ಉದ್ದೇಶಪೂರ್ವಕ ಸುಸ್ಥಿದಾರರ ಪಟ್ಟಿಯಲ್ಲಿರೋದು ಮಾಜಿ ಐಎಎಸ್ ಅಧಿಕಾರಿ, ಎಂಜಿನಿಯರ್ ಕಂಪನಿ, ವಜ್ರ ವ್ಯಾಪಾರಿಗಳು.. ಗುಜರಾತಿನ ಪಾಲು ದೊಡ್ಡದು

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಉದ್ದೇಶಪೂರ್ವಕ ಸುಸ್ಥಿದಾರರ ಪಟ್ಟಿ ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದ ಅಖಿಲ ಭಾರತ ಬ್ಯಾಂಕು ನೌಕರರ ಸಂಘ (ಎಐಬಿಇಎ) ತನ್ನ ಮಾತನ್ನು ನಿಜ ಮಾಡಿದೆ. ಅದರಂತೆ ಬುಧವಾರ 5,600 ಉದ್ದೇಶಪೂರ್ವಕ ಸುಸ್ಥಿದಾರ ಮಾಹಿತಿ ಪ್ರಕಟಿಸಿದೆ.

ಎಐಬಿಇಎ ಬಹಿರಂಗ ಮಾಡಿರೋ ಮಾಹಿತಿ ಪ್ರಕಾರ ಗುಜರಾತ್ ನಲ್ಲಿ ಶೇ.15 ರಷ್ಟು ಉದ್ದೇಶಪೂರ್ವಕ ಸುಸ್ಥಿದಾರರಿದ್ದಾರೆ. ಆ ಪೈಕಿ ವಜ್ರ ವ್ಯಾಪಾರಿಗಳು, ಮಾಜಿ ಐಎಎಸ್ ಅಧಿಕಾರಿಗಳು, ಎಂಜಿನೀಯರಿಂಗ್ ಕಂಪನಿಗಳು, ವಡೋದರಾ ನಗರದ 4ನೇ ದರ್ಜೆ ನೌಕರರು ಸೇರಿದ್ದಾರೆ.

ಮುಖೇಶ್ ಭಂಡಾರಿ ಮಾಲೀಕತ್ವದ ಎಲೆಕ್ಟ್ರೊಥರ್ಮ್ ಇಂಡಿಯಾ (₹385 ಕೋಟಿ), ಸೂರತ್ ಮೂಲದ ಜೆಬಿ ಡೈಮಂಡ್ಸ್ (₹466 ಕೋಟಿ), ವಿಶಾಲ್ ಎಕ್ಸ್ ಪೋರ್ಟ್ಸ್ (₹279 ಕೋಟಿ) ಜತೆಗೆ ಮಾಜಿ ಐಎಎಸ್ ಅಧಿಕಾರಿ ಸಂಜಯ್ ಗುಪ್ತಾ ಅವರ ನೀಶಾ ಗ್ರೂಪ್, ಸುನಿಲ್ ಕಕ್ಕಡ್ ಅವರ ಸಾಯಿ ಇನ್ಫೋ ಸಿಸ್ಟಮ್ಸ್.. ಇವರೆಲ್ಲಾ ಗುಜರಾತ್ ಮೂಲದ ಪ್ರಮುಖ ಉದ್ದೇಶಪೂರ್ವಕ ಸುಸ್ಥಿದಾರರು.

