ಹಳ್ಳಿಗಾಡಲ್ಲೂ ಬೆಂಗಳೂರು ಒನ್ ಮಾದರಿ ತ್ವರಿತ ಸೇವೆ, ಕೃತಕ ಮರಳು ಉತ್ಪಾದನೆಗೆ ಉತ್ತೇಜನ, ಪಿಯು- ಎಸ್ಸೆಸ್ಸೆಲ್ಸಿ ಫೇಲಾದವರಿಗೂ ತರಗತಿ ಹಾಜರು ಅವಕಾಶ

ಭಾರತ- ಬಾಂಗ್ಲಾದೇಶದ ಜಂಟಿ ಸಹಯೋಗದ ಚೆಕ್ಪೋಸ್ಟ್ ಗಳನ್ನು ಟೆಲಿ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಉದ್ಘಾಟಿಸಿದರು. ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಉಪಸ್ಥಿತರಿದ್ದರು.

ಡಿಜಿಟಲ್ ಕನ್ನಡ ಟೀಮ್:

ಗ್ರಾಮೀಣ ಪ್ರದೇಶಗಳಲ್ಲೂ ಬೆಂಗಳೂರು ಒನ್ ಮಾದರಿಯಲ್ಲಿ ತ್ವರಿತ ಸೇವೆ ಆರಂಭವಾಗಿದ್ದು, ಪಹಣಿ, ಮಾಸಾಶನ, ಮನೆ-ನಿವೇಶನ ಸಂಬಂಧ ನಾನಾ ಪತ್ರಗಳು, ವ್ಯಾಪಾರ ಪರವಾನಗಿ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ 100 ಸೇವೆಗಳು ಲಭ್ಯವಿವೆ.

ಇದಕ್ಕಾಗಿ ಪ್ರತಿ ಪಂಚಾಯಿತಿಯಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೇ ಸೇವೆ ಕೊಂಡೊಯ್ಯುವ ಉದ್ದೇಶ ಇದರ ಹಿಂದಿದೆ. ಇದರಿಂದ ಗ್ರಾಮೀಣ ಜನರ ಸಮಯ, ಹಣ ಪೋಲು, ಅಲೆದಾಟ ತಪ್ಪುತ್ತದೆ ಎಂದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಎಚ್.ಕೆ.ಪಾಟೀಲ್ ಸುದ್ದಿಗಾರರಿಗೆ ಗುರುವಾರ ತಿಳಿಸಿದರು. ಸೇವೆ ಬಗ್ಗೆ ಅವರು ನೀಡಿದ ಒಟ್ಟಾರೆ ವಿವರ ಹೀಗಿದೆ:

ಇನ್ನು ಮುಂದೆ ಹಳ್ಳಿ ಮಂದಿ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವುದು ತಪ್ಪುತ್ತದೆ. ತಹಶೀಲ್ದಾರ್ ಕಚೇರಿಯ ಬಹುತೇಕ ಸವಲತ್ತುಗಳು ಅವರ ಮನೆ ಬಾಗಿಲಿನ ಪಂಚಾಯಿತಿ ಕಚೇರಿಯಲ್ಲೇ ಲಭ್ಯ. ಪಹಣಿ, ಪಡಿತರ ಕಾರ್ಡ್, ವೃದ್ಧಾಪ್ಯ ವೇತನ, ವಿಧವಾ ವೇತನ, ವಸತಿ-ನಿವೇಶನ ಪತ್ರ, ವ್ಯಾಪಾರ ಪರವಾನಗಿಗೆ ಅರ್ಜಿ ಸಲ್ಲಿಕೆ, ವಿದ್ಯುತ್ ಬಿಲ್, ವಿಮೆ ಕಂತು ಪಾವತಿ ಮಾಡಬಹುದಾಗಿದೆ. ಉದ್ಯೋಗ ಖಾತರಿ ಯೋಜನೆಗೆ ಇಲ್ಲೇ ನೋಂದಾಯಿಸಬಹುದು. ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರವೂ ಇಲ್ಲೇ ದೊರೆಯುತ್ತದೆ. ಇದರಿಂದ ಭ್ರಷ್ಟಾಚಾರ ನಿಯಂತ್ರಣದ ಜತೆಗೆ ಕಾಲಮಿತಿಯಲ್ಲಿ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ.

