ಕಲ್ಪನೆಗಳ ಸ್ವರ್ಗ ಜೀಕುವಾಗ ವಾಸ್ತವ ಪ್ರಪಂಚ ಕಸವಾಗಬಾರದು ಅಲ್ಲವೇ..?

author-geetha‘ನಿಮ್ಮನ್ನು ಎಲ್ಲೋ ನೋಡಿದೀನಿ ಮೇಡಂ..’

‘ಹೌದಾ?’

‘ಎಲ್ಲಿ ಅಂತಾ ನೆನಪಿಗೆ ಬರ್ತಿಲ್ಲ.. ನೀವು ಇದೇ ಏರಿಯಾದಲ್ಲಾ ಇರೋದು?’

‘ಹೂಂ..’ (ಈ ಏರಿಯಾಗೆ ರೌಡಿನಾ.. ಎಂಬಂತೆ ಕೇಳಿಸಿತು ನನಗೆ!)

ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ವ್ಯಾಪಾರ ಅಲ್ಲಿಯೇ ಸ್ಥಗಿತಗೊಂಡಿತು. ಮಾರುವವನಿಗೆ ಕೂಡ ಕುತೂಹಲ. ಯಾರಿರಬಹುದು ನಾನು ಎಂದು.

‘ಅಯ್ಯೋ ಮೇಡಂ ಹೇಳಬಾರದಾ? ನೀವು ಮಹಾಪರ್ವ ಜಡ್ಜ್ ಅಲ್ಲವೇ?’

ಅಲ್ಲಿದ್ದವರೆಲ್ಲಾ ತಿರುಗಿ ನೋಡಿದರು. ಮೆಲ್ಲನೆ ಹೌದೆನ್ನುವಂತೆ ಗೋಣಾಡಿಸಿದೆ. ‘ನಿಮ್ಮನ್ನು ಇಲ್ಲಿ ನೋಡಿ ತುಂಬಾ ಖುಷಿಯಾಯ್ತು ಮೇಡಂ.’

ಇನ್ನೊಬ್ಬಾಕೆ ಮುಂದೆ ಬಂದರು.

‘ಅಷ್ಟು ದೊಡ್ಡ ಜಡ್ಜ್ ಆದರೂ ಮಾರ್ಕೆಟ್ಟಿಗೆ ತರಕಾರಿ ತಗೊಳೋಕ್ಕೆ ನೀವೇ ಬಂದಿದೀರಲ್ಲ!’

‘ಅಯ್ಯೋ ಅದು ಪಾತ್ರ ಅಷ್ಟೇ..’ ಉಗುಳುನುಂಗಿದೆ.

‘ತುಂಬಾ ಚೆನ್ನಾಗಿ ಪಾತ್ರ ಮಾಡಿದೀರಿ ಮೇಡಂ..’ ಮೊದಲು ಮಾತನಾಡಿಸಿದಾಕೆ ನನ್ನ ಬೆನ್ನುತಟ್ಟಿದರು.

‘ಥ್ಯಾಂಕ್ಸ್..’

ನಟನೆಯೇ ಬರಲ್ಲ.. ಕ್ಯಾಮೆರಾ ಆಗಲಿ.. ಇತರರನ್ನಾಗಲೀ ನೋಡಿ ಮಾತನಾಡುವ ಅವಶ್ಯಕತೆಯಿಲ್ಲ. ನಗು, ಅಳು, ಕೋಪ ದುಃಖ ಏನೂ ತೋರಬೇಕಿಲ್ಲ. ಬರೆದಿದ್ದನ್ನು ಗಂಭೀರವಾಗಿ ಓದಿದರೆ ಆಯಿತು ಎನ್ನುವಂತಹ ಪಾತ್ರ. ನನಗೆ ಸರಿಯಿತ್ತು. ಸೀತಾರಾಂ ಸರ್ ಧೈರ್ಯ ತುಂಬಿದರು ಮಾಡಿಯಾಗಿತ್ತು. ಮೂರು ವರ್ಷಗಳೇ ಆದವೇನೋ ಆದರೂ ಜನ ಇಂದಿಗೂ ಗುರುತಿಸುತ್ತಾರೆ, ಮಾತನಾಡಿಸುತ್ತಾರೆ. ಅವರಂತೆಯೇ ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ ಕೊಳ್ಳಲು ಮಾರ್ಕೆಟ್ಟಿಗೆ ಬರುತ್ತಾಳಿವಳು ಎಂದು ಅಚ್ಚರಿಪಡುತ್ತಾರೆ.

