ವರ್ಷ ತುಂಬಿದ ಮಹದಾಯಿ ಹೋರಾಟ, ಕಳಸಾ-ಬಂಡೂರಿ ಕುರಿತು ಪ್ರತೀ ಕನ್ನಡಿಗ ತಿಳಿದಿರಬೇಕಾದ ವಿವರಗಳಿವು

Members of Mahadayi Kalasa Banduri Horatada Kendra Samanvaya Samithi and other Raitha Sene Karnataka Rajya Samithi, and Farmers take part rally from City Railway Station to Freedom park to demand implement Mahadayi Project in Bengaluru on Tuesday.

mahesh rudragaudarಮಹೇಶ್ ರುದ್ರಗೌಡರ್

ಮಹದಾಯಿ ಯೋಜನೆಯ ಜಾರಿಗಾಗಿ ಒತ್ತಾಯಿಸಿ ನಡೆಯುತ್ತಿರುವ ರೈತರ ಚಳವಳಿಗೆ ಈಗ ವರ್ಷ ತುಂಬಿದೆ. ಚಳವಳಿಗಳೇ ಸತ್ತು ಹೋಗುತ್ತಿರುವ ಈ ಕಾಲಮಾನದಲ್ಲಿ ಒಂದು ವರುಶದ ಕಾಲ ಒಂದು ಹೋರಾಟವನ್ನು ಹಿಡಿದಿಟ್ಟುಕೊಳ್ಳುವುದು ಸಾಮಾನ್ಯವಾದ ವಿಚಾರವಲ್ಲ. ಈ ವಿಷಯದಲ್ಲಿ ಮಹದಾಯಿ ಯೋಜನೆಗಾಗಿ ಹೋರಾಡುತ್ತಿರುವ ಹೋರಾಟಗಾರರ ಛಲ, ಶ್ರದ್ಧೆಯನ್ನು ಕನ್ನಡಿಗರೆಲ್ಲರೂ ಮೆಚ್ಚಲೇಬೇಕು. ಕಳಸಾ ಬಂಡೂರಿ ಹೋರಾಟ ಅನ್ನುವ ಹೆಸರಿನಿಂದಲೇ ಹೆಚ್ಚು ಜನಜನಿತವಾಗಿರುವ ಈ ಹೋರಾಟದ ಇತಿಹಾಸವೇನು? ಇದು ನೀರಾವರಿ ಹೋರಾಟವೋ, ಕುಡಿಯುವ ನೀರಿನ ಹೋರಾಟವೋ? ಕರ್ನಾಟಕದ ವಾದವೇನು? ಗೋವಾದ ತಕರಾರೇನು? ಇವನ್ನೆಲ್ಲ ಈ ಲೇಖನ ನಿಖರವಾಗಿ ಅರ್ಥ ಮಾಡಿಸುತ್ತದೆ.

ಮಲಪ್ರಭಾ ನೀರಾವರಿ ಯೋಜನೆ ಹಿನ್ನೋಟ:

ಕಳಸಾ ಬಂಡೂರಿ ಯೋಜನೆ ರೂಪುಗೊಳ್ಳಲು ಕಾರಣವಾಗಿದ್ದು ಮಲಪ್ರಭಾ ನೀರಾವರಿ ಯೋಜನೆಯಲ್ಲಿನ ನೀರಿನ ಕೊರತೆ. ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದ ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ ಬೈಲಹೊಂಗಲ ತಾಲೂಕುಗಳಿಗೆ ನೀರಾವರಿಯ ಅಗತ್ಯತೆ ಇತ್ತು. ಈ ಭಾಗದ ಕುಡಿಯುವ ನೀರಿನ ಅಭಾವ ಹೇಳತೀರದಾಗಿತ್ತು. ಅದಕ್ಕಾಗಿ ರೂಪಗೊಂಡದ್ದು ಮಲಪ್ರಭಾ ನೀರಾವರಿ ಯೋಜನೆ. ಸವದತ್ತಿ ಹತ್ತಿರ ‘ನವಿಲುತೀರ್ಥ’ ಬಳಿ ಮಲಪ್ರಭಾ ನದಿಗೆ ಅಣೆಕಟ್ಟೆ ನಿರ್ಮಿಸಿ 5.27 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿತ್ತು. ಯೋಜನೆಯ ಕಾರ್ಯ 1961 ರಲ್ಲಿ ಪ್ರಾರಂಭಗೊಂಡು 1972-73ರ ಸುಮಾರಿಗೆ ಪೂರ್ಣಗೊಂಡಿತು. ಈ ಜಲಾಶಯ 37 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಇಲ್ಲಿಯವರೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು 3-4 ಬಾರಿ ಮಾತ್ರ. ಮಲಪ್ರಭಾ ಜಲಾಶಯ (ರೇಣುಕಾಸಾಗರ) ದಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಕಾರಣ ಮಳೆಯ ಕೊರತೆ ಒಂದು ಕಡೆಯ ಸಮಸ್ಯೆಯಾದರೆ, ನದಿ ನೀರು ಜಲಾಶಯ ತಲುಪುವ ಪೂರ್ವದಲ್ಲೇ ರೈತರಿಂದ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುವುದು ಇನ್ನೊಂದು ಕಡೆಯ ಸಮಸ್ಯೆ. ಇದರೊಂದಿಗೆ ಮಲಪ್ರಭಾ ಜಲಾಯನ ಪ್ರದೇಶ ಕಿರಿದಾಗಿದೆ. ಹೀಗಾಗಿ ಘೋಷಿಸಿದ ಕ್ಷೇತ್ರಗಳಿಗೆ ನಿರೀಕ್ಷಿಸಿದ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಇಷ್ಟಾಗಿ ರೋಣ ತಾಲೂಕಿನ 1.11 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವುದಾಗಿ ಘೋಷಿಸಿದ್ದರೂ ನೀರು ಲಭ್ಯವಾಗಿಲ್ಲ.