ಸವಲತ್ತು ಪಡೆಯಲು ಅತ್ಯಂತ ಕಡಿಮೆ ಪ್ರಮಾಣದ ಶುಲ್ಕ ನಿಗದಿ ಮಾಡಲಾಗಿದೆ. ಕೆಲವು ಸೇವೆಗಳು ಉಚಿತ. ಮನೆ ಬಾಗಿಲಲ್ಲಿ ಜನರಿಗೆ ಸೇವೆ ಲಭ್ಯವಾಗುವುದರ ಜತೆಗೆ ಪಂಚಾಯಿತಿಗಳ ಆರ್ಥಿಕ ಸಬಲೀಕರಣಕ್ಕೆ ಸಹಾಯವಾಗುತ್ತದೆ. ಪಂಚಾಯಿತಿಗಳಲ್ಲಿ ಈಗಿರುವ ಕಂಪ್ಯೂಟರ್ ಆಪರೇಟರ್ ಗಳ ಜತೆಗೆ ಇನ್ನೂ ನಾಲ್ಕು ಸಾವಿರ ಆಪರೇಟರ್ ಗಳನ್ನು ನೀಡಲಾಗುವುದು. ಜನಸಂಖ್ಯೆ ಆಧರಿಸಿ ಕೆಲವು ಪಂಚಾಯಿತಿಗಳಿಗೆ ಹೆಚ್ಚುವರಿ ಆಪರೇಟರ್ ಗಳನ್ನು ಒದಗಿಸಲಾಗುವುದು.

ಕೃತಕ ಮರಳು ಉತ್ಪಾದನೆಗೆ ಉತ್ತೇಜನ

ರಾಜ್ಯದಲ್ಲಿ ಮರಳು ಅಭಾವ ಪರಿಹಾರ ಹಾಗೂ ಕೃತಕ ಮರಳು ಉತ್ಪಾದನೆಗೆ ಉತ್ತೇಜನ ನೀಡುವ ಸಂಬಂಧ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994ಕ್ಕೆ ತಿದ್ದುಪಡಿ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆ ನಿರ್ಧರಿಸಿದೆ.

ನೆರೆಯ ಆಂಧ್ರ ಪ್ರದೇಶದಲ್ಲಿ ಇಂಥದೊಂದು ಸ್ಪಷ್ಟ ನೀತಿ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ ನಿಕ್ಷೇಪಗಳ ನಿರ್ವಹಣೆ, ಹರಾಜು, ಖಾಸಗಿಯವರಿಗೆ ಗುತ್ತಿಗೆ ಮತ್ತಿತರ ನಿಯಮಗಳನ್ನು ಸರಳೀಕರಣಗೊಳಿಸಿ, ಲೋಕೋಪಯೋಗಿ ಇಲಾಖೆಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅಧಿಕಾರ ವರ್ಗಾವಣೆ ಆದೇಶ ಹೊರಡಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಭೆಯ ತೀರ್ಮಾನಗಳ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿದರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೂತನ ಮರಳು ನೀತಿ ಜಾರಿ ಬಗ್ಗೆ ನಿರ್ಧರಿಸಲಾಗುವುದು ಎಂದರು.

