ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಅಂತ ಸಿಎಂ ಬೇಸರ, ಅಧಿಕಾರ ಕಳ್ಕೋಬೇಡಿ ಅಂತ ಕಾಂಗ್ರೆಸ್ಸಿಗೆ ಶರೀಫ್ ಸಲಹೆ, ಆತ್ಮಸ್ಥೈರ್ಯ ಕಳ್ಕೋಬೇಡಿ ಅಂತ ಪೊಲೀಸರಿಗೆ ಪರಂ ಕಿವಿಮಾತು, ಕೈದಿಗಳಿಗೆ ಬಿಡುಗಡೆ ಭಾಗ್ಯ

Home Minister, G.Parameshwar, with others during Book Release at Press Club of Bangalore on Wednesday.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಡಾ.ಆನಂದಕುಮಾರ್ ವಿರಚಿತ ‘ಪ್ರಬುದ್ಧ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಶರೀಫ್ ಸಮಾಲೋಚನೆ .

ಡಿಜಿಟಲ್ ಕನ್ನಡ ಟೀಮ್:

‘ದೇಶದಲ್ಲಿ ಕಾಂಗ್ರೆಸ್ ಅಧಃಪತನದತ್ತ ಸಾಗಿರುವಾಗ ಕರ್ನಾಟಕದಲ್ಲಿ ಸಿಕ್ಕಿರುವ ಅಧಿಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಹಾಗೂ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ – ಇದು ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಶರೀಫ್ ಕೊಟ್ಟಿರುವ ಸಲಹೆ.

‘ಸರ್ಕಾರ ಇಲ್ಲದ ಪ್ರಕರಣಗಳನ್ನು ಮೈಮೇಲೆ ಎಳೆದುಕೊಳ್ಳುವುದು ಒಳ್ಳೆಯದಲ್ಲ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಅವರು ಮೊದಲೇ ರಾಜೀನಾಮೆ ಕೊಡಬೇಕಿತ್ತು. ರಾಜೀನಾಮೆ ವಿಳಂಬವಾದದ್ದು ಏಕೆ ಎಂಬುದು ಗೊತ್ತಿಲ್ಲ. ಇದನ್ನು ಮುಖ್ಯಮಂತ್ರಿಗಳನ್ನೇ ಕೇಳಿ’ ಎಂದು ಬೆಂಗಳೂರಲ್ಲಿ ಬುಧವಾರ ಡಾ.ಆನಂದಕುಮಾರ್ ವಿರಚಿತ ‘ಪ್ರಬುದ್ಧ’ ಪುಸ್ತಕ ಬಿಡುಗಡೆ ಸಮಾರಂಭ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಶರೀಫ್ ಎಂದು ಉತ್ತರ ಕೊಟ್ಟರು.

ಪೊಲೀಸರಿಗೆ ಪರಮೇಶ್ವರ್ ಭರವಸೆ

ಪೊಲೀಸರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಅಗತ್ಯ ಇಲ್ಲ. ಸರ್ಕಾರ ನಿಮ್ಮೊಂದಿಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ನೀಡಿದ ಅಭಯ.

ಹಿರಿಯ ಅಧಿಕಾರಿ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ರೂಪಾ ತೆಂಬದ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪೊಲೀಸರೇ ಧೃತಿಗೆಡಬೇಡಿ, ಸಮಾಜವನ್ನು ರಕ್ಷಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ನೀವು ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ನಿಮ್ಮ ರಕ್ಷಣೆಗೆ ಸರ್ಕಾರವಿದೆ. ಯಾವುದೇ ಸಮಸ್ಯೆಯಿದ್ದರೆ ನಮ್ಮ ಬಳಿ ಬನ್ನಿ. ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಬೇಡಿ. ನಿಮ್ಮ ಕುಟುಂಬಗಳನ್ನು ಅನಾಥರನ್ನಾಗಿ ಮಾಡಬೇಡಿ ಎಂದರು.

ಪಿಎಸ್ಐ ರೂಪಾ ಅವರ ಆತ್ಮಹತ್ಯೆ ಯತ್ನಕ್ಕೆ ಅವರಿಗೆ ವಿಜಯನಗರ ಇನ್ಸ್ ಪೆಕ್ಟರ್ ಸಂಜೀವ್ ಗೌಡ ಅವರ ಜತೆ ಇದ್ದ ಮನಸ್ತಾಪವೇ ಕಾರಣ ಎಂದು ಗೊತ್ತಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದು ಸರಿ. ಹಾಗೆಂದು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕುವುದು ಸರಿಯಲ್ಲ. ಹೊಸದಾಗಿ 16 ಸಾವಿರ ಪೊಲೀಸ್ ಕಾನ್ಸ್ ಟೇಬಲ್, 500 ಪಿಎಸ್ಐ ನೇಮಕವಾಗಿದ್ದು, ತರಬೇತಿ ಬಳಿಕ ಸೇವೆ ಆರಂಭಿಸಲಿದ್ದಾರೆ. ಆಗ ಸಿಬ್ಬಂದಿ ಕೊರತೆ ನಿವಾರಣೆಯಾಗಲಿದೆ ಎಂದೂ ಹೇಳಿದರು.