ಮಹದಾಯಿ ಯೋಜನೆ:

ಮಲಪ್ರಭಾ ಕೊಳ್ಳದ ಜನರ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳೆರಡನ್ನು ಗಮನದಲ್ಲಿಟ್ಟುಕೊಂಡು ರೇಣುಕಾಸಾಗರದ ನೀರಿನ ಕೊರತೆಯನ್ನು ನೀಗಲು ಸಿದ್ಧವಾದ ಯೋಜನೆಯೇ ಮಹದಾಯಿ ನದಿ ತಿರುವು ಯೋಜನೆ. ಮಲಪ್ರಭಾ ನದಿಯಂತೆ ಮಹದಾಯಿ ನದಿ ಕೂಡಾ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ಉಗಮವಾಗಿದೆ. ಸಹ್ಯಾದ್ರಿ ಬೆಟ್ಟದಲ್ಲಿ ಸಮುದ್ರ ಮಟ್ಟದಿಂದ 914 ಮೀ. ಎತ್ತರದಲ್ಲಿ ಹುಟ್ಟಿದ ಈ ನದಿ ಕರ್ನಾಟಕದಲ್ಲಿ 35ಕಿ.ಮೀ. ಕ್ರಮಿಸಿ ಗೋವಾ ರಾಜ್ಯದಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಗೋವಾದಲ್ಲಿ `ಮಾಂಡೋವಿ’ ಎಂದು ಹೆಸರು. ಮಹದಾಯಿ ನದಿ ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ ದೂದಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿಕಣಿವೆ ಆಗಿದೆ. ಇದು ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. ಮಹದಾಯಿ ನದಿ ಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ ನದಿಗೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ. ಮಹದಾಯಿ 2,032 ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಅದರಲ್ಲಿ ಗೋವಾ 1580ಚ.ಕಿ.ಮಿ ಜಲಾನಯನ ಪ್ರದೇಶ, ಕರ್ನಾಟಕ 375ಚ.ಕಿ.ಮಿ ಜಲಾನಯನ ಪ್ರದೇಶ ಮತ್ತು ಮಹರಾಷ್ಟ್ರ 77ಚ.ಕಿ.ಮಿ ಜಲಾನಯನ ಪ್ರದೇಶವನ್ನು ಹೊಂದಿದೆ. ಕೇಂದ್ರದ ಜಲ ಆಯೋಗದ ಸಮೀಕ್ಷೆಯಂತೆ ನದಿಯಲ್ಲಿ ಒಟ್ಟು 210 ಟಿಎಂಸಿ ನೀರು ಲಭ್ಯವಿದ್ದು ಕರ್ನಾಟಕ 45 ಟಿಎಂಸಿ ನೀರಿನ ಪಾಲನ್ನು ಹೊಂದಿದೆ. 52.60 ಟಿಎಂಸಿ ಅಡಿ ನೀರು ಮಹಾದಾಯಿಯಿಂದ ಕರ್ನಾಟಕಕ್ಕೆ ಸಿಗುತ್ತಿದೆ. ಗೋವಾ ರಾಜ್ಯದ ಮೂಲಕ 159.07 ಟಿಎಂಸಿ ಅಡಿ ನೀರು ಅರೇಬಿಯನ್ ಸಮುದ್ರಕ್ಕೆ ಸೇರಿಕೊಳ್ಳುತ್ತದೆ.

ಕರ್ನಾಟಕದ ಯೋಜನೆ ಮತ್ತು ಗೋವಾದ ವಿರೋಧ:

1978ರಲ್ಲಿಯೇ ಈ ಯೋಜನೆ ಸಿದ್ಧವಾದರೂ ಕಾರ್ಯರೂಪಕ್ಕೆ ಬರಲಿಲ್ಲ. ಇದನ್ನೊಂದು ಜಲ ವಿದ್ಯುತ್ ಯೋಜನೆಯಾಗಿ ಮಾರ್ಪಡಿಸಿ ಮಹದಾಯಿ ಜಲಾನಯನ ಪ್ರದೇಶದಿಂದ 9 ಟಿಎಂಸಿ ನೀರನ್ನು ಮಲಪ್ರಭಾಗೆ ವರ್ಗಾಯಿಸಿ ವಿದ್ಯುತ್ ಉತ್ಪಾದನೆಗೂ ಯೋಜಿಸಲಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988 ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತು. ಮಹದಾಯಿ ಯೋಜನೆಯ ವರದಿ ನೀಡಿದ್ದ ಸಮಿತಿಯಲ್ಲಿದ್ದ ಎಸ್‌.ಆರ್.ಬೊಮ್ಮಾಯಿ ಅವರು 1989 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಸಿಎಂ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಆಗ ಯೋಜನೆಗೆ ಗೋವಾ ಒಪ್ಪಿಗೆ ನೀಡಿತ್ತಾದರೂ ಮುಂದೆ ಎತ್ತಿದ ಅಪಸ್ವರದಿಂದ  ಯೋಜನೆಗೆ ತಡೆಯಾಯಿತು. ದಿನಾಂಕ 22.09.2006ರಂದು ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು ಭೂಮಿ ಪೂಜೆ ನೆರವೇರಿಸಿದರು. ಇದರಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ 15.11.2006ರಲ್ಲಿ ದೂರು ಸಲ್ಲಿಸಿ ಕರ್ನಾಟಕದ ಯೋಜನೆಗೆ ತಡೆ ಆದೇಶ ನೀಡಬೇಕೆಂದೂ, ಯೋಜನೆಯನ್ನು ರದ್ದು ಮಾಡಬೇಕೆಂದೂ ಕೋರಿತು. ಸರ್ವೋಚ್ಛ ನ್ಯಾಯಾಲಯವು ದಿನಾಂಕ 27.11.2006ರಂದು ಕರ್ನಾಟಕದ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿತು. ಈ ವೇಳೆಗೆ ಮಹದಾಯಿ ಬಚಾವೋ ಅಭಿಯಾನದ ಹೆಸರಲ್ಲಿ ಗೋವಾದಲ್ಲಿ ಕರ್ನಾಟಕದ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಹೋರಾಟ ಆರಂಭವಾಯ್ತು. ಗೋವಾ ರಾಜ್ಯ ಈ ಯೋಜನೆಯಿಂದ ತನ್ನ ರಾಜ್ಯದ ಅರಣ್ಯ ಮತ್ತು ಜೀವಸಂಕುಲಕ್ಕೆ ಹಾನಿಯಾಗುತ್ತದೆ ಎನ್ನುವ ವಾದ ಮುಂದಿಟ್ಟಿತು. ನದಿಗೆ ತಿರುವು ನೀಡುವುದರಿಂದ ಗೋವಾದ ಜೀವನದಿಯಾದ ಮಾಂಡೊವಿ ಬತ್ತಿಹೋಗಲಿದೆ ಎಂಬ ವಾದ ಮುಂದಿಟ್ಟು ಅಲ್ಲಿನ ಜನರಲ್ಲಿ ಆಂದೋಲನವುಂಟು ಮಾಡುತ್ತಿದ್ದಾರೆ. ವಾಸ್ತವವಾಗಿ 210 ಟಿ.ಎಂ.ಸಿ ಪ್ರಮಾಣದ ನೀರು ದೊರೆಯುವ ನದಿ ಮಾಂಡೋವಿಯಲ್ಲಿ 7.56 ಟಿ.ಎಂ.ಸಿ ನೀರನ್ನು ತಿರುಗಿಸಿದರೆ ನದಿ ಬತ್ತಿಹೋಗುವುದೇ? 4 ಕಿ.ಮೀ ದೂರ ನಾಲೆ ತೋಡಿದರೆ ಅರಣ್ಯ ಸಂಪತ್ತು, ಅಲ್ಲಿನ ಜೀವಸಂಕುಲ ನಾಶವಾಗುವುದೆ? ಕರ್ನಾಟಕ ತನ್ನ ಪಾಲಿನ ನೀರು ಪಡೆಯಲು ಯೋಜನೆ ರೂಪಿಸಿದರೂ ಅದಕ್ಕೆ ಗೋವಾ ತಡೆ ಒಡ್ಡುತ್ತಿದೆ.