ನನ್ನ ದೊಡ್ಡಮ್ಮ ಒಬ್ಬರು.. ಜಡ್ಜ್ ಪಾತ್ರದಲ್ಲಿ ನನ್ನ ನೋಡಿದಾಗ ಕರೆ ಮಾಡಿದ್ದರು.. ‘ನಮ್ಮ ಕುಟುಂಬದಲ್ಲಿಯೇ ಯಾರೂ ಜಡ್ಜ್ ಆಗಿರಲಿಲ್ಲ. ನೀನು ಕರೀಕೋಟ್ ಹಾಕಿಕೊಂಡು, ಆ ಸೀಟ್ ಮೇಲೆ ಕೂತಿದ್ದು ನೋಡಿ ತುಂಬಾ ಖುಷಿಯಾಯಿತು.’ ಎಂದು ಗದ್ಗದಿತರಾಗಿ ಹೇಳಿದರು.

ಅದು ಪಾತ್ರವಷ್ಟೇ ಎಂದು ನಾನು ಹೇಳಿದನ್ನು ಕೇಳಿಸಿಕೊಳ್ಳದೆ ಫೋನಿಟ್ಟರು.

ನಾಲ್ಕು ದಿನ ಟಿ.ವಿಯಲ್ಲಿ ಬಂದ ಒಂದು ಪಾತ್ರವನ್ನು ಇಷ್ಟಪಟ್ಟು (ಅಥವಾ ಇಷ್ಟಪಡದೆ) ಆ ಪಾತ್ರಧಾರಿ (ಪಾತ್ರಧಾರಿ ಎಂದು ಪರಿಗಣಿಸದವರೂ ಇದ್ದಾರೆ) ಸಿಕ್ಕಾಗ ಮಾತನಾಡಿಸಿ, ಕೈಯಲ್ಲಿ ಮೊಬೈಲ್ ಇದ್ದರೆ ಒಂದು ಸೆಲ್ಫಿ ತೆಗೆದು, ಎಫ್ ಬಿ ಅಕೌಂಟ್ ಇದ್ದರೆ ಅದರಲ್ಲಿ ಹಾಕಿಕೊಳ್ಳುವುದು ಒಂದು ಅಭ್ಯಾಸ. ಏನೋ ಇಬ್ಬರಿಗೂ ಖುಷಿ. ಇಷ್ಟರಲ್ಲೇ ಮುಗಿದರೆ.. ಆದರೆ ಮುಗಿಯುತ್ತಿಲ್ಲ.

