ಆಧುನಿಕ ಅಯೋಧ್ಯಾಖಾಂಡದ ಆಸಕ್ತಿಕರ ಪಾತ್ರವಾಗಿ ನೆನಪಲ್ಲುಳಿಯಲಿರುವ ಹಶಿಮ್ ಅನ್ಸಾರಿ

ಡಿಜಿಟಲ್ ಕನ್ನಡ ವಿಶೇಷ:

ಅಯೋಧ್ಯಾ ಪ್ರಕರಣದಲ್ಲಿ ಅತಿ ಹಳೆಯ ದಾವೆದಾರ ಎಂಬ ಶ್ರೇಯಸ್ಸಿನ ಮೊಹಮದ್ ಹಶಿಮ್ ಅನ್ಸಾರಿ ಬುಧವಾರ ಮೃತರಾಗಿದ್ದಾರೆ. ವೃದ್ಧಾಪ್ಯ ಜತೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲಿದ್ದ ಹಶಿಮ್ ತಮ್ಮ 95ನೇ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. 1949ರಿಂದಲೂ ವಿವಾದಿತ ಜಾಗದೊಂದಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹಶಿಮ್, ಬಾಬರಿ ಮಸೀದಿ ಪುನರುಜ್ಜೀವಗೊಳ್ಳಬೇಕು ಅಂತ 1961ರಲ್ಲೇ ದಾವೆ ಹೂಡಿದ್ದ ವ್ಯಕ್ತಿ. ಅಯೋಧ್ಯೆಯ ವಿವಾದಿತ ಪ್ರದೇಶದ ಸನಿಹದಲ್ಲೇ ವಾಸ್ತವ್ಯ. ಪ್ರಾರಂಭದಲ್ಲಿ ತಂದೆಯ ದರ್ಜಿ ಅಂಗಡಿಯಲ್ಲೇ ಇದ್ದು ನಂತರ ಸೈಕಲ್ ರಿಪೇರಿ ಕಾಯಕದಲ್ಲಿ ತೊಡಗಿಸಿಕೊಂಡವರು.

ಬಹುಶಃ ಪ್ರಾರಂಭದಲ್ಲಿ ಎಲ್ಲರಿಗೂ ಇರುವ ಬಿಸುಪು ಇವರಲ್ಲೂ ಇದ್ದಿತ್ತು. ಹಾಗೆಂದೇ ವಿವಾದಿತ ಸ್ಥಳದಲ್ಲಿ ಪ್ರಾರ್ಥನೆಗೆ ಕರೆಕೊಟ್ಟಿದ್ದಕ್ಕೆ ಎರಡು ವರ್ಷಗಳ ಜೈಲುಶಿಕ್ಷೆ ಅನುಭವಿಸಿದ್ದರು. ನಂತರದ ದಿನಗಳಲ್ಲಿ ಏನೆಲ್ಲ ಹೇಳಿದ್ದರು ಮತ್ತು ನಡೆದುಕೊಂಡರು ಎಂಬುದನ್ನು ಗಮನಿಸಿದರೆ ಅದೇ ಒಂದು ಕೌತುಕದ ಕತೆಯಾಗುತ್ತದೆ.