ಕಳಸಾ ನಾಲಾ ತಿರುವು:

ಕಳಸಾ ಹಳ್ಳವು ಕರ್ನಾಟಕದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಗೋವಾದಲ್ಲಿ ಮಹದಾಯಿ ನದಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ 24 ಚದರಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಕೆಲವು ಉಪಹಳ್ಳಗಳು ಕರ್ನಾಟಕದಲ್ಲಿ ಹುಟ್ಟಿ ಗೋವಾದಲ್ಲಿ ಕಳಸಾಹಳ್ಳವನ್ನು ಸೇರುತ್ತವೆ. ಈ ಹಳ್ಳದಿಂದ 3.56 ಟಿಎಂಸಿ ನೀರನ್ನು ಪಡೆಯುವ ಉದ್ದೇಶದಿಂದ ಯೋಜನೆ ತಯಾರಿಸಲಾಗಿದೆ. ಕಳಸಾ ಯೋಜನೆಗೆ ಎರಡು ಅಣೆಕಟ್ಟೆಗಳನ್ನು ನಿರ್ಮಿಸುವುದು. ನಂತರ ನೀರನ್ನು ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವುದು. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ.ಪಾಟೀಲ್ 2000ದ ಇಸವಿಯಲ್ಲಿ ಕಳಸಾಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದ್ದರು.

(1) ಕಳಸಾ ಹಳ್ಳಕ್ಕೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ.

(2) ಹಳತಾರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವುದು.

ಇದರ ಒಟ್ಟು ವೆಚ್ಚ ಯೋಜನೆ ರೂಪಿಸಿದಾಗ 44 ಕೋಟಿ ರೂ.ಗಳು. ಆದರೆ ಇತ್ತೀಚಿಗಿನ ಅಂದಾಜಿನ ಪ್ರಕಾರ ಅದರ ವೆಚ್ಚ 428 ಕೋಟಿರೂ.ಗಳು. ಈ ಪೈಕಿ ಅಂದಿನ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶದಿಂದ 125 ಕೋಟಿರೂ. ಅನುದಾನ ಬಿಡುಗಡೆ ಮಾಡಿತ್ತು. ಅಂದಿನ ನೀರಾವರಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಕಾಮಗಾರಿಗೆ ಅಡಿಗಲ್ಲು ನಿರ್ವಹಿಸಿ ಯೋಜನೆಗೆ ಚಾಲನೆ ನೀಡಿದ್ದರು.

ಬಂಡೂರಿ ನಾಲಾ ತಿರುವು:

ಬಂಡೂರಿ ಮಹದಾಯಿ ನದಿಯ ಇನ್ನೊಂದು ಉಪನದಿ. ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು. ಇಲ್ಲಿ ಸಂಗ್ರಹವಾಗುವ 4 ಟಿಎಂಸಿ ನೀರನ್ನು 5.15 ಕಿ.ಮೀ ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವುದು. ಬಂಡೂರ ನಾಲಾ ಯೋಜನೆಗೊಳಪಡುವ ಜಲಾನಯನ ಪ್ರದೇಶ 32.25 ಚ.ಕಿ.ಮೀ. ಇದರಿಂದ ಒಟ್ಟು 380 ಹೆಕ್ಟೇರ್ ಭೂಮಿ ಮುಳುಗಡೆ ಆಗಲಿದೆ. ಇದರ ವೆಚ್ಚ ಯೋಜನೆ ತಯಾರಿಸುವಾಗ 49 ಕೋಟಿರೂ.ಗಳು. ಇತ್ತೀಚಿಗಿನ ಅಂದಾಜಿನ ಪ್ರಕಾರ ಈಗ ಅದರ ವೆಚ್ಚ 370 ಕೋಟಿ ರೂಪಾಯಿ ಆಗಿದೆ.

ಈ ಎರಡೂ ಯೋಜನೆಗಳಿಂದ ಒಟ್ಟು 7.56 ಟಿಎಂಸಿ ನೀರು ಲಭ್ಯವಾಗಲಿದೆ. ಇದುವೆ ಕಳಸಾಬಂಡೂರಿ ನಾಲಾ ಯೋಜನೆ.

ಯೋಜನೆ ಬಗ್ಗೆ ಕರ್ನಾಟಕ, ಗೋವಾ ಸರಕಾರಗಳ ಚರ್ಚೆ ಮತ್ತು ಒಪ್ಪಂದ:

ಒಂದು ಹಂತದಲ್ಲಿ ಗೋವಾ ಮತ್ತು ಕರ್ನಾಟಕ ಸರಕಾರಗಳ ನಡುವೆ ಜಲವಿದ್ಯುತ್ ಯೋಜನೆಗೆ ಒಪ್ಪಂದವಾಗಿತ್ತು. ದಿ. 10-9-1996 ರಂದು ಗೋವಾ ಹಾಗೂ ಕರ್ನಾಟಕ ಸರಕಾರಗಳ ನೀರಾವರಿ ಸಚಿವರ ಒಂದು ಸಭೆ ನಡೆದು ಜಲವಿದ್ಯುತ್ ಯೋಜನೆ ಮತ್ತು ಕಳಸಾ-ಹರತಾರ ನದಿಗಳಿಂದ ನೀರು ವರ್ಗಾವಣೆ ಕುರಿತು ಚರ್ಚೆಯಾಗಿ ಕಳಸಾ ಯೋಜನೆಯಿಂದ 1.5 ಟಿಎಂಸಿ ನೀರನ್ನು ಮಾಂಡೋವಿ ಯೋಜನೆಗೆ ಹರಿಸುವ ಕರಾರಿನೊಂದಿಗೆ ಈ ಯೋಜನೆಗೆ ಒಪ್ಪಂದವಾಯಿತು. ಆದರೆ 5-3-1997 ರಂದುಗೋವಾ ಸರಕಾರ ನೀರು ವರ್ಗಾಯಿಸುವುದಕ್ಕೆ ಒಪ್ಪಿಗೆ ಆಗಿಲ್ಲ ಎಂದು ತಿಳಿಸಿತು.