ರಾಜ್ಯದಲ್ಲಿ 21 ಲಕ್ಷ ಮೆಟ್ರಿಕ್ ಟನ್ ಮರಳಿನ ಅವಶ್ಯಕತೆ ಇದೆ. ನದಿ, ಹೊಳೆ, ಕೆರೆ, ಸ್ವಂತ ಜಮೀನುಗಳಲ್ಲಿ ಮರಳು ತೆಗೆಯುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಎಂ-ಸ್ಯಾಂಡ್ ಉತ್ಪಾದನೆಗೆ ಉತ್ತೇಜನ ನೀಡಿದ್ದು, ಹರಾಜು ಮೂಲಕ ಕಲ್ಲು ಬೆಟ್ಟಗಳ ಗುತ್ತಿಗೆ ನೀಡಲಾಗುವುದು. 15 ವರ್ಷಗಳಿಂದ ಎಂ-ಸ್ಯಾಂಡ್ ಘಟಕಗಳಿಗೆ ಅನುಮತಿ ನೀಡಿರಲಿಲ್ಲ. ಈಗ ಇಲಾಖೆ ಮುಂದಿರುವ 6500 ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ.  ಈಗಾಗಲೇ ಅರ್ಜಿ ಹಾಕಿರುವವರಿಗೆ 10 ಎಕರೆವರೆಗೆ ಹಾಗೂ ಸ್ವಂತ ಘಟಕ ಸ್ಥಾಪಿಸ ಬಯಸಿರುವವರಿಗೆ 5 ಎಕರೆವರೆಗೂ ಘಟಕ ತೆರೆಯಲು ಅವಕಾಶ ಕಲ್ಪಿಸಲಾಗುವುದು.

ಮರಳು ನಿಕ್ಷೇಪ ಹರಾಜು, ಸರಕಾರಿ ಕಾಮಗಾರಿಗಳಿಗೆ ಕೃತಕ ಮರಳು ಬಳಕೆ ಕಡ್ಡಾಯ

ಇನ್ನು ಮುಂದೆ ರಾಜ್ಯದ ಮರಳು ನಿಕ್ಷೇಪಗಳನ್ನು ಬಹಿರಂಗ ಹರಾಜು ಹಾಕಲಾಗುವುದು ಮತ್ತು ಸರ್ಕಾರದ ಎಲ್ಲಾ ಕಾಮಗಾರಿಗಳಿಗೆ ಕೃತಕ ಮರಳು ಬಳಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ತಿಳಿಸಿದರು, ಮರಳು ನಿಕ್ಷೇಪಗಳ ನಿರ್ವಹಣೆಯನ್ನು ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆಗೆ ವಹಿಸಿತ್ತು.

854 ನಿಕ್ಷೇಪಗಳ ಪೈಕೆ ಈವರೆಗೂ 212 ನಿಕ್ಷೇಪಗಳನ್ನು ಮಾತ್ರ ಹಾರಾಜು ಹಾಕಲು ಸಾಧ್ಯವಾಗಿದೆ. ಇದರಿಂದ ಮರಳು ಅಭಾವ ಸೃಷ್ಟಿಯಾಗಿದೆ. ಮರಳು ನಿರ್ವಹಣೆ ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಲಿಖಿತವಾಗಿಯೇ ಹೇಳಿದೆ. ಹೀಗಾಗಿ ಇದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗಯೇ ವಹಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಒಂದು ತಿಂಗಳಲ್ಲಿ ಕೃತಕ ಮರಳು ಉತ್ಪಾದನೆಯಿಂದ 40 ಲಕ್ಷ ಟನ್ ಮರಳು ಲಭ್ಯವಾಗಿದೆ. ಇನ್ನೆರಡು-ಮೂರು ತಿಂಗಳಲ್ಲಿ 49 ಹೊಸ ಘಟಕಗಳು ಆರಂಭವಾಗಲಿದ್ದು, ನಂತರ 20 ಲಕ್ಷ ಮೆಟ್ರಿಕ್ ಟನ್ ಮರಳು ಲಭ್ಯವಾಗುವ ಸಾಧ್ಯತೆ ಇದೆ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಅನುತ್ತೀರ್ಣರಿಗೆ ತರಗತಿ ಹಾಜರು ಅವಕಾಶ

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ಇಲ್ಲವೇ ವಿಷಯ ಹಿಂತೆಗೆದುಕೊಂಡ (ವಿತ್ ಡ್ರಾ) ವಿದ್ಯಾರ್ಥಿಗಳು ಶಾಲಾ-ಕಾಲೇಜಿನಿಂದ ಹೊರಗುಳಿಯದೆ ಪಾಠ-ಪ್ರವಚನ ಕೇಳಲು ಮುಂದಿನ ಶೈಕ್ಷಣಿಕ ವರ್ಷದಿಂದ ಅನುವು ಮಾಡಿಕೊಡುವ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ.