  • 1992ರಲ್ಲಿ ವಿವಾದಿತ ನಿರ್ಮಿತಿಯನ್ನು ಧರೆಗುರುಳಿಸಿದ ಹಿಂದು ಕರಸೇವಕರ ಕ್ರಮಕ್ಕೆ ಅನ್ಸಾರಿ ವಿರೋಧವಿತ್ತು. ನಂತರದ ದಂಗೆಯಲ್ಲಿ ಆ ವಿವಾದಿತ ಪ್ರದೇಶಕ್ಕೆ ತಾಗಿಕೊಂಡಿದ್ದ ಇವರ ಮನೆಯೂ ಸುಟ್ಟುಹೋಯಿತು. ಆದರೆ ಮೂಲ ದಾವೆದಾರರ ಪೈಕಿ ದಿಗಂಬರ ಅಖಾಡಕ್ಕೆ ಸೇರಿದ ಇಬ್ಬರು ದಾವೆದಾರರ ಜತೆ ಹಶಿಮ್ ಅನ್ಸಾರಿ ಒಳ್ಳೇ ಸ್ನೇಹ ಹೊಂದಿದ್ದರು. ರಾಂ ಕೇವಲ್ ದಾಸ್ ಮತ್ತು ರಾಮಚಂದ್ರ ಪರಮಹಂಸರು ಎದುರಾಳಿ ದಾವೆದಾರರಾದರೂ ನ್ಯಾಯಾಲಯಕ್ಕೆ ಅವರೊಂದಿಗೆ ಒಟ್ಟಿಗೆ ಪ್ರಯಾಣಿಸುತ್ತಿದ್ದ ಉದಾಹರಣೆಗಳಿಂದ ಹಶಿಮ್ ಬದುಕು ಹಸಿರಾಗಿದೆ.
  • ಸ್ಥಳೀಯ ಸಮಸ್ಯೆಯಾಗಿದ್ದ ವಿಷಯವನ್ನು ರಾಜಕೀಯ ಹಿತಾಸಕ್ತಿಗಳೆಲ್ಲ ಸೇರಿ ದೊಡ್ಡದು ಮಾಡಿದವು ಎಂಬುದವರ ವಾದ. ಫೆಬ್ರವರಿ 2015ರಲ್ಲಿ ಉಳಿದ ದಾವೆದಾರರೊಂದಿಗೆ ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಬಯಸಿದ್ದ ಹಶೀಮ್, ‘ನಮ್ಮ ನಡುವೆ ಒಂದು ತೀರ್ಮಾನಕ್ಕೆ ಬಂದು ಪ್ರಧಾನಿ ಮೋದಿಯವರನ್ನು ಸಂಪರ್ಕಿಸುತ್ತೇವೆ. ನಿರ್ಮೋಹಿ ಅಖಾಡ ಮತ್ತು ಹಿಂದು ಮಹಾಸಭಾಗಳೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಆದರೆ ವಿಎಚ್ಪಿ ಅಶೋಕ ಸಿಂಘಾಲರನ್ನೇನೂ ಸಂಪರ್ಕಿಸೋದಿಲ್ಲ, ಅವರು ಬಕ್ವಾಸ್’ ಎಂದಿದ್ದರು.
  • ಇಂತಿಪ್ಪ ಹಶೀಮ್ 2013ರಲ್ಲಿ ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಬಗ್ಗೆ ಹೇಳಿದ್ದ ಮಾತುಗಳು ಕುತೂಹಲಕಾರಿಯಾಗಿವೆ. ‘ನರೇಂದ್ರ ಮೋದಿ ಪ್ರಧಾನಿಯಾದರೆ ಮುಸ್ಲಿಂ ಸಮುದಾಯಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಕಾಂಗ್ರೆಸ್ ಭಯ ಬಿತ್ತುತ್ತಿದೆ. ಐವತ್ತು ವರ್ಷ ಕಾಂಗ್ರೆಸ್ಸನ್ನು ಬೆಂಬಲಿಸಿದ್ದಕ್ಕೆ ಮುಸ್ಲಿಮರಿಗೆ ಸಿಕ್ಕಿದ್ದೇನು? ಕೋಮು ದಳ್ಳುರಿಗಳನ್ನು ಹಬ್ಬಿಸಿದರಷ್ಟೆ. ಪ್ರಧಾನಿಯಾಗಬೇಕಾದರೆ ಮುಸ್ಲಿಮರ ಬೆಂಬಲವೂ ಬೇಕು ಎಂದು ಮೋದಿಯವರಿಗೆ ಗೊತ್ತು. ಗುಜರಾತಿನ ಮುಸ್ಲಿಮರು ಆರ್ಥಿಕವಾಗಿ ಚೆನ್ನಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಸರ್ಕಾರವೂ ಕಾಂಗ್ರೆಸ್ ದಾರಿಯಲ್ಲೇ ಇದೆ. ಅಧಿಕಾರ ವಹಿಸಿಕೊಂಡಾಗಿನಿಂದ ಸುಮಾರು ನೂರು ಕೋಮುಗಲಭೆಗಳಾಗಿವೆ. ಮುಸ್ಲಿಂ ಸಮುದಾಯಕ್ಕೆ ಇವರು ಮಾಡಿರುವುದೇನೂ ಇಲ್ಲ…’
  • ಇವರು ಹಳೆಯ ದಾವೆದಾರ ಎಂಬ ಕಾರಣಕ್ಕೆ ಪ್ರತಿವರ್ಷ ಧ್ವಂಸದ ದಿನ ಬಂದಾಗ, ಇಲ್ಲವೇ ಅಯೋಧ್ಯೆ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆಗಳಾದಾಗಲೆಲ್ಲ ಮಾಧ್ಯಮಗಳು ಇವರನ್ನು ಮಾತನಾಡಿಸಲು ತೆರಳುತ್ತಿದ್ದವು. ಕೊನೆ ಕೊನೆಗೆ ಹಶಿಮ್ ಅನ್ಸಾರಿಯವರಿಗೆ ಬೇಜಾರು ಹತ್ತಿಬಿಟ್ಟಿತ್ತು. ‘ಥೋ.. ಮತ್ತೆ ಬಂದ್ರೇನಪ್ಪಾ’ ಅಂತಲೇ ಕೇಳ್ತಿದ್ದರು. ಮಸೀದಿ-ಮಂದಿರಗಳೆಲ್ಲ ಅಕ್ಕಪಕ್ಕ ಇದ್ದುಕೊಳ್ಳಲಿ ಎಂಬಂಥ ನಿಲುವಿಗೆ ಬಂದಿದ್ದ ಹಶಿಮ್, ವಿಚಾರವದನರಾಗಿ ‘ಮಸ್ಜಿದ್ ಸೆ ಪಹ್ಲೆ ಹಮ್ ಮುಲ್ಕ್ ದೇಖ್ನಾ ಹೈ’ (ಮಸೀದಿಗಿಂತ ದೇಶದ ಬಗ್ಗೆ ಆಸ್ಥೆ ವಹಿಸಬೇಕು) ಅಂತಲೂ ಸಂದರ್ಶನಗಳಲ್ಲಿ ಹೇಳಿದ್ದರು.