ಗೋವಾದ ವಾದವೇನು?

(1) ಮಹದಾಯಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶವಾಗಿದೆ. ಆದ್ದರಿಂದ ನೀರಿನ ಕೊರತೆ ಇರುವ ಕಣಿವೆಯಿಂದ ನೀರನ್ನು ಬೇರೆಡೆಗೆ ವರ್ಗಾಯಿಸುವುದು ಸೂಕ್ತವಲ್ಲ.

(2) ಮಹದಾಯಿ ನದಿ ನೀರನ್ನು ಬೇರೆಡೆಗೆ ವರ್ಗಾಯಿಸಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ತೀವ್ರ ಪರಿಣಾಮ ಉಂಟಾಗುವುದು.

ಅಧ್ಯಯನ ಮತ್ತು ಸಮೀಕ್ಷೆಗಳು ಹೇಳುವುದೇನು?:

ಅಧ್ಯಯನಗಳು ಮತ್ತು ಸಮೀಕ್ಷೆಗಳು ಗೋವಾದ ವಾದದಲ್ಲಿರುವ ಪೊಳ್ಳುತನವನ್ನು ಎತ್ತಿತೋರಿಸಿವೆ. ಕೇಂದ್ರ ಸರಕಾರದ ಸಲಹೆಯಂತೆ ಕರ್ನಾಟಕ ಸರಕಾರ ಮಾಡಿಕೊಂಡ ಮನವಿ ಮೇರೆಗೆ ಮಹಾರಾಷ್ಟ್ರದ ನಾಗಪುರದಲ್ಲಿರುವ ನ್ಯಾಷನಲ್ ಎನ್‌ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್‌ಸ್ಟಿಟ್ಯೂಟ್ `ನೀರಿ’ ಅಧ್ಯಯನ ನಡೆಸಿ ಮಹದಾಯಿ ತಿರುವು ಯೋಜನೆಯಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲವೆಂದೂ ಮತ್ತು ಮಹದಾಯಿ ಕಣಿವೆ ನೀರಿನ ಕೊರತೆ ಇರುವ ಪ್ರದೇಶ ಅಲ್ಲವೇ ಅಲ್ಲವೆಂದೂ ತಿಳಿಸಿತು. ಅದರಂತೆ ರಾಷ್ಟ್ರೀಯ ನೀರಿನ ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಜಲ ಆಯೋಗಗಳು ಕೂಡಾ ಅಧ್ಯಯನ ನಡೆಸಿ ಗೋವಾದ ವಾದದಲ್ಲಿ ಹುರುಳಿಲ್ಲ ಎಂಬುದನ್ನುತಿಳಿಸಿವೆ. ಆದರೆ ಗೋವಾ ಸರಕಾರ ಮಾತ್ರ ತನ್ನ ಮೊಂಡುವಾದವನ್ನು ಮುಂದುವರೆಸಿದ್ದು ಈ ಯಾವ ವರದಿಯನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ.

mhadhai

ಕಳಸಾಬಂಡೂರಿ ನಾಲಾ ಯೋಜನೆಗೆ ಕೇಂದ್ರದ ಒಪ್ಪಿಗೆ ಹಾಗೂ ತಡೆ:

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಹಾಗೂ ಇತರ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲು ಈ ಯೋಜನೆ ಅಗತ್ಯ ಎಂಬುದನ್ನು ಕರ್ನಾಟಕ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಜಲಆಯೋಗ ದಿ. 30-4-2002 ರಂದು ಯೋಜನೆಗೆ ತನ್ನ ತಾತ್ವಿಕ ಒಪ್ಪಿಗೆ ನೀಡಿತು. ಅದರೊಂದಿಗೆ ಕೆಲವು ಕರಾರುಗಳನ್ನು ವಿಧಿಸಿತು.

(1) 7.56 ಟಿಎಂಸಿ ನೀರನ್ನು ಕೇವಲ ಮಾನ್ಸೂನ್ ಮಳೆಗಾಲದಲ್ಲಿ ಮಾತ್ರ ವರ್ಗಾಯಿಸುವುದು.

(2) ನೀರನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿಯಲು ಮಾತ್ರ ಬಳಸುವುದು.

(3) ಅಂತರರಾಜ್ಯ ನೀರಿನ ಹಂಚಿಕೆಯಾದಾಗ ಕರ್ನಾಟಕದ ಪಾಲಿನಲ್ಲಿ ಈ 7.56 ಟಿಎಂಸಿ ನೀರನ್ನು ಹೊಂದಾಣಿಕೆ ಮಾಡಿಕೊಳ್ಳುವುದು.

(4) ಕರ್ನಾಟಕವು ಕೇಂದ್ರ ಜಲ ಆಯೋಗಕ್ಕೆ ಈ ಯೋಜನೆಗಳ ಎಲ್ಲ ತಾಂತ್ರಿಕ ಮಾಹಿತಿ ಒದಗಿಸುವುದು. ಕರ್ನಾಟಕವು ಭವಿಷ್ಯದಲ್ಲಿ ಹೆಚ್ಚಿನ ನೀರನ್ನು ವರ್ಗಾಯಿಸುವುದಿಲ್ಲ ಎಂಬುದನ್ನು ನೀಲಿನಕ್ಷೆಗಳಿಂದ ಖಾತ್ರಿ ಮಾಡಿಕೊಳ್ಳುವುದು.

(5) ಕೇಂದ್ರ ಜಲ ಆಯೋಗ ತಂತ್ರಜ್ಞರು, ಅಧಿಕಾರಿಗಳ ಯೋಜನಾ ಸ್ಥಳದ ಪರಿವೀಕ್ಷಣೆಗೆ ಮತ್ತು ಗೋವಾ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳ ತಂಡ ಭೇಟಿ ಮಾಡಬಯಸಿದರೆ ಅವರ ಪರಿವೀಕ್ಷಣೆಗೆ ಅನುಮತಿಸುವುದು ಹಾಗೂ ಅನುಕೂಲ ಮಾಡಿಕೊಡುವುದು.

(7) ಉದ್ದೇಶಿತ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕವು ಅಂಗೀಕೃತ ವಿಧಾನಗಳನ್ನು ಬಳಸುವುದು.