ಲವ್ ಯು, ಲವ್ ಯು.. ಎಂದು ಹುಡುಗಿಯ ಹಿಂದೆ ಬಿದ್ದರೆ.. ರಕ್ತದಲ್ಲಿ ಪತ್ರ ಬರೆದರೆ, ಅವಳ ಮನೆಯ ಮುಂದೆ ಮಳೆಯಲ್ಲಿ ರಾತ್ರಿಯೆಲ್ಲಾ ನೆನೆಯುತ್ತಾ ನಿಂತರೆ ಅವಳು ಒಪ್ಪಿ ಹಿಂದೆ ಬರುತ್ತಾಳೆ ಎಂದು ಫಿಲ್ಮೀ ಹೀರೋಗಳನ್ನು ನೋಡಿಕೊಂಡು ಅದನ್ನು ನಿಜ ಜೀವನದಲ್ಲಿ ಮಾಡಿ ಜೈಲು ಸೇರುವ ಹುಡುಗರೂ ಇದ್ದಾರೆ. ಅಂತಹ ಹುಡುಗರಿಂದ ಮುಜುಗುರ, ಅವಮಾನಕ್ಕೆ ಗುರಿಯಾಗುವ ಹುಡುಗಿಯರೂ ಇದ್ದಾರೆ. ಅವನು ಅಷ್ಟು ಮಾಡಿದ ಅಂದರೆ ನೀನೇನೋ ಮಾಡಿದ್ದೀಯಾ.. ಅವನಿಗೆ encourage ಆಗುವ ಹಾಗೆ.. ಎಂದು ಹೆತ್ತವರಿಂದಲೇ ಅನ್ನಿಸಿಕೊಂಡು ತಮ್ಮ ವಲಯ ಕುಗ್ಗಿಸಿಕೊಂಡಿರುವ ಹೆಣ್ಣು ಮಕ್ಕಳೂ ಇದ್ದಾರೆ.

ಮುಗಿಯುತ್ತಿಲ್ಲ ಎಂದೆನಲ್ಲ.. ಅದು ಟಿವಿಯಲ್ಲಿ ಬರುವ ಧಾರವಾಹಿಗಳ ಬಗ್ಗೆ, ಸಿನಿಮಾಗಳ ಬಗ್ಗೆ ಮುಂದೆ ಬರೆಯುತ್ತೇನೆ.

ಸುಮಾರು ಧಾರಾವಾಹಿಗಳ (ಎಲ್ಲಾ ಛಾನೆಲ್ಲುಗಳು) target audience ಅಂದರೆ ಮಧ್ಯ ವಯಸ್ಕ ಹಾಗೂ ವಯಸ್ಸಾದ ಹೆಂಗಸರು. ಹಲವು ಬಾರಿ ಯುವತಿಯರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ time tested target audience (ಛಾನೆಲ್ಲುಗಳು ಉಪಯೋಗಿಸುವ ಪದಗಳು) ಮಧ್ಯ ವಯಸ್ಕ ಹಾಗೂ ವಯಸ್ಸಾದ ಮಹಿಳೆಯರು. ಪ್ರಣಯ, ಸಾಂಸಾರಿಕ ಕಥೆ, ಇಬ್ಬರು ಹೆಂಡಿರು.. ಏನೇ ಇರಲಿ.. ಕುತೂಹಲದಿಂದ ನೋಡುತ್ತಾರೆ. ಆಸಕ್ತಿಯಿಂದ ಕಥೆಯಲ್ಲಿ ತಲೀನರಾಗುತ್ತಾರೆ.

ಮನೆಯ ಹಾಲಿನಲ್ಲಿ ಅಥವಾ ಮಲಗುವ ಕೋಣೆಯಲ್ಲೇ ಟಿ.ವಿ ಪ್ರತಿಷ್ಠಾಪನೆಯಾಗಿರುತ್ತದೆ. ಕಥೆಗಳು ಕೂಡ ನಡೆಯುವುದು ಮನೆಗಳಲ್ಲಿಯೇ. ಅದು ಆ ಪಾತ್ರಗಳ ಮನೆಯಾಗಿರುತ್ತದೆ. ಕತೆಯಲ್ಲಿ ಎಷ್ಟು ತಲೀನರಾಗಿರುತ್ತಾರೆ ಎಂದರೆ ಅದೆಲ್ಲಾ ನಿಜ ಎಂಬ ಭ್ರಮೆಯಲ್ಲಿ ಇರುತ್ತಾರೆ. ಆ ಪಾತ್ರಗಳೊಂದಿಗೆ ಮಾತನಾಡುತ್ತಾರೆ. ಕೆಟ್ಟವರು ಬಂದರೆ ಶಾಪ ಹಾಕುತ್ತಾರೆ. ಒಳ್ಳೆಯವರಿಗೆ ಕೆಟ್ಟವರ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಸ್ನೇಹಿತರನ್ನು ಭೇಟಿ ಮಾಡಿದಾಗ ಸೀರಿಯಲ್ ಕುಟುಂಬಗಳ ಬಗ್ಗೆ ಅವರು ತಮ್ಮ ಬಂಧುಗಳೋ, ಆಪ್ತರೋ, ನೆಂಟರೋ, ನೆರೆಹೊರೆಯವರೋ ಎಂಬಂತೆ ಮಾತನಾಡುತ್ತಾರೆ. ತಪ್ಪು ಒಪ್ಪುಗಳ ಬಗ್ಗೆ ಸೀರಿಯಸ್ಸಾಗಿ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಾರೆ ಅಥವಾ ಪ್ರೋತ್ಸಾಹಿಸುತ್ತಾರೆ. ಅಕಸ್ಮಾತ್ ಆ ಪಾತ್ರಧಾರಿಗಳು ಸಿಕ್ಕರೆ ಅವರೇನು ಮಾಡಬೇಕು. ಏನು ಮಾಡಬಾರದು ಎಂದು ಹೇಳುತ್ತಾರೆ.