ಇನ್ನು ದೇಶದ ಪ್ರಮುಖ ಉದ್ದೇಶಪೂರ್ವಕ ಸುಸ್ಥಿದಾರರನ್ನು ನೋಡೊದಾದ್ರೆ, ವಿನ್ಸಮ್ ಡೈಮಂಡ್ ಅಂಡ್ ಜುವೆಲರಿ (₹ 2,266 ಕೋಟಿ), ಜೂಮ್ ಡೆವಲಪರ್ಸ್ (₹1,710 ಕೋಟಿ), ಕಿಂಗ್ ಫಿಶರ್ ಏರ್ ಲೈನ್ಸ್ (₹1,201 ಕೋಟಿ), ಫಾರ್ ಎವರ್ ಪ್ರಿಶಿಯಸ್ ಜುವೆಲರಿ ಅಂಡ್ ಡೈಮಂಡ್ಸ್ (₹1,002 ಕೋಟಿ), ಬೆಟ ನ್ಯಾಪ್ಟೊಲ್ (₹ 958 ಕೋಟಿ), ಡೆಕ್ಕನ್ ಕ್ರೋನಿಕಲ್ (₹ 600 ಕೋಟಿ) ಎಸ್.ಕುಮಾರ್ಸ್ ನೇಷನ್ ವೈಡ್ ಲಿ. (₹ 600 ಕೋಟಿ).

ದೇಶದ ಬ್ಯಾಂಕುಗಳಿಗೆ ಮರುಪಾವತಿಯಾಗಬೇಕಿರುವ ಸುಸ್ಥಿದಾರ ಮೊತ್ತ ₹13 ಲಕ್ಷ ಕೋಟಿ, ಅದರಲ್ಲಿ 5,610 ಉದ್ದೇಶಪೂರ್ವಕ ಸುಸ್ಥಿದಾರರಿಂದ ಬರಬೇಕಾಗಿರುವ ಮೊತ್ತ ₹58,792 ಕೋಟಿ. ಇನ್ನು ಜಡ ಮೊತ್ತವಾಗಿರೋದು ₹ 5.39 ಲಕ್ಷ ಕೋಟಿ.

ಇಲ್ಲಿ ಸುಸ್ಥಿದಾರ ಹಾಗೂ ಉದ್ದೇಶಪೂರ್ವಕ ಸುಸ್ಥಿದಾರ ಎಂಬ ಎರಡು ವರ್ಗ ಮಾಡಲಾಗಿದೆ. ಸುಸ್ಥಿದಾರರು ಅಂದ್ರೆ, ಸಾಲವನ್ನು ಪಡೆದ ನಂತರ ಅವರ ಆಸ್ತಿ ಜಡ ಮೊತ್ತವಾಗಿ ಪರಿಗಣಿಸಿ ಅವರಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವವರು. ಉದ್ದೇಶಪೂರ್ವಕ ಸುಸ್ಥಿದಾರ ಎಂದರೆ ಪಡೆದ ಸಾಲವನ್ನು ಮರು ಪಾವತಿ ಮಾಡುವ ಉದ್ದೇಶವನ್ನು ಹೊಂದಿರದವನು. ಈತನಿಗೆ ಸಾಲ ಮರುಪಾವತಿಸುವ ಸಾಮರ್ಥ್ಯ ಇದ್ದರೂ ಸಹ ಮರುಪಾವತಿ ಮಾಡದವನಾಗಿರುತ್ತಾನೆ.

ಇದರಿಂದಾಗಿಯೇ ಉದ್ದೇಶಪೂರ್ವಕ ಸುಸ್ಥಿದಾರರು ದೇಶದ ಬ್ಯಾಂಕುಗಳಿಗೆ ಈಗ ದೊಡ್ಡ ತಲೆ ನೋವಾಗಿ ಪರಿಣಮಿಸಿರೋದು. ಕೇವಲ ಬ್ಯಾಂಕುಗಳಿಗಷ್ಟೇ ಅಲ್ಲ, ಕೇಂದ್ರ ಹಣಕಾಸು ಸಚಿವಾಲಯವೂ ಈ ಸುಸ್ಥಿದಾರರನ್ನು ನಿಯಂತ್ರಿಸುವ ಗುರುತರ ಸವಾಲು ಎದುರಿಸುತ್ತಿದೆ.

ಇದನ್ನೂ ಓದಿ: 8167 ಉದ್ದೇಶಪೂರ್ವಕ ಸುಸ್ಥಿದಾರರಿಂದ ಬ್ಯಾಂಕ್ ಗಳಿಗೆ ಬರಬೇಕಿರೋ ಬಾಕಿ ₹ 76 ಸಾವಿರ ಕೋಟಿ!

Leave a Reply