ಕೇಂದ್ರ ಜಲ ಆಯೋಗ ನೀಡಿದ ತಾತ್ವಿಕ ಒಪ್ಪಿಗೆ ಕರ್ನಾಟಕದ ಜನತೆಯನ್ನು ಬಹುಕಾಲ ಸಂತಸದಲ್ಲಿ ಇಡಲಿಲ್ಲ. ಇದಾದ 5 ತಿಂಗಳಲ್ಲೇ ಗೋವಾ ಸರಕಾರದ ಹಠಮಾರಿತನ, ವಿರೋಧ ಹಾಗೂ ಆಕ್ಷೇಪಣೆಗಳಿಗೆ ಬಗ್ಗಿದ ಕೇಂದ್ರ ಜಲ ಆಯೋಗ ದಿ. 19-9-2002 ರಂದು ತಾನೇ ನೀಡಿದ ತಾತ್ವಿಕ ಒಪ್ಪಿಗೆಗೆ ತಡೆಯಾಜ್ಞೆ ನೀಡಿತು.

ಅಂತರರಾಜ್ಯ ನದಿ ನೀರು ಹಂಚಿಕೆ ಸಭೆ:

ಕರ್ನಾಟಕದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಗೋವಾದ ಮುಖ್ಯಮಂತ್ರಿಗೆ ಪತ್ರ ಬರೆದು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಅವಶ್ಯಕತೆಯನ್ನು ಮನವರಿಕೆ ಮಾಡಲು ಪ್ರಯತ್ನಿಸಿದರು. ಜಲ ಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ ತಡೆಯಾಜ್ಞೆ ತೆರವುಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದರು. ಅದು ಫಲ ನೀಡಲಿಲ್ಲ. ಕೇಂದ್ರದ ಜಲಸಂಪನ್ಮೂಲ ಸಚಿವರಾಗಿದ್ದ ಅರ್ಜುನ್ ತರಣ ಸೇಥಿ ಅವರು ದಿ. 20-12-2002 ರಂದು ಮಹದಾಯಿ ನೀರಿನ ವಿವಾದ ಕುರಿತು ಚರ್ಚಿಸಲು ದೆಹಲಿಯಲ್ಲಿ ಅಂತರ ರಾಜ್ಯ ಸಭೆ ಕರೆದರು. ಅಂತರರಾಜ್ಯ ನದಿ ನೀರು ಹಂಚಿಕೆ ವಿವಾದ ಕಾಯ್ದೆ 1956ರ 3ನೇ ವಿಧಿ ಪ್ರಕಾರ ಈ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ, ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ ಜಲಸಂಪನ್ಮೂಲ ಸಚಿವ ಫಿಲಿಫ್ ರೋಡ್ರಿಗ್ಸ್ ಭಾಗವಹಿಸಿದ್ದರು. ಇವರಲ್ಲದೆ ಕೇಂದ್ರ ಹಾಗೂ ಎರಡೂ ರಾಜ್ಯಗಳ ಅನೇಕ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಗೋವಾದ ಮುಖ್ಯಮಂತ್ರಿ ಅದೇ ಮೊಂಡುವಾದ ಮುಂದಿಟ್ಟರು. ಮಹದಾಯಿ ಕಣಿವೆಯಲ್ಲಿ ನೀರಿನ ಲಭ್ಯತೆಯ ನಿಖರವಾದ ಅಂದಾಜು ಇಲ್ಲದಿರುವುದು, ಕಣಿವೆ ನೀರು ಕಣಿವೆ ಒಳಗೆ ಬಳಕೆಯಾದರೆ ಅದರ ಮರುಬಳಕೆ ಸಾಧ್ಯವೆಂಬುದು, ಅಧ್ಯಯನ ವರದಿಗಳ ಬಗೆಗೆ ಅವಿಶ್ವಾಸ, ಪರಿಸರದ ಮೇಲಾಗುವ ದುಷ್ಪರಿಣಾಮ ಈ ಅಂಶಗಳನ್ನು ಒಳಗೊಂಡು ಅವರು ವಾದ ಮಂಡಿಸಿದರು.

ಕರ್ನಾಟಕದ ವಾದ

ಕರ್ನಾಟಕದ ಜಲಸಂಪನ್ಮೂಲ ಸಚಿವರು ವಸ್ತುನಿಷ್ಠವಾದ ವರದಿ ಮಂಡಿಸಿದರು. ನದಿ ಕಣಿವೆಯಿಂದ ನೀರಿನ ವರ್ಗಾವಣೆ ಮಾಡಿದರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ ಎಂಬ `ನೀರಿ’ ವರದಿ ಪ್ರಸ್ತಾಪ ಮಾಡಿದರು. ಅದು ಅಲ್ಲದೆ ಈ ಹಿಂದೆ ಇಂಥ ವಿವಾದಗಳಲ್ಲಿ ತಾತ್ವಿಕ ಒಪ್ಪಿಗೆ ನೀಡಿದ ಅನೇಕ ಉದಾಹರಣೆಗಳನ್ನು ನೀಡಿದರು.

ಉದಾ : (1) ಕೇಂದ್ರ ಜಲಸಂಪನ್ಮೂಲ ಮಂತ್ರಾಲಯ 1997 ರಲ್ಲಿ ಬೆಂಗಳೂರು ನಗರಕ್ಕೆ 9.46 ಟಿಎಂಸಿ ನೀರಿನ ವರ್ಗಾವಣೆಗೆ ಅನುಮತಿಸಿದ್ದು.

(2) 1998 ರಲ್ಲಿ ಹೊಗೆನಕಲ್(ತಮಿಳುನಾಡು)ಗೆ ಕುಡಿಯುವ ನೀರಿಗಾಗಿ ಕಾವೇರಿ ನದಿಯಿಂದ 1.4 ಟಿಎಂಸಿ ನೀರು ವರ್ಗವಣೆಗೆ ಅನುಮತಿಸಿದ್ದು ಮುಂತಾದ ಅನೇಕ ಉದಾಹರಣೆಗಳನ್ನು ನೀಡಿದರು.

ಕರ್ನಾಟಕದ ಬೇಡಿಕೆ ಎಷ್ಟೇ ನೈಜವಾಗಿದ್ದರೂ ಅದನ್ನು ಒಪ್ಪದ ಮನಸ್ಸುಗಳು ಅಲ್ಲಿದ್ದವು. ತನ್ನ ಮೊಂಡುವಾದವೇ ಗೆಲ್ಲಬೇಕೆಂಬ ಗೋವಾ ಸರ್ಕಾರ, ಇಚ್ಛಾಶಕ್ತಿಯನ್ನು ಮೆರೆಯದ, ನಿರ್ಣಾಯಕ ಪಾತ್ರವಹಿಸದ ಕೇಂದ್ರ ಜಲಸಂಪನ್ಮೂಲ ಮಂತ್ರಾಲಯ.. ಇವುಗಳ ಒಟ್ಟು ಫಲಶೃತಿಯಾಗಿ ಸಭೆ ನಿರರ್ಥಕವಾದಂತಾಯಿತು.