ಅವರ ಮನೆಯಲ್ಲಿ, ಅಥವಾ ನೆಂಟರಿಷ್ಟರ ಪೈಕಿ ಸೀರಿಯಲ್ ನಲ್ಲಿ ಬಂದಂತಹ ಪರಿಸ್ಥಿತಿ (situation) ಬಂದರೆ ಆ ಪಾತ್ರಗಳು (ಅವರಿಗೆ ಪಾತ್ರಗಳಲ್ಲ ನಿಜ ವ್ಯಕ್ತಿಗಳು) ತೆಗೆದುಕೊಂಡಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಅಥವಾ ತೆಗೆದುಕೊಳ್ಳದಂತೆ ಆದೇಶಿಸುತ್ತಾರೆ. ನಿಜ ಪ್ರಪಂಚ ಹಾಗೂ virtual ಪ್ರಪಂಚದ (ಟಿ.ವಿ ಸೀರಿಯಲ್ ಪ್ರಪಂಚ) ನಡುವಿನ ತೆರೆ ಹರಿದುಹೋಗಿದೆ, ಬೆಳಗ್ಗೆಯಿಂದ ರಾತ್ರಿಯವರೆಗೆ ಸೀರಿಯಲ್ ಪ್ರಪಂಚದಲ್ಲಿ ಮುಳುಗಿ ಹೋಗಿರುವವರಿಗೆ..

‘ಅವಳು ಸರೀಗಿಲ್ಲ ಕಣೇ.. ಮನೆಗೆ ಸೇರಿಸಬೇಡ’ ನನ್ನ ಸ್ನೇಹಿತೆಯ ಅಜ್ಜಿ ಅವಳ ಸ್ನೇಹಿತೆಯೊಬ್ಬಳ ಬಗ್ಗೆ ಹೇಳಿದಾಗ ನನ್ನ ಸ್ನೇಹಿತೆ ಕೇಳಿದ್ದಳು..

‘ಯಾಕಜ್ಜಿ.. ನಿಂಗೆ ಗೊತ್ತಾ ಅವಳು?’

