ್ಟವರು ಕಾನೂನು ಕ್ರಮಕ್ಕೆ ಮೊರೆ ಹೋದರೆ, ಹೇಳಿಕೆ ನೀಡಿದಷ್ಟು ಸುಲಭದಲ್ಲಿ ಪರಿಣಾಮ ಅರಗಿಸಿಕೊಳ್ಳಲಾಗುವುದಿಲ್ಲ ಎಂಬ ಪಾಠವನ್ನು ಹೇಳುತ್ತಿದೆ ಸುಪ್ರೀಂನ ಈ ನಿರ್ದೇಶನ.

ಈ ಹಿಂದೆ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮನೀಶ್ ತಿವಾರಿ, ‘ನಿತಿನ್ ಗಡ್ಕರಿ ಸಹ ಆದರ್ಶ ವಸತಿ ಸಮುಚ್ಛಯದಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ’ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ನಿತಿನ್ ಗಡ್ಕರಿ ಮಾನನಷ್ಟ ಮೊಕದ್ದಮೆ ದಾಖಲಿಸಿದಾಗ ಮನೀಶ್ ತಿವಾರಿ ಬೇಷರತ್ ಕ್ಷಮಾಪಣೆ ಬರೆದುಕೊಟ್ಟಿದ್ದರು.

ಇದೀಗ ಆರೆಸ್ಸೆಸ್ ವಿರುದ್ಧದ ಹೇಳಿಕೆಯಲ್ಲಿ ರಾಹುಲ್ ಗಾಂಧಿ ತಮ್ಮ ನ್ಯಾಯವಾದಿ ಕಪಿಲ್ ಸಿಬಲ್ ಅವರೊಡಗೂಡಿ ಯಾವ ಮಾರ್ಗ ಅನುಸರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಒಂದೊಮ್ಮೆ ಇಲ್ಲಿ ರಾಹುಲ್ ಕ್ಷಮೆ ಕೇಳಬೇಕಾದ ಪ್ರಮೇಯ ಬಂದರೆ ಆರೆಸ್ಸೆಸ್ಸಿಗೆ ಅದು ದೊಡ್ಡ ವಿಜಯವಾಗಲಿದೆ. ಏಕೆಂದರೆ, ಗಾಂಧಿಯನ್ನು ಕೊಂದಿದ್ದೇ ಆರೆಸ್ಸೆಸ್ ಎಂದು ರಾಹುಲ್ ಧಾಟಿಯಲ್ಲೇ ಆರೋಪಿಸುವವರ ಸಂಖ್ಯೆ ದೊಡ್ಡದಿದೆ. ಈ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಮುಟ್ಟಿದಲ್ಲಿ ಇಂಥ ಆರೋಪ ಮಾಡುವವರಿಗಿರುವ ಪೂರಕ ವಾತಾವರಣ ಕಸಿದುಕೊಳ್ಳುವಲ್ಲಿ ಆರೆಸ್ಸೆಸ್ ಸಫಲವಾಗುತ್ತದೆ.

Leave a Reply