ಅರಣ್ಯಕಾಮಗಾರಿ:

‘ಹುಬ್ಬಳ್ಳಿ-ಧಾರವಾಡ ಸೇರಿದಂತೆ ಸುಮಾರು 10 ನಗರಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ರೂಪಿಸಿರುವ ಕಳಸಾ-ಬಂಡೂರಿ ನಾಲೆ ಯೋಜನೆ ಅವೈಜ್ಞಾನಿಕವಾಗಿದೆ. ಇದರಿಂದ 7.32 ಹೆಕ್ಟೇರ್ ಅರಣ್ಯ ಭೂಮಿ ಹಾಗೂ 60 ಸಾವಿರ ಮರಗಳು ನಾಶವಾಗುತ್ತದೆ. ಇದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಅಲ್ಲದೆ, ಈ ಯೋಜನೆಗೆ ಕೇಂದ್ರ ಅರಣ್ಯ ಸಚಿವಾಲಯದಿಂದ ಅನುಮತಿ ಪಡೆದಿಲ್ಲ’ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಅರ್ಜಿದಾರರೊಬ್ಬರು ಆಕ್ಷೇಪಿಸಿದ್ದರು. ಇದಕ್ಕೆ ಉತ್ತರಿಸಿದ ರಾಜ್ಯ ಸರಕಾರ ‘ಹುಬ್ಬಳ್ಳಿ – ಧಾರವಾಡ ಸೇರಿದಂತೆ ಇತರ ನಗರಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ- ಬಂಡೂರಿ ನಾಲೆ ಯೋಜನೆಯ ಕಾಮಗಾರಿಗೆ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳುತ್ತಿಲ್ಲ’ ಎಂದು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ. 2000 ನೇ ಇಸವಿಯಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿಯೂ ನೀಡಿದೆ.

ಕಳಸಾಬಂಡೂರಿ ಯೋಜನೆ ಮತ್ತು ರಾಜಕೀಯ ಪಕ್ಷಗಳ ಇಚ್ಚಾಶಕ್ತಿ:

ದಶಕಗಳಿಂದ ವರದಿ ಹಂತದಲ್ಲೇ ಇದ್ದ ಕಳಸಾಬಂಡೂರಿ ಯೋಜನೆಯನ್ನು ಎಸ್.ಎಮ್.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಟಾನಕ್ಕೆ ಮುಂದಾಯಿತು. ಕರ್ನಾಟಕ ಸರಕಾರದ ಮನವಿಯಂತೆ ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ 2002ರಲ್ಲಿ ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು ನೀಡಿತು. ನಂತರ ಗೋವಾ ಸರಕಾರದ ರಾಜಕೀಯ ಒತ್ತಡಕ್ಕೆ ಮಣಿದು ನೀಡಿದ್ದ ತಾತ್ವಿಕ ಒಪ್ಪಿಗೆಗೆ ತಡೆಯಾಜ್ಞೆ ನೀಡಿತು. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರಕಾರ ಗೋವಾದ ಸರಕಾರಕ್ಕೆ ಒಂದಿಷ್ಟು ತಿಳಿಹೇಳಿ ಕುಡಿಯುವ ನೀರಿನ ಆದ್ಯತೆಯ ಆಧಾರದಲ್ಲಿ ಯೋಜನೆಗೆ ಒಪ್ಪಿಗೆ ಸೂಚಿಸುವಂತೆ ತಿಳಿಸಬಹುದಿತ್ತು. ಆದರೆ ಪಕ್ಷ ರಾಜಕಾರಣದ ಒತ್ತಡದಲ್ಲಿ ಅದು ಸಾಧ್ಯವಾಗಲಿಲ್ಲ. ಅಂತಹದೊಂದು ಒತ್ತಡ ಕೇಂದ್ರದ ಮೇಲೆ ಹೇರುವ ಜಾಣತನವನ್ನು ಕರ್ನಾಟಕದ ಬಿಜೆಪಿ ನಾಯಕರು ಪ್ರದರ್ಶಿಸಲಿಲ್ಲ. ಮುಂದೆ 2004ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂದರೆ ಕೇಂದ್ರದಲ್ಲಿ ಕಾಂಗ್ರೇಸ್ ಮುಂದಾಳತ್ವದ ಯು.ಪಿ.ಎ ಸರಕಾರ ಅದಿಕಾರಕ್ಕೇರಿತು. 19-9-2002 ರಂದು ಎನ್.ಡಿ.ಎ ಸರಕಾರ ನೀಡಿದ್ದ ತಾತ್ವಿಕ ಒಪ್ಪಿಗೆಯ ತಡೆಯಾಜ್ಞೆಯನ್ನು ತೆರವುಗೊಳಿಸಲು ಕರ್ನಾಟಕದ ಕಾಂಗ್ರೆಸ್ ಸರಕಾರ ತನ್ನದೇ ಯು.ಪಿ.ಎ ಸರಕಾರದ ಮೇಲೆ ಪ್ರಭಾವ ಬೀರುವುದರಲ್ಲಿ ವಿಫಲವಾಯಿತು. ಇನ್ನು, ಗೋವಾದ ವಿಧಾನಸಭೆಗೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಚುನಾವಣಾ ಭಾಷಣ ಮಾಡುತ್ತಾ ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಭರವಸೆ ನೀಡಿದರು. 2006ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಯೋಜನೆ ಅನುಷ್ಟಾನಕ್ಕೆ ಮುಂದಾಗಿ ಕಳಸಾ ನಾಲಾ ಯೋಜನೆಗೆ 125ಕೋಟಿರೂ. ಬಿಡುಗಡೆ ಮಾಡಿ ಕಾಮಗಾರಿ ಆರಂಬಿಸಿತು. ಈ ಹಂತದಲ್ಲಿ ನೀರಾವರಿ ವಿಷಯ ರಾಜ್ಯಕ್ಕೆ ಸೇರಿದ್ದು, ವಿವಾದಿತ ಕಳಸಾ-ಬಂಡೂರಿ ಯೋಜನೆಯಲ್ಲಿ ಮಧ್ಯಪ್ರವೇಶ ಮಾಡದಿರಲು ರಾಜ್ಯಸರ್ಕಾರ ಕೇಂದ್ರಸರ್ಕಾರಕ್ಕೆ ಮನವಿ ಮಾಡಿತು. ಹಿಂದೆ ಆಂಧ್ರಪ್ರದೇಶ-ಕರ್ನಾಟಕ ನಡುವಿನ `ತೆಲುಗುಗಂಗಾ’ ಯೋಜನೆ ವಿವಾದದಲ್ಲಿ ಕೇಂದ್ರ ನೀರಾವರಿ ರಾಜ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಮಧ್ಯಪ್ರವೇಶ ಮಾಡಲು ನಿರಾಕರಿಸಿತ್ತು. ಇದೇ ನಿಲುವನ್ನು `ಕಳಸಾ-ಬಂಡೂರಿ’ ನಾಲೆ ವಿಷಯದಲ್ಲೂ ತಳೆಯಬೇಕೆಂದು ರಾಜ್ಯ ಸರಕಾರ ಮನವಿ ಮಾಡಿತು. ನಂತರದ ದಿನಗಳಲ್ಲಿ ಗೋವಾದ ನಿರಂತರ ಅಡ್ಡಿ ಮತ್ತು ನ್ಯಾಯಾಧಿಕರಣದ ನೇಮಕ ವಿಚಾರದ ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನವಾಗಿ ಸಾಗಿತು. ಕರ್ನಾಟಕ ಸರಕಾರವೂ ಕೂಡ ನ್ಯಾಯಾಧೀಕರಣದ ಅನಗತ್ಯತೆಯ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಯಿತು.