ಸಂಪುಟ ಸಭೆ ಸಚಿವರಿಗೆ ಸಿಎಂ ಸಲಹೆ

ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ನಮ್ಮ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಲ್ಲ. ಇದನ್ನು ಸರಿಪಡಿಸಲು ಆಡಳಿತ ವಿಕೇಂದ್ರೀಕರಣ ಆಗಬೇಕಿದೆ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಸಚಿವ ಸಂಪುಟ ಸಭೆ ನಂತರ ಬುಧವಾರ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸಚಿವರ ಜತೆ ಅನೌಪಚಾರಿಕ ಚರ್ಚೆ ನಡೆಸಿದ ಅವರು, ಸಹೋದ್ಯೋಗಿಗಳಿಗೆ ಪರೋಕ್ಷ ಚಾಟಿ ಬೀಸಿದರು. ಅಧಿಕಾರಿಗಳ ಮೇಲೆ ಹಿಡಿತ ಸಾಧಿಸದಿದ್ದರೆ ನೀವು ಮಂತ್ರಿಗಳಾಗಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಸಚಿವಾಲಯ ಹಾಗೂ ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುವ ಅಧಿಕಾರವನ್ನು ತಹಶೀಲ್ದಾರ್ ಹಂತಕ್ಕೆ ವಿಕೇಂದ್ರೀಕರಿಸಬೇಕು. ಆಗ ಯೋಜನೆಗಳು ಜನರಿಗೆ ಸುಲಭವಾಗಿ ಮುಟ್ಟಲಿವೆ. ಇಲಾಖಾ ಕಾರ್ಯದರ್ಶಿಗಳು ಸರ್ಕಾರದ ಯೋಜನೆಗಳನ್ನು ಕೆಳ ಹಂತಕ್ಕೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಈ ಅಧಿಕಾರಿಗಳ ಮೇಲೆ ಮಂತ್ರಿಗಳು ಹಿಡಿತ ಸಾಧಿಸದಿದ್ದರೆ ಕಾರ್ಯಕ್ರಮಗಳು ಅನುಷ್ಠಾನ ಆಗುವುವುದಿಲ್ಲ ಎಂಬುದು ಸಿದ್ದರಾಮಯ್ಯನವರ ಖಡಾಖಂಡಿತ ಮಾತು.

ನಿಮ್ಮ ಮಾತು ಕೇಳದ ಅಧಿಕಾರಿಗಳ ವಿರುದ್ಧ ನನಗೆ ದೂರು ಕೊಡಿ. ತಕ್ಷಣವೇ ಶಿಸ್ತುಕ್ರಮ ತಗೋತೀನಿ. ನಮಗೆ ಉಳಿದಿರುವ ಎರಡು ವರ್ಷದ ಅವಧಿಯಲ್ಲಿ ಸರ್ಕಾರವನ್ನು ಜನರ ಬಳಿಗೆ ಕೊಂಡೋಯ್ಯಲೇಬೇಕು ಎಂದರು.

ಕೈದಿಗಳಿಗೆ ಬಿಡುಗಡೆ ಭಾಗ್ಯ

ದೇಶದ್ರೋಹ, ಅತ್ಯಾಚಾರ, ಕೊಲೆ, ಭಯೋತ್ಪಾದನೆ ಆರೋಪ ಹೊತ್ತಿರುವವರು ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ತನಿಖೆಗೆ ಒಳಪಟ್ಟವರನ್ನು ಹೊರತುಪಡಿಸಿ ಉಳಿದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೈದಿಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ವಿಷಯಗಳ ಬಗ್ಗೆ ನೀಡಿದ ಮಾಹಿತಿ ಹೀಗಿದೆ:

