‘ಮಾಯಾವತಿ ವೇಶ್ಯೆಗಿಂತ ಕಡೇ..’ ಎಂದ ದಯಾಶಂಕರ್, ಉ.ಪ್ರ ಬಿಜೆಪಿ ವರ್ಚಸ್ಸು ಕೆಡಿಸಲು ಬೇರಾವ ವೈರಿಗಳು ಬೇಡ

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭೆಯ ಬುಧವಾರದ ಕಲಾಪ ಪೂರ್ಣ ಪ್ರಮಾಣದ ಚರ್ಚೆ ನಡೆಯದೇ ನಾಳೆಗೆ ಮುಂದಕ್ಕೊಯ್ತು. ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರು ನೀಡಿದ್ದ ‘ಮಾಯಾವತಿ ವೇಶ್ಯೆಗಿಂತಲೂ ಕಡೆ’ ಎಂಬ ಆಕ್ಷೇಪಾರ್ಹ ಹೇಳಿಕೆಯೇ ಇದಕ್ಕೆ ಕಾರಣ.

ಈ ಮಾನಹಾನಿಕರ ಹೇಳಿಕೆ ಸಂಬಂಧ ಆರಂಭದಲ್ಲೇ ಸ್ವತಃ ದಯಾಶಂಕರ್ ಸಿಂಗ್ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕ್ಷಮೆ ಕೇಳಿದ್ರು. ಇದಾದ ನಂತರ ಉತ್ತರ ಪ್ರದೇಶ ಬಿಜೆಪಿ ಘಟಕವು ದಯಾಶಂಕರ್ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿದೆ. ಆದರೆ ಇಷ್ಟಕ್ಕೆ ತೃಪ್ತರಾಗದ ಮಾಯಾವತಿ ಅವರು ದಯಾಶಂಕರ್ ಬಂಧನವಾಗಬೇಕೆಂದು ಪಟ್ಟು ಹಿಡಿದಿದ್ದಾರೆ.

ಮಾಯಾವತಿ ವಿರುದ್ಧ ದಯಾಶಂಕರ್ ಮಾಧ್ಯಮದವರಿಗೆ ನೀಡಿದ ಹೇಳಿಕೆಯಲ್ಲಿ, ‘ವೇಶ್ಯೆ ನಿರ್ದಿಷ್ಟ ಮೊತ್ತಕ್ಕೆ ಪುರುಷನ ಜತೆ ವ್ಯವಹಾರ ಕುದುರಿಸುತ್ತಾಳೆ. ಆದರೆ ಮಾಯಾವತಿ ಪಕ್ಷದ ಟಿಕೆಟ್ ನೀಡಿಕೆ ವಿಚಾರದಲ್ಲಿ ವೇಶ್ಯೆಗಿಂತಲೂ ಕಡೆಯಾಗಿ ವರ್ತಿಸಿದ್ದಾರೆ. ಪಕ್ಷದ ಟಿಕೆಟ್ ಅನ್ನು ಒಬ್ಬ ಅಭ್ಯರ್ಥಿಗೆ ₹ 1 ಕೋಟಿಗೆ ಮಾರಿಕೊಂಡ ನಂತರ, ಮತ್ತೊಬ್ಬ ಏನಾದರೂ ₹ 2 ಕೋಟಿ ಕೊಟ್ಟರೆ ಆತನಿಗೇ ಟಿಕೆಟ್ ನೀಡುತ್ತಾರೆ’ ಎಂದು ಅವಹೇಳನ ಮಾಡಿದ್ದರು.

ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆಸಬೇಕಾದ ಪ್ರಮುಖ ನಾಯಕರಲ್ಲಿ ಒಬ್ಬರಾದ ದಯಾಶಂಕರ್ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಬಿಜೆಪಿ ನಿಜಕ್ಕೂ ತಲೆತಗ್ಗಿಸಬೇಕಾದ ವಿಚಾರ. ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ದ್ವೇಷಾಸೂಯೆ ತುಂಬಿದ ಹೇಳಿಕೆಗಳಲ್ಲಿ ತೊಡಗಿರುವುದಕ್ಕೆ ಈ ಪ್ರಕರಣ ಮತ್ತೊಂದು ಸೇರ್ಪಡೆ. ಅಲ್ಲದೆ ಈ ರೀತಿಯ ಹೇಳಿಕೆಗಳಿಂದ ಬಿಜೆಪಿ ವರ್ಚಸ್ಸು ಕಿತ್ತುಕೊಂಡು ಹೋಗಲಿದೆ.

ಈ ಬಗ್ಗೆ ರಾಜ್ಯಸಭೆಯಲ್ಲಿ ಮೊದಲು ಖಂಡನೆ ವ್ಯಕ್ತಪಡಿಸಿದ್ದು ಕಾಂಗ್ರೆಸ್ ನಾಯಕ ಗುಲಾಮ್ ನಬೀ ಆಜಾದ್. ನಂತರ ಇತರೆ ನಾಯಕರು ಧ್ವನಿಗೂಡಿಸಿದ್ರು. ಬಿಎಸ್ಪಿ ನಾಯಕ ಎಸ್.ಸಿ ಮಿಶ್ರಾ ಅವರು ದಯಾಶಂಕರ್ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ರು.

ಇದಕ್ಕೆ ಪೂರಕವಾಗಿ ಮಾಯಾವತಿ ಅವರು, ‘ನಾನು ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿರುವವಳು. ಜತೆಗೆ ಸಂಸತ್ ಸದಸ್ಯೆಯಾಗಿದ್ದೇನೆ. ಎಂದಾದರೂ ಈ ರೀತಿ ಕೆಟ್ಟ ಭಾಷೆ ಬಳಸಿದ್ದೇನಾ? ಎಂದು ಇಲ್ಲಿರುವ ಎಲ್ಲ ಸದಸ್ಯರನ್ನು ಕೇಳುತ್ತೇನೆ. ಜನರು ನನ್ನನ್ನು ತಮ್ಮ ಮಗಳಂತೆ, ಸಹೋದರಿಯಂತೆ ನೋಡುತ್ತಾರೆ. ಹೀಗಾಗಿ ದಯಾಶಂಕರ್ ಅವರು ತಮ್ಮ ತಾಯಿ, ಸಹೋದರಿ ಮತ್ತು ಇತರೆ ಎಲ್ಲ ಮಹಿಳೆಯರನ್ನು ನಿಂದಿಸಿದ್ದಾರೆಂದು ಪರಿಗಣಿಸುತ್ತೇನೆ. ಬಿಜೆಪಿ ಮುಂದೆ ಸಾಗಬೇಕೆಂದಾದರೆ ಮೊದಲು ದಲಿತರಿಗೆ ಗೌರವ ನೀಡುವುದನ್ನು ಕಲಿಯಬೇಕು. ದಯಾಶಂಕರ್ ಅವರ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರು ಬೀದಿಗಿಳಿಯುತ್ತಾರೆ. ಆಗ ನಾನೂ ಏನು ಮಾಡಲು ಸಾಧ್ಯವಿಲ್ಲ. ಇದು ಮತ್ತು ಗುಜರಾತ್ ಪ್ರಕರಣದ ನಂತರ ದೇಶದ ಜನತೆ ಬಿಜೆಪಿಯನ್ನು ಕ್ಷಮಿಸೋದಿಲ್ಲ’ ಎಂದರು.

Leave a Reply