ನ್ಯಾಯಾಧಿಕರಣ ನೇಮಕ :

ಗೋವಾ ಸರಕಾರ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ದಿ. 9-7-2002 ರಂದು ಪತ್ರ ಬರೆದು ನ್ಯಾಯಾಧಿಕರಣ ರಚಿಸುವಂತೆ ಕೇಳಿಕೊಂಡಿತು. ಅದಲ್ಲದೆ 2006ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಕಳಸಾ ಬಂಡೂರಿ ಕಾಮಗಾರಿ ತಡೆಯುವಂತೆ ಹಾಗೂ ನ್ಯಾಯಾಧಿಕರಣ ನೇಮಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕೆಂದು ವಿನಂತಿಸಿತು. ನವೆಂಬರ್ 2006ರಲ್ಲಿ ಕೇಂದ್ರ ಮಂತ್ರಾಲಯ ಕರ್ನಾಟಕ ಸರಕಾರವನ್ನು ಸಂಪರ್ಕಿಸಿ “ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಅಸಾಧ್ಯ ಎಂಬ ಅಭಿಪ್ರಾಯ ಈ ಮಂತ್ರಾಲಯದ್ದಾಗಿದೆ. ಮುಂದಿನ ಕ್ರಮವನ್ನು 1956ರ ಅಂತರರಾಜ್ಯ ಜಲವಿವಾದ ಕಾಯ್ದೆ ಮೇರೆಗೆ ಕ್ರಮ ಜರುಗಿಸಲಾಗುವುದು.” ಎಂದು ತಿಳಿಸಿತು. ಕೇಂದ್ರ ಸರಕಾರ ನವೆಂಬರ್ 16, 2010 ರಂದು `ಮಹದಾಯಿ ಜಲ ವಿವಾದ ನ್ಯಾಯಾಧಿಕರಣ’ ರಚಿಸಿತು. ಹೀಗಾಗಿ ಕಳಸಾ-ಬಂಡೂರಿ ನಾಲಾ ಯೋಜನೆ ಈಗ ನ್ಯಾಯಾಧಿಕರಣದ ಅಂಗಳದಲ್ಲಿದೆ. ಜನರ ಪ್ರತಿಭಟನೆಯ ಕಾವಿಗೆ ಮಣಿದ ರಾಜ್ಯ ಸರ್ಕಾರ ಮಧ್ಯಂತರ ಆದೇಶಕ್ಕೆ ಒತ್ತಾಯಿಸಿ ಒಂದು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಈಗ ಪ್ರಗತಿಯಲ್ಲಿದೆ.

ಕಾಮಗಾರಿಯ ಸದ್ಯದ ಪರಿಸ್ಥಿತಿ:

ಜೆಡಿಎಸ್‌ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕಣಕುಂಬಿ ಬಳಿ ಚಾಲನೆ ನೀಡಲಾದ ಕಳಸಾ ನಾಲೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, 5.15 ಕಿ.ಮೀ. ಉದ್ದದ ನಾಲಾ ಯೋಜನೆಯ ಪೈಕಿ ಈಗಾಗಲೇ ಶೇ. 95ರಷ್ಟು ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ಈ ಪೈಕಿ 450 ಮೀಟರ್ ಕಾಲುವೆ ನಿರ್ಮಾಣ ಕಾಮಗಾರಿ ಉಳಿದುಕೊಂಡಿದೆ. ಬಂಡೂರಿ ನಾಲಾ ಯೋಜನೆ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ನ್ಯಾಯಾಧಿಕರಣದ ತೀರ್ಪಿಗೆ ಬದ್ದವಾಗಿರುವ ಷರತ್ತನ್ನು ಒಪ್ಪಿಕೊಂಡು ಸುಪ್ರೀಂಕೋರ್ಟ್ಗೆ 2006ರಲ್ಲಿ ಪ್ರಮಾಣಪತ್ರ ಸಲ್ಲಿಸಲಾಗಿದೆ. ಜಲಾಶಯದ ಕಾಮಗಾರಿ ಪೂರ್ಣಗೊಳ್ಳುವವರೆಗೂ ನಾಲೆಗೆ ನೀರು ಹರಿಯುವ ಸಾಧ್ಯತೆಗಳಿಲ್ಲ. ರಾಜ್ಯವು ತನ್ನ ವ್ಯಾಪ್ತಿಯಲ್ಲಿ ಹರಿಯುವ ನೀರನ್ನು ಜನರಿಗೆ ಕುಡಿಯಲು ಪೂರೈಕೆ ಮಾಡುವ ಉದ್ದೇಶದಿಂದ ಈ ಕಾಮಗಾರಿಯನ್ನು ಕೈಗೊಂಡಿದೆ. ರಾಜ್ಯದ ಒಳಗೆ  ಕೈಗೆತ್ತಿ­ಕೊಳ್ಳುವ ಯೋಜನೆಗೆ ಪರವಾನಗಿ  ಪಡೆ­ಯುವ ಅಗತ್ಯ ಇಲ್ಲ. ಕುಡಿಯುವ ನೀರಿನ ಯೋಜನೆ ಕೈಗೊಳ್ಳಲು ಕೇಂದ್ರ ಸರ್ಕಾರವು ಪ್ರಾಥಮಿಕ ಪರವಾನಗಿ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಪ್ರಮಾಣಪತ್ರದಲ್ಲಿ ತಿಳಿಸಿರುವಂತೆಯೇ ನ್ಯಾಯಮಂಡಳಿಯ ತೀರ್ಪಿನ ಬಳಿಕವೇ ಈ ನಾಲಾಗಳ ನೀರನ್ನು ತಿರುಗಿಸ­ಲಾಗುವುದು ಎಂದು 2014ರಲ್ಲಿ  ರಾಜ್ಯಕ್ಕೆ ಭೇಟಿ ನೀಡಿದ ನ್ಯಾಯಮಂಡಳಿ ಅಧ್ಯಕ್ಷರಿಗೆ ರಾಜ್ಯದ ಹಿಂದಿನ ಅಡ್ವೊಕೇಟ್‌ ಜನರಲ್‌ ರವಿವರ್ಮಕುಮಾರ್‌ ಭರವಸೆ ನೀಡಿದ್ದರು.