ಶಾಲಾ-ಕಾಲೇಜುಗಳಿಂದ ಹೊರಗುಳಿವ ವಿದ್ಯಾರ್ಥಿಗಳು ಸಮಯ ಪೋಲು ಮಾಡಿಕೊಂಡು ತಪ್ಪು ದಾರಿಗೆ ಇಳಿಯಬಹುದು. ಇದನ್ನು ತಪ್ಪಿಸುವುದರ ಜತೆಗೆ ಶಿಕ್ಷಣ ಮತ್ತು ಜ್ಞಾನಾರ್ಜನೆ ಮುಂದುವರಿಸಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

ಹೊಸ ವ್ಯವಸ್ಥೆ ಅನ್ವಯ ತರಗತಿಗೆ ವಿದ್ಯಾರ್ಥಿಗಳ ಹಾಜರು ಕಡ್ಡಾಯ.  ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಮಂದಿ ವಿಷಯ ಫಲಿತಾಂಶ ವಿತ್ ಡ್ರಾ ಮಾಡಿಕೊಳ್ಳುತ್ತಾರೆ. ಕನ್ನಡ ಮತ್ತು ಇಂಗ್ಲೀಷ್ ನಲ್ಲೂ ವಿತ್ ಡ್ರಾ ಅವಕಾಶ ನೀಡುವ ಚಿಂತನೆ ನಡೆದಿದೆ ಎಂದರು.

ಇನ್ನು ಮುಂದೆ ಜಿಲ್ಲಾ ಕೇಂದ್ರಗಳಲ್ಲೇ ಶಿಕ್ಷಕರ ನೇಮಕ ಮತ್ತು ಆ ಪರಿಮಿತಿಯಲ್ಲೇ ವರ್ಗಾವಣೆ, ನಿವೃತ್ತಿ ವ್ಯವಸ್ಥೆ ಜಾರಿಗೆ ತರಲು 2007 ರ ಶಿಕ್ಷಮ ಕಾಯಿದೆಗೆ ತಿದ್ದುಪಡಿ ತರಲಾಗುವುದು. ಹಳೇ ಕಾಯಿದೆ ಗೊಂದಲಗಳ ಗೂಡಾಗಿದೆ. ಇದರಿಂದ ಪ್ರತಿವರ್ಷ ಶಿಕ್ಷಕರ ವರ್ಗಾವಣೆ ಸರ್ಕರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇನ್ನು ಮುಂದೆ ವರ್ಗಾವಣೆಗೆ ಯಾರೊಬ್ಬರು ಇಲಾಖೆ ಬಾಗಿಲು ತಟ್ಟದಂತೆ ಮಾಡಲಾಗುವುದು. ಶಿಕ್ಷಕರ ಕೊರತೆ ಇರುವ ಕಡೆ ಅದೇ ಜಿಲ್ಲೆಯವರನ್ನು ಭರ್ತಿ ಮಾಡಲಾಗುವುದು. ವರ್ಗಾವಣೆ ಕೂಡ ಅದೇ ಜಿಲ್ಲೆಯ ವ್ಯಾಪ್ತಿಗೆ ಸೀಮಿತವಾಗಿರುತ್ತದೆ. ಈ ವರ್ಷ ಸಾಮೂಹಿಕ, ಆಯಾ ಜಿಲ್ಲೆ ಮತ್ತು ಪತಿ-ಪತ್ನಿ ಪ್ರಕರಣಗಳ ವರ್ಗಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ವಿವರಿಸಿದರು.