  • ನ್ಯಾಯಬೆಲೆ ಅಂಗಡಿಯವರಿಗೆ ನೀಡುವ ಕಮೀಷನ್ ಪ್ರಮಾಣ ಕ್ವಿಂಟಾಲ್ ಪಡಿತರಕ್ಕೆ ₹ 14 ರಷ್ಟು ಹೆಚ್ಚಳ. ಇದಕ್ಕೆ ಕೇಂದ್ರ ಸರ್ಕಾರವೂ ಸಹಮತ ನೀಡಿದೆ.
  • ಕಬ್ಬು ಬೆಳೆಗಾರರ ಅಚ್ಚುಕಟ್ಟು ಪ್ರದೇಶವಿಲ್ಲದ ಯರಗಟ್ಟಿ ಸಕ್ಕರೆ ಕಾರ್ಖಾನೆಗೆ ಸೋಮೇಶ್ವರ, ರೇಣುಕಾ, ಶಿವಸಾಗರ್ ಸಕ್ಕರೆ ಕಾರ್ಖಾನೆ ಸೇರಿದಂತೆ ನಾಲ್ಕು ಕಾರ್ಖಾನೆಗಳ ವ್ಯಾಪ್ತಿ ಸೇರಿದಂತೆ ಹದಿನಾಲ್ಕು ಗ್ರಾಮಗಳಲ್ಲಿ ಬೆಳೆಯುವ ಕಬ್ಬು ಪೂರೈಕೆ ತೀರ್ಮಾನ.
  • ಮುಂದಿನ ಡಿಸೆಂಬರ್ ಗೆ ಮುಕ್ತಾಯ ಆಗಲಿರುವ ಲೋಕಾಯುಕ್ತ ಸಂಸ್ಥೆ ಸಲಹೆಗಾರ ರಾಮಪ್ರಸಾದ್ ಅವರ ಸೇವಾವಧಿ ವಿಸ್ತರಣೆಗೆ ಒಪ್ಪಿಗೆ.
  • ಬಡವರು ಮತ್ತು ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮೈಸೂರು ನಗರದಲ್ಲಿ 70 ಕೋಟಿ ರುಪಾಯಿ ವೆಚ್ಚದಲ್ಲಿ 300 ಹಾಸಿಗೆ ಸಾಮರ್ಥ್ಯದ ಮತ್ತೊಂದು ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಪ್ರಮುಖ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ ಡಿಐ) ಪ್ರಮಾಣ ಹೆಚ್ಚಿಸಿರುವ ಕೇಂದ್ರ ಸರ್ಕಾರವು ಮುದ್ರಣ ಮಾಧ್ಯಮಕ್ಕೆ ಇದು ಅನ್ವಯ ಆಗದು ಎಂದಿದೆ. ಸದ್ಯ ದಿನಪತ್ರಿಕೆ ಮತ್ತು ವಾರ ಪತ್ರಿಕೆಗಳಿಗೆ ಶೇ. 26 ರಷ್ಟು ಎಫ್ ಡಿ ಐಗೆ ಅವಕಾಶವಿದೆ. ಮುದ್ರಣ ಮಾಧ್ಯಮದಲ್ಲಿ ಹಲವು ವರ್ಷಗಳಿಂದ ಎಫ್ ಡಿ ಐ ಹೆಚ್ಚಳ ಆಗಿಲ್ಲ.  ಶೇ. 49 ರಷ್ಟು ಹೆಚ್ಚಿಸುವ ಬಗ್ಗೆ ಚರ್ಚೆ ಆಗುತ್ತಿತ್ತು.
  • ಭಾರತದ ಹಾಕಿ ದಂತಕತೆ ಮೊಹಮದ್ ಶಾಹಿದ್ ಬುಧವಾರ ಮೃತಪಟ್ಟಿದ್ದಾರೆ. ಕಿಡ್ನಿ ಸೇರಿ ಬಹು ಅಂಗಾಂಗ ವೈಫಲ್ಯದಿಂದ ಆಸ್ಪತ್ರೆ ಸೇರಿದ್ದ ಶಾಹಿದ್ ಅವರಿಗೆ ನೆರವು ನೀಡುವಂತೆ ಮಾಜಿ ಆಟಗಾರ ಧನರಾಜ್ ಪಿಳ್ಳೈ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದರು. ಎರಡೂ ಸರ್ಕಾರಗಳು ಮನವಿಗೆ ಸ್ಪಂದಿಸಿದ್ದವು. ಆದರೆ, ಚಿಕಿತ್ಸೆ ಯಶಸ್ವಿಯಾಗದೆ ಶಾಹಿದ್ ಕೊನೆಯುಸಿರೆಳೆದಿದ್ದಾರೆ. ವಿಭಿನ್ನ ಕೌಶಲ್ಯ ಹಾಗೂ ಚುರುಕಿನ ಆಟದಿಂದ ಶಾಹಿದ್ ಸಾಕಷ್ಟು ಖ್ಯಾತಿ ಗಳಿಸಿದ್ದರು. ಇವರ ಸಾವಿಗೆ ಕ್ರೀಡಾ ಕ್ಷೇತ್ರ ಹಾಗೂ ಸರ್ಕಾರದ ಪ್ರತಿನಿಧಿಗಳು ಸೇರಿದಂತೆ ಅನೇಕ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Leave a Reply