ಹೋರಾಟಕ್ಕೆ ಒಂದು ವರುಶ: ನಿರಂತರ ಬರಗಾಲದಿಂದ ನವಿಲುತೀರ್ಥ ಆಣೆಕಟ್ಟಿನಲ್ಲಿ ಅರ್ಧದಷ್ಟೂ ನೀರಿಲ್ಲ. ಇದರಿಂದಾಗಿ ನೀರಾವರಿಗೆ ನೀರು ಇರಲಿ, ಕುಡಿಯಲು ನೀರಿಲ್ಲದ ಸ್ಥಿತಿಯುಂಟಾಗಿದೆ. ಹೀಗಾಗಿ ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಯ ಕನ್ನಡಿಗರು ಹೋರಾಟಕ್ಕೆ ಇಳಿದು ಒಂದು ವರುಶವಾಗಿದೆ. ನರಗುಂದ, ಹುಬ್ಬಳ್ಳಿಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚು ಕಡಿಮೆ ದಿನನಿತ್ಯ ಕಾಣುತ್ತಿದೆ. ಅನೇಕ ಸ್ವಾಮೀಜಿಗಳು ಹೋರಾಟಕ್ಕೆ ಕೈಜೋಡಿಸಿ ಕೂಡಲಸಂಗಮದಿಂದ ಮಹದಾಯಿ ನದಿ ಉಗಮಸ್ಥಾನದವರೆಗೆ ಪಾದಯಾತ್ರೆ ನಡೆಸಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡಿದರು. ರೈತರ ನಿರಂತರ ಹೋರಾಟದ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ವಾಟ್ಸ್ ಅಪ್, ಫೇಸಬುಕ್, ಟ್ವಿಟರುಗಳಲ್ಲಿ ಯೋಜನೆ ಅನುಷ್ಟಾನದ ವಿಳಂಬ ಪ್ರಶ್ನಿಸಿ ಪ್ರತಿಭಟನೆ ನಡೆದಿದೆ. ಇತ್ತೀಚಿಗೆ ಕಳಸಾ-ಬಂಡೂರಿ ಅನುಷ್ಟಾನ ಮಾಡುವಂತೆ ಆಗ್ರಹಿಸಿ #implementkalasabanduri ಎಂಬ ಹ್ಯಾಶ್ ಟ್ಯಾಗ್ ಮೂಲಕ ರಾಜ್ಯದ ಎಲ್ಲ ಭಾಗಗಳಿಂದ 25000 ಕ್ಕೂ ಹೆಚ್ಚು ಟ್ವೀಟಗಳು ಹರಿಬಂದವು. ಪ್ರತಿಭಟನೆಯ ಬಿಸಿಗೆ ಸಿಲುಕಿರುವ ಮೂರೂ ರಾಜಕೀಯ ಪಕ್ಷಗಳು ಒಬ್ಬರನ್ನೊಬ್ಬರು ದೂಷಿಸುತ್ತ ರಾಜಕೀಯ ಮಾಡುವುದರಲ್ಲೇ ನಿರತರಾಗಿದ್ದಾರೆ. ಪ್ರಧಾನಿ ಬಳಿಗೆ ಹೋದ ಸರ್ವಪಕ್ಷ ನಿಯೋಗ ಒಂದು ಖಚಿತ ಭರವಸೆ ಪಡೆಯದೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ಸಾಗಿದ್ದಾರೆ. ಈ ಹೊತ್ತಿನಲ್ಲಿ ಮೂರು ಪಕ್ಷಗಳೂ ಒಬ್ಬರನ್ನೊಬ್ಬರು ದೂರುವ ತಮ್ಮ ರಾಜಕೀಯ ಬದಿಗೊತ್ತಿ ಒಂದು ದನಿಯಲ್ಲಿ ಕನ್ನಡಿಗರ ಹಿತಕಾಯಲು ಮುಂದಾಗಬೇಕು. ನ್ಯಾಯಾಧಿಕರಣ ಮಂಡಳಿಯ ವಿಚಾರಣೆ ಆದಷ್ಟು ಬೇಗ ಮುಗಿಸುವಂತೆ ಮನವಿ ಸಲ್ಲಿಸುವುದು, ನ್ಯಾಯಾಧಿಕರಣ ಮಂಡಳಿಯ ಆಚೆ ಮಾತುಕತೆಯ ಮೂಲಕವೇ ಒಂದು ತುರ್ತಿನ ತಾತ್ಕಾಲಿಕ ಪರಿಹಾರ ದೊರಕಿಸುವಂತೆ ಪ್ರಧಾನಿಯವರ ಮೇಲೆ ಒತ್ತಡ ಹೇರುವುದು, ಬರದಿಂದ ಬೇಸತ್ತುನೊಂದಿರುವ ರೈತರಿಗೆ ಒಂದಿಷ್ಟು ತುರ್ತು ಪರಿಹಾರ ದೊರಕಿಸುವತ್ತ ರಾಜ್ಯ ಸರ್ಕಾರ ಗಮನ ನೀಡುವುದು ಮುಂತಾದವನ್ನು ಆದ್ಯತೆಯ ಮೇಲೆ ಕರ್ನಾಟಕದ ರಾಜಕೀಯ ನಾಯಕತ್ವ ಈಗ ಮಾಡಬೇಕು. ಇಲ್ಲದಿದ್ದಲ್ಲಿ ಮಲಪ್ರಭೆ ಕಣಿವೆಯ ನಾಲ್ಕು ಜಿಲ್ಲೆಗಳಲ್ಲಿ ಚುನಾವಣೆಗಳಲ್ಲಿ ಮೂರೂ ಪಕ್ಷಗಳಿಗೂ ಜನರೇ ಪಾಠ ಕಲಿಸುವ ದಿನ ದೂರವಿಲ್ಲ.

(ವಿಜಯಪುರ ಮತ್ತು ಬೆಂಗಳೂರಿನಲ್ಲಿ ಉದ್ದಿಮೆ ಹೊಂದಿರುವ ಲೇಖಕರು, ಕನ್ನಡ-ಕರ್ನಾಟಕ ಕೇಂದ್ರಿತ ವಿಷಯಗಳ ಜಾಗೃತಿ ಬರಹಗಳಲ್ಲಿ ತೊಡಗಿಸಿಕೊಂಡಿದ್ದಾರೆ.)

Leave a Reply