‘ಇಲ್ಲ.. ಆದರೆ ಅವಳು ಕುಂಕುಮ ಇಟ್ಟುಕೊಂಡಿರುವ ರೀತಿ ನೋಡು.. ಜೊತೆಗೆ ತೊಳಿಲ್ಲದ ರವಿಕೆ ತೊಟ್ಟಿದ್ದಾಳೆ. ಅಂತಹವರನ್ನು ನಂಬಬಾರದು **** ಸೀರಿಯಲಲ್ಲಿ ರಾಣಿ ಅಂತ ಒಬ್ಬಳು ಬರ್ತಾಳೆ. ಅವಳು ಹೀಗೇ ಅಲಂಕಾರ ಮಾಡಿಕೊಳ್ಳುವುದು. ಮನೆಮುರುಕಳು ಅವಳು.. ರಾಣಿ ಒಬ್ಬಳೇ ಯಾಕೆ? **** ನಲ್ಲಿ ಬರ್ತಾಳಲ್ಲ.. ಕಾಮಿನಿ.. ಅಂತ.. ಅವಳೂ ಅಷ್ಟೇ..’ ನನ್ನ ಸ್ನೇಹಿತೆಯ ಅಜ್ಜಿ ಹೇಳುತ್ತಾ ಹೋದರಂತೆ… ಇದನ್ನು ನನ್ನಲ್ಲಿ ಹೇಳುತ್ತಾ ಗದ್ಗದಿತಳಾದಳು ನನ್ನ ಸ್ನೇಹಿತೆ.

‘ಏನು ಮಾಡೋದು? ನಮ್ಮ ಅಜ್ಜಿ ಬೇರೆ ಮಾತೇ ಆಡೊಲ್ಲ.. ಸೀರಿಯಲ್ಗಳದೇ ಮಾತು!’

ನನ್ನ ಮಗಳ ಸ್ನೇಹಿತೆಯ ಮನೆಯಲ್ಲೂ ಇದೆ ತಾಪತ್ರಯ.. ಸ್ನೇಹಿತೆಯ ಅಜ್ಜಿಗೆ ಸೊಸೆಯ ಮೇಲೆ ಅನುಮಾನ. ಸೀರಿಯಲ್ ಗಳಲ್ಲಿನ ಕೆಟ್ಟ ಸೊಸೆಯಂತವಳೇ ತನ್ನ ಸೊಸೆ.. ಎಂದು ಭಾವಿಸಿ ಮನೆಯನ್ನು ನರಕ ಮಾಡಿಟ್ಟಿದ್ದಾರೆ.

ಇನ್ನೊಬ್ಬರ ಮನೆಯಲ್ಲಿ ಮಗುವಿಗೆ ಜ್ವರ ಎಂದು ಆರೈಕೆ ಮಾಡುತ್ತಿದ್ದರೆ ‘ಹೀಗೆ ಜ್ವರ ಬಂದು ನಿಯತಿ ಸತ್ತೇ ಹೋದಳು … ಸಿರಿಯಲ್ಲಿನಲ್ಲಿ’ ಎಂದು ಹೇಳಿ ತಲೆ ಕೆಡಿಸಿದರು ಆ ಮನೆಯ ಅಜ್ಜಿ. ಅಪರಾಧಕ್ಕೆ, ಅನ್ಯಾಯಕ್ಕೆ, ವಿಚ್ಛೇಧನಕ್ಕೆ ಕೊನೆಗೆ ಸಾವಿಗೂ ಕೂಡ ನೈಜ್ಯವಾಗಿ ಪ್ರತಿಕ್ರಿಯಿಸುವುದನ್ನೇ ಮರೆಯುತ್ತಿದ್ದಾರೆ.

ಸೀರಿಯಲ್ಗಳಲ್ಲಿ ದೇವರು ಬಂದರೆ, ದೆವ್ವ ಬಂದರೆ.. ಅವೆಲ್ಲವನ್ನೂ ನಂಬುತ್ತಾರೆ. ಸೀರಿಯಲ್ಲಿನಲ್ಲಿ ಹೇಳುವ ದೇವಸ್ಥಾನಕ್ಕೆ ಹೋಗಬೇಕು. ಆ ವ್ಯಕ್ತಿಗಳನ್ನು (ಪಾತ್ರಧಾರಿಗಳಲ್ಲ) ಮನೆಗೆ ಕರೆಯಬೇಕು..