ಈ ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಕಡೆಯಿಂದಲೇ ಇನ್ನೂ ಆರು ಪ್ರಮುಖ ದಾವೆಗಳಿರುವುದರಿಂದ ಹಾಗೂ ಹೈಕೋರ್ಟ್ ನಲ್ಲಿ ಹೇಳಿಕೆಗಳೆಲ್ಲ ದಾಖಲಾಗಿರುವುದರಿಂದ, ಹಶಿಮ್ ಬದುಕಿದ್ದಾಗಲಾಗಲಿ, ಈಗಲೇ ಆಗಲಿ ನ್ಯಾಯಾಲಯದ ಹೊರಗಡೆ ರಾಜಿ ಪ್ರಕ್ರಿಯೆ ಎಂಬುದು ಸರಳ ಸಂಗತಿ ಏನಲ್ಲ.

ಯಾರು ಸರಿ, ಯಾರು ತಪ್ಪು ಎಂಬೆಲ್ಲ ವಿಷಯಗಳು ಹಾಗಿರಲಿ. ಇನ್ನೂ ಎಷ್ಟೋ ವರ್ಷ ಸಾಗುತ್ತಲೇ ಇರಬಹುದಾದ ಅಯೋಧ್ಯಾ ಪ್ರಕರಣದಲ್ಲಿ ಮೊಹಮದ್ ಹಶಿಮ್ ಅನ್ಸಾರಿ ಒಂದು ಆಸಕ್ತಿಕರ ಪಾತ್ರವಾಗಿ ನೆನಪಲ್ಲುಳಿಯುತ್ತಾರೆ.

Leave a Reply