ಒಕ್ಕಲಿಗ ಸಂಘಕ್ಕೆ ಅಧ್ಯಕ್ಷರಾಗಿ ಅಪ್ಪಾಜಿಗೌಡ ಪುನಾರಾಯ್ಕೆ

ರಾಜ್ಯ ಒಕ್ಕಲಿಗರ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡಾ. ಅಪ್ಪಾಜಿ ಗೌಡ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

ಒಕ್ಕಲಿಗರ ಸಂಘದಲ್ಲಿ ಒಟ್ಟು 35 ಮಂದಿ ನಿರ್ದೇಶಕರಿದ್ದು, ಇವರಲ್ಲಿ 23ಕ್ಕೂ ಹೆಚ್ಚು ಮಂದಿ ಡಾ. ಅಪ್ಪಾಜಿಗೌಡರ ಜತೆ ಗುರುತಿಸಿಕೊಂಡಿದ್ದರು. ಹೀಗಾಗಿ ಈ ಗುಂಪಿಗೆ ನಾನಾ ಪದಾಧಿಕಾರಿಗಳ ಹುದ್ದೆ ಲಭ್ಯವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಅಪ್ಪಾಜಿಗೌಡ ಹಾಗೂ ಬೆಟ್ಟೇಗೌಡ ಬಣದ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಅಪ್ಪಾಜಿಗೌಡರ ಬಣ ಮೇಲುಗೈ ಸಾಧಿಸಿರುವ ಹಿನ್ನೆಲೆಯಲ್ಲಿ ವಿರೋಧಿ ಬಣದವರು ಪದಾಧಿಕಾರಿಗಳ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಗೋಜಿಗೂ ಹೋಗಲಿಲ್ಲ. ಇದರಿಂದ ಸರ್ವಾನುಮತದ ಆಯ್ಕೆ ನಡೆಯಿತು.

ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಗುಜರಾತ್ ನ ಉನಾ ಪ್ರದೇಶದಲ್ಲಿ ಹಲ್ಲೆಗೊಳಗಾದ ದಲಿತರನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಬೇಟಿ ಮಾಡಿದ್ರು. ಸುಮಾರು 40 ನಿಮಿಷಗಳ ಕಾಲ ಅವರ ಕುಟುಂಬದ ಜತೆ ಮಾತುಕತೆ ನಡೆಸಿದ ರಾಹುಲ್, ‘ಈ ರೀತಿಯ ಘಟನೆ ನಾಚಿಕೆಗೇಡಿನ ಸಂಗತಿ’ ಅಂದ್ರು. ನಂತರ ರಾಹುಲ್ ಗಾಂಧಿ ಹಲ್ಲೆಗೊಳಗಾದವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಹಣ ನೀಡಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಶೈಲೇಶ್ ಪರ್ಮರ್ ತಿಳಿಸಿದ್ರು.
  • ರಾಜ್ಯದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದ ಡಿವೈಎಸ್ಪಿ ಗಣಪತಿ ಹಾಗೂ ಕಲ್ಲಪ್ಪ ಹಂಡಿಭಾಗ್ ಅವರ ಆತ್ಮಹತ್ಯೆ ಪ್ರಕರಣ ಗುರುವಾರ ಲೋಕ ಸಭೆಯಲ್ಲಿ ಪ್ರಸ್ತಾಪವಾಯ್ತು. ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಬಿ.ಎಸ್ ಯಡಿಯೂರಪ್ಪ ಈ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಮನವಿ ಮಾಡಿದರು. ಈ ವೇಳೆ ಗಣಪತಿ ಅವರು ಸಾಯುವ ಮುನ್ನ ಜಾರ್ಜ್ ಅವರ ಹೆಸರು ಪ್ರಸ್ತಾಪಿಸಿರುವ ಬಗ್ಗೆ ಹೇಳಿದಾಗ ವಿಪಕ್ಷಗಳಿಂದ ವಿರೋಧ ವ್ಯಕ್ತವಾಯ್ತು. ಆಗ ಸ್ಪೀಕರ್ ಅವರು ಹೇಳಿಕೆಯಲ್ಲಿ ಯಾರ ಹೆಸರನ್ನು ದಾಖಲಿಸಿಕೊಳ್ಳುವುದಿಲ್ಲ ಎಂದರು.
  • ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಇಬ್ಬರು ಮಾವೋವಾದಿಗಳು ಪೊಲೀಸರಿಗೆ ಶರಣಾದ ಅಚ್ಚರಿಯ ಬೆಳವಣಿಗೆ ಗುರುವಾರ ನಡೆದಿದೆ. ಒಡಿಶಾದ ಮಲ್ಕನಗಿರಿ ಜಿಲ್ಲೆಯ ಎಸ್ಪಿ ಮಿತ್ರಭಾನು ಮೊಹಪತ್ರ ಅವರ ಮುಂದೆ ಸುಖ್ದೇವ್ ಹಾಗೂ ರುಕ್ಮಿಣಿ ಶರಣಾದ ಮಾವೋವಾದಿಗಳು. ಈ ಸಂಘಟನೆಯಲ್ಲಿ ಸುಖ್ದೇವ್ ಕಾಲಿಮೇಳ ಪ್ರದೇಶದ ಕಮಾಂಡರ್ ಆಗಿ, ರುಕ್ಮಿಣಿ ಬೈಪಾರಿಗುಡ ಪ್ರದೇಶದ ಕಮಾಂಡರ್ ಆಗಿ ಹಲವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
  • ಮುಂದಿನ ತಿಂಗಳು ರಿಯೋ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಆಟಗಾರರ ಶ್ರೇಯಾಂಕ ಪ್ರಕಟಿಸಲಾಗಿದೆ. ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತದ ತಾರೆ ಸೈನಾ ನೆಹ್ವಾಲ್ 5ನೇ ಶ್ರೇಯಾಂಕ ಗಿಟ್ಟಿಸಿದ್ರೆ, ಪಿ.ವಿ ಸಿಂಧು 9ನೇ ಶ್ರೇಯಾಂಕ ಪಡೆದಿದ್ದಾರೆ. ಪುರುಷರ ಸಿಂಗಲ್ಸ್ ನಲ್ಲಿ ಕೆ.ಶ್ರೀಕಾಂತ್ ಗೆ 9ನೇ ಶ್ರೇಯಾಂಕ ಸಿಕ್ಕಿದೆ.
  • ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ಸ್ ನಿಂದ ರಷ್ಯಾ ಅಥ್ಲೀಟ್ ಗಳ ಮೇಲೆ ಹೇರಲಾಗಿರುವ ನಿಷೇಧ ತೆರವುಗೊಳಿಸುವ ಅರ್ಜಿಯನ್ನು ಕ್ರೀಡಾ ನ್ಯಾಯಾಧಿಕರಣ ತಿರಸ್ಕರಿಸಿದೆ. ರಷ್ಯಾ ಒಲಿಂಪಿಕ್ಸ್ ಸಂಸ್ಥೆ ಮತ್ತು 67 ಅಥ್ಲೀಟ್ ಗಳು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಒಕ್ಕೂಟಗಳ ಸಂಸ್ಥೆ (ಐಎಎಎಫ್)ಯ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಇದರೊಂದಿಗೆ ರಷ್ಯಾ ಅಥ್ಲೀಟ್ ಈ ಮಹತ್ವದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಮತ್ತಷ್ಟು ಕ್ಷೀಣಿಸಿದೆ.

President, Kannada Sahitya Parishat, Manu Baligaar, with others during Book Release at Kalagrama in Bengaluru on Thursday.

ಅಂಕೋಲದ ಜಾನಪದ ಕಲಾವಿದೆ ನಾಡೋಜ ಸುಕ್ರಿಬೊಮ್ಮಗೌಡರ ಬದುಕು ಕುರಿತು ಸಿ.ಸಿ. ಹೇಮಲತಾ ರಚಿಸಿರುವ  ‘ಕಾಡಿನ ಹಾಡು ಹಕ್ಕಿಗೆ ಶರಣು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ , ಉದಯವಾಣಿ  ಸಮೂಹ ಸಂಪಾದಕರಾದ ರವಿ ಹೆಗಡೆ, ಕರವೇ ಮುಖ್ಯಸ್ಥ ನಾರಾಯಣ ಗೌಡ ಮತ್ತಿತರರು.

Leave a Reply