ಸೀರಿಯಲ್ಗಳು ನೈಜ್ಯವಾಗಿರಬೇಕು.. ಎಂದು ಕಷ್ಟಪಡುವ ನಿರ್ದೇಶಕರು, ಕತೆಗಾರರು ಅವರ ಸೀರಿಯಲ್ಗಳು ಬೀರುತ್ತಿರುವ ಪರಿಣಾಮದ ಬಗ್ಗೆ ಎಚ್ಚರವಾಗಿರಬೇಕು.

ಚಿಕ್ಕಮಕ್ಕಳು ಟಿವಿಯಿಂದ ಹೇಗೆ ಪ್ರಭಾವಿತರಾಗುತ್ತಾರೋ ಹಿರಿಯರು ಕೂಡ ಹಾಗೇ ಪ್ರಭಾವಿತರಾಗುತ್ತಿದ್ದಾರೆ. ನನ್ನ ಸ್ನೇಹಿತೆಯೊಬ್ಬರು ಹೇಳಿದ ಪ್ರಕಾರ ಕೆಲವರಿಗೆ ಕೌನ್ಸಲಿಂಗ್ ಪಡೆಯುವ ಮಟ್ಟಕ್ಕೆ ಹೋಗಿದೆ. ಇದರ ಪ್ರಭಾವ ಸೂಪರ್ ಮ್ಯಾನ್ ಹಾರುವುದನ್ನು ನೋಡಿ ತಾಯಿಯ ದುಪ್ಪಟ್ಟ ಸಿಕ್ಕಿಸಿಕೊಂಡು ಮಹಡಿಯಿಂದ ಹಾರಿದ ಮಕ್ಕಳ ಉದಾಹರಣೆಗಳಿವೆ.

ದೈಹಿಕವಾಗಿ ಗಾಯಗೊಂಡರೆ, ಅಪಾಯವಿದೆಯೆಂದಾದರೆ ಬೇಗ ಎಚ್ಚರವಹಿಸುತ್ತೇವೆ. ಆದರೆ ಹೀಗೆ ಮಾನಸಿಕವಾಗಿ ಕುಗ್ಗುತ್ತಿರುವ ಸುತ್ತಲ ಪ್ರಪಂಚವೆಂದರೆ ಟಿವಿ ಧಾರವಾಹಿಗಳ ಪ್ರಪಂಚ ಎಂದು ನಂಬಿ ಬದುಕುತ್ತಿರುವ ವಾಸ್ತವತೆಯಿಂದ ದೂರ ಸರಿಯುತ್ತಿರುವವರ ಬಗ್ಗೆ ಕಾಳಜಿ ತೋರಿಸಬೇಕಾಗಿದೆ.

ಕತೆ, ಕಾದಂಬರಿ, ಧಾರವಾಹಿಗಳು ನಿಜ ಜೀವನವನ್ನು ಬಿಂಬಿಸುವ ಕನ್ನಡಿಗಳಾದರೂ.. ಆಕರ್ಷಿಸಲು ಅವು ಭೂತಗನ್ನಡಿಗಳಾಗಿವೆ. ವಿಷ್ಯುಯಲ್ ಮಿಡಿಯಾ ಆದ ಟಿವಿಯ ಹಿಡಿತವಂತೂ ಬಲಿಷ್ಠ, ಸರ್ವವ್ಯಾಪಿಯಾದುದರ ಬಗ್ಗೆ ಗೌರವವಿದೆ. ಆದರೆ ಹೆದರಿಕೆಯೂ ಇದೆ.

ಸಂಗೀತ, ವಾಕಿಂಗ್, ಅಡಿಗೆ, ಹೊಲಿಗೆ, ಎಂಬ್ರಾಯಿಡರಿ, ಭಜನೆ ಮಕ್ಕಳೊಂದಿಗೆ ಆಟ.. ಬೇರೆ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಚೆನ್ನಾಗಿರುತ್ತದೆ. ವಾಸ್ತವ, ವರ್ಚ್ಯುಯಲ್ ಪ್ರಪಂಚದ ಅರಿವು ಸದಾ ನಮ್ಮಲ್ಲಿ ಇರಲಿ.

